ಮದುವೆ ಎಂಬ ಸಂಸ್ಥೆಯಲ್ಲಿ ಪ್ರೇಮವೆನ್ನುವುದನ್ನು ದೈಹಿಕ ವಾಂಛೆ – ಸಂಬಂಧಗಳ ಅಳತೆಗೋಲಿನ ಮೂಲಕ ಮಾತ್ರ ಅಳೆಯಬೇಕೇ? ನಮ್ಮ ಭಾರತದಂತಹ ಪಿತೃಪ್ರಧಾನ ಸಮಾಜದ ವಿವಾಹೇತರ ಸಂಬಂಧಗಳಲ್ಲಿ ಗಂಡಿಗೆ ಮತ್ತು ಹೆಣ್ಣಿಗೆ ಬೇರೆ ಬೇರೆ ಮಾನದಂಡಗಳನ್ನು ಬಳಸಲಾಗುತ್ತದೆಯೇ? ಇತ್ಯಾದಿ ಪ್ರಶ್ನೆಗಳು ಈ ಸಿನಿಮಾವನ್ನು ವೀಕ್ಷಿಸಿದ ತರುವಾಯ ವೀಕ್ಷಕರಲ್ಲಿ ಮೂಡಬಹುದು. ‘ಗಹೀನ್ ಹೃದಯ್’ Amazon Primeನಲ್ಲಿ ಸ್ಟ್ರೀಮ್ ಆಗುತ್ತಿದೆ.
ಭಾರತದ ಮತ್ತು ವಿಶ್ವ ಚಲನಚಿತ್ರರಂಗದಲ್ಲಿ ವಿವಾಹೇತರ ಸಂಬಂಧದ ಅನೇಕ ಸಿನಿಮಾಗಳು ಬಂದು ಹೋಗಿವೆ. ಆದರೂ ಇಂತಹ ಸೂಕ್ಷ್ಮ ಮತ್ತು ಸಂಕೀರ್ಣ ವಿಷಯದ ಮೇಲೆ ಕಾಲದಿಂದ ಕಾಲಕ್ಕೆ ನಿರ್ದೇಶಕರು ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ. ಬಂಗಾಳಿ ಚಲನಚಿತ್ರರಂಗದ ಸತ್ಯಜಿತ್ ರೇ ನಿರ್ದೇಶನದ ‘ಚಾರುಲತ’ (1964) ಬಹಳ ನವಿರಾಗಿ ಈ ವಿಷಯವನ್ನು ಕಟ್ಟಿಕೊಟ್ಟಿರುವ ಹಾಗೂ ಈಗಲೂ ಸಿನಿರಸಿಕರನ್ನು ಸೆಳೆಯುವ ಸಿನಿಮಾ. ನಂತರದ ವರ್ಷಗಳಲ್ಲಿ ‘ಸ್ತ್ರೀ’ (1972 – ನಿರ್ದೇಶನ: ಸಲೀಲ್ ದತ್ತ), ‘ಪರೋಮ (1985 – ನಿರ್ದೇಶನ : ಅಪರ್ಣಾ ಸೆನ್), ‘ದೋಸಾರ್’ (2006 – ನಿರ್ದೇಶನ : ರಿತುಪರ್ಣೋ ಘೋಷ್) ಮುಂತಾದ ಸಿನಿಮಾಗಳು ಇದೇ ವಿಷಯದ ಕಥನವನ್ನು ಹೊಂದಿದ್ದವು. ‘ಗಹೀನ್ ಹೃದಯ್’ (ಬಂಗಾಳಿ) 2018ರಲ್ಲಿ ಬಿಡುಗಡೆಯಾಗಿತ್ತು. ಪ್ರಸ್ತುತ ಇದು Amazon Primeನಲ್ಲಿ ವೀಕ್ಷಿಸಲು ಲಭ್ಯವಿದೆ.
ಸುಚಿತ್ರಾ ಭಟ್ಟಾಚಾರ್ಯ ಕಾದಂಬರಿಯನ್ನು ಆಧರಿಸಿದ, ಅಗ್ನಿದೇವ್ ಚಟರ್ಜಿ ನಿರ್ದೇಶನದ ಕಪ್ಪು ಬಿಳುಪಿನ ಈ ಸಿನಿಮಾ ತ್ರಿಕೋನ ಸಂಬಂಧದ ಕಥನವನ್ನು ಹೊಂದಿದೆ. ಉದ್ಯೋಗಿಯಾಗಿರುವ ಸೋಹಿನಿ (ನಟಿ ರಿತುಪರ್ಣ ಸೇನ್‌ಗುಪ್ತಾ), ಆಕೆಯ ಗಂಡ ಭಾಸ್ಕರ್( ನಟ ದೆಬ್ಶಂಕರ್ ಹಾಲ್ದರ್) ಮತ್ತು ಆಕೆಯ ಪ್ರಿಯಕರ ಮತ್ತು ಗಂಡನ ಗೆಳೆಯ ಅನುಪಮ್ (ಕೌಶಿಕ್ ಸೇನ್) ಸುತ್ತ ಸಿನಿಮಾವನ್ನು ಕಟ್ಟಲಾಗಿದೆ.
