ಗಾಯಕ, ಸಂಗೀತ ಸಂಯೋಜಕ ಚಂದನ್ ಶೆಟ್ಟಿ ನೂತನ ವರ್ಷಕ್ಕೆ ‘what to do mama?’ ವೀಡಿಯೋ ಸಾಂಗ್ ಬಿಡುಗಡೆ ಮಾಡಿದ್ದಾರೆ. ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಿ, ಹಾಡಿರುವ ಈ ಹಾಡಿನಲ್ಲಿ ನಟ ರಂಗಾಯಣ ರಘು ಹಾಗೂ ‘ಗಿಚ್ಚಿ ಗಿಲಿಗಿಲಿ’ ರಿಯಾಲಿಟಿ ಶೋ ಖ್ಯಾತಿಯ ಕಲಾವಿದರು ಹೆಜ್ಜೆ ಹಾಕಿದ್ದಾರೆ.
ಪ್ರತಿ ವರ್ಷ ಡಿಸೆಂಬರ್ ತಿಂಗಳ ಕೊನೆಯಲ್ಲಿ ಹೊಸ ಹಾಡೊಂದನ್ನು ಮಾಡುವುದು ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ರೂಢಿಸಿಕೊಂಡು ಬಂದಿರುವ ಸಂಪ್ರದಾಯ. ಅದೇ ರೀತಿ ಈ ಬಾರಿಯೂ ಅವರು ಹಾಡೊಂದನ್ನು ಸಿದ್ಧಪಡಿಸಿದ್ದಾರೆ. ಈ ಬಾರಿ ಅವರು ‘what to do mama?’ ಎನ್ನುವ ಅಪ್ಪಟ ದೇಸಿ ಶೈಲಿಯ ಟಪಾಂಗುಚಿ ವೀಡಿಯೋ ಹಾಡೊಂದನ್ನು ಮಾಡಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಹಾಡಿಗೆ ಚಂದನ್ ಶೆಟ್ಟಿ ಅವರೊಂದಿಗೆ ಖ್ಯಾತ ನಟ ರಂಗಾಯಣ ರಘು ಮತ್ತು ‘ಗಿಚ್ಚಿ ಗಿಲಿಗಿಲಿ’ ರಿಯಾಲಿಟಿ ಶೋ ಕಲಾವಿದರು ಹೆಜ್ಜೆ ಹಾಕಿದ್ದಾರೆ. ಹದಿಹರೆಯದ ಹುಡುಗರ ಕಷ್ಟ – ಸುಖಗಳನ್ನು ಹೇಳುವ ಹಾಡಿದು.
‘ಪ್ರಾಬ್ಲಮ್ ಪ್ರಾಬ್ಲಮ್ ಪ್ರಾಬ್ಲಮ್ ವಾಟ್ ಟು ಡು ಮಾಮ?’ ಎಂದೇ ಹಾಡು ಆರಂಭವಾಗುತ್ತದೆ. ಈ ಹಿಂದಿನ ಚಂದನ್ ಶೆಟ್ಟಿ ಅವರ RAP ಸಾಂಗ್‌ಗಳು ಹೆಚ್ಚಾಗಿ ಪಬ್‌ಗಳ ಮೇಲೆ ಕೇಂದ್ರಿಕೃತವಾಗಿರುತ್ತಿದ್ದವು. ಆದರೆ ಈ ಹಾಡು ಪಕ್ಕಾ ಲೋಕಲ್ ಸ್ಟೈಲ್‌ನಲ್ಲಿ ಮೂಡಿಬಂದಿದೆ. ಕಂಠೀರವ ಸ್ಟುಡಿಯೋದಲ್ಲಿ ಬಾರ್ ಸೆಟ್ ಹಾಕಿ ಈ ಹಾಡನ್ನು ಚಿತ್ರೀಕರಣ ಮಾಡಲಾಗಿದೆ. ಚಂದನ್ ಶೆಟ್ಟಿ ಈ ಹಾಡಿನಲ್ಲಿ ಪಕ್ಕಾ ಲೋಕಲ್ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಖ್ಯಾತ ನಟ ರಂಗಾಯಣ ರಘು ಅವರು ಚಂದನ್ ಶೆಟ್ಟಿ ಅವರ ಸೋದರಮಾವನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜನಪ್ರಿಯ ರಿಯಾಲಿಟಿ ಶೋ ‘ಗಿಚ್ಚಿ ಗಿಲಿಗಿಲಿ’ ಕಲಾವಿದರಾದ ರಾಘವೇಂದ್ರ, ಆರ್ ಜೆ ವಿಕ್ಕಿ, ಹುಲಿ ಕಾರ್ತಿಕ್, ನಿತಿನ್ ಅಮಿನ್, ಶಿಡ್ ಶ್ಯಾಡೋ ಶಿವ, ಎನ್ ಸಿ ಅಯ್ಯಪ್ಪ ಮುಂತಾದವರು ಈ RAP ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಚಂದನ್ ಶೆಟ್ಟಿ ಅವರೇ ಸಂಗೀತ ಸಂಯೋಜಿಸಿ, ಹಾಡಿ ಹಾಗೂ ನಿರ್ದೇಶನವನ್ನೂ ಮಾಡಿದ್ದಾರೆ. ಇಷ್ಟು ದಿನ ಚಂದನ್ ಶೆಟ್ಟಿ ಅವರ RAP ಸಾಂಗ್‌ಗಳನ್ನು ಬೇರೆಬೇರೆ ನಿರ್ಮಾಪಕರು ನಿರ್ಮಾಣ ಮಾಡುತ್ತಿದ್ದರು. ಇದೇ ಮೊದಲ ಬಾರಿಗೆ ಚಂದನ್ ಶೆಟ್ಟಿ ಅವರೇ ಈ ಹಾಡು ನಿರ್ಮಿಸಿದ್ದಾರೆ. ವಿಜಯ್ ಈಶ್ವರ್ ಅವರ ಜೊತೆಗೂಡಿ ಹಾಡನ್ನು ಬರೆದಿದ್ದಾರೆ. ರಿಯಾಲಿಟಿ ಶೋನಲ್ಲಿ ಜನಪ್ರಿಯರಾಗಿರುವ ಮುರುಗ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಉದಯಲೀಲ ಛಾಯಾಗ್ರಹಣ, ಸತೀಶ್ ಚಂದ್ರ ಸಂಕಲನ ಹಾಗೂ ದಿವಾಕರ್ ಅವರ ಕಲಾ ನಿರ್ದೇಶನ ಈ ಹಾಡಿಗಿದೆ.