ಪರಮ್ ನಿರ್ದೇಶನದಲ್ಲಿ ಧನಂಜಯ್ ನಟಿಸಿರುವ ‘ಕೋಟಿ’ ಸಿನಿಮಾವನ್ನು KRG ಸ್ಟುಡಿಯೋಸ್ ವಿತರಿಸಲಿದೆ. KRG ಇಲ್ಲಿಯವರೆಗೆ ನೂರಕ್ಕೂ ಹೆಚ್ಚು ಚಿತ್ರಗಳನ್ನು ವಿತರಿಸಿದೆ. ವಿಶಿಷ್ಟ ಕತೆಯ ‘ಕೋಟಿ’ ಸಿನಿಮಾದ ವಿತರಿಸುವುದು ತಮಗೆ ಹೆಮ್ಮೆಯ ವಿಷಯ ಎಂದಿದ್ದಾರೆ KRG ಸ್ಟುಡಿಯೋಸ್‌ನ ಕಾರ್ತೀಕ್.
ಕನ್ನಡದ ಪ್ರಸ್ತುತ ಮುಂಚೂನಿ ವಿತರಣೆ ಸಂಸ್ಥೆಗಳಲ್ಲೊಂದಾದ KRG ಸ್ಟುಡಿಯೋಸ್ ‘ಕೋಟಿ’ ಸಿನಿಮಾ ವಿತರಿಸಲಿದೆ. ಈ ಬಗ್ಗೆ ಮಾತನಾಡಿರುವ KRG ಸ್ಟುಡಿಯೋಸ್‌ನ ಕಾರ್ತೀಕ್, ‘ಧನಂಜಯ್ ಅವರೊಂದಿಗಿನ ನಮ್ಮ ಸಂಬಂಧವು ‘ಕೋಟಿ’ ಮೂಲಕ ಮತ್ತಷ್ಟು ವಿಸ್ತರಿಸಿದೆ. ನಾನು ಸಿನಿಮಾ ನೋಡಿದ್ದೇನೆ. ಪರಮೇಶ್ವರ್ ಗುಂಡ್ಕಲ್ ಅವರ ಬರವಣಿಗೆ ಹಾಗೂ ಚಿತ್ರಕಥೆ ಹೆಣೆದಿರುವ ಸೊಗಸನ್ನು ನೋಡಿ ಥ್ರಿಲ್ ಆಗಿದ್ದೇನೆ. ಈ ಚಿತ್ರವನ್ನು ಪ್ರೇಕ್ಷಕರಿಗೆ ಪ್ರಸ್ತುತಪಡಿಸಲು ನಾವು ಉತ್ಸುಕರಾಗಿದ್ದೇವೆ. 250ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಗುರಿ ಹೊಂದಿದ್ದೇವೆ. ಈ ಅವಕಾಶ ನೀಡಿದ ಜಿಯೋ ಸ್ಟುಡಿಯೋಸ್‌ನ ಜ್ಯೋತಿ ದೇಶಪಾಂಡೆ ಅವರಿಗೆ ನಾನು ನನ್ನ ಧನ್ಯವಾದ ಹೇಳುತ್ತೇನೆ’ ಎಂದಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ನಿರ್ಮಾಣ ಹಾಗೂ ವಿತರಣೆಯಲ್ಲಿ KRG ಸಂಸ್ಥೆಯದ್ದು ಮುಂಚೂಣಿ ಹೆಸರು. ಕೆಜಿಎಫ್ 1, ಕೆಜಿಎಫ್ 2, ಕಾಂತಾರ, ಚಾರ್ಲಿ 777, ಬಡವ ರಾಸ್ಕಲ್, ಪೈಲ್ವಾನ್, 12 ನೇ ಫೇಲ್, ಹನುಮಾನ್ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳು ಈ ಸಂಸ್ಥೆ ಮೂಲಕ ಬಿಡುಗಡೆಗೊಂಡಿದೆ. KRG ಸ್ಟುಡಿಯೋಸ್ ಇಲ್ಲಿಯವರೆಗೆ 100ಕ್ಕೂ ಹೆಚ್ಚು ಸಿನಿಮಾಗಳನ್ನು ವಿತರಿಸಿದೆ. ‘ಕೋಟಿ’ ಸಿನಿಮಾವನ್ನು ಇಡೀ KRG ಬಳಗ ವೀಕ್ಷಣೆ ಮಾಡಿದೆ. ಭಾವನಾತ್ಮಕ ಎಳೆಯುಳ್ಳ ಈ ಚಿತ್ರ ಐಪಿಎಲ್ ಹಾಗೂ ಚುನಾವಣಾ ಬಳಿಕ ಇಡೀ ಫ್ಯಾಮಿಲಿಗೆ ಹೇಳಿ ಮಾಡಿಸಿದ ಪರಿಪೂರ್ಣವಾದ ಔತಣದಂತಿದೆ ಎನ್ನುವುದು ಅವರ ಅಭಿಪ್ರಾಯ. ಜಿಯೋ ಸ್ಟುಡಿಯೋಸ್ ನಿರ್ಮಾಣದ ಚಿತ್ರದ ನಾಯಕಿಯಾಗಿ ಮೋಕ್ಷ ಕುಶಾಲ್ ನಟಿಸಿದ್ದು, ರಮೇಶ್ ಇಂದಿರಾ, ರಂಗಾಯಣ ರಘು, ತಾರಾ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಜೂನ್ 14ರಂದು ಸಿನಿಮಾ ತೆರೆಕಾಣಲಿದೆ.