ಬೆಂಗಳೂರು ಸೇರಿದಂತೆ ರಾಜ್ಯದ ಎಂಟು ನಗರಗಳಲ್ಲಿ ಏಕಕಾಲಕ್ಕೆ ’45’ ಸಿನಿಮಾದ ಟ್ರೇಲರ್ ಅನಾವರಣಗೊಳ್ಳಲಿದೆ. ಭಾರತೀಯ ಸಿನಿಮಾ ರಂಗದಲ್ಲೇ ಇದೊಂದು ವಿಶಿಷ್ಟ ಪ್ರಯೋಗ ಎನ್ನುತ್ತಾರೆ ಚಿತ್ರದ ನಿರ್ದೇಶಕ ಅರ್ಜುನ್ ಜನ್ಯ.
ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ’45’ ಸಿನಿಮಾದ ಟ್ರೇಲರ್ ಇದೇ ಡಿಸೆಂಬರ್ 15ರಂದು ಬಿಡುಗಡೆಯಾಗಲಿದೆ. ಟ್ರೇಲರ್ ಬಿಡುಗಡೆ ಸಮಾರಂಭ ವಿಭಿನ್ನವಾಗಿ ಆಯೋಜನೆಗೊಳ್ಳುತ್ತಿರುವುದು ವಿಶೇಷ. ಬೆಂಗಳೂರಿನ ವಿದ್ಯಾಪೀಠದ ಬಳಿಯ ಕೆಂಪೇಗೌಡ ಮೈದಾನದಲ್ಲಿ ಸಮಾರಂಭ ನಡೆಯಲಿದೆ. ಇಲ್ಲಿ ನಡೆಯುವ ಇವೆಂಟ್ ಅನ್ನು ಕರ್ನಾಟಕದ ಏಳು ಪ್ರಮುಖ ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಕ್ಯೂಬ್ ಮೂಲಕ ನೇರ ಪ್ರಸಾರ ಮಾಡಲಾಗುತ್ತಿದೆ. ಮೈಸೂರು, ಮಂಗಳೂರು, ತುಮಕೂರು, ದಾವಣಗೆರೆ, ಶಿವಮೊಗ್ಗ, ಹೊಸಪೇಟೆ ಮತ್ತು ಹುಬ್ಬಳ್ಳಿ ನಗರಗಳ ಚಿತ್ರಮಂದಿರಗಳಲ್ಲಿ ಸಮಾರಂಭದ ನೇರ ಪ್ರಸಾರ ಇರಲಿದೆ. ಅಭಿಮಾನಿಗಳಿಗೆ ಆಯಾ ಜಿಲ್ಲೆಗಳಲ್ಲಿ ಪಾಸ್ ವ್ಯವಸ್ಥೆ ಮಾಡಲಾಗಿದ್ದು, ಉಚಿತ ಪ್ರವೇಶವಿರುತ್ತದೆ.
ಏಕಕಾಲಕ್ಕೆ ಏಳು ಊರುಗಳಲ್ಲೂ ಟ್ರೇಲರ್ ಅನಾವರಣಗೊಳ್ಳಲಿದೆ ಎನ್ನುವುದು ವಿಶೇಷ. ಭಾರತೀಯ ಸಿನಿಮಾ ರಂಗದಲ್ಲೇ ಇದೊಂದು ವಿಶಿಷ್ಟ ಪ್ರಯೋಗ ಎನ್ನುತ್ತಾರೆ ಚಿತ್ರದ ನಿರ್ದೇಶಕ ಅರ್ಜುನ್ ಜನ್ಯ. ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟನೆಯ ಬಹುನಿರೀಕ್ಷಿತ ಚಿತ್ರವಿದು. ಇತ್ತೀಚೆಗೆ ಚಿತ್ರದ ಪ್ರೊಮೋಷನ್ ವೀಡಿಯೋ ಬಿಡುಗಡೆಯಾಗಿತ್ತು. ಇದೀಗ ಟ್ರೇಲರ್ ಬಿಡುಗಡೆಯಲ್ಲೂ ಚಿತ್ರತಂಡ ಸದ್ದು ಮಾಡುತ್ತಿದೆ. ರಮೇಶ್ ರೆಡ್ಡಿ ನಿರ್ಮಾಣದ ಚಿತ್ರಕ್ಕೆ ಅರ್ಜುನ್ ಜನ್ಯ ಅವರೇ ಸಂಗೀತ ಸಂಯೋಜಿಸಿದ್ದಾರೆ. ಇದೇ ಡಿಸೆಂಬರ್ 25ರಂದು ಸಿನಿಮಾ ತೆರೆಕಾಣುತ್ತಿದೆ.










