ತಂದೆ ಕುಟುಂಬದವರನ್ನು ತನ್ನ ಹುಟ್ಟಿದೂರಿಗೆ ಕರೆದುಕೊಂಡು ಹೋಗುತ್ತಾನೆ. ಹೆಂಡತಿ ಮತ್ತು ಒಬ್ಬಳು ಮಗಳನ್ನು ಕೂಡಿ‌ ಹಾಕುತ್ತಾನೆ. ಇನ್ನೊಬ್ಬಳು ಮಗಳು ತಪ್ಪಿಸಿಕೊಳ್ಳುತ್ತಾಳೆ. ಆ ನಂತರದ ಸಿನೀಮಿಯ ದೃಶ್ಯಗಳು ಹೊಸ ಅರ್ಥಗಳನ್ನು ಹೊಳೆಯಿಸುತ್ತವೆ.

ಚಿತ್ರವನ್ನು ನೋಡಿ ಹೊರಬಂದ ನಂತರವೂ ಚಿತ್ರ ಕಾಡುತ್ತಿರಬೇಕು. ಮೇಲ್ನೋಟಕ್ಕೆ ದಕ್ಕುವ ಕತೆಯಷ್ಟೇ ಅಲ್ಲ, ಸಿನಿಮಾ ಇನ್ನೇನನ್ನೋ‌‌ ಹೇಳುತ್ತದೆ, ಅದು ಏನಿರಬಹುದು ಎಂದು ಹುಡುಕಾಡಿ ನಾವೇ ಅರ್ಥವನ್ನು ಕಂಡುಕೊಳ್ಳುವಂತಿರಬೇಕು. ನಾವು ಅರ್ಥ ಮಾಡಿಕೊಂಡಿದ್ದು ತಪ್ಪಿದ್ದರೂ ಹೀಗೂ ತಿಳಿದುಕೊಳ್ಳಬಹುದಲ್ಲಾ ಎಂದು ಅನ್ನಿಸಿದರೆ ಅಷ್ಟು ಸಾಕು; ಸಿನಿಮಾ ಗೆದ್ದಂತೆ. ನಿನ್ನೆ (Mar 6) Biffesನಲ್ಲಿ ನಾನು ನೋಡಿದ ಮೂರು ಚಿತ್ರಗಳೂ ಈ ವರ್ಗಕ್ಕೆ ಸೇರಿದಂಥವು.

ಬಹಳ ಹೆಸರು ಮಾಡಿದ ಹಲವು ಪ್ರಶಸ್ತಿಗಳನ್ನು ಪಡೆದ ‘ದ ಸೀಡ್ ಆಫ್ ದಿ ಸೇಕ್ರೆಡ್ ಫಿಗ್’ ಬಗ್ಗೆ ಕುತೂಹಲವಿತ್ತು. ಧರ್ಮಾಡಳಿತದ (ಥಿಯೋಕ್ರಸಿ) ವಿರುದ್ಧ ಬಂಡೆದ್ದ ವಿದ್ಯಾರ್ಥಿಗಳನ್ನು ಹತ್ತಿಕ್ಕಲು ಪ್ರಭುತ್ವ ನಡೆಸುವ ಕಾರ್ಯಾಚರಣೆಯಲ್ಲಿ ಒಬ್ಬಳು ಹುಡುಗಿ ತೀವ್ರವಾಗಿ ಗಾಯಗೊಳುತ್ತಾಳೆ. ಈ ಘಟನೆಯಿಂದ ನೆಮ್ಮದಿಯಲ್ಲಿರುವ ಪುಟ್ಟ ಸಂಸಾರವೊಂದರಲ್ಲಿ ಅಲ್ಲೋಲಕಲ್ಲೋಲವಾಗುತ್ತದೆ. ಆಗ ತಾನೇ ಆ ಕುಟುಂಬದ ತಂದೆಗೆ ಇನ್ವೆಸ್ಟಿಗೇಟಿವ್ ಜಡ್ಜ್ ಆಗಿ ಭಡ್ತಿ ಸಿಕ್ಕಿರುತ್ತದೆ. ಪ್ರಭುತ್ವವನ್ನೂ,ಧಾರ್ಮಿಕ ನಂಬುಗೆಯನ್ನೂ ಕಟ್ಟುನಿಟ್ಟಾಗಿ ಪಾಲಿಸುವ ಆತನ ಸರ್ವೀಸ್ ಗನ್ ಕಳೆದು ಹೋಗುತ್ತದೆ. ಅವನು ಹೆಂಡತಿ, ಮತ್ತಿಬ್ಬರು ಹೆಣ್ಣುಮಕ್ಕಳ ಮೇಲೆ ಶಂಕೆ ವ್ಯಕ್ತ ಪಡಿಸುತ್ತಾನೆ. ಅವರ ತನಿಖೆಯನ್ನೂ ನಡೆಸುತ್ತಾನೆ. ಇದಾದ ಬಳಿಕ ಸರಳವೆಂದು ತೋರುವ ಚಿತ್ರ ಮತ್ತೊಂದು ದಾರಿಗೆ ಹೊರಳುತ್ತದೆ.

