ದಶಕಗಳ ಕಾಲ ನಿರೂಪಣೆ – ನಟನೆಯಿಂದ ಕನ್ನಡಿಗರ ಪ್ರೀತಿಗೆ ಪಾತ್ರರಾಗಿದ್ದ ಅಪರ್ಣ ನಿನ್ನೆ (ಜುಲೈ 11) ಅಗಲಿದ್ದಾರೆ. ಇದೇ ಅಕ್ಟೋಬರ್‌ಗೆ ಅವರಿಗೆ 58 ವರ್ಷ ತುಂಬುತ್ತಿತ್ತು. ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.

ಆಕರ್ಷಕ ನಿರೂಪಣೆಯಿಂದ ದಶಕಗಳ ಕಾಲ ಕನ್ನಡಿಗರ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದವರು ಅಪರ್ಣ. ನಿರೂಪಣೆಗೆ ಮುನ್ನ ಅವರು ಜನರಿಗೆ ಪರಿಚಯವಾಗಿದ್ದು ನಟಿಯಾಗಿ. ‘ಜಾಗೃತಿ’ ಚಿತ್ರದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ‘ಮಸಣದ ಹೂವು’ ಚಿತ್ರದ ಅಪರೂಪದ ಪಾತ್ರದ ಮೂಲಕ ಅವರು ಕನ್ನಡಿಗರಿಗೆ ಆಪ್ತವಾದರು. ಮುಂದೆ ಹಲವು ಚಿತ್ರಗಳಲ್ಲಿ ಅಭಿನಯಿಸಿದರೂ ಅವರು ಕನ್ನಡಿಗರಿಗೆ ಹೆಚ್ಚು ಹತ್ತಿರವಾಗಿದ್ದು ನಿರೂಪಕಿಯಾಗಿ. ಚಿಕ್ಕಂದಿನಿಂದಲೇ ಸಾಹಿತ್ಯದ ಬಗ್ಗೆ ಅಭಿರುಚಿ ಹೊಂದಿದ್ದ ಅಪರ್ಣ ಅವರಿಗೆ ಕನ್ನಡ ಭಾಷೆಯನ್ನು ಸೊಗಸಾಗಿ ಬಳಕೆ ಮಾಡುವ ಕಲೆ ಸಿದ್ಧಿಸಿತ್ತು. ಹೀಗಾಗಿ ದಶಕಗಳ ಕಾಲ ನಿರೂಪಕಿಯಾಗಿ ಕನ್ನಡ ಭಾಷೆಯ ವಕ್ತಾರೆಯಂತೆ ಕಾರ್ಯನಿರ್ವಹಿಸುತ್ತಾ ಬಂದಿದ್ದರು. ಬೆಂಗಳೂರು ಮೆಟ್ರೋದಲ್ಲಿ ಪ್ರಸ್ತುತ ಪ್ರಯಾಣಿಕರ ಕಿವಿಗೆ ಬೀಳುವ ‘ಮುಂದಿನ ನಿಲ್ದಾಣ’ ಧ್ವನಿಯೂ ಅವರದ್ದೆ.

