ಈ ಸರಣಿ ಏಕೆ ಮುಖ್ಯವಾಗುತ್ತದೆ ಎಂದರೆ ಲವ್ ಎಂದರೆ ಪ್ರೇಮ ಮಾತ್ರವಲ್ಲ, ಪ್ರೀತಿಯ ಎಲ್ಲಾ ಛಾಯೆ, ರಂಗುಗಳು ಎನ್ನುವ ಈ ಎಲ್ಲಾ ಕಥೆಗಳಲ್ಲೂ ಅಂತಸ್ಥವಾಗಿರುವ ಭಾವನೆ. ಅಷ್ಟೇ ಮುಖ್ಯವಾಗಿರುವುದು ಮಹಿಳಾ ಪ್ರಧಾನ ಕಥೆ ಮತ್ತು ಪಾತ್ರಗಳನ್ನು ಹೇಗೆ ನಿರ್ವಹಿಸಬಹುದು ಎನ್ನುವ ಸರಾಗ ಚಲನೆ. ‘Modern Love – Hyderabad’ ಸರಣಿ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಇಂಗ್ಲಿಷ್‌ನಲ್ಲಿ ಬಂದ ‘ಮಾಡರ್ನ್ ಲವ್’ನ ಹಿಂದಿ ಅವತರಣಿಕೆ ‘ಮಾಡರ್ನ್ ಲವ್ – ಮುಂಬೈ’ ನಂತರ ಬಂದ ಹೊಸ ಫಸಲು ‘ಮಾಡರ್ನ್ ಲವ್ – ಹೈದರಾಬಾದ್’. ಚೆನ್ನೈ ರೂಪಾಂತರ ಇನ್ನೂ ಬರಬೇಕಿದೆ. ಹೈದರಾಬಾದ್ – ನಿಜಾಮರ ನಗರ, ಝಗಮಗ ಹೊಳೆಯದೆ ಬೆಳದಿಂಗಳಂತೆ ಮಿನುಗುವ ಮುತ್ತುಗಳ ನಗರ, ಅಷ್ಟೇ ಮುಖ್ಯವಾಗಿ ಜೇನಿನಂತಹ ತೆಲುಗು ಭಾಷೆಯ ನಗರ, ಕಮ್ಮನೆ ಬಿರ್ಯಾನಿ-ಪಪ್ಪು-ಗೊಂಗೂರಾ ಮಸಾಲೆಯ ನಗರ. ಇಲ್ಲಿನ ಚೂಡಿ ಬಜಾರ್, ಚಾರ್ ಮಿನಾರ್, ಖುಬಾನಿ ಕ ಮೀಠಾ, ಹುಸೇನ್ ಸಾಗರ್, ಎಷ್ಟು ನಿಂತರೂ ದಣಿಯದೆ ನಗುವ ಬುದ್ಧ, ಗೋಲ್ಕೊಂಡಾ ಕೋಟೆ ಎಲ್ಲಕ್ಕೂ ದಖನೀ ಸೊಬಗು ಹಾಸಿಕೊಂಡಿದೆ. ಇದನ್ನು ಕೇಂದ್ರೀಕರಿಸಿಕೊಂಡು ಹೆಣೆಯುವ ಪ್ರಯತ್ನ ಮಾಡಿದ ಆರು ಎಳೆಗಳ ಕುಸುರಿ ಚಿತ್ತಾರ ‘ಮಾಡರ್ನ್ ಲವ್ – ಹೈದರಾಬಾದ್’. ಪ್ರೀತಿಯ ವಿವಿಧ ಛಾಯೆಯ ಆರು ಎಳೆಗಳು ಇಲ್ಲಿ ಕಥೆಗಳಾಗಿವೆ.
1.My Unlikely Pandemic Partner
2.Fuzzy, purple and full of thorns
3.What clown wrote this script!
4.Why did she leave me there?