ತಂದೆ ಕುಟುಂಬದವರನ್ನು ತನ್ನ ಹುಟ್ಟಿದೂರಿಗೆ ಕರೆದುಕೊಂಡು ಹೋಗುತ್ತಾನೆ. ಹೆಂಡತಿ ಮತ್ತು ಒಬ್ಬಳು ಮಗಳನ್ನು ಕೂಡಿ‌ ಹಾಕುತ್ತಾನೆ. ಇನ್ನೊಬ್ಬಳು ಮಗಳು ತಪ್ಪಿಸಿಕೊಳ್ಳುತ್ತಾಳೆ. ಆ ನಂತರದ ಸಿನೀಮಿಯ ದೃಶ್ಯಗಳು ಹೊಸ ಅರ್ಥಗಳನ್ನು ಹೊಳೆಯಿಸುತ್ತವೆ. ತಂದೆ ಧರ್ಮಾಧಾರಿತ ಆಡಳಿತವನ್ನು ಒಪ್ಪಿಕೊಂಡವನು( ಸೇಕ್ರೆಡ್ ಫಿಗ್).‌ ಮಗಳು‌ ಆಧುನಿಕ ಚಿಂತನೆಗಳುಳ್ಳ- ನೈಲ್ ಪಾಲೀಶ್, ಕೂದಲಿಗೆ ನೀಲಿ ಬಣ್ಣ ಹಾಕಬಯಸುವ – ಹದಿಹರೆಯದ ಹುಡುಗಿ. ಈ ರೀತಿಯ ಚಿಂತನೆಗಳ ಸಂಘರ್ಷ ಇರಾನಿನಲ್ಲಿ‌ ನಡೆಯುತ್ತಿದೆ. ಮಗಳು‌ ಅಪ್ಪನನ್ನು ಅವಶೇಷದಡಿಯಲ್ಲಿ‌ ಕುಸಿಯುವಂತೆ ಮಾಡುವುದರಲ್ಲಿ ಹೊಸತು ಹಳೆಯದರ ಸಂಘರ್ಷ ಕಾಣುತ್ತದೆ. ಇದಕ್ಕೆ ಪೂರಕವಾಗಿ ಕ್ರೆಡಿಟ್ಸ್ ರೋಲ್ ಬರುವಾಗ ಪ್ರತಿಭಟನೆಕಾರರ ಆಝಾದಿ ಘೋಷಣೆಗಳು ಕಂಡು ಬರುತ್ತವೆ. ನಿರ್ದೇಶಕ ಮಹಮ್ಮದ್ ರಸೊಲಾಫ್ ಯಾಕೆ ದೇಶಭ್ರಷ್ಟನಾದ ಎಂದು ಈ ಚಿತ್ರ ನೋಡಿ ಯಾರಾದರೂ‌ ಅರ್ಥ ಮಾಡಿಕೊಳ್ಳಬಹುದು.

ದಿ ಗ್ರೇಟ್ ಯಾನ್ ಆಫ್ ಹಿಸ್ಟರಿ | ಇರಾನ್ ದೇಶದ ಚಿತ್ರ. ಇದೇನಪ್ಪಾ ಇದಕ್ಕೆ ಬರ್ಲಿನ್ ಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ‌ ಪ್ರಶಸ್ತಿ ಕೊಟ್ಟಿದ್ದಾರೆ ಎನ್ನಿಸುವಂತಿದೆ ಈ‌ ಚಿತ್ರ. ಗುಹೆಯಲ್ಲಿ ಅಡಗಿಸಿಟ್ಟ ಚಿನ್ನವನ್ನು ಹುಡುಕಲು ಯುವಕನೊಬ್ಬನನ್ನು ನೇಮಿಸಿಕೊಂಡು ವ್ಯಕ್ತಿಯೊಬ್ಬ ಹೊರಡುತ್ತಾನೆ‌.‌ ಹಲವು ಊರುಗಳನ್ನು ಸುತ್ತಿ ಕನಸಲ್ಲಿ‌ ಕಂಡ ಗುಹೆ ಸಿಕ್ಕದೆ ಬಸವಳಿಯುತ್ತಾರೆ. ಕೊನೆಗೂ ಗುಹೆ ಸಿಗುತ್ತದೆ; ಚಿನ್ನ ಇಲ್ಲ.