ಅಪರ್ಣ ಅಂದಾಕ್ಷಣ ಕನ್ನಡಿಗರಿಗೆ ಅಚ್ಚ ಸ್ವಚ್ಛ ಕನ್ನಡದಲ್ಲಿ ನಿರೂಪಣೆ ನೆನಪಾಗುತ್ತದೆ. ಸಮಯೋಚಿತವಾದ ಉಕ್ತಿಗಳು, ನುಡಿಗಟ್ಟುಗಳು, ವಚನ, ಪದ, ಕಗ್ಗ ಇತ್ಯಾದಿಗಳ ಸವಿಯನ್ನೂ ಸೇರಿಸಿ ಯಾವುದೇ ಕಾರ್ಯಕ್ರಮವನ್ನು ಲೀಲಾಜಾಲವಾಗಿ, ಆಸಕ್ತಿದಾಯಕವಾಗಿ ಪ್ರಸ್ತುಪಡಿಸುವ ಅಪರ್ಣ ಸಂದರ್ಭಕ್ಕೆ ಅನುಗುಣವಾಗಿ ಉಡುಪು, ವಿಚಾರಕ್ಕೆ ತಕ್ಕಂತಹ ಮುಖಭಾವದ ಜೊತೆಗೆ ನೆನಪಿನಲ್ಲಿ ಉಳಿಯುವ ಗಾಂಭೀರ್ಯದೊಂದಿಗೆ ಮಾಡುವ ಇವರ ನಿರೂಪಣಾ ಶೈಲಿ ಅನೇಕರಿಗೆ ಸ್ಪೂರ್ತಿ. 80ರ ದಶಕದಲ್ಲಿ ಗಮನಾರ್ಹ ಕನ್ನಡ ನಿರೂಪಕಿಯರಲ್ಲಿ ಒಬ್ಬರಾಗಿ ನಿರೂಪಣೆ ಪ್ರಾರಂಭಿಸಿದ ಇವರು ನಿರೂಪಣೆಯೊಂದು ವಿಶಿಷ್ಟ ಕಲೆ, ಮಾತಿನಲ್ಲಿ ಸಭಿಕರನ್ನು ಹಿಡಿದಿಡುವುದರ ಜೊತೆಗೆ ಸ್ವಾರಸ್ಯಕರವಾಗಿ ಸಮಾರಂಭವನ್ನು ಹೇಗೆ ನಡೆಸಿಕೊಡಬಹುದು, ಅಲ್ಲದೆ ನಿರೂಪಣೆಯ ಸೀಮಿತ ಅನ್ನಿಸಬಹುದಾದ ಅವಕಾಶದಲ್ಲೇ ಹೇಗೆ ಜನರ ಅಭಿಮಾನಕ್ಕೆ ಪಾತ್ರರಾಗಬಹುದು ಎಂದು ತೋರಿಸಿಕೊಟ್ಟರು.

ದೂರದರ್ಶನ ಆಗಿನ್ನೂ ಕನ್ನಡಿಗರಿಗೆ ಪರಿಚಯವಾಗುತ್ತಿದ್ದ ಕಾಲ. ಆಗ ನಿರೂಪಣೆಗೊಂದು ಮಾದರಿ ರೂಪಿಸಿದವರು ಅಪರ್ಣ. ದಶಕಗಳ ಕಾಲ ನಿರೂಪಣೆ ಮಾಡಿದ ಅವರು ಟೀವಿಯೇತರ ಕಾರ್ಯಕ್ರಮಗಳ ನಿರೂಪಣೆಯಲ್ಲೂ ತಮ್ಮದೇ ಛಾಪು ಮೂಡಿಸಿದ್ದರು. ಬೆಂಗಳೂರು ದೂರದರ್ಶನದಲ್ಲಿ ಸೀನಿಯರ್‌ ಗ್ರೇಡ್‌ ಉದ್ಘೋಷಕಿಯಾಗಿ, ಆಕಾಶವಾಣಿಯಲ್ಲಿ ಅನೌನ್ಸರ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ಒಂದೂವರೆ ಸಾವಿರಕ್ಕೂ ಹೆಚ್ಚು ಟೀವಿಯೇತರ ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳನ್ನು ತಮ್ಮ ನಿರೂಪಣೆಯಿಂದಲೇ ಕಳೆಗಟ್ಟುತಿದ್ದ ಹೆಗ್ಗಳಿಕೆ ಅವರದು. ಕಿರುತೆರೆ ಮಾಧ್ಯಮದಲ್ಲಿನ ಕೆಲಸಕ್ಕೆ ಸರ್ವೋಚ್ಛ ಪ್ರಶಸ್ತಿ ಸೇರಿದಂತೆ ಅಪರ್ಣ ಅವರಿಗೆ ಹಲವು ಗೌರವಗಳು ಸಂದಿವೆ. ಕನ್ನಡ ಪ್ರಭ ದಿನಪತ್ರಿಕೆಗೆ ‘ಸಖೀಗೀತ’ ಅಂಕಣ ಬರೆದಿದ್ದರು. ಅಪರ್ಣರ ತಂದೆ ಕೆ ಎಸ್‌ ನಾರಾಯಣಸ್ವಾಮಿ ಅವರು ಕನ್ನಡ ಪ್ರಭ ಪತ್ರಿಕೆಯ ಪುರವಣಿ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದವರು. ತಮ್ಮ ತಂದೆಯವರು ಕೆಲಸ ಮಾಡಿದ್ದ ಪತ್ರಿಕೆಗೆ ಅಂಕಣಕಾರ್ತಿ ಆಗಿರುವುದು ಹೆಮ್ಮೆಯ ವಿಷಯ ಎಂದು ಅಪರ್ಣ ಭಾವಿಸಿದ್ದರು.

