ನರ್ತನ್‌ ನಿರ್ದೇಶನದಲ್ಲಿ ಶಿವರಾಜಕುಮಾರ್‌ ನಟಿಸಿರುವ ‘ಭೈರತಿ ರಣಗಲ್‌’ ಸಿನಿಮಾ ಇದೇ ನವೆಂಬರ್‌ 15ರಂದು ತೆರೆಕಾಣಲಿದೆ. 4800 ಅಡಿ ವಿಸ್ತೀರ್ಣದ graffiti art ಸಿನಿಮಾ ಪೋಸ್ಟರ್‌ ಮೂಲಕ ಚಿತ್ರದ ನಿರ್ಮಾಪಕಿ ಗೀತಾ ಶಿವರಾಜಕುಮಾರ್‌ ಅವರು ಬಿಡುಗಡೆ ದಿನಾಂಕ ಘೋಷಿಸಿದ್ದು ವಿಶೇಷ.

ಶಿವರಾಜಕುಮಾರ್‌ ನಟನೆಯ ಬಹುನಿರೀಕ್ಷಿತ ‘ಭೈರತಿ ರಣಗಲ್‌’ ಸಿನಿಮಾ ಇದೇ ನವೆಂಬರ್‌ 15ರಂದು ತೆರೆಕಾಣಲಿದೆ. ಚಿತ್ರದ ಬಿಡುಗಡೆ ದಿನಾಂಕವನ್ನು ವಿಭಿನ್ನವಾಗಿ ಅನೌನ್ಸ್ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಬೆಂಗಳೂರಿನ ಯಲಹಂಕದಲ್ಲಿರುವ ಗೆಲರಿಯಾ ಮಾಲ್‍ನಲ್ಲಿ ಇದೇ ಮೊದಲ ಬಾರಿಗೆ 4800 ಅಡಿ ವಿಸ್ತೀರ್ಣದ ಬೃಹತ್ graffiti art ಅನಾವರಣ ಮಾಡುವ ಮೂಲಕ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಯ್ತು. ಸಹಸ್ರಾರು ಅಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ‘ಅಭಿಮಾನಿಗಳಿಗೆ ಅನಂತ ಧನ್ಯವಾದ. ನವೆಂಬರ್ 15ರಂದು ಚಿತ್ರ ಬಿಡುಗಡೆಯಾಗಲಿದೆ‌. ನಮ್ಮ ಚಿತ್ರವನ್ನು ಎಲ್ಲರೂ ಚಿತ್ರಮಂದಿರಗಳಿಗೆ ಬಂದು ನೋಡುವ ಮೂಲಕ ಪ್ರೋತ್ಸಾಹ ನೀಡಿ’ ಎಂದು ನಿರ್ದೇಶಕ ನರ್ತನ್‌ ಕೋರಿದರು.

‘ಭೈರತಿ ರಣಗಲ್‍’ ಚಿತ್ರ ಮೊದಲು ತಿಳಿಸಿದಂತೆ ಆಗಸ್ಟ್ 15 ರಂದು ಬಿಡುಗಡೆಯಾಗಬೇಕಿತ್ತು. ಕಾರಣಾಂತರದಿಂದ ಚಿತ್ರ ಬಿಡುಗಡೆ ಮುಂದೆ ಹೋಗಿತ್ತು. ನಿನ್ನೆ ಬಿಡುಗಡೆ ದಿನಾಂಕ ಘೋಷಣೆಯಾದ ನಂತರ ಮಾತನಾಡಿದ ನಿರ್ಮಾಪಕಿ ಗೀತಾ ಶಿವರಾಜಕುಮಾರ್, ‘ಭೈರತಿ ರಣಗಲ್ ನಮ್ಮ ಸಂಸ್ಥೆಯಿಂದ ನಿರ್ಮಾಣವಾಗಿರುವ ಎರಡನೇ ಚಿತ್ರ. ನಮ್ಮ ಸಂಸ್ಥೆಯ ಮೊದಲ ಚಿತ್ರ ‘ವೇದ’ಗೆ ನೀವೆಲ್ಲಾ ನೀಡಿದ ಪ್ರೋತ್ಸಾಹಕ್ಕೆ ಧನ್ಯವಾದ. ಈ ಚಿತ್ರಕ್ಕೂ ನಿಮ್ಮೆಲ್ಲರ ಪ್ರೋತ್ಸಾಹವಿರಲಿ. ಇಂದು ನಿಮ್ಮೆಲ್ಲರ ಸಮ್ಮುಖದಲ್ಲಿ ವಿನೂತನ ರೀತಿಯಲ್ಲಿ ಬಿಡುಗಡೆಯ ದಿನಾಂಕ ಅನೌನ್ಸ್ ಆಗಿದೆ. ಮುಂದೆ ಬೆಳಗಾವಿಯಲ್ಲೂ ಈ ಚಿತ್ರದ ಕುರಿತಾದ ಕಾರ್ಯಕ್ರಮ ನಡೆಯಲಿದೆ’ ಎಂದರು. ‘ಮಫ್ತಿ’ ಚಿತ್ರದ ಪ್ರೀಕ್ವೆಲ್ ‘ಭೈರತಿ ರಣಗಲ್‍’ ಚಿತ್ರವನ್ನು ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ನಿರ್ಮಿಸಿದ್ದಾರೆ. ರುಕ್ಮಿಣಿ ವಸಂತ್‍, ರಾಹುಲ್ ಬೋಸ್‍, ಅವಿನಾಶ್, ದೇವರಾಜ್‍, ಮಧು ಗುರುಸ್ವಾಮಿ, ಛಾಯಾ ಸಿಂಗ್‍, ಬಾಬು ಹಿರಣ್ಣಯ್ಯ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ರವಿ ಬಸ್ರೂರು ಅವರ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here