5.About that Rustle in the Bushes
6.Finding Your Penguin
ಹೌದು, ಹೆಸರುಗಳಲ್ಲಿ ಇನಿತಾದರೂ ತೆಲುಗುತನವಿಲ್ಲ. ಸಬ್ ಟೈಟಲ್‌ಗಳ ಈ ಯುಗದಲ್ಲಿ ಕಥೆಗಳಿಗೆ ಇವೇ ಹೆಸರುಗಳನ್ನಿಡಲು ಯಾವುದೇ ಕಾರಣಗಳಿಲ್ಲ. ತೆಲುಗು ಅಡಿಗೆಯ ಘಮವನ್ನು, ಜಂದ್ಯಾಲರ ಹಾಸ್ಯ ಚಿತ್ರಗಳ ಸೊಗಡನ್ನು ಒಡಮೂಡಿಸಿಕೊಂಡ ಈ ಚಿತ್ರಗಳಿಗೆ ತೆಲುಗು ಹೆಸರುಗಳೇ ಇದ್ದಿದ್ದರೆ ಇನ್ನೂ ಸೊಗಸಾಗಿರುತ್ತಿತ್ತು. ಪ್ರಾದೇಶಿಕತೆಯ ಹೆಗ್ಗಳಿಕೆಯೊಂದಿಗೆ ಬರುವ ಚಿತ್ರಗಳು ತಮಗೇ ಗೊತ್ತಿಲ್ಲದಂತೆ ಅವುಗಳನ್ನು ಕಳೆದುಕೊಳ್ಳುವುದು ಹೀಗೆ. ಹಾಗೆ ನೋಡಿದರೆ ಒಂದೆರಡು ಕಥೆಗಳನ್ನು ಹೊರತು ಪಡಿಸಿದರೆ, ಮುಂಬೈ ಸರಣಿಯಂತೆ ಇಲ್ಲಿನ ಮಿಕ್ಕ ಕಥೆಗಳು ತೆಲುಗುತನವನ್ನು, ಆ ಆತ್ಮವನ್ನು ಹಿಡಿದಿಡಲು ಯಶಸ್ವಿಯಾಗಿಲ್ಲ. ಆ ಮಟ್ಟಿಗೆ ಇವು ಎಲ್ಲಿ ಬೇಕಾದರೂ ನಡೆಯಬಲ್ಲ ಕಥೆಗಳು. ಇವುಗಳಲ್ಲಿ 1,2 ಮತ್ತು 4 ನೆಯ ಕಥೆಯನ್ನು ನಾಗೇಶ್ ಕುಕುನೂರ್ ನಿರ್ದೇಶಿಸಿದ್ದರೆ, 3 ನೆಯ ಕಥೆಯನ್ನು ಉದಯ್ ಗುರ್ರಾಲ, 5 ನೆಯದನ್ನು ದೇವಿಕ ಬಹುಧನಂ ಮತ್ತು 6 ನೆಯದನ್ನು ವೆಂಕಟೇಶ್ ಮಹ ನಿರ್ದೇಶಿಸಿದ್ದಾರೆ. ಈ ಸರಣಿಯಲ್ಲಿ ಒಂದು ಕಥೆ ಪರ್ಫೆಕ್ಟ್ 10 ಪಡೆದರೆ ಮಿಕ್ಕವು ಕಡಿಮೆ ಅಂಕಗಳನ್ನು ಪಡೆಯುತ್ತಾ ಹೋಗುತ್ತದೆ.