ಉತ್ತಮ ನಟಿಯಾಗಿಯೂ ಅಪರ್ಣ ಕನ್ನಡಿಗರಿಗೆ ಮೆಚ್ಚುಗೆಯಾಗಿದ್ದಾರೆ. ಪರ್ತಕರ್ತರಾಗಿದ್ದ ಅಪರ್ಣ ತಂದೆ ಕೆ ಎಸ್‌ ನಾರಾಯಣಸ್ವಾಮಿ ಅವರಿಗೆ ಚಿತ್ರನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಆಪ್ತರು. ತಾವು ನಿರ್ದೇಶಿಸಬೇಕೆಂದಿದ್ದ ‘ಮಸಣದ ಹೂವು’ ಸಿನಿಮಾದ ಪಾತ್ರದಲ್ಲಿ ಅಪರ್ಣ ನಟಿಸಬೇಕೆಂದು ಪುಟ್ಟಣ್ಣನವರು ನಾರಾಯಣಸ್ವಾಮಿ ಅವರಲ್ಲಿ ಕೋರಿಕೆಯನ್ನಿಟ್ಟಿದ್ದರು. ಹೀಗೆ ಉತ್ತಮ ಪಾತ್ರ ಅಪರ್ಣ ಅವರಿಗೆ ಒದಗಿಬಂದಿತು. ಇದಕ್ಕೂ ಮುನ್ನ ‘ಜಾಗೃತಿ’ ಚಿತ್ರದಲ್ಲಿ ಬಾಲನಟಿಯಾಗಿ ಅವರು ಕ್ಯಾಮೆರಾ ಎದುರಿಸಿದ್ದರು. ‘ಮಸಣದ ಹೂವು’ ನಂತರ ಮುಂದೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದರು. ಸಂಗ್ರಾಮ, ನಮ್ಮೂರ ರಾಜ, ಚಕ್ರವರ್ತಿ, ಒಂಟಿಸಲಗ, ಇನ್‌ಸ್ಪೆಕ್ಟರ್‌ ವಿಕ್ರಂ, ಸಾಹಸ ವೀರ.. ಅಪರ್ಣರ ಕೆಲವು ಪ್ರಮುಖ ಸಿನಿಮಾಗಳು. ಜನಪ್ರಿಯ ‘ಮುಕ್ತ’ ಧಾರಾವಾಹಿಯ ಶೀಲಾ ಪ್ರಸಾದ್‌ ಪಾತ್ರದಲ್ಲಿ ಕಿರುತೆರೆ ವೀಕ್ಷಕರಿಗೆ ಆಪ್ತವಾದರು. ‘ಪ್ರೀತಿ ಇಲ್ಲದ ಮೇಲೆ’, ‘ಜೋಗುಳ’ ಅವರ ಮತ್ತೆರೆಡು ಪ್ರಮುಖ ಧಾರಾವಾಹಿಗಳು. ತೀರಾ ಇತ್ತೀಚೆಗೆ ‘ಮಜಾ ಟಾಕೀಸ್‌’ ಕಾಮಿಡಿ ಶೋನ ವಿಶಿಷ್ಟ ಪಾತ್ರದಲ್ಲಿ ಕನ್ನಡಿಗರ ಮನಸೂರೆಗೊಂಡಿದ್ದರು. 2005ರಲ್ಲಿ ವಾಸ್ತು ಶಿಲ್ಪಿ, ಕವಿ ನಾಗರಾಜ ವಸ್ತಾರೆ ಅವರೊಂದಿಗೆ ಅಪರ್ಣರ ವಿವಾಹ ನೆರವೇರಿತ್ತು. ಅಪರ್ಣರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.

LEAVE A REPLY

Connect with

Please enter your comment!
Please enter your name here