ಡೈವೋರ್ಸಿ ಅನುಪಮ್‌ನ ಮಗಳು ಅತನ ಮಾಜಿ ಹೆಂಡತಿಯ ಜೊತೆ ಅಮೆರಿಕದಲ್ಲಿ ಇರುತ್ತಾಳೆ. ಹೀಗಾಗಿ ಆತನಿಗೆ ಒಂಟಿತನದ ಸಾಮೀಪ್ಯ. ಇನ್ನೊಂದೆಡೆ ಸೋಹಿನಿ ಗಂಡ, ಅತ್ತೆ ಮತ್ತು ಪುಟ್ಟ ಮಗನೊಡನೆ ಇದ್ದರೂ ಒಂದರ್ಥದಲ್ಲಿ ಒಂಟಿತನ ಅನುಭವಿಸುತ್ತಿರುತ್ತಾಳೆ. ಅನುಪಮ್ ತನ್ನ ಡೈವೋರ್ಸಿ ನೆಲೆಯಿಂದ ಸೋಹಿನಿ ಜೊತೆಗಿನ ಸಂಬಂಧವನ್ನು ಮುಂದುವರೆಸಲು ಕಷ್ಟವಾಗುವುದಿಲ್ಲ. ಆದುದರಿಂದ ಆತ ಭಾಸ್ಕರನೊಡನೆ ತಮ್ಮ ಸಂಬಂಧವನ್ನು ನೇರವಾಗಿ ತಿಳಿಸಲು ಸೋಹಿನಿಗೆ ತಿಳಿಸುತ್ತಿರುತ್ತಾನೆ. ಆದರೆ ಸೋಹಿನಿಯ ಪರಿಸ್ಥಿತಿ ಭಿನ್ನವಾಗಿರುತ್ತದೆ ; ಕ್ಲಿಷ್ಟಕರ ಕೂಡ. ಆಕೆ ಭಾಸ್ಕರನೊಡನೆ ತನ್ನ ಮನದಿಂಗಿತವನ್ನು ತಿಳಿಸಲು ಹಿಂಜರಿಯುತ್ತಿರುತ್ತಾಳೆ. ಆದರೆ ಆಕೆ ಒಂದು ದಿನ ಹೇಳಿಬಿಡುತ್ತಾಳೆ. ಭಾಸ್ಕರ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ! ಅದೇ ದಿನದಂದು ಭಾಸ್ಕರ ಕ್ಯಾನ್ಸರ್‌ನಿಂದ ಪೀಡಿತನಾಗಿರುವುದು ತಿಳಿದುಬರುತ್ತದೆ. ಆಗ ಆತ ಸೋಹಿನಿಯನ್ನು ಆತುಕೊಳ್ಳುತ್ತಾನೆ. ಆಕೆಯೂ ಆತನ ಅವಶ್ಯಕತೆಗಳನ್ನು ಕರ್ತವ್ಯದ ಬದ್ಧತೆಯಿಂದ ಪೂರೈಸುತ್ತ ಹೋಗುತ್ತಾಳೆ! ಅಂದರೆ ಆಕೆಗೆ ತನ್ನ ಗಂಡನ ಬಗೆಗೆ ಪ್ರೇಮವಿರುತ್ತದೆ ಕೂಡ ಎಂದು ಅರ್ಥೈಸಬಹುದು! ಆದರೆ ಆತ ಆಕೆಯನ್ನು ಮುಟ್ಟಲು, ತಬ್ಬಿಕೊಳ್ಳಲು ಹೋದಾಗ ಆಕೆ ಆತನಿಂದ ಬಿಡಿಸಿಕೊಳ್ಳಲು ತವಕಿಸುತ್ತಾಳೆ ; ಹಾಗೆಯೇ ಮಾಡುತ್ತಾಳೆ ಕೂಡ.
