16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಮಾರ್ಚ್‌ 1ರಿಂದ 8ನೇ ತಾರೀಖಿನವರೆಗೆ ನಡೆಯಲಿದೆ. 60ಕ್ಕೂ ಹೆಚ್ಚು ದೇಶಗಳ, 200ಕ್ಕೂ ಹೆಚ್ಚು ಚಲನಚಿತ್ರಗಳು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ.

‘ಸರ್ವ ಜನಾಂಗದ ಶಾಂತಿಯ ತೋಟ’ ಥೀಮ್‌ನಡಿ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಮಾರ್ಚ್‌ 1ರಿಂದ 8ನೇ ತಾರೀಖಿನವರೆಗೆ ನಡೆಯಲಿದೆ. 60ಕ್ಕೂ ಹೆಚ್ಚು ದೇಶಗಳ, 200ಕ್ಕೂ ಹೆಚ್ಚು ಚಲನಚಿತ್ರಗಳು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಒರಾಯಿನ್‌ ಮಾಲ್‌ನ 11 ಸ್ಕ್ರೀನ್‌ಗಳು, ಸುಚಿತ್ರಾ ಫಿಲಂ ಸೊಸೈಟಿ ಮತ್ತು ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿನ ಡಾ ಅಂಬರೀಶ್‌ ಆಡಿಟೋರಿಯಂನ ತಲಾ ಒಂದು ಪರದೆಯಲ್ಲಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಎಂದಿನಂತೆ ಈ ಬಾರಿಯೂ ಏಷ್ಯಾ, ಭಾರತ ಮತ್ತು ಕನ್ನಡ ಸಿನಿಮಾಗಳು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸಿನಿಮಾಗಳ ಸ್ಪರ್ಧೆ ಇರಲಿದೆ.

ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ ಸಿಕ್ಕಿದ್ದು 2006ರಲ್ಲಿ. ಕಳೆದ ವರ್ಷ ಚಿತ್ರೋತ್ಸವಕ್ಕೆ 7 ಕೋಟಿ ರೂಪಾಯಿ ವೆಚ್ಚವಾಗಿತ್ತು. ಈ ವರ್ಷ 9 ಕೋಟಿ ರೂಪಾಯಿ ವೆಚ್ಚದಲ್ಲಿ ಚಿತ್ರೋತ್ಸವ ನಡೆಸಲು ಸಮಿತಿ ತೀರ್ಮಾನಿಸಿದೆ. ನಿನ್ನೆ ನಡೆದ ಚಿತ್ರೋತ್ಸವ ಸಂಘಟನಾ ಸಮಿತಿ ಸಭೆ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಮಾರ್ಚ್‌ 1ರಂದು ಚಿತ್ರೋತ್ಸವದ ಉದ್ಘಾಟನೆ, 8ರಂದು ಸಮಾರೋಪ ಸಮಾರಂಭ ನಡೆಯಲಿದೆ. ಜಗತ್ತಿನ ವಿವಿಧ ದೇಶಗಳ ಸಿನಿಮಾಗಳ ಮೂಲಕ ಅಲ್ಲಿನ ನಾಗರೀಕತೆ, ಆಚಾರ – ವಿಚಾರ, ಸಂಸ್ಕೃತಿಯನ್ನು ತಿಳಿಯಲು ಚಿತ್ರೋತ್ಸವ ನೆರವಾಗಲಿದೆ. ಬೆಂಗಳೂರು ಹಾಗೂ ರಾಜ್ಯದ ಸಿನಿಮಾಸಕ್ತರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಚಿತ್ರನಗರಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯನವರು, ‘ಮೈಸೂರಿನಲ್ಲಿ ಚಿತ್ರನಗರಿ ನಿರ್ಮಿಸಲು ಸರ್ಕಾರ ಈಗಾಗಲೇ 110 ಎಕರೆ ವಿಸ್ತೀರ್ಣದ ಜಮೀನನ್ನು ಮಂಜೂರು ಮಾಡಿದೆ. ಪಿಪಿಪಿ ಮಾದರಿಯಲ್ಲಿ ಚಿತ್ರನಗರಿ ನಿರ್ಮಾಣದ ಯೋಜನೆ ಅನುಷ್ಠಾನಗೊಳಿಸಲಾಗುವುದು. ಕನ್ನಡ ಚಲನಚಿತ್ರಗಳ ಉತ್ತೇಜನ ನೀಡುವಂತಹ ಹಲವು ಯೋಜನೆಗಳನ್ನು ಸರ್ಕಾರ ಜಾರಿಗೊಳಿಸುತ್ತಾ ಬಂದಿದೆ. ಕನ್ನಡ ಚಲನಚಿತ್ರಗಳ ಸಹಾಯಧನಕ್ಕಾಗಿ ಆಯ್ಕೆ ಸಮಿತಿ ರಚಿಸಿದ್ದು, ಸಮಿತಿ ಚಿತ್ರಗಳನ್ನು ವೀಕ್ಷಿಸುತ್ತಿದೆ’ ಎಂದರು.

LEAVE A REPLY

Connect with

Please enter your comment!
Please enter your name here