ಸಂತೋಷ್‌ ಕೊಡೆಂಕೇರಿ ವಿನ್ಯಾಸ, ನಿರ್ಮಾಣ ಮತ್ತು ನಿರ್ದೇಶನದಲ್ಲಿ ಯೋಗೇಶ್‌ ಮಾಸ್ಟರ್‌ ನಟಿಸಿರುವ ‘ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ’ ಒಂದು ಪ್ರಯೋಗಾತ್ಮಕ ಸಿನಿಮಾ. ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್‌ ಅವರ ಮೂಲ ಕತೆಯಿದು. ಲಾಕ್‌ಡೌನ್‌ನಲ್ಲಿ ಚಿತ್ರೀಕರಣಗೊಂಡ ಪ್ರಯೋಗ.

ಸಿನಿಮಾ ತಂತ್ರಗಾರಿಕೆಯಲ್ಲಿ ರಂಗಭೂಮಿಯ ನಿರೂಪಣೆ – ತಾವು ನಟಿಸಿರುವ ‘ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ’ ಸಿನಿಮಾ ಕುರಿತಾಗಿ ಲೇಖಕ, ನಟ ಯೋಗೀಶ್‌ ಮಾಸ್ಟರ್‌ ಒಂದು ವಾಕ್ಯದಲ್ಲಿ ವಿವರಣೆ ನೀಡುವುದು ಹೀಗೆ. ಈ ಸಿನಿಮಾದಲ್ಲಿ ಅವರು ನಟನಾಗಿ 24 ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಚಿತ್ರಕಥೆ, ಸಂಭಾಷಣೆ ಮತ್ತು ಸಂಗೀತ ಸಂಯೋಜನೆಯ ಹೊಣೆಯೂ ಅವರದೆ. ತಮ್ಮ ‘ದೃಷ್ಟಿ’ ಬ್ಯಾನರ್‌ನಡಿ ಸಂತೋಷ್‌ ಕೊಡೆಂಕೇರಿ ಈ ಚಿತ್ರವನ್ನು ವಿನ್ಯಾಸ ಮಾಡಿ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ಅತಿ ಕಡಿಮೆ ಸಂಖ್ಯೆಯ ತಂತ್ರಜ್ಞರು ಮತ್ತು ಯೋಗೇಶ್‌ ಮಾಸ್ಟರ್‌ ಒಬ್ಬರೇ ನಟಿಸಿದ ಸಿನಿಮಾ ಇದು!

ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್‌ ಅವರ ‘ಹಂಗ್ರೀ ಸ್ಟೋನ್ಸ್‌’ ಕಥಾಸಂಕಲನದಲ್ಲಿ ‘ಒನ್ಸ್‌ ದೇರ್‌ ವಾಸ್‌ ಎ ಕಿಂಗ್‌’ ಶೀರ್ಷಿಕೆಯ ಕತೆಯಿದೆ. ಇಪ್ಪತ್ತೈದು ವರ್ಷಗಳ ಹಿಂದೆ ಯೋಗೇಶ್‌ ಮಾಸ್ಟರ್‌ ಈ ಕತೆಯನ್ನು ಕನ್ನಡಕ್ಕೆ ಅನುವಾದಿಸಿದ್ದರು. ನಂತರ ಅವರೇ ಈ ಕತೆಯನ್ನು ಸುಮಾರು ಒಂದೂಕಾಲು ಗಂಟೆಯ ಅವಧಿಯ ನಾಟಕವನ್ನಾಗಿ ರಂಗಕ್ಕೆ ಅಳವಡಿಸಿದ್ದರು. ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಗಳಲ್ಲಿ ನಾಟಕವಾಗಿತ್ತು ಇದು. ಆರಂಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಲಾವಿದರು ನಾಟಕದಲ್ಲಿ ಅಭಿನಯಿಸುತ್ತಿದ್ದರು. ಕ್ರಮೇಣ ಟೀವಿ ಧಾರಾವಾಹಿಗಳಲ್ಲಿ ಅವರು ಬ್ಯುಸಿಯಾದಾಗ ನಾಟಕಕ್ಕೆ ಕಲಾವಿದರ ಕೊರತೆ ಕಂಡಿತು. ಆಗ ಯೋಗೇಶ್‌ ಮಾಸ್ಟರ್‌ ಈ ಕತೆಯನ್ನು ಒನ್‌ಮ್ಯಾನ್‌ ಶೋ ಮಾಡಿದ್ದರಂತೆ. ಇದಕ್ಕೆ ಹರಿಕಥೆ ಮಾದರಿ ಪ್ರೇರಣೆ. ರಂಗಭೂಮಿ ವೇದಿಕೆಯ ಮೇಲಿನ ಪರಿಕರಗಳನ್ನು ಬಳಕೆ ಮಾಡಿಕೊಂಡು ರೂಪುಗೊಂಡ ಇದು ವಿಶಿಷ್ಟ ಪ್ರಯೋಗವಾಯ್ತು. ಅದೇ ಈಗ ಸಿನಿಮಾ ಆಗಿದೆ.

