ಕನ್ನಡದ ಖ್ಯಾತ ಕಾದಂಬರಿಕಾರ ತ ರಾ ಸುಬ್ಬರಾಯರ ‘ಹಂಸಗೀತೆ’ಯನ್ನು ನಟಿ ಭಾವನಾ ನೃತ್ಯರೂಪಕಕ್ಕೆ ತರುತ್ತಿದ್ದಾರೆ. ಅವರದ್ದೇ ಆದ Home Town Productions ನಡಿ ಈ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ. ಏಕವ್ಯಕ್ತಿ ಪ್ರದರ್ಶನದ ಈ ‘ನೃತ್ಯ ಕಾವ್ಯ’ದಲ್ಲಿ ಹಾಡು, ನೃತ್ಯ ಹಾಗೂ ಸಂಭಾಷಣೆಗಳು ಇರುತ್ತವೆ ಎನ್ನುವುದು ವಿಶೇಷ.

ನಟಿ ಭಾವನಾ ಶಾಸ್ತ್ರೀಯ ನೃತ್ಯಗಾರ್ತಿಯೂ ಹೌದು. ಹಲವು ವರ್ಷಗಳಿಂದ ನಟನೆಯ ಜೊತೆಜೊತೆಗೆ ನೃತ್ಯ ಚಟುವಟಿಕೆಗಳಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ Home Town Productions ನಿರ್ಮಾಣ ಸಂಸ್ಥೆ ಸ್ಥಾಪಿಸಿದ್ದರು. ತಮ್ಮ ಸಂಸ್ಥೆ ಹಾಗೂ ‘ಹೂವು ಫೌಂಡೇಶನ್‌’ ಅಡಿ ಅವರು ದೇಶದ ಹಲವೆಡೆ ಹತ್ತಾರು ಮಹತ್ವದ ನೃತ್ಯ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ತಮ್ಮ ಸಂಸ್ಥೆಯಡಿ ‘ನಿರುತ್ತರ’ ಸಿನಿಮಾ ನಿರ್ಮಿಸಿ, ನಟಿಸಿದ್ದರು. ಅವರ ನಿರ್ಮಾಣ ಸಂಸ್ಥೆಗೆ ಬೆನ್ನೆಲುಬಾಗಿ ಭಾವನಾ ಅವರೊಂದಿಗೆ ಸಹೋದರ ಅರವಿಂದ್‌ ಇದ್ದಾರೆ. ಭಾವನಾರ ಕಿರಿಯ ಸಹೋದರಿ ಶ್ಯಾಲಿನಿ ವಸ್ತ್ರವಿನ್ಯಾಸಕಿಯಾಗಿ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿದ್ದಾರೆ. ಇದೀಗ ಭಾವನಾ ತಮ್ಮ ಸಂಸ್ಥೆಯಡಿ ‘ಹಂಸಗೀತೆ’ ವಿಶಿಷ್ಟ ನೃತ್ಯ ರೂಪಕ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.

ಕನ್ನಡದ ಖ್ಯಾತ ಕಾದಂಬರಿಕಾರ ತ ರಾ ಸುಬ್ಬರಾಯರ ‘ಹಂಸಗೀತೆ’ ಕಾದಂಬರಿಯನ್ನು ಜಿ ವಿ ಅಯ್ಯರ್ ಅವರು ಚಲನಚಿತ್ರವಾಗಿಸಿದ್ದರು. ಈಗ ನಟಿ ಭಾವನ ‘ಹಂಸಗೀತೆ’ಯನ್ನು ನೃತ್ಯ ರೂಪಕವಾಗಿ ತರುತ್ತಿದ್ದಾರೆ. ‘ತರಾಸು ಅವರ ಹಂಸಗೀತೆಯನ್ನು ಇಂದಿನ ತಲೆಮಾರಿಗೆ ತಲುಪಿಸುವ ಪ್ರಯತ್ನವೇ ಈ ನೃತ್ಯರೂಪಕ. ಒಂದೂವರೆ ಗಂಟೆಗಳ ಕಾಲ ನಡೆಸಿಕೊಡುವ ಏಕವ್ಯಕ್ತಿ ಪ್ರದರ್ಶನದ ಈ ‘ನೃತ್ಯ ಕಾವ್ಯ’ದಲ್ಲಿ ಹಾಡು, ನೃತ್ಯ ಹಾಗೂ ಸಂಭಾಷಣೆಗಳು ಇರುತ್ತವೆ’ ಎನ್ನುತ್ತಾರವರು. ಕತೆಗಾರ ವಿಕ್ರಂ ಹತ್ವಾರ್‌ ನೃತ್ಯರೂಪಕಕ್ಕೆ ಸಂಭಾಷಣೆ ರಚಿಸಿದ್ದಾರೆ. ‘ಹಂಸಗೀತೆ’ ನೃತ್ಯರೂಪಕದ ಮೊದಲ ಪ್ರದರ್ಶನ ಇದೇ ಜನವರಿ 30ರ ಸಂಜೆ 6.30ಕ್ಕೆ ಚೌಡಯ್ಯ ಮೆಮೋರಿಯಲ್‌ ಹಾಲ್‌ನಲ್ಲಿ ನಡೆಯಲಿದೆ. ಮುಂದಿನ ದಿನಗಳಲ್ಲಿ ರಾಜ್ಯ, ದೇಶದ ಇತರೆಡೆ ಹಾಗೂ ವಿದೇಶಗಳಲ್ಲೂ ಪ್ರದರ್ಶನ ಆಯೋಜಿಸುವುದು ಅವರ ಗುರಿ. ಪ್ರಥಮ ಪ್ರದರ್ಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ ಕ್ಷೇತ್ರದ ಗಣ್ಯರನೇಕರು ಪಾಲ್ಗೊಳ್ಳಲಿದ್ದಾರೆ. ಸಾಹಿತಿ, ಚಿತ್ರನಿರ್ದೇಶಕ ಬರಗೂರು ರಾಮಚಂದ್ರಪ್ಪ, ನಟ ದರ್ಶನ್‌, ನಟಿ ತಾರಾ ಅವರೂ ನೃತೃರೂಪಕ ವೀಕ್ಷಿಸಲಿದ್ದಾರೆ.

LEAVE A REPLY

Connect with

Please enter your comment!
Please enter your name here