ನಾಳೆ (feb 16) ನಟ ದರ್ಶನ್ ಹುಟ್ಟುಹಬ್ಬಕ್ಕೆ ಅವರ ‘ಡೆವಿಲ್’ ಸಿನಿಮಾದ ಟೀಸರ್ ಬಿಡುಗಡೆಯಾಗುತ್ತಿದೆ. ಚಿತ್ರ ನಿರ್ಮಿಸಿ – ನಿರ್ದೇಶಿಸುತ್ತಿರುವ ‘ಮಿಲನ’ ಪ್ರಕಾಶ್ ಅವರ ಈ ನಿರ್ಧಾರ ದರ್ಶನ್ ಅಭಿಮಾನಿಗಳಿಗೆ ಸಂತಸ ತಂದಿದೆ.
ದರ್ಶನ್ ಅಭಿಮಾನಿಗಳಿಗೆ ಇದು ಸಂತಸದ ಸುದ್ದಿ. ದರ್ಶನ್‌ರ ಬಹುನಿರೀಕ್ಷಿತ ಸಿನಿಮಾ ‘ಡೆವಿಲ್’ ಟೀಸರ್ ನಾಳೆ (feb 16) ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗುತ್ತಿದೆ. ಚಿತ್ರ ನಿರ್ಮಿಸಿ, ನಿರ್ದೇಶಿಸುತ್ತಿರುವ ಶ್ರೀ ಜೈಮಾತಾ ಕಂಬೈನ್ಸ್‌ನ ‘ಮಿಲನ’ ಪ್ರಕಾಶ್ ಈ ಮೂಲಕ ದರ್ಶನ್ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ನಾಳೆಯ ಟೀಸರ್ ರಿಲೀಸ್‌ಗೆ ಸಂಬಂಧಿಸಿದಂತೆ ಅವರು ತಮ್ಮ Instaದಲ್ಲಿ ‘ಡೆವಿಲ್’ ಪೋಸ್ಟರ್ ಜೊತೆ glimpses ಹಂಚಿಕೊಂಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತವಿರುವ ಈ glimpsesನ ಥೀಮ್ ಮ್ಯೂಸಿಕ್ ಗಮನ ಸೆಳೆಯುತ್ತದೆ.
ಈ ಹಿಂದೆ ಟೈಟಲ್ ಟೀಸರ್ ಬಂದಾಗಲೇ ಚಿತ್ರದಲ್ಲಿನ ದರ್ಶನ್‌ರ ಪಾತ್ರದ ಬಗ್ಗೆ ಕುತೂಹಲವಿತ್ತು. ಇದೀಗ ಟೀಸರ್‌ನಲ್ಲಿ ಪಾತ್ರ ಹಾಗೂ ಸಿನಿಮಾದ ಕತೆಯ ಬಗ್ಗೆ ಮತ್ತಷ್ಟು ವಿಷಯಗಳು ತಿಳಿದುಬರಲಿವೆ. ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಚಿತ್ರದ ಆಕ್ಷನ್ ಸನ್ನಿವೇಶಗಳನ್ನು ಚಿತ್ರಿಸಲಾಗಿತ್ತು. ಶೂಟಿಂಗ್ ಸಂದರ್ಭದ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಓಡಾಡಿದ್ದವು. ಇಲ್ಲಿ ಚಿತ್ರಣಗೊಂಡಿರುವ ಸನ್ನಿವೇಶಗಳೂ ಟೀಸರ್‌ನಲ್ಲಿ ಇರಲಿವೆ ಎನ್ನಲಾಗಿದೆ. ಸದ್ಯ ನಟ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ. ಮುಂದಿನ ತಿಂಗಳಿನಿಂದ ಮತ್ತೆ ಸಿನಿಮಾದ ಶೂಟಿಂಗ್‌ಗೆ ಚಾಲನೆ ಸಿಗಬಹುದು ಎನ್ನಲಾಗುತ್ತಿದೆ.
ಇತ್ತೀಚೆಗಷ್ಟೇ ನಟ ದರ್ಶನ್ ತಮ್ಮ ಅಭಿಮಾನಿಗಳಿಗಾಗಿ ವೀಡಿಯೋವೊಂದನ್ನು ಮಾಡಿದ್ದರು. ‘ಬೆನ್ನು ನೋವಿನ ಕಾರಣ ನನಗೆ ಹೆಚ್ಚು ಹೊತ್ತು ನಿಲ್ಲಲು ಆಗುವುದಿಲ್ಲ. ಹಾಗಾಗಿ ಬರ್ತ್‌ಡೇ ಸಂಭ್ರಮ ಬೇಡ. ದಯಮಾಡಿ ಅಭಿಮಾನಿಗಳು ಹುಟ್ಟುಹಬ್ಬದಂದು ಮನೆಯ ಬಳಿ ಬರುವುದು ಬೇಡ’ ಎಂದಿದ್ದರು. ಇದರಿಂದಾಗಿ ಕೊಂಚ ಅಸಮಾಧಾನಗೊಂಡಿದ್ದ ಅಭಿಮಾನಿಗಳಿಗೆ ‘ಡೆವಿಲ್’ ಟೀಸರ್ ಬಿಡುಗಡೆಯ ಸುದ್ದಿ ಖುಷಿ ತಂದಿದೆ. ಚಿತ್ರದ ಆಡಿಯೋ ಹಕ್ಕುಗಳು ‘ಸರಿಗಮ’ ಆಡಿಯೋ ಸಂಸ್ಥೆಗೆ ಬಿಕರಿಯಾಗಿದ್ದು, ‘ಸರಿಗಮ’ ಮೂಲಕ ಟೀಸರ್ ರಿಲೀಸ್ ಆಗಲಿದೆ.
ಶೀರ್ಷಿಕೆಯಲ್ಲಿ ಬದಲಾವಣೆ | ಟೀಸರ್ ಸುದ್ದಿಯ ಬೆನ್ನಲ್ಲೇ ಚಿತ್ರದ ಶೀರ್ಷಿಕೆ ಬದಲಾಗಿರುವುದು ವಿಶೇಷ. ಈ ಮೊದಲು ಚಿತ್ರಕ್ಕೆ ‘ಡೆವಿಲ್’- ದಿ ಹೀರೊ ಎನ್ನುವ ಟೈಟಲ್ ಇತ್ತು. ಅದೀಗ ‘ದಿ ಡೆವಿಲ್’ ಎಂದಾಗಿದೆ. ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ನಟಿಸುತ್ತಿದ್ದಾರೆ. ಉಳಿದಂತೆ ಇತರೆ ತಾರಾಬಳಗದ ಬಗ್ಗೆ ಮಾಹಿತಿಯಿಲ್ಲ. ‘ಟೀಸರ್’ ಬಿಡುಗಡೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಚಿತ್ರದ ಕುರಿತಂತೆ ಒಂದೊಂದೇ ಮಾಹಿತಿಗಳು ಸಿಗಲಿವೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ ದರ್ಶನ್ ಅಭಿಮಾನಿಗಳು.