ಪ್ರವೀರ್‌ ಶೆಟ್ಟಿ ಮತ್ತು ರಿಷಿಕಾ ನಾಯಕ್‌ ನಟನೆಯ ‘ನಿದ್ರಾದೇವಿ Next Door’ ಸಿನಿಮಾ ಸಟ್ಟೇರಿದೆ. ನಟ ರವಿಚಂದ್ರನ್‌ ಕ್ಲ್ಯಾಪ್‌ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ‘ಇದು ಇಬ್ಬರು ನಿದ್ದೆ ಇಲ್ಲದವರ ಜರ್ನೀ’ ಎಂದು ಸಿನಿಮಾ ಬಗ್ಗೆ ಕುತೂಹಲ ಮೂಡಿಸುತ್ತಾರೆ ಚಿತ್ರದ ನಿರ್ದೇಶಕ ಸುರಾಗ್‌ ಸಾಗರ್‌.

‘ಸೈರನ್’ ಕನ್ನಡ ಸಿನಿಮಾ ಮೂಲಕ ಬೆಳ್ಳಿತೆರೆಗೆ ಪರಿಚಯವಾಗಿದ್ದ ಪ್ರವೀರ್ ಶೆಟ್ಟಿ ಈಗ ಮತ್ತೊಂದು ವಿಭಿನ್ನ ಕತೆಯೊಂದಿಗೆ ತೆರೆಗೆ ಮರಳುತ್ತಿದ್ದಾರೆ. ಬೆಂಗಳೂರಿನ ಬನಶಂಕರಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನಡೆದಿದೆ. ಹಿರಿಯ ನಟ, ನಿರ್ದೇಶಕ ರವಿಚಂದ್ರನ್ ಅವರು ಪ್ರವೀರ್ ಶೆಟ್ಟಿ ಅವರ ‘ನಿದ್ರಾದೇವಿ Next Door’ ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲ್ಯಾಪ್‌ ಮಾಡಿ ಹಾರೈಸಿದರು. ಸುರಾಗ್ ಸಾಗರ್ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಪ್ರವೀರ್ ಶೆಟ್ಟಿ ಜೊತೆಗೆ ಶೈನ್ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ರಿಷಿಕಾ ನಾಯಕ್ ಸಿನಿಮಾದ ನಾಯಕಿ. ನಿರ್ದೇಶಕ ಸುರಾಗ್ ಸಾಗರ್, ‘ಇದು ಇಬ್ಬರು ನಿದ್ದೆ ಇಲ್ಲದವರ ಜರ್ನಿ. ಅವರಿಗೆ ಯಾಕೆ ನಿದ್ದೆ ಬರಲ್ಲ? ಇದಕ್ಕೆ ಪರಿಹಾರ ಏನು? ಅದರೊಳಗೆ ಅವರು ಕಂಡುಕೊಳ್ಳುವ ಲವ್ ಸ್ಟೋರಿ. ಇದಕ್ಕೆಲ್ಲಾ ಸಿನಿಮಾ ನೋಡಬೇಕು’ ಎನ್ನುತ್ತಾರೆ.

‘ನಿದ್ರೆ ಬರದಿರುವ ಹುಡುಗ ಏನೇನೋ ಕಷ್ಟಪಡುತ್ತಾನೆ. ಅದರ ಸುತ್ತ ನನ್ನ ಪಾತ್ರ ಸಾಗುತ್ತದೆ. ನನ್ನದು ಇಂಟ್ರೆಸ್ಟಿಂಗ್ ಪಾತ್ರ. ಈ ಹಿಂದಿನ ಚಿತ್ರಗಳಿಗೆ ಹೋಲಿಕೆ ಮಾಡಿದರೆ ಇದು ವಿಭಿನ್ನ ಪಾತ್ರ. ಕಳೆದೊಂದು ತಿಂಗಳಿನಿಂದ ರಿಹರ್ಸಲ್ ಮಾಡುತ್ತಿದ್ದೇವೆ’ ಎನ್ನುವುದು ಹೀರೋ ಪ್ರವೀರ್‌ ಶೆಟ್ಟಿ ಮಾತು. ಚಿತ್ರದ ನಾಯಕಿ ರಿಷಿಕಾ ನಾಯಕ್‌ ಅವರಿಗೆ ನಿರ್ದೇಶಕರು ಎರಡು ವರ್ಷಗಳ ಹಿಂದೆಯೇ ಈ ಕತೆ ಹೇಳಿದ್ದರಂತೆ. ಒಳ್ಳೆಯ ತಂಡದ ಜೊತೆ ಕೆಲಸ ಮಾಡುತ್ತಿರುವ ಖುಷಿಯಲ್ಲಿದ್ದಾರವರು. ಜಯರಾಮ್ ದೇವಸಮುದ್ರ ನಿರ್ಮಿಸಿರುವ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಸುಧಾರಾಣಿ, ಶ್ರೀವತ್ಸ, ಕಾರ್ತಿಕ್ ಪತ್ತಾರ್, ಅನುರಾಗ್ ಪಾಟೀಲ್ ನಟಿಸುತ್ತಿದ್ದಾರೆ. ಯುರೋಪ್‌ನ ಪ್ರೇಗ್ ಫಿಲ್ಮ್ ಸ್ಕೂಲ್‌ನಲ್ಲಿ ಕಲಿತಿರುವ ಸುರಾಗ್ ಸಾಗರ್ ‘ಎಂಟ್ರೋಪಿ’ ಕಿರುಚಿತ್ರದ ಮೂಲಕ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ‘ನಿದ್ರಾದೇವಿ Next Door’ ಅವರ ಚೊಚ್ಚಲ ನಿರ್ದೇಶನದ ಸಿನಿಮಾ.

LEAVE A REPLY

Connect with

Please enter your comment!
Please enter your name here