ಹಾಗೆ ಮೊದಲ ಸಾಲಿನಲ್ಲಿ ಬರುವ ಕಥೆ ‘ಮೈ ಅನ್ ಲೈಕ್ಲಿ ಪ್ಯಾಂಡಮಿಕ್ ಪಾರ್ಟ್ನರ್’. ಮೆಹರುನ್ನೀಸ ಆಗಿ ರೇವತಿ, ನೂರಿಯಾಗಿ ನಿತ್ಯಾ ಮೆನನ್ ಈ ಕಥೆಯ ಜೀವಾಳವಾಗಿದ್ದಾರೆ. ಅದರಲ್ಲೂ ರೇವತಿ, ತನ್ನ ಒಂದು ನೋಟ, ಮೌನ, ನಡೆ, ನಿಟ್ಟುಸಿರು, ಹಾರಿಸುವ ಹುಬ್ಬು ಎಲ್ಲದರ ಮೂಲಕ ಕಟ್ಟಿಕೊಡುವ ಚಿತ್ರಣ ಡಿಟ್ಟೋ ಹೈದರಾಬಾದಿ ಮುಸ್ಲಿಂ ಹೆಣ್ಣಿನದು. ಅವರ ಬಟ್ಟೆ, ಆಭರಣ ಎಲ್ಲಕ್ಕೂ ಆ ದಖ್ಖನಿ ಪರಿಮಳ ಇದೆ. ತಾಯಿ ಮಗಳ ನಡುವಿನ ಸಂಬಂಧ ವಿಶಿಷ್ಟವಾದದ್ದು. ಅದು ಕೇವಲ ಅಮ್ಮ-ಮಗಳ ಮೆಲೋಡ್ರಾಮದ ಕಥೆಗಳಿಗೆ ಸೀಮಿತವಾದದ್ದಲ್ಲ. ಇಬ್ಬರ ನಡುವೆ ಪ್ರೀತಿ ಇರುತ್ತದೆ, ಸಿಟ್ಟಿರುತ್ತದೆ, ವಾದ-ವಿವಾದ ಮತ್ತು ಇವುಗಳೆಲ್ಲದರ ಜೊತೆಗೆ ಸಮಯ ಬಂದರೆ ನಾನಿವಳನ್ನು ಪೂರ್ತಿಯಾಗಿ ನಂಬಬಹುದು ಎನ್ನುವ ವಿಶ್ವಾಸ ಸಹ ಇರುವ ಅತ್ಯಂತ ಸಂಕೀರ್ಣವಾದ ಸಂಬಂಧ ಇದು. ಗಟ್ಟಿ ವ್ಯಕ್ತಿತ್ವಗಳ ಅಪ್ಪ ಮಗನ ಸಂಬಂಧವನ್ನು ಕುರಿತು ಬಹಳಷ್ಟು ಚಿತ್ರಗಳು ಬಂದಿವೆ. ಆದರೆ ಇಬ್ಬರೂ ಗಟ್ಟಿ ವ್ಯಕ್ತಿತ್ವ ಹೊಂದಿರುವ ಅಮ್ಮ ಮಗಳ ಚಿತ್ರಗಳು ತುಂಬಾ ಕಡಿಮೆ. ಇದು ಅಂತಹ ಒಂದು ಕಿರು ಚಿತ್ರ.
ಮೆಹರುನ್ನೀಸಾ ಕಟ್ಟಾ ಇಸ್ಲಾಂ ಸಂಪ್ರದಾಯವನ್ನು ಅನುಸರಿಸುವ ಮಹಿಳೆ. ಎಷ್ಟು ಮಟ್ಟಿಗೆಂದರೆ ಮಗಳು ಸುನ್ನಿ ಪಂಗಡಕ್ಕೆ ಸೇರಿದ ಯುವಕನನ್ನು ಮದುವೆಯಾಗುತ್ತೇನೆ ಎಂದಾಗ ಕಾಲು ನೆಲಕ್ಕೊತ್ತಿ ನಿಂತು ಬಿಡುತ್ತಾಳೆ. ಅವಳ ನಿರ್ಧಾರದ ಎದುರಿಗೆ ತಂದೆ, ಅಣ್ಣ ಇಬ್ಬರೂ ಅಸಹಾಯಕರು. ಮಗಳು ಮನೆಬಿಟ್ಟು ಹೋಗಿ ಮೆಚ್ಚಿದವನನ್ನು ಮದುವೆಯಾಗುತ್ತಾಳೆ. 