ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಅಶೋಕ್ ರಾವ್ ಇಂದು ಅಗಲಿದ್ದಾರೆ. ‘ಪರಶುರಾಮ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾಗಿದ್ದ ಅವರು ನೂರಿಪ್ಪತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ (72 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ. ಅವರಿಗೆ ಕ್ಯಾನ್ಸರ್ ತಗುಲಿರುವುದನ್ನು ಮೂರು ವಾರದ ಹಿಂದೆ ಗುರುತಿಸಿದ್ದ ವೈದ್ಯರು ಸೂಕ್ತ ಚಿಕಿತ್ಸೆ ಆರಂಭಿಸಿದ್ದರು. ಇಂದು ಮುಂಜಾನೆ ಹೃದಯಾಘಾತದಿಂದ ಅವರು ಇಹಲೋಕ ತ್ಯಜಿಸಿದ್ದಾರೆ. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಶೋಕ್ ರಾವ್ ಅಗಲಿದ್ದಾರೆ. ‘ಬೆಂಗಳೂರು ಲಿಟ್ಲ್ ಥಿಯೇಟರ್’ ಮೂಲಕ ಇಂಗ್ಲಿಷ್ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಅವರು ಡಾ.ರಾಜಕುಮಾರ್ ಅಭಿನಯದ ‘ಪರಶುರಾಮ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾದರು. ವಿಶಿಷ್ಟ ಧ್ವನಿ ಮತ್ತು ಮ್ಯಾನರಿಸಂನಿಂದಾಗಿ ಬಹುಬೇಗ ಸಿನಿಮಾರಂಗದಲ್ಲಿ ಗುರುತಿಸಿಕೊಂಡರು. ಪೊಲೀಸ್ ಅಧಿಕಾರಿ ಪಾತ್ರಗಳಲ್ಲಿ ಕನ್ನಡಿಗರಿಗೆ ಅವರು ಹೆಚ್ಚಾಗಿ ನೆನಪಾಗುತ್ತಾರೆ.
‘ಪರಶುರಾಮ’ ಚಿತ್ರದ ಮೂಲಕ ಶುರುವಾದ ಅವರ ಸಿನಿಮಾ ಅಭಿಯಾನ ಮುಂದೆ ನಿರಂತರವಾಗಿ ಸಾಗಿತು. ಮೂಲತಃ ಅವರು ಬ್ಯುಸಿನೆಸ್‌ಮ್ಯಾನ್. ಹವ್ಯಾಸಿ ರಂಗಭೂಮಿಯಲ್ಲಿ ನಟರಾಗಿದ್ದ ಅವರು ಸಿನಿಮಾ ನಂಟು ಶುರುವಾದ ನಂತರ ಬೇಡಿಕೆಯ ಪೋಷಕ ನಟರಾದರು. ವಿಷ್ಣುವರ್ಧನ್, ಅಂಬರೀಶ್, ಶಂಕರ್‌ನಾಗ್, ಅನಂತನಾಗ್, ಪ್ರಭಾಕರ್ ಸೇರಿದಂತೆ 80, 90ರ ದಶಕಗಳ ಪ್ರಮುಖ ನಾಯಕನಟರ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಶ್ವಮೇಧ, ಮತ್ತೆ ಹಾಡಿತು ಕೋಗಿಲೆ, ಆವೇಶ, ಅಶೋಕ ಚಕ್ರ, ಬಾ ನಲ್ಲೆ ಮಧುಚಂದ್ರಕೆ ಸೇರಿದಂತೆ ನೂರೈವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಶಂಕರ್‌ನಾಗ್ ನಿರ್ದೇಶನದ ‘ಮಾಲ್ಗುಡಿ ಡೇಸ್’ ಹಾಗೂ ತಮಿಳು, ಹಿಂದಿ ಸಿನಿಮಾಗಳಲ್ಲೂ ಅಶೋಕ್ ರಾವ್ ಅಭಿನಯಿಸಿದ್ದಾರೆ.