ನೈಜ ಘಟನೆಗಳನ್ನು ಆಧರಿಸಿದ ‘ಬಿಂಗೊ’ ಸಸ್ಪೆನ್ಸ್ – ಥ್ರಿಲ್ಲರ್ ಸಿನಿಮಾದ ಡಬ್ಬಿಂಗ್ ಪೂರ್ಣಗೊಂಡಿದೆ. ಶಂಕರ್ ಕೋನಮಾನಹಳ್ಳಿ ನಿರ್ದೇಶನದ ಚಿತ್ರದ ಮುಖ್ಯಪಾತ್ರಗಳಲ್ಲಿ ರಾಗಿಣಿ ದ್ವಿವೇದಿ ಮತ್ತು ಆರ್ ಕೆ ಚಂದನ್ ಅಭಿನಯಿಸಿದ್ದಾರೆ.
ನಟಿ ರಾಗಿಣಿ ದ್ವಿವೇದಿ ಇತ್ತೀಚೆಗೆ ತಮ್ಮ ಪಾತ್ರಕ್ಕೆ ವಿಶೇಷ ಪ್ರಾತಿನಿಧ್ಯ ಇರುವ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದಾರೆ. ನಾಯಕಿ ಪ್ರಧಾನ ಸಿನಿಮಾಗಳ ಜೊತೆ ತಮ್ಮ ಪಾತ್ರಕ್ಕೆ ವಿಶೇಷ ಸ್ಕೋಪ್ ಇರಬೇಕೆನ್ನುವುದು ಅವರ ಕರಾರು ಇರುವಂತಿದೆ. ಇಂತಹ ಆಯ್ಕೆಯೊಂದಿಗೆ ಅವರು ನಟಿಸುತ್ತಿರುವ ‘ಬಿಂಗೊ’ ಸಿನಿಮಾಗೆ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿದೆ. ‘ಶಂಭೋ ಶಿವ ಶಂಕರ’ ಸಿನಿಮಾ ನಿರ್ದೇಶಿಸಿದ್ದ ಶಂಕರ್ ಕೋನಮಾನಹಳ್ಳಿ ನಿರ್ದೇಶನದ ಎರಡನೇ ಚಿತ್ರವಿದು. ‘ನೈಜ ಘಟನೆಗಳು ಸಿನಿಮಾಗೆ ಪ್ರೇರಣೆ. ಆರ್ ಕೆ ಚಂದನ್ ಮತ್ತು ರಕ್ಷಾ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದು, ರಾಗಿಣಿ ಅವರಿಗೆ ಪ್ರಮುಖ ಪಾತ್ರವಿದೆ. ಇದೊಂದು ಸಸ್ಪೆನ್ಸ್ – ಜಾನರ್ ಸಿನಿಮಾ. ಡಬ್ಬಿಂಗ್ ಕೆಲಸಗಳು ಪೂರ್ಣಗೊಂಡಿದ್ದು, ಸದ್ಯದಲ್ಲೇ ಟ್ರೇಲರ್ ರಿಲೀಸ್ಗೆ ಪ್ಲ್ಯಾನ್ ಮಾಡುತ್ತಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಶಂಕರ್.
ಚಿತ್ರದ ಮುಹೂರ್ತಕ್ಕೆ ನಟ ವಸಿಷ್ಠ ಸಿಂಹ ಅತಿಥಿಯಾಗಿ ಕ್ಲ್ಯಾಪ್ ಮಾಡಿ ಶುಭ ಹಾರೈಸಿದ್ದರು. ಚಿತ್ರಕ್ಕೆ ಬಹುಪಾಲು ಬೆಂಗಳೂರಿನಲ್ಲೇ ಚಿತ್ರೀಕರಣ ನಡೆದಿದೆ. ಆರ್ ಕೆ ಸ್ಟುಡಿಯೋಸ್ ಮತ್ತು ಮುತರಾ ವೆಂಚರ್ಸ್ ಲಾಂಛನದಲ್ಲಿ ಲಲಿತಾಸ್ವಾಮಿ ಮತ್ತು ಆರ್ ಪರಾಂಕುಶ ನಿರ್ಮಾಣದ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ರಾಜೇಶ್ ನಟರಂಗ, ಪವನ್, ಮುರಳಿ ಪೂರ್ವಿಕ್, ಅಪೂರ್ವ, ಶ್ರವಣ್ ನಟಿಸಿದ್ದಾರೆ. ಹಿತನ್ ಹಾಸನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ನಟರಾಜ್ ಮುದ್ದಾಲ್ ಛಾಯಾಗ್ರಹಣ, ನರಸಿಂಹ ಸಾಹಸ ನಿರ್ದೇಶನ, ಕಂಬಿ ರಾಜು ನೃತ್ಯ ನಿರ್ದೇಶನ, ವೆಂಕಿ UDV ಸಂಕಲನ ಚಿತ್ರಕ್ಕಿದೆ.