6 ವರ್ಷಗಳು ಮನೆಯಿಂದ ಬೇರೆ ಇರುತ್ತಾಳೆ. ಇಷ್ಟರಲ್ಲಿ ಅವಳ ಮದುವೆ ಮುರಿದು ಗಂಡ ಹೆಂಡತಿ ಬೇರೆಯಾಗಿರುತ್ತಾರೆ, ಅಪ್ಪ ತೀರಿಕೊಂಡಿರುತ್ತಾನೆ, ಅಣ್ಣನಿಗೆ ಮದುವೆಯಾಗಿ ಹೆಂಡತಿ ಗರ್ಭಿಣಿಯಾಗಿರುತ್ತಾಳೆ. ಆದರೆ ಈ ತಾಯಿ ಮಗಳು ಮಾತ್ರ ಮುನಿಸು ಮರೆತಿರುವುದಿಲ್ಲ. ಮಗಳ ಮೊಣಕಾಲಿಗೆ ಏನೋ ಸರ್ಜರಿಯಾಗಿ ಅವಳು ಒಬ್ಬಳೇ ಇರುವಾಗ, ಅವಳನ್ನು ನೋಡಲು ತಾಯಿ ಬರುತ್ತಾಳೆ. ಸರಿಯಾಗಿ ಆಗಲೇ ಲಾಕ್ಡೌನ್ ಆಗಿ ಅಮ್ಮ ಮಗಳಿಬ್ಬರೂ ಒಂದೇ ಮನೆಯಲ್ಲಿ ಅನಿವಾರ್ಯವಾಗಿ ಇರಬೇಕಾಗುತ್ತದೆ. ಒಂದು ಸರ್ಜರಿಯ ಗಾಯದೊಂದಿಗೆ ಶುರುವಾಗುವ ಆ ಲಾಕ್ಡೌನ್ ಗಾಯ ಮಾಯುವ ವೇಳೆಗೆ ಮುಗಿಯುತ್ತದೆ. ಆದರೆ ಈ ನಡುವಿನ ದಿನಗಳಲ್ಲಿ ಅಮ್ಮ ಮಾಡುವ ಪಾರಂಪರಿಕ ಅಡಿಗೆ ಮತ್ತು ಮಗಳು ಪದೇಪದೇ ನೆನೆಸಿಕೊಳ್ಳುವ ಬಾಲ್ಯದ ಮತ್ತು ಇಲ್ಲವಾದ ಅಪ್ಪನ ನೆನಪು ಅವರಿಬ್ಬರ ನಡುವೆ ಸೇತುವೆ ಕಟ್ಟುತ್ತದೆ.
ಬಿರ್ಯಾನಿ, ಖುಬಾನಿ ಕಾ ಮೀಠಾ, ಅಂಡೆ ಕಾ ಲೌಜ್, ಮಟನ್ ರೋಸ್ಟ್, ಇವೆಲ್ಲದರ ಜೊತೆಗೆ ಗಂಡನ ಹುಟ್ಟುಹಬ್ಬದ ದಿನ ಕಣ್ಣೀರೊರೆಸಿಕೊಳ್ಳುತ್ತಲೇ ಅವಳು ತಯಾರಿಸುವ ಗಂಡನ ಪ್ರೀತಿಯ ಹಲೀಂ…. ಪೂರಾ ಪೂರಾ ಹೈದರಾಬಾದಿ. ಇದು ಬಾಹ್ಯ ಕಾರಣವಾದರೆ ಅಮ್ಮಂದಿರಿಗೆ ಮಾತ್ರ ಸಾಧ್ಯವಾಗುವ ಅವಳ ಸೂಕ್ಷ್ಮ ಗ್ರಹಿಕೆ, ಎಲ್ಲಿ ಮಗಳ ಕೈಯನ್ನು ಬಿಗಿಯಾಗಿ ಹಿಡಿಯಬೇಕು, ಯಾವಾಗ ಬಿಡಬೇಕು ಎಂದು ಈಗ ಅವಳು ಕಲಿತ ರೀತಿ, ಅದೆಲ್ಲವನ್ನೂ ಮೆಹರುನ್ನೀಸಾ ಅಭಿವ್ಯಕ್ತಿಸುವ ರೀತಿಗೆ ಮನಸ್ಸು ಶರಣೆನ್ನುತ್ತದೆ. ಇನ್ನು ಈ ಕಿರುಚಿತ್ರದ ಕಡೆಯ ಫ್ರೇಂ ಅಂತೂ ಥೇಟ್ ಬೆಳದಿಂಗಳ ಚಿತ್ರ. ಇಲ್ಲಿ ಕುಕುನೂರ್ ಹೆಣ್ಣು ಪಾತ್ರಗಳನ್ನು ಕಟ್ಟಿರುವ ರೀತಿ ಅದ್ಭುತವಾಗಿದೆ. ಎರಡು ಪಾತ್ರಗಳೂ ಅವುಗಳ ಮಟ್ಟಿಗೆ ಅಷ್ಟೇ ದೃಢ ಮತ್ತು ಅಷ್ಟೇ ಕುಸುಮ ಕೋಮಲ. ಈ ಕಥೆಯ ಮತ್ತೊಂದು ಹೆಗ್ಗಳಿಕೆ ಒಂದು ಮುಸ್ಲಿಂ ಕುಟುಂಬವನ್ನು ಕಥೆಯೊಳಗೆ ಅತ್ಯಂತ ಆರ್ಗಾನಿಕ್ ಆಗಿ ಹೆಣೆದ ರೀತಿ.