ಛಾಯಾಗ್ರಾಹಕ ಜೀವನ್‌ ಗೌಡ, ಸಂಕಲನಕಾರ ರಘು ಶಿವರಾಂ ಮತ್ತು ಚಿತ್ರಕ್ಕೆ ರೂಪುರೇಷೆ ಹಾಕಿ ನಿರ್ಮಿಸಿ, ನಿರ್ದೇಶಿಸಿದ ಸಂತೋಷ್‌ ಕೊಡಂಕೇರಿ

“ಕೋವಿಡ್‌ ಫಸ್ಟ್‌ ವೇವ್‌ ಲಾಕ್‌ಡೌನ್‌ನಲ್ಲಿ ಮಲಯಾಳಂ ಎರಡು ಭಾಷೆಗಳಲ್ಲಿ ‘ಅನಿರೀಕ್ಷಿತ’ ಸಿನಿಮಾ ಮಾಡಿದ್ದೆವು. ಸೆಕೆಂಡ್‌ ಲಾಕ್‌ಡೌನ್‌ನಲ್ಲಿ ‘ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ’ ಸಿನಿಮಾ ಆಯ್ತು. ನನ್ನ ಪ್ರಕಾರ ಒಬ್ಬನೇ ಕಲಾವಿದ 24 ಭಿನ್ನ ಪಾತ್ರಗಳನ್ನು ನಿರ್ವಹಿಸಿರುವ ಜಗತ್ತಿನ ಮೊದಲ ಸಿನಿಮಾ ಇದು” ಎನ್ನುತ್ತಾರೆ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಸಂತೋಷ್‌ ಕೊಡಂಕೇರಿ. ಹತ್ತಾರು ಡಾಕ್ಯುಮೆಂಟರಿ, ಜಾಹೀರಾತುಗಳನ್ನು ರೂಪಿಸಿರುವ ಅನುಭವಿ ಅವರು. ಹಾಗಾಗಿ ಇಂಥದ್ದೊಂದು ಪ್ರಯೋಗವನ್ನು ವಿನ್ಯಾಸ ಮಾಡಿ ಎಕ್ಸಿಗ್ಯೂಟ್‌ ಮಾಡಲು ಸಾಧ್ಯವಾಗಿದೆ. ‘ಹೋಮ್‌ಸ್ಟೇ’ ಕನ್ನಡ ಮತ್ತು ಹಿಂದಿ ದ್ವಿಭಾಷಾ ಚಿತ್ರದೊಂದಿಗೆ ಅವರು ಬೆಳ್ಳಿತೆರೆ ಪ್ರವೇಶಿಸಿದರು. ಈ ಸಿನಿಮಾ ‘ಧಿಗಿಲ್‌’ ಶೀರ್ಷಿಕೆಯಡಿ ತಮಿಳಿನಲ್ಲೂ ತೆರೆಕಂಡಿದೆ. ಮುಂದೆ ಕೋವಿಡ್‌ ಮೊದಲ ಲಾಕ್‌ಡೌನ್‌ ಅವಧಿಯಲ್ಲಿ ‘ಅನಿರೀಕ್ಷಿತ’ ಸಿನಿಮಾ ನಿರ್ದೇಶಿಸಿದರು. ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ತಯಾರಾಗಿರುವ ಸಿನಿಮಾ ತೆರೆಗೆ ಸಿದ್ಧವಾಗಿದೆ. ಸದ್ಯ ‘ದಿ ಬ್ರಿಡ್ಜ್‌ ಮ್ಯಾನ್‌’ ಬಯೋಪಿಕ್‌ ಸಿನಿಮಾದ ತಯಾರಿ ನಡೆಸಿದ್ದಾರೆ. “‘ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ’ ಜಾಗತಿಕ ಸಿನಿಮಾ ಎಂದು ಹೇಳಲು ಇಚ್ಛಿಸುತ್ತೇನೆ. ನಾಟಕವೊಂದನ್ನು ವಿಶ್ಯುಯಲ್‌ ಆಗಿ ಕಟ್ಟುವ ಪ್ರಯತ್ನವಿದು. ಯೋಗೇಶ್‌ ಮಾಸ್ಟರ್‌ ಅವರ ಪರ್ಫಾರ್ಮೆನ್ಸ್‌ ಸಿನಿಮಾದ ಆತ್ಮ” ಎನ್ನುತ್ತಾರೆ ಸಂತೋಷ್‌. ಹತ್ತಾರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿರುವ ಈ ಸಿನಿಮಾ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಕಾರಣಾಂತರಗಳಿಂದ ಇಂಡಿಯನ್‌ ಪನೋರಮಾದಲ್ಲಿ ಮಿಸ್‌ ಆಯ್ತು ಎಂದು ವಿಷಾದ ವ್ಯಕ್ತಪಡಿಸುತ್ತಾರೆ ಸಂತೋಷ್‌.

