ಕೃಷ್ಣ ಬೆಳ್ತಂಗಡಿ ನಿರ್ದೇಶನದ ‘ಇದು ನಮ್ ಶಾಲೆ’ ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಹಾಡುಗಳನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಪುಣ್ಯ ಮತ್ತು ಪೂಜ್ಯ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
‘ಇದು ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಕುರಿತಾದ ಚಿತ್ರ. ಖಾಸಗಿ ಶಾಲೆಗಳ ದುಬಾರಿ ಫೀಸ್, ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಬೆಳಕು ಚೆಲ್ಲಿದ್ದೇವೆ. ಶಿಕ್ಷಣ ವ್ಯವಸ್ಥೆಯಲ್ಲಿನ ಸವಾಲುಗಳು ಹಾಗೂ ಪರಿಹಾರಗಳನ್ನೂ ಹೇಳಲು ಪ್ರಯತ್ನ ಮಾಡಿದ್ದೇವೆ’ ಎನ್ನುತ್ತಾರೆ ‘ಇದು ನಮ್ ಶಾಲೆ’ ಸಿನಿಮಾದ ನಿರ್ದೇಶಕ ಕೃಷ್ಣ ಬೆಳ್ತಂಗಡಿ. ‘ಬಣ್ಣದ ಕೊಡೆ’ ಚಿತ್ರದ ಮೂಲಕ ನಿರ್ದೇಶಕರಾದ ಅವರ ನಿರ್ದೇಶನದ ಮೂರನೇ ಚಿತ್ರವಿದು. ಮೊನ್ನೆ ಸಿನಿಮಾದ ಆಡಿಯೋ ಬಿಡುಗಡೆಯಾಗಿದೆ. ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ಹಾಡುಗಳನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಸಿನಿಮಾ ಸೆನ್ಸಾರ್ ಆಗಿದ್ದು ಬಿಡುಗಡೆಯ ಹೊಸ್ತಿಲಲ್ಲಿದೆ.
ಆಡಿಯೋ ಬಿಡುಗಡೆಗೊಳಿಸಿ ಮಾತನಾಡಿದ ರವಿ ಡಿ ಚೆನ್ನಣ್ಣನವರ್, ‘ಇದು ಖಾಸಗಿ ಹಾಗೂ ಸರ್ಕಾರಿ ಶಾಲೆಯ ಸುತ್ತಲಿನ ಕಥೆ ಎಂದು ನಿರ್ದೇಶಕರು ಹೇಳಿದಾಗ ಖುಷಿಯಾಯ್ತು. ನಾನು ಕೂಡ ಸರ್ಕಾರಿ ಶಾಲೆಯಲ್ಲೇ ಕಲಿತು ಐಪಿಎಸ್ ಅಧಿಕಾರಿ ಆಗಿದ್ದೇನೆ. ಸಿನಿಮಾ ಮೂಲಕ ಒಳ್ಳೆಯ ವಿಷಯಗಳನ್ನು ಹೇಳಿದಾಗ ಜನರಿಗೆ ಬೇಗ ತಲುಪುತ್ತವೆ. ನನಗೆ ಡಾ ರಾಜಕುಮಾರ್ ಅವರೆಂದರೆ ಪಂಚಪ್ರಾಣ. ‘ಗೆದ್ದೆ ಗೆಲುವೆ ಒಂದು ದಿನ’, ‘ಅರಳುವ ಹೂವುಗಳೆ’, ‘ಹೇ ದಿನಕರ…’ ಮುಂತಾದ ಕನ್ನಡ ಸಿನಿಮಾ ಹಾಡುಗಳು ನನಗೆ ಸ್ಪೂರ್ತಿ. ಕಾಲೇಜು ದಿನಗಳಲ್ಲಿ ಈ ಹಾಡುಗಳನ್ನು ಕೇಳಿ ಬೆಳೆದವನು ನಾನು’ ಎಂದರು. ಶ್ರೀ ಜೇನುಕಲ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ನಿರ್ಮಿಸಿರುವ ಚಿತ್ರಕ್ಕೆ ನಾಗರಾಜ್ ಅದವಾನಿ ಛಾಯಾಗ್ರಾಹಣ, ಹಿತನ್ ಹಾಸನ್ ಸಂಗೀತವಿದೆ. ಪುಣ್ಯ ಮತ್ತು ಪೂಜ್ಯ ಪ್ರಧಾನ ಭೂಮಿಕೆಯಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಅರಸೀಕೆರೆ ಶಾಸಕ ಶಿವಲಿಂಗೇಗೌಡರು ಮುಖ್ಯಮಂತ್ರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.