ಅಷ್ಟೇ ಗಮನಾರ್ಹವಾದ ಇನ್ನೊಂದು ಕಥೆ ‘ವೈ ಡಿಡ್ ಶಿ ಲೀವ್ ಮಿ ದೇರ್?’. ಸುಹಾಸಿನಿ ಈ ಕಥೆಯಲ್ಲಿ ಅಭಿನಯಿಸಿದ್ದಾರೆ. ಆಕೆಯ ನಟನೆಯ ಬಗ್ಗೆ ಹೇಳುವುದೇನು? ಆದರೆ ಆಕೆಗೆ ಸರಿಸಾಟಿಯಾಗಿ ಅಥವಾ ತನ್ನ ವಯಸ್ಸಿನ ಕಾರಣವನ್ನು ಗಣನೆಗೆ ತೆಗೆದುಕೊಂಡರೆ ಆಕೆಗಿಂತ ಒಂದು ಕೈ ಮೇಲೆ ಎನ್ನುವಂತೆ ನಟಿಸಿರುವ ಪುಟಾಣಿ ಒಬ್ಬ ಈ ಕಥೆಯಲ್ಲಿದ್ದಾನೆ. ಅವನು ಅದ್ವಿತೇಜ್ ರೆಡ್ಡಿ. ಅವನ ನಗು, ಖಿನ್ನತೆ, ತಿಂಡಿಪೋತ ಆಸೆ, ಹಠ ಎಲ್ಲವೂ ಪರಿಪೂರ್ಣ. ಪ್ರೀತಿ ಎಂದರೆ ಎಲ್ಲಾ ಸಮಯದಲ್ಲೂ ಬಿಗಿಯಾಗಿ ಹಿಡಿದುಕೊಳ್ಳುವುದಷ್ಟೇ ಅಲ್ಲ, ಪ್ರೀತಿ ಎಂದರೆ ಆ ಸಮಯದಲ್ಲಿ ಕೈ ಬಿಡಿಸಿಕೊಂಡು ದೂರಸರಿಯುವುದು ಸಹ ಎನ್ನುವುದು ಈ ಚಿತ್ರದ ಮೂಲತತ್ವ. ಒಂದು ಜೀವ ಒಂದು ಜೀವನದಲ್ಲಿ ಕಾಣಬಹುದಾದ ಎಲ್ಲಾ ನೋವನ್ನೂ ಕಂಡುಂಡ ಬದುಕು ಸುಹಾಸಿನಿಯದು. ಹೆತ್ತ ಮಗಳು ಇಬ್ಬರು ಮಕ್ಕಳನ್ನು ಕೈಗಿತ್ತು ತೀರಿಕೊಂಡಿದ್ದಾಳೆ, ಮೊಮ್ಮಗಳು ಅಪಘಾತದಲ್ಲಿ ಈಕೆಯ ತೋಳುಗಳಲ್ಲೇ ಸತ್ತಿದ್ದಾಳೆ, ಜೊತೆಗೆ ಇವಳ ಆರೋಗ್ಯ ಕೈ ಕೊಡುತ್ತಿದೆ. ಇವೆಲ್ಲದರ ನಡುವೆ ಅತಿಯಾದ ಮೆಲೋಡ್ರಾಮ ಇಲ್ಲದ ಅಜ್ಜಿ ಮೊಮ್ಮಗನ ಸಣ್ಣ ಸಣ್ಣ ಖುಷಿ ಕಣ್ಣು ತುಂಬುತ್ತದೆ.
ಇವೆರಡೂ ಸರಣಿಯಲ್ಲಿ ನನಗೆ ಅತ್ಯಂತ ಇಷ್ಟವಾದ, ಗಟ್ಟಿಯಾದ ಕಥೆಗಳು. ಕುಕುನೂರ್ ನಿರ್ದೇಶಿಸಿದ ಇನ್ನೊಂದು ಕಥೆ ಲಿವ್ ಇನ್ ಸಂಬಂಧದ ಬಗ್ಗೆ ಮಾತನಾಡುತ್ತದೆಯಾದರೂ, ಅದು ಎದುರಿಸುವ ಸಮಸ್ಯೆ ದಾಂಪತ್ಯದ ನಡುವೆಯೂ ಅಷ್ಟೇ ಸಾಮಾನ್ಯವಾಗಿ ಬರಬಲ್ಲದು! ಗೆಳೆಯನ ವಾರ್ಡ್ ರೋಬಿನಲ್ಲಿ ಪತ್ತೆಯಾದ ಒಂದು ಜೊತೆ ನೇರಳೆಬಣ್ಣದ ಪಾಯಿಂಟೆಡ್ ಹೀಲ್ಸ್ ಚಪ್ಪಲಿಗಳು ಅವಳ ಮನಸ್ಸಿನಲ್ಲಿ ಹುಟ್ಟಿಸುವ ತಲ್ಲಣ – ಹೌದು ಅದು ಅಸೂಯೆಗಿಂತಾ ಹೆಚ್ಚಾಗಿ ತಲ್ಲಣ – ಅದು ಅವಳನ್ನು ಪ್ರೇರೇಪಿಸಿ ಇಡಿಸುವ ಹೆಜ್ಜೆಗಳು ತಮಾಷೆಯಾಗಿವೆ. ಇಲ್ಲೂ ಒಂದು ಮುಸ್ಲಿಂ ಪಾತ್ರ ಇದೆ ಮತ್ತು ಇಲ್ಲೂ ಅದು ಅಷ್ಟೇ ಸಹಜವಾಗಿ ಬಂದಿದೆ.
ಅದೇ ಹಳಸಲು ಕಥೆಗಳ ಧಾರವಾಹಿಗಳು ಸಾಕಾಗಿದೆ, ಓಟೀಟಿಗೆ ಭಿನ್ನ ಕಾರ್ಯಕ್ರಮ ಮಾಡಬೇಕು ಎಂದು ತುಡಿಯುವ ನಿರ್ಮಾಪಕ ಮತ್ತು ಒಬ್ಬ ಸ್ಟಾಂಡ್ ಅಪ್ ಕಾಮಿಡಿ ಮಾಡುವ ಹೆಣ್ಣಿನ ಕಥೆ, ಮಗಳು ಡೇಟಿಂಗ್ ಹೋದರೆ ಅವಳನ್ನು ಹಿಂಬಾಲಿಸಿ ಹೋಗಿ ಫೋಟೋ ತೆಗೆದುಕೊಂಡು ಸರಿ ಬೆಸ ಎಣಿಸುವ ಅತಿ ಪ್ರೊಟೆಕ್ಟೆವ್ ಅಪ್ಪನ ಕಥೆ, ಪ್ರೇಮಕ್ಕೆ ಯಾವುದೋ ಥಿಯರಿ ಆರೋಪಿಸಿಕೊಂಡು ಸಂಗಾತಿಯನ್ನು ಹುಡುಕುವ ಹುಡುಗಿಯ ಕಥೆ – ಇವೆಲ್ಲಾ ಆಸಕ್ತಿಕರವಾದ ಕಥಾವರಣಗಳನ್ನು ಹೊಂದಿದ್ದರೂ ಅವುಗಳ ನಿರ್ವಹಣೆ ಸಮಾಧಾನಕರವಾಗಿ ಆಗಿಲ್ಲ. ಆದರೆ ಪಾತ್ರಗಳನ್ನು ಕೆತ್ತುವ ರೀತಿಗೆ ಮತ್ತು ಹೊಸತನ್ನು ಧೈರ್ಯವಾಗಿ ಹೇಳುವ ರೀತಿಗೆ ಇವುಗಳು ಆಸಕ್ತಿ ಹುಟ್ಟಿಸುತ್ತವೆ. ಈ ದೃಷ್ಟಿಯಿಂದ ಬೇಕಾದರೆ ಇವುಗಳನ್ನು ನೋಡಬಹುದು, ಬಿಟ್ಟರೂ ನಷ್ಟವಿಲ್ಲ.
ಆದರೂ ಈ ಸರಣಿ ಏಕೆ ಮುಖ್ಯವಾಗುತ್ತದೆ ಎಂದರೆ ಲವ್ ಎಂದರೆ ಪ್ರೇಮ ಮಾತ್ರವಲ್ಲ, ಪ್ರೀತಿಯ ಎಲ್ಲಾ ಛಾಯೆ, ರಂಗುಗಳು ಎನ್ನುವ ಈ ಎಲ್ಲಾ ಕಥೆಗಳಲ್ಲೂ ಅಂತಸ್ಥವಾಗಿರುವ ಭಾವನೆ. ಅಷ್ಟೇ ಮುಖ್ಯವಾಗಿರುವುದು ಮಹಿಳಾ ಪ್ರಧಾನ ಕಥೆ ಮತ್ತು ಪಾತ್ರಗಳನ್ನು ಹೇಗೆ ನಿರ್ವಹಿಸಬಹುದು ಎನ್ನುವ ಸರಾಗ ಚಲನೆ. ಹಾಗೆ ನೋಡಿದರೆ ಆರಕ್ಕೆ ಆರೂ ಕಥೆಗಳೂ ಮಹಿಳಾ ಪ್ರಧಾನವೇ, ಆದರೆ ಈ ಆರೂ ಪಾತ್ರಗಳಿಗೂ ಭಿನ್ನ ಭಿನ್ನವಾದ ಪಾತ್ರಗುಣವಿದೆ, ಫ್ಲೇವರ್ ಇದೆ. ಅಮ್ಮ ಮಗಳಾಗಿರಬಹುದು, ಅಜ್ಜಿ ಮೊಮ್ಮಗಳಾಗಿರಬಹುದು, ಸ್ನೇಹಿತೆಯರಾಗಿರಬಹುದು ಅವು ಒಂದನ್ನೊಂದು ಆತುಗೊಳ್ಳುತ್ತವೆ, ಒಂದಕ್ಕೊಂದು ಬೆಂಬಲವಾಗಿ ನಿಲ್ಲುತ್ತದೆ. ಒಂದು ಪುಟ್ಟ ಪಾತ್ರದಲ್ಲಿ ಬರುವ ಸುಹಾಸಿನಿಯ ಮೊಮ್ಮಗಳ ಪಾತ್ರದ ಹುಡುಗಿ ಅದೆಷ್ಟು ಸೊಗಸಾಗಿ ತಮ್ಮನಿಗೆ ಹಂಚಿಕೊಂಡು ತಿನ್ನುವುದನ್ನು ಕಲಿಸುತ್ತಾಳೆ ಎಂದರೆ, ಆ ಕಾರಣಕ್ಕೇ ಆ ಪಾತ್ರದ ದುರಂತ ಅಂತ್ಯ ಇನ್ನೂ ದಾರುಣವಾಗುತ್ತದೆ. ಕಾರ್ಟೂನಿಸ್ಟ್ ಆಗಿರುವ ನಾಯಕಿ, ಡೇಟ್ ಮಾಡಿ ಸರಿಯಾದ ವರನನ್ನು ಆರಿಸಿಕೊಳ್ಳುತ್ತೇನೆ ಎನ್ನುವ ನಾಯಕಿ, ಮೈಕ್ರೋ ಬಯಾಲಜಿಸ್ಟ್ ನಾಯಕಿ, ಸ್ಟಾಂಡ್ ಅಪ್ ಕಾಮಿಡಿ ಮಾಡುವ ನಾಯಕಿ – ಈ ಸರಣಿ ಅನೇಕ ಹೊಸ ಪಾತ್ರಗಳನ್ನು ಕಟ್ಟಿಕೊಡುತ್ತದೆ.