ನಿನ್ನೆ ಭಾನುವಾರ (ಡಿಸೆಂಬರ್ 15) ವಾಣಿಜ್ಯ ಮಂಡಳಿ ಪದಾಧಿಕಾರಿಗಳ ಚುನಾವಣೆ ನಡೆದಿದ್ದು, ಎಂ ನರಸಿಂಹಲು KFCC ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ವಾಣಿಜ್ಯ ಮಂಡಳಿಯ ಒಟ್ಟು ಮತದಾರರ ಸಂಖ್ಯೆ 1409 ಇದ್ದು, ನಿರ್ಮಾಪಕ, ವಿತರಕ ಹಾಗೂ ಪ್ರದರ್ಶಕ ವಲಯದ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಎಂ ನರಸಿಂಹಲು ಆಯ್ಕೆಯಾಗಿದ್ದಾರೆ. 2024 -25ರ ಸಾಲಿನ ಚುನಾವಣೆ ವಾಣಿಜ್ಯ ಮಂಡಳಿ ಕಚೇರಿಯ ಪಕ್ಕದಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಚುನಾವಣಾ ಅಧಿಕಾರಿಯ ನೇತೃತ್ವದಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರಗಳ ಮೂಲಕ ಆಯೋಜನೆಗೊಂಡಿತ್ತು. ನಿರ್ಮಾಪಕ, ವಿತರಕ ಹಾಗೂ ಪ್ರದರ್ಶಕ ವಲಯಗಳಿಂದ ಒಟ್ಟು 128 ಆಕಾಂಕ್ಷಿಗಳು ಸ್ಪರ್ಧೆಯ ಕಣದಲ್ಲಿದ್ದು, ಇದರಲ್ಲಿ ಈಗಾಗಲೇ 24 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಪ್ರದರ್ಶಕ ವಲಯದಲ್ಲಿ ಅಧ್ಯಕ್ಷ ಸ್ಥಾನ ಮೀಸಲಾಗಿದ್ದು, ವಜ್ರೇಶ್ವರಿ ಚಿತ್ರಮಂದಿರದ ಮಾಲೀಕ ಸುಂದರ್ ರಾಜ್ ಆರ್ ವಿರುದ್ಧ ವೈಭವಿ ಚಿತ್ರಮಂದಿರದ ಮಾಲೀಕ ನರಸಿಂಹಲು ಎಂ ಅವರ ನಡುವೆ ನೇರ ಪೈಪೋಟಿ ನಡೆದಿತ್ತು. ಅತಿ ಹೆಚ್ಚು ಅಂತರದಿಂದ ಎಂ ನರಸಿಂಹಲು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ನಿರ್ಮಾಪಕ ವಲಯದ ಉಪಾಧ್ಯಕ್ಷರಾಗಿ ವೆಂಕಟೇಶ್ ಕೆ ವಿ (ಸಫೇರ್), ವಿತರಕ ವಲಯದ ಉಪಾಧ್ಯಕ್ಷರಾಗಿ ಶಿಲ್ಪ ಶ್ರೀನಿವಾಸ್, ಪ್ರದರ್ಶಕರ ವಲಯದ ಉಪಾಧ್ಯಕ್ಷರಾಗಿ ರಂಗಪ್ಪ, ನಿರ್ಮಾಪಕರ ವಲಯದ ಗೌರವ ಕಾರ್ಯದರ್ಶಿಯಾಗಿ ರಾಮಕೃಷ್ಣ ಡಿ ಕೆ, ವಿತರಕ ವಲಯದ ಗೌರವ ಕಾರ್ಯದರ್ಶಿಯಾಗಿ ಎಂ ಎನ್ ಕುಮಾರ್, ಪ್ರದರ್ಶಕರ ವಲಯದ ಗೌರವ ಕಾರ್ಯದರ್ಶಿಯಾಗಿ ಎಲ್ ಸಿ ಕುಶಾಲ್, ಖಜಾಂಚಿಯಾಗಿ ಮಾದೇವ್ (ಚಿಂಗಾರಿ) ಆಯ್ಕೆಯಾಗಿದ್ದಾರೆ. ವಾಣಿಜ್ಯ ಮಂಡಳಿಯ ಒಟ್ಟು ಮತದಾರರ ಸಂಖ್ಯೆ 1409 ಇದ್ದು, ನಿರ್ಮಾಪಕ, ವಿತರಕ ಹಾಗೂ ಪ್ರದರ್ಶಕ ವಲಯದ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಈ ಬಾರಿ ಚುನಾವಣೆಯ ಕಣದಲ್ಲಿ ಯುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿತ್ತು. ಮತದಾರರು ಉತ್ಸಾಹದಿಂದ ಮತ ಚಲಾಯಿಸಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದಾರೆ.