ವಿಕ್ಕ ವರುಣ್‌ ಹೀರೋ ಆಗಿ ನಟಿಸಿ, ನಿರ್ದೇಶಿಸಿರುವ ‘ಕಾಲಾಪತ್ಥರ್‌’ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಸೆಪ್ಟೆಂಬರ್‌ 13ಕ್ಕೆ ಸಿನಿಮಾ ಥಿಯೇಟರ್‌ಗೆ ಬರಲಿದೆ. ವಿಕ್ಕಿ ವರುಣ್‌ ಮತ್ತು ಧನ್ಯಾ ರಾಮಕುಮಾರ್‌ ಮುಖ್ಯಪಾತ್ರಗಳಲ್ಲಿರುವ ಸಿನಿಮಾಗೆ ಅನೂಪ್‌ ಸೀಳಿನ್‌ ಸಂಗೀತ ಸಂಯೋಜಿಸಿದ್ದಾರೆ.

‘ಕಾಲಾಪತ್ಥರ್, ಕಪ್ಪುಕಲ್ಲಿಗೆ ಸಂಬಂಧಿಸಿದ ಕಥೆ. ಸತ್ಯಪ್ರಕಾಶ್ ಅವರು ಕತೆ ಬರೆದಿದ್ದಾರೆ. ವಿಜಾಪುರದ ಬಳಿ ಚಿತ್ರೀಕರಣವಾಗಿದೆ. ಆಲಮಟ್ಟಿ ಹಿನ್ನೀರಿನ ಜೈನಾಪುರ ಎಂಬ ಸ್ಥಳದಲ್ಲಿ ಚಿತ್ರೀಕರಣ ನಡೆದಿದ್ದು, ನಮ್ಮ ಚಿತ್ರದ ಚಿತ್ರೀಕರಣವಾಗಿ ಕೆಲವೇ ತಿಂಗಳಲ್ಲೇ ಈ ಹಳ್ಳಿ ನೀರಿನಲ್ಲಿ ಮುಳುಗಡೆಯಾಗಿದೆ’ ಎಂದರು ‘ಕಾಲಾಪತ್ಥರ್‌’ ಸಿನಿಮಾದ ನಟ, ನಿರ್ದೇಶಕ ವಿಕ್ಕಿ ವರುಣ್‌. ಅವರು ಚಿತ್ರರಂಗಕ್ಕೆ ಬಂದು ಇಲ್ಲಿಗೆ ಹದಿನೈದು ವರ್ಷಗಳಾಯ್ತು. ಅವರು ಹೀರೋ ಆಗಿ ನಟಿಸಿದ್ದ ಸೂರಿ ನಿರ್ದೇಶನದ ‘ಕೆಂಡಸಂಪಿಗೆ’ ತೆರೆಕಂಡು ಇದೇ ಸೆಪ್ಟೆಂಬರ್‌ಗೆ ಒಂಬತ್ತು ವರ್ಷ. ಸೆಪ್ಟೆಂಬರ್‌ ತಿಂಗಳಲ್ಲೇ ಅವರ ನಟನೆ, ನಿರ್ದೇಶನದ ಸಿನಿಮಾ ತೆರೆಕಾಣುತ್ತಿದೆ ಎನ್ನುವುದು ಅವರಿಗೆ ಖುಷಿ ತಂದಿದೆ. ಚಿತ್ರವನ್ನು ‘ಮಾರ್ಟಿನ್‌’ ಸಿನಿಮಾ ನಿರ್ಮಾಪಕ ಉದಯ್‌ ಕೆ ಮೆಹ್ತಾ ಅವರು ವಿತರಣೆ ಮಾಡುತ್ತಿದ್ದಾರೆ.

ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ನಿರ್ಮಿಸಿರುವ ಚಿತ್ರದ ನಾಯಕಿಯಾಗಿ ಧನ್ಯಾ ರಾಮಕುಮಾರ್‌ ನಟಿಸಿದ್ದಾರೆ. ‘ಚಿತ್ರದಲ್ಲಿ ನನ್ನದು ಶಿಕ್ಷಕಿಯ ಪಾತ್ರ. ಗಂಗ ನನ್ನ ಪಾತ್ರದ ಹೆಸರು. ನನ್ನ ಪಾತ್ರ ಹಾಗೂ ಚಿತ್ರ ಎರಡು ಚೆನ್ನಾಗಿದೆ. ನನಗೆ ವಿಕ್ಕಿ ಅವರು ಚಿತ್ರದ ತುಣುಕು ತೋರಿಸಿದ್ದಾರೆ. ಈ ವೀಡಿಯೋ ಗ್ಲಿಮ್ಸಸ್‌ ನೋಡಿದ ಮೇಲೆ ಚಿತ್ರ ನೋಡಲು ಕಾತುರದಿಂದ ಕಾಯುತ್ತಿದ್ದೇನೆ’ ಎನ್ನುತ್ತಾರೆ ಧನ್ಯಾ. ಹಿರಿಯ ಪತ್ರಕರ್ತ ಕೆ ಎಸ್ ವಾಸು ಅವರು ‘ಕಾಲಾಪತ್ಥರ್’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿದರು. ಸಂದೀಪ್‌ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದರೆ ಅನೂಪ್‌ ಸೀಳಿನ್‌ ಸಂಗೀತ ಸಂಯೋಜಿಸಿದ್ದಾರೆ.

LEAVE A REPLY

Connect with

Please enter your comment!
Please enter your name here