ಸಿನಿಮಾದಲ್ಲಿ ಭಾಸ್ಕರ ಮತ್ತು ಸೋಹಿನಿ ಪ್ರೀತಿಸಿ ಮದುವೆಯಾಗಿದ್ದಾಗಿ ತಿಳಿದು ಬರುತ್ತದೆ. ಆದರೆ ಅವರ ನಡುವಿನ ಸಂಬಂಧ ಏಕೆ ಡೋಲಾಯಮಾನ ಪರಿಸ್ಥಿಯಲ್ಲಿರುತ್ತದೆ ಎಂಬುದು ಬಹಿರಂಗಗೊಳ್ಳುವುದಿಲ್ಲ. ಹಾಗೆಯೇ ಸೋಹಿನಿ ಮತ್ತು ಆಕೆಯ ಅತ್ತೆಯ ಜೊತೆಗಿನ ಸಂಬಂಧ ಮಧುರವಾಗಿರುವುದಿಲ್ಲ. ಇದಕ್ಕೆ ಕಾರಣವೇನು ಎಂದು ತಿಳಿದು ಬರುವುದಿಲ್ಲ. ಬಹುಶಃ ನಿರ್ದೇಶಕರು ಪ್ರಜ್ಞಾಪೂರ್ವಕವಾಗಿ ಈ ಅಂಶಗಳನ್ನು ಮುಸುಕಿನೊಳಗೆ ಇಟ್ಟಿರಬಹುದು ಎಂದೆನಿಸುತ್ತದೆ. ಒಂದೇ ಅಪಾರ್ಟ್‌ಮೆಂಟಿನಲ್ಲಿ ಬೇರೆ ಬೇರೆಯಾಗಿ ವಾಸಿಸುವ ಅನುಪಮನ ಅಣ್ಣನಿಗೆ ಸೋಹಿನಿ ಜೊತೆಗಿನ ಸಂಬಂಧ ತಿಳಿದಿರುತ್ತದೆ. ಹಾಗೆಯೇ ಭಾಸ್ಕರನ ತಂಗಿ ಮತ್ತು ಆಕೆಯ ಗಂಡನಿಗೂ ಸಹ. ಆದರೆ ಅವರ್ಯಾರೂ ನೇರವಾಗಿ ಈ ವಿಷಯದ ಬಗೆಗೆ ಸೋಹಿನಿ ಅಥವಾ ಭಾಸ್ಕರನ ಜೊತೆ ಮಾತನಾಡುವುದಿಲ್ಲ. ತಮ್ಮತಮ್ಮಲ್ಲೇ ಮಾತನಾಡಿಕೊಳ್ಳುತ್ತಾರೆ, ಅಷ್ಟೇ.
ನಿರ್ದೇಶಕರು ಜಪಾನಿನ ಶಾಸ್ತ್ರೀಯ ‘ಕಬುಕಿ’ ನಾಟಕದ ಅಂಶಗಳನ್ನು ಬಣ್ಣದಲ್ಲಿ ಒಂದು ಪುನರಾವರ್ತನೆಗೊಳ್ಳುವ ಮೆಟಫರ್ ಆಗಿ ತೋರಿಸಿದ್ದಾರೆ. ಆದರೆ ಈ ನಾಟಕ ಪ್ರಕಾರದ ಬಗೆಗೆ ಏನೂ ತಿಳಿದೇ ಇರುವವರಿಗೆ ಈ ರೂಪಕ ತುರುಕಿದಂತೆ ಭಾಸವಾಗಬಹುದು! ಅವುಗಳಲ್ಲಿ ಮುಖವಾಡಗಳಿರುವ ಎರಡು ಗಂಡು ಮತ್ತು ಒಂದು ಹೆಣ್ಣು ಪಾತ್ರಗಳಿರುತ್ತವೆ. ಇವು ಸಿನಿಮಾದಲ್ಲಿ ಯಾರನ್ನು ಪ್ರತಿನಿಧಿಸುತ್ತವೆ ಎಂಬುದು ವೀಕ್ಷಕರಿಗೆ ಸುಲಭವಾಗಿ ದಕ್ಕುವ ವಿಷಯ. ಇದಲ್ಲದೆ ಸಿನಿಮಾದಲ್ಲಿ ಇನ್ನೊಂದು ರೂಪಕವಿದೆ. ಅದು ಬೀಗದ ಕೈ. ಒಂದು ದೃಶ್ಯದಲ್ಲಿ ಸೋಹಿನಿ ತನ್ನ ಸಹೋದ್ಯೋಗಿ, ಗೆಳತಿಯ ಜೊತೆ ಮಾತನಾಡುತ್ತ ತನ್ನ ಬೀಗದ ಕೈ ತೋರಿಸುತ್ತ ಇದು ಹೃದಯದ ಬೀಗವನ್ನು ತೆರೆಯುತ್ತದೆ ಎಂದು ಹೇಳುತ್ತಾಳೆ. ಕೊನೆಯಲ್ಲಿ ಸೋಹಿನಿ ಬೀಗದ ಕೈಯನ್ನು ಅನುಪಮನಿಗೆ ಕೊಡುತ್ತಾಳೆ. ಇದಕ್ಕೆ ಸಿಗುವ ಆತನ ಪ್ರತಿಕ್ರಿಯೆ ರೂಪಕವಾಗಿ ಪ್ರೇಕ್ಷಕರಿಗೆ ಕನ್ವೇ ಆಗುತ್ತದೆ.
