‘ಕಾಟೇರ’ ಸಿನಿಮಾಗೆ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಒಂದು ಸಿನಿಮಾ ಆಗಿ ಮಾತ್ರವಲ್ಲದೆ, ಜನಕಥನವಾಗಿಯೂ ಇದೊಂದು ಮೈಲುಗಲ್ಲು ಎನ್ನುವುದು ಹಿರಿಯ ಸಿನಿಮಾ ವಿಶ್ಲೇಷಕ ಕೆ ಫಣಿರಾಜ್ ಅವರ ಅಭಿಪ್ರಾಯ. ‘ಕಾಟೇರ’ ಚಿತ್ರವನ್ನು ಏಕೆ ನೋಡಬೇಕು ಎನ್ನುವುದಕ್ಕೆ ಫಣಿರಾಜ್ 5 ಕಾರಣಗಳನ್ನು ಕೊಡುತ್ತಾರೆ.
1) ‘ಕಾಟೇರ’ 2023ರ ಭಾರತದ ಸಾಮಾಜಿಕ – ರಾಜಕೀಯ ಸನ್ನಿವೇಶದಲ್ಲಿ, ಕರ್ನಾಟಕದ ಜನಮಾನಸದಲ್ಲಿ ಹುದುಗಿರುವ ಸಾಮುದಾಯಿಕ ಭಾವ ಸಂವೇದನೆಗಳನ್ನು ತಟ್ಟಿ ಎಚ್ಚರಿಸಬೇಕು. ಅದಕ್ಕೆ ಅನುವಾದ ಪುರಾಣ ಸದೃಶ ಜನಕಥನವನ್ನು ಹೇಗೆ ಹೆಣೆಯಬೇಕು ಎಂಬ ಬಹಳ ದೊಡ್ಡ ಸವಾಲನ್ನು ಎದುರಿಗೆ ಹಾಕಿಕೊಂಡು, ಎದುರಿಸಿ, ಬಲು ಹೃದ್ಯವಾಗಿ ಕಟ್ಟುವಲ್ಲಿ ಸಿನಿಮಾ ಜಯಿಸಿದೆ. ಆ ಕಾರಣಕ್ಕಾಗಿ ‘ಕಾಟೇರ’ ಸಾಮಾಜಿಕ ಚರಿತ್ರೆಯಲ್ಲಿ ಒಂದು ಮೈಲಿಗಲ್ಲಾಗುವ ಯೋಗ್ಯತೆ ಪಡೆದಿದೆ.
2) ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಅವರಲ್ಲಿ ಸ್ಟಾರ್ ಹೀರೋ ನಟನೆ, ಚಿತ್ರಕಥೆಯ ಬಂಧ, ದೃಶ್ಯ ನಿರ್ದೇಶನ ಹಾಗು ಸಂಪಾದಕರ ಕುಶಲತೆಗಳನ್ನು ಮಾತ್ರವಲ್ಲದೆ, ಪ್ರತಿ ಪಾತ್ರ ಕಟ್ಟುವಿಕೆಯನ್ನೂ ಹದದಲ್ಲಿ ನಿಭಾಯಿಸುವ ಹೊಣೆಗಾರಿಕೆ ಕಾಣಿಸುತ್ತದೆ. ಅವರು ಪ್ರತಿ ಪುಟ್ಟ ಪಾತ್ರವನ್ನೂ ಸಿನಿಮಾದ ವಸ್ತು ನಿರ್ವಹಣೆ ಹಾಗೂ ದೃಶ್ಯ ನಿರೂಪಣೆಗೆ ಹದದಲ್ಲಿ ಹೊಂದಿಸಿರುವ ಬಗೆಯು ಉತ್ತಮವಾಗಿದೆ.