ನಟ ಯೋಗೇಶ್‌ ಮಾಸ್ಟರ್‌ ಸಿನಿಮಾ ಪ್ರವೇಶಿಸಿ ಹಲವು ವರ್ಷಗಳೇ ಆಗಿವೆ. ‘ಆನಂದವನ’, ‘ಕ್ಷಮೆಯಿರಲಿ’, ‘ಮರಳಿ ಮನೆಗೆ’ ಚಿತ್ರಗಳನ್ನು ಮಾಡಿದ್ದರು. ‘ಕೊನೆಯ ಅಂಕ’, ‘ಅಮ್ಮು’ ಚಿತ್ರೀಕರಣ ಹಂತದಲ್ಲಿವೆ. ಈ ಮಧ್ಯೆ ಆಗಿದ್ದು ‘ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ’. “ಮೂಲ ಕತೆಯಲ್ಲಿ ರವೀಂದ್ರನಾಥ ಟ್ಯಾಗೋರರು ಮಾತನಾಡುತ್ತಾ ಹೋಗುತ್ತಾರೆ. ನಾನು ಮಾಡಿಕೊಂಡ ಕತೆಯಲ್ಲಿ ಕಥಾಲೇಖಕನು ಟ್ಯಾಗೋರರ ಜೊತೆ ಇಂಟರ್ಯಾಕ್ಟ್‌ ಮಾಡುತ್ತಾ ಹೋಗುತ್ತಾನೆ. ಇಲ್ಲಿ ನಾನು ರಾಜ, ರಾಣಿ, ಬಾಲಕ, ರಾಜಕುಮಾರಿ, ಅಜ್ಜಿ, ಕತೆಗಾರ… ಹೀಗೆ ಭಿನ್ನ ಪಾತ್ರಗಳಲ್ಲಿ ನಟಿಸಿದ್ದೇನೆ. ಇದೊಂದು ವಿಶ್ಯುಯೆಲ್‌ ಥಿಯೇಟ್ರಿಕಲ್‌ ಎಕ್ಸ್‌ಪೆರಿಮೆಂಟ್‌” ಎನ್ನುತ್ತಾರೆ ಯೋಗೇಶ್‌ ಮಾಸ್ಟರ್‌. ಅವರ ಮಗಳು ದೇವಿ ಈ ಚಿತ್ರದ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ಚಿತ್ರೀಕರಣ ನಡೆದದ್ದು ಕನಕಪುರದ ಗುಹಾಂತರ ರೆಸಾರ್ಟ್‌ನಲ್ಲಿ. ಚಿಂತನ್‌ ವಿಕಾಸ್‌ ಹಿನ್ನೆಲೆ ಸಂಗೀತ, ಜೀವನ್‌ ಗೌಡ ಛಾಯಾಗ್ರಹಣ, ಬಿ.ಆರ್‌.ಛಾಯಾ ಮತ್ತು ಚಿಂತನ್‌ ವಿಕಾಸ್‌ ಹಿನ್ನೆಲೆ ಗಾಯನ ಚಿತ್ರಕ್ಕಿದೆ. ಚಿತ್ರದ ಬಿಡುಗಡೆಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡುವುದಾಗಿ ಹೇಳುತ್ತಾರೆ ನಿರ್ದೇಶಕ ಸಂತೋಷ್‌ ಕೊಡಂಕೇರಿ.

ಚಿತ್ರೀಕರಣ ಸಂದರ್ಭ

LEAVE A REPLY

Connect with

Please enter your comment!
Please enter your name here