ಸಿನಿಮಾ ಕಾಣಿಸುವುದು ಇಷ್ಟನ್ನೇ. ಆದರೆ ತೋರಿಸುವುದು ಬಹಳಷ್ಟನ್ನು. ಇಬ್ಬರಲ್ಲಿ ಒಬ್ಬನಿಗೆ ದೇವರಲ್ಲಿ ನಂಬಿಕೆ. ಮತ್ತೊಬ್ಬನಿಗೆ ದೇವರಲ್ಲಿ ನಂಬಿಕೆ ಇಲ್ಲ. ನಂಬಿಕೆಯಿಟ್ಟವನಿಗೆ ಅವನು ಭ್ರಮಿಸಿದ್ದು ಎಲ್ಲೂ ಸಿಗುವುದಿಲ್ಲ. ಅದರೆ ಅವನು ಅದಕ್ಕೇ ಶರಣಾಗಿ ಬಿಡುತ್ತಾನೆ. ನಂಬಿಕೆ ಇಲ್ಲದವನಿಗೆ ಭ್ರಮೆಗಳಿಲ್ಲ. ಅವನು ಶ್ರಮ‌ ಪಡುತ್ತಾನೆ. ಸಿಗಬೇಕೆಂಬ ಒತ್ತಾಸೆಯೂ‌ ಇಲ್ಲ. ಅವನ ಪಾಡಿಗವನು‌ ಮುಂದೆ ಸಾಗುತ್ತಾ ಇರುತ್ತಾನೆ. ಇಂತಹ ಕಾಡುವ ಚಿತ್ರಗಳಿಗೆ ಇರಾನಿನ ನಿರ್ದೇಶಕರು ಹೆಸರು ವಾಸಿ. ಸಾಯುವ ಮೊದಲು ಜೋಗದ ಗುಂಡಿ ನೋಡಬೇಕೆಂದು ಕವಿ ಹೇಳಿರುವಂತೆ, ಚಲನಚಿತ್ರೋತ್ಸವ ತೀರುವ ಮುನ್ನ ಒಂದಾದರೂ ಇರಾನಿಯನ್ ಸಿನಿಮಾ ನೋಡುವುದು ವಾಸಿ.

ಥ್ರೂ ರಾಕ್ಸ್ ಎಂಡ್ ಕ್ಲೌಡ್ಸ್ | ಪೆರು ಸಿನಿಮಾ. ಕುರಿಯಂತಿರುವ ಉದ್ದ ಕುತ್ತಿಗೆಯ ಅಲ್ಪಾಕಗಳ ಮಂದೆಯನ್ನು ಮೇಯಿಸುವ ಒಂಬತ್ತು ವರ್ಷದ ಹುಡುಗನ ಕಣ್ಣಳತೆಯ ಚಿತ್ರ. ಹಸಿರನ್ನು, ನೀರನ್ನು, ಹಳ್ಳಿಯ ಪ್ರಶಾಂತ ಬದುಕನ್ನು ಗಣಿಗಾರಿಕೆಯೆನ್ನುವ ಆಧುನೀಕರಣದ ಉರುಳಿಗೆ ಒಡ್ಡುವುದನ್ನು ವರ್ಲ್ಡ್ ಕಪ್ ಫುಟ್ ಬಾಲ್ ಹಿನ್ನೆಲೆಯಲ್ಲಿ ಕಟ್ಟಿ ಕೊಡಲಾಗಿದೆ. ಜನ ಮೊದಲ ಬಾರಿಗೆ ಪೆರು ಕ್ವಾಲಿಫೈ‌ ಆಗಿದ್ದನ್ನು ಸಂಭ್ರಮಿಸುತ್ತಾರೆ.‌ ಅಲ್ಪಾಕಗಳ‌ ಕುತ್ತಿಗೆ ಕೊಯ್ಯಲಾಗುತ್ತದೆ. ಮುಂದೆ ಜನರದ್ದೂ!

LEAVE A REPLY

Connect with

Please enter your comment!
Please enter your name here