ಅಪ್ಪು ಕಪ್ ಸೀಸನ್ 2 ಬ್ಯಾಡ್ಮಿಂಟನ್ ಲೀಗ್ ಲೋಗೋ ಅನಾವರಣವಾಗಿದೆ. ಖ್ಯಾತ ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಲೋಗೊ ಬಿಡುಗಡೆ ಮಾಡಿ ಆಟಗಾರರಿಗೆ ಶುಭ ಹಾರೈಸಿದ್ದಾರೆ. ಆಗಸ್ಟ್ ತಿಂಗಳ ಕೊನೆಗೆ ಪಂದ್ಯಾವಳಿ ನಡೆಯಲಿದೆ.
‘ಪುನೀತ್ ರಾಜ್ ಕುಮಾರ್ ಅವರು ನನಗೆ ಪರ್ಸನಲ್ ಆಗಿ ಗೊತ್ತಿದ್ದರು. ತುಂಬಾ ಫ್ರೆಂಡ್ಲಿಯಾಗಿದ್ದವರು. ಐದಾರು ವರ್ಷದ ಹಿಂದೆ ನಾವೊಂದು ಇವೆಂಟ್ ಮಾಡಿದ್ದೆವು. ಒಂದೇ ಒಂದು ಫೋನ್ ಕಾಲ್‌ಗೆ ಬಂದು ನಮ್ಮ ಜೊತೆ ಎಕ್ಸಿಬ್ಯೂಷನ್ ಮ್ಯಾಚ್ ಆಡಿದ್ದರು. ಸ್ಯಾಂಡಲ್ ವುಡ್‌ನಲ್ಲಿ ತುಂಬಾ ಜನ ಬ್ಯಾಡ್ಮಿಂಟನ್ ಆಡುತ್ತಾರೆ ಎನ್ನುವುದನ್ನು ಕೇಳಿ ಖುಷಿಯಾಯ್ತು. ಅಪ್ಪು ಕಪ್ ಸ್ಯಾಂಡಲ್‌ವುಡ್ ಬ್ಯಾಡ್ಮಿಂಟನ್ ಹೀಗೆಯೇ ಮುಂದುವರೆಯಲಿ’ ಎಂದರು ಖ್ಯಾತ ಬ್ಯಾಡ್ಮಿಂಟನ್ ತಾರೆ ಪ್ರಕಾಶ ಪಡುಕೋಣೆ. ಅಕಾಲಿಕವಾಗಿ ಅಗಲಿದ ನಟ ಪುನೀತ್ ನೆನಪಿನಲ್ಲಿ ಆಯೋಜಿಸಲಾಗಿರುವ ಅಪ್ಪು ಕಪ್ ಸೀಸನ್ – 2 ಬ್ಯಾಡ್ಮಿಂಟನ್ ಲೀಗ್ ಲೋಗೋ ಬಿಡುಗಡೆ ಮಾಡಿ ತಂಡಗಳಿಗೆ ಅವರು ಶುಭ ಹಾರೈಸಿದರು.
ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನಲ್ಲಿ ಇಂದು ಲೋಗೋ ಬಿಡುಗಡೆ ಕಾರ್ಯಕ್ರಮ ನೆರವೇರಿತು. ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕಾರ್ಯದರ್ಶಿ ಪಿ ರಾಜೇಶ್ ರೆಡ್ಡಿ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ ಮಾ ಹರೀಶ್, ಹಿರಿಯ ಸಿನಿಮಾ ಪತ್ರಕರ್ತ ಸದಾಶಿವ ಶೆಣೈ ಉಪಸ್ಥಿತರಿದ್ದರು. ಕನ್ನಡ ಕಲಾವಿದರು, ತಂತ್ರಜ್ಞರು ಹಾಗೂ ಮಾಧ್ಯಮದವರು ಆಡಲಿರುವ ಈ ಪಂದ್ಯಾವಳಿ ಆಗಸ್ಟ್ ತಿಂಗಳಾಂತ್ಯಕ್ಕೆ ಶುರುವಾಗಲಿದೆ. ಕಳೆದ ಬಾರಿ ಒಟ್ಟು ಎಂಟು ತಂಡಗಳು ಭಾಗಿಯಾಗಿದ್ದವು. ದಿಗಂತ್, ಸೃಜನ್ ಲೋಕೇಶ್, ವಸಿಷ್ಠ ಸಿಂಹ, ಪ್ರಿಯಾಂಕಾ ಉಪೇಂದ್ರ, ರಾಗಿಣಿ, ಕವಿತಾ ಲಂಕೇಶ್, ಶ್ವೇತಾ ಶ್ರೀವಾಸ್ತವ್, ಮಾಸ್ಟರ್ ಆನಂದ್ ತಂಡದ ಪೈಕಿ ಸೃಜನ್ ಲೋಕೇಶ್ ನೇತೃತ್ವದ ರಾಜಕುಮಾರ ಕಿಂಗ್ಸ್ ಕಳೆದ ಬಾರಿ ಗೆಲುವು ಸಾಧಿಸಿತ್ತು. ಈ ಬಾರಿ ಮತ್ತಷ್ಟು ತಾರೆಯರು ಸೇರ್ಪಡೆಯಾಗಿದ್ದು, ಸೆಕೆಂಡ್ ಸೀಸನ್ ಇನ್ನಷ್ಟು ಕಳೆಗಟ್ಟಲಿದೆ.