3) ದೃಶ್ಯ ನಿರ್ದೇಶಕ (DOP) ಹಾಗು ದೃಶ್ಯ ಸಂಪಾದಕ (Editor) ಚಿತ್ರಕಥೆಯ ಜೀವಾಳವನ್ನು ಅರಿತು, ಅದರ ಲಯವನ್ನು ಸರಿಯಾಗಿ ಗ್ರಹಿಸಿ ಕಾರ್ಯನಿರ್ವಹಿಸುವುದು ಅವುಗಳ ಕಸುಬುದಾರಿಕೆಯ ಘನತೆ. ‘ಕಾಟೇರ’ದಲ್ಲಿ ಲಯದ ಅತ್ತ್ಯುತ್ತಮ ಗುಣ ನಮಗೆ ಕಾಣುತ್ತದೆ.
4) ವಸ್ತು ಯಾವುದೇ ಇರಲಿ, ಒಂದು ಸಿನಿಮಾ ನಮ್ಮನ್ನು ಹಿಡಿದಿಡೋದು ಅದರ ದೃಶ್ಯ ನಿರೂಪಣೆಯ ಬಿಗಿ ಸೂತ್ರದಲ್ಲಿ. ಅದಕ್ಕೆ ಬೇಕಾಗಿರೋದು ಒಂದು ಬಿಗಿ ಬಂಧದ ಚಿತ್ರಕಥೆ. ‘ಕಾಟೇರ’ದ ಚಿತ್ರಕಥೆಯ ಕಸುಬುದಾರಿಕೆಯ ಘನತೆ ಇರೋದು 182 ನಿಮಿಷಗಳ ದೃಶ್ಯ ಕಟ್ಟಲ್ಲಿ ಒಂದು ನಿಮಿಷವೂ ವ್ಯರ್ಥ ಅನಿಸಿದ ಹಾಗೆ (ಹಾಡುಗಳ ದೃಶ್ಯವೂ ಸೇರಿ) ಕಟ್ಟಿರುವಲ್ಲಿ. ಕನ್ನಡ ಜನಪ್ರಿಯ ಸಿನಿಮಾಗಳಲ್ಲಿ ಚಿತ್ರಕಥೆಯ ಶಕ್ತಿಯನ್ನು ತೋರಿಸಿದ ಹಿರಿಮೆ ‘ಕಾಟೇರ’ಕ್ಕೆ ಖಂಡಿತ ದಕ್ಕುತ್ತದೆ.
5) ಪ್ರತಿಯೊಬ್ಬ ಜನಪ್ರಿಯ ಸ್ಟಾರ್‌ನ ಒಳಗೆ ಒಬ್ಬ ನಟ ಇರ್ತಾನೆ. ಅದು ಅಪ್ಪಟ ಕಾಣಿಸ್ಲಿಕ್ಕೆ ಒಂದು ಸಿನ್ಮಾಕ್ಕೆ ಕಾಯಬೇಕು. ದರ್ಶನ್‌ಗೆ ಅಂಥ ಒಂದು ಸಿನ್ಮಾ ಇದು. D Boss ನಾಟಕೀಯತೆ ಬಿಟ್ಟಾಕಿ ಪಾತ್ರಕ್ಕೆ ಬೇಕಾದಷ್ಟು ಭಾವಾಭಿವ್ಯಕ್ತಿಗಳನ್ನೂ ಜೀವಂತಿಕೆಯನ್ನೂ ಎಷ್ಟು ಸರಾಗವಾಗಿ ನಿಭಾಯಿಸಿದ್ದಾರೆ ಎಂದರೆ, ಕಾಟೇರನ ಅವರ ಪಾತ್ರ ಕನ್ನಡದ ಅತ್ತ್ಯುತ್ತಮ ಕೆಳದನಿಯ ಸಶಕ್ತ ಅಭಿನಯಗಳಲ್ಲಿ ಒಂದು (One of the Brilliant Understated Acting) ಎಂದು ನಿಸ್ಸಂಶಯವಾಗಿ ಹೇಳಬಹುದು.