ಕನ್ನಡ ಚಿತ್ರರಂಗದಲ್ಲಿ ಫ್ಯಾಮಿಲಿ ಸ್ಟಾರ್ಸ್‌ ಎಂದೇ ಕರೆಸಿಕೊಳ್ಳುವ ರಮೇಶ್‌ ಅರವಿಂದ್‌ ಮತ್ತು ಗಣೇಶ್‌ ಜೊತೆಗೂಡಿದ್ದಾರೆ. ಇಬ್ಬರು ಜೊತೆಯಾಗಿ ನಟಿಸುತ್ತಿರುವ ‘your’s sincerely ರಾಮ್‌’ ಸಿನಿಮಾ ಸೆಟ್ಟೇರಿದೆ. ಚಿತ್ರದ ಫಸ್ಟ್‌ ಲುಕ್‌ ಟೀಸರ್‌ ಕೂಡ ಬಿಡುಗಡೆಯಾಗಿದೆ. ಸತ್ಯ ರಾಯಲ ನಿರ್ಮಾಣದ ಈ ಚಿತ್ರವನ್ನು ವಿಖ್ಯಾತ್‌ ನಿರ್ದೇಶಿಸುತ್ತಿದ್ದಾರೆ.

‘ಒಂಬತ್ತು ವರ್ಷಗಳ ಹಿಂದೆ ಪುಷ್ಪಕ ವಿಮಾನ ಸಿನಿಮಾ ಕತೆ ಹೇಳಲು ಬಂದಾಗ ಪರಿಚಯವಾದವರು ವಿಖ್ಯಾತ್.ಅಂದಿನಿಂದ ಇಂದಿನವರೆಗೂ ನೋಡಿಕೊಂಡು ಬರುತ್ತಿದ್ದೇನೆ. ಅವರಿಗೆ ಉತ್ತಮ ಸೌಂದರ್ಯ ಪ್ರಜ್ಞೆ ಇದೆ. ಅವರು ನಿರ್ಮಾಣ ಮಾಡಿದ ಚಿತ್ರಗಳ ಪೋಸ್ಟರ್, ಟೀಸರ್‌ಗಳಲ್ಲಿ ಸೂಕ್ಷ್ಮ ಮನೋಭಾವವಿದೆ. ಅವರು ನಿರ್ದೇಶನ ಮಾಡುತ್ತಿರುವುದು ಖುಷಿಯ ವಿಷಯ. ಗಣೇಶ್ ನನ್ನ ಕಾಂಬೋ ಪ್ರೇಕ್ಷಕರಿಗೆ ಎಷ್ಟು ಖುಷಿ ಕೊಡುತ್ತದೆಯೋ ನಮಗೂ ಅಷ್ಟೇ ಖುಷಿ ಕೊಡುತ್ತದೆ’ ಎನ್ನುತ್ತಾರೆ ನಟ ರಮೇಶ್‌ ಅರವಿಂದ್‌. ಅವರು ಮತ್ತು ನಟ ಗಣೇಶ್‌ ನಟಿಸುತ್ತಿರುವ ‘your’s sincerely ರಾಮ್‌’ ಸಿನಿಮಾ ಮೊನ್ನೆ ಸೆಟ್ಟೇರಿದೆ. ಸತ್ಯ ರಾಯಲ ನಿರ್ಮಾಣದ ಈ ಚಿತ್ರವನ್ನು ವಿಖ್ಯಾತ್‌ ನಿರ್ದೇಶಿಸುತ್ತಿದ್ದಾರೆ.

ಬೆಂಗಳೂರಿನ ಗೌಡನಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿ ಸಿನಿಮಾದ ಮುಹೂರ್ತ ನೆರವೇರಿತು. ನಟಿ, ನಿರೂಪಕಿ ಜಾನ್ವಿ ರಾಯಲ ಚಿತ್ರಕ್ಕೆ ಕ್ಲ್ಯಾಪ್ ಮಾಡಿದರೆ, ನಿರ್ದೇಶಕ ವಿಖ್ಯಾತ್ ಪತ್ನಿ ಸ್ವಾತಿ ವಿಖ್ಯಾತ್ ಕ್ಯಾಮೆರಾಗೆ ಚಾಲನೆ ಕೊಟ್ಟಿದ್ದಾರೆ. ಮುಹೂರ್ತದಂದೇ ಚಿತ್ರದ ಫಸ್ಟ್‌ಲುಕ್‌ ಟೀಸರ್‌ ಬಿಡುಗಡೆಯಾಗಿದೆ. ಸಿನಿಮಾ ಮತ್ತು ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಗಣೇಶ್‌, ‘ಈ ಚಿತ್ರದಲ್ಲಿ ರಮೇಶ್‌ ಸರ್‌ ಮತ್ತು ನನ್ನ ಪಾತ್ರಗಳನ್ನು ಕಟ್ಟಿರುವ ರೀತಿ ತೀರಾ ಭಿನ್ನವಾಗಿದೆ. ಇದು ಬೇರೆ ರೀತಿ ಫೀಲ್, ಬೇರೆ ಪ್ರಪಂಚಕ್ಕೆ ಕರೆದುಕೊಂಡು ಹೋಗುವಂತಹ ಕತೆ. ಪ್ರತಿ ಸೀನ್ ಕೂಡ ಇಂಪ್ರೆಸೀವ್‌ ಆಗಿರಲಿದೆ. ಉತ್ತಮ ನಟ, ಟೆಕ್ನೀಷಿಯನ್‌ ರಮೇಶ್‌ ಸರ್‌ ಜೊತೆ ಕೆಲಸ ಮಾಡುತ್ತಿರುವ ಖುಷಿಯಿದೆ. ವಿಖ್ಯಾತ್ ಫ್ಯಾಷನೇಟೆಡ್ ಡೈರೆಕ್ಟರ್. ಸತ್ಯ ಅವರಿಗೆ ಒಳ್ಳೆದಾಗಲಿ’ ಎಂದು ಹಾರೈಸಿದರು.

ಪುಷ್ಪಕ ವಿಮಾನ, ಇನ್ಸ್‌ಪೆಕ್ಟರ್ ವಿಕ್ರಮ್, ಮಾನ್ಸೂನ್ ರಾಗ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ವಿಖ್ಯಾತ್ ಎ ಆರ್ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ದಿ ರಾಯಲ ಸ್ಟುಡಿಯೋಸ್ ಬ್ಯಾನರ್‌ನಡಿ ಸತ್ಯ ರಾಯಲ ಚಿತ್ರ ನಿರ್ಮಿಸುತ್ತಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಜೆ ಅನೂಪ್ ಸೀಳಿನ್ ಸಂಗೀತ, ಗುಣ ಕಲಾ ನಿರ್ದೇಶನ , ಪ್ರಶಾಂತ್ ರಾಜಪ್ಪ‌, ಯದುನಂದನ್ ಹಾಗೂ ಸಚಿನ್ ಸಂಭಾಷಣೆ ಚಿತ್ರಕ್ಕಿದೆ. ಆಡಿಯೊ ಹಕ್ಕುಗಳು ಆನಂದ್ ಆಡಿಯೊಗೆ ದಾಖಲೆ ಬೆಲೆಗೆ ಮಾರಾಟವಾಗಿದೆ. ನಾಯಕಿ ಸೇರಿದಂತೆ ಉಳಿದ ಪಾತ್ರವರ್ಗವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ನಿರ್ಮಾಪಕರು ಹೇಳುತ್ತಾರೆ.

LEAVE A REPLY

Connect with

Please enter your comment!
Please enter your name here