ಈ ಸಿನಿಮಾದಲ್ಲಿ ಅನುಪಮ್ – ಸೋಹಿನಿಯರ ಮಿಥುನ ದೃಶ್ಯ ಸೇರಿದಂತೆ ನಿರ್ದೇಶಕರು ಇತರ ದೃಶ್ಯಗಳಲ್ಲಿ ಭಾವುಕತೆಯನ್ನು ಅತಿಯಾಗಿಸಿಲ್ಲ. ಸಂಯಮದ ಹಾದಿಯನ್ನು ಹಿಡಿದಿದ್ದಾರೆ. ಸಿನಿಮಾಟೊಗ್ರಫಿಯನ್ನು ಸ್ವತಃ ನಿರ್ದೇಶಕರೇ ಮಾಡಿದ್ದಾರೆ. ಚಿತ್ರಕಥೆಯನ್ನು ನಿರ್ದೇಶಕ ಅಗ್ನಿದೇವ್ ಅವರ ಮಡದಿ ಸುದೀಪಾ ಚಟರ್ಜಿ ಬರೆದಿದ್ದಾರೆ. ಹಾಡುಗಳು ಇಲ್ಲ, ಆದರೆ ಹಿನ್ನೆಲೆ ಸಂಗೀತ ಮೂರು ಪ್ರಧಾನ ಪಾತ್ರಗಳ ಇಮೋಷನ್ಸ್‌ಗಳಿಗೆ ತಕ್ಕಂತೆ ಇದೆ. ನಟನೆ ಸರಾಗವಾಗಿ ಸಾಗುತ್ತದೆ.
ಮದುವೆ ಎಂಬ ಸಂಸ್ಥೆಯಲ್ಲಿ ಪ್ರೇಮವೆನ್ನುವುದನ್ನು ದೈಹಿಕ ವಾಂಛೆ – ಸಂಬಂಧಗಳ ಅಳತೆಗೋಲಿನ ಮೂಲಕ ಮಾತ್ರ ಅಳೆಯಬೇಕೇ? ನಮ್ಮ ಭಾರತದಂತಹ ಪಿತೃಪ್ರಧಾನ ಸಮಾಜದ ವಿವಾಹೇತರ ಸಂಬಂಧಗಳಲ್ಲಿ ಗಂಡಿಗೆ ಮತ್ತು ಹೆಣ್ಣಿಗೆ ಬೇರೆ ಬೇರೆ ಮಾನದಂಡಗಳನ್ನು ಬಳಸಲಾಗುತ್ತದೆಯೇ? ಇಂತಹ ಸಂಬಂಧಗಳಲ್ಲಿ ಗಂಡು ವಿಹರಿಸುವಷ್ಟು ಸುಲಭವಾಗಿ ಹೆಣ್ಣಿಗೆ ಸಾಧ್ಯವಾಗುವುದಿಲ್ಲ, ಏಕೆ? ಇತ್ಯಾದಿ ಪ್ರಶ್ನೆಗಳು ಈ ಸಿನಿಮಾವನ್ನು ವೀಕ್ಷಿಸಿದ ತರುವಾಯ ವೀಕ್ಷಕರಲ್ಲಿ ಮೂಡಬಹುದು. ಅದೇಕೋ ಸಿನಿಮಾ ವೀಕ್ಷಿಸಿದ ನಂತರ ಪ್ರಸಿದ್ಧ ಮನೋವಿಜ್ಞಾನಿ ಹಾಗೂ ಸಾಮಾಜಿಕ ತತ್ವಶಾಸ್ತ್ರಜ್ಞ ಎರಿಕ್ ಫ್ರಾಮ್‌ನ ‘ದಿ ಆರ್ಟ್ ಆಫ್ ಲವಿಂಗ್’ ಕೃತಿ ನೆನಪಾಯಿತು!