ಹಾಡುಗಳು ಸಿನಿಮಾಗಳಿಗೆ invitation! 2024ರಲ್ಲಿ ಸ್ಯಾಂಡಲ್‌ವುಡ್‌ ಸಿನಿಮಾಗಳ ಹಲವು ಹಾಡುಗಳು ಜನರನ್ನು ಥಿಯೇಟರ್‌ಗೆ ಸೆಳೆದವು. ‘ದ್ವಾಪರ’ ಹಾಡಂತೂ ರೀಲ್ಸ್‌ಗೆ ನೆಚ್ಚಿನ ಸಾಂಗ್‌ ಆಗಿತ್ತು. ರೀಲ್ಸ್‌ಗಳಲ್ಲಿ ಟ್ರೆಂಡ್ ಆದ ಚಂದನವನದ 2024ರ ಜನಪ್ರಿಯ ಸಿನಿಮಾ ಹಾಡುಗಳ ಪಟ್ಟಿ ಇಲ್ಲಿದೆ.

2024 ಇಸವಿ ಮುಗಿಯುವ ಹೊತ್ತಿಗೆ ಕನ್ನಡದಲ್ಲಿ 200ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾದವು. ಅವುಗಳಲ್ಲಿ ಸದ್ದು ಮಾಡಿದ ಸಿನಿಮಾಗಳ ಸಂಖ್ಯೆ ಕಡಿಮೆಯೇ. ಸಿನಿಮಾ ಥಿಯೇಟರ್‌ಗಳಲ್ಲಿ ಓಡುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ಕೆಲವು ಸಿನಿಮಾಗಳ ಹಾಡುಗಳು ನಮ್ಮ ಪ್ಲೇಲಿಸ್ಟ್‌ನಲ್ಲಿ ಹಾಡುತ್ತಾ ಇರುತ್ತವೆ. ಇನ್ನು ಕೆಲವು ಹಾಡುಗಳ ಸಾಹಿತ್ಯ ಮನಸ್ಸಿನಲ್ಲಿ ಅಚ್ಚೊತ್ತಿ ಅದೇ ಸಾಲುಗಳನ್ನು ಮತ್ತೆ ಮತ್ತೆ ಗುನುಗುವಂತೆ ಮಾಡುತ್ತವೆ. ಸಿನಿಮಾ ಯಾವುದೇ ಇರಲಿ ಅವು ರಿಲೀಸ್ ಆಗುವುದಕ್ಕಿಂತ ಮುಂಚೆಯೇ ಹಾಡುಗಳನ್ನು ಬಿಡುಗಡೆ ಮಾಡಲಾಗುತ್ತದೆ. ಟೀಸರ್, ಟ್ರೈಲರ್‌ಗಳು ಮುಂಬರುವ ಸಿನಿಮಾಗಳ ಬಗ್ಗೆ ಕುತೂಹಲವನ್ನುಂಟು ಮಾಡಿದರೆ ಹಾಡುಗಳು ಸಿನಿಮಾದ ಪ್ರಮುಖ ಆಕರ್ಷಣೆಗಳು. ಈಗೀಗ ಕೆಲವೊಂದು ಹಾಡುಗಳು ರೀಲ್ಸ್‌ಗಳಲ್ಲಿ ವೈರಲ್ ಆದಾಗ ಇದ್ಯಾವ ಹಾಡು ಎಂದು ತಡಕಾಡಿ ಆ ಹಾಡುಗಳನ್ನು ಕೇಳುವುದೂ ಉಂಟು. ಹೀಗೆ 2024ರಲ್ಲಿ ಲೂಪ್‌ನಲ್ಲಿ ಕೇಳಿದ, ರೀಲ್ಸ್‌ಗಳಲ್ಲಿ ಟ್ರೆಂಡ್ ಆದ ಮತ್ತು ಜನಪ್ರಿಯ ಹಾಡುಗಳ ಪಟ್ಟಿ ಇಲ್ಲಿದೆ.

ದ್ವಾಪರ (ಕೃಷ್ಣಂ ಪ್ರಣಯ ಸಖಿ) | ಗೋಲ್ಡನ್ ಸ್ಚಾರ್ ಗಣೇಶ್ ಮತ್ತ ಮಾಳವಿಕಾ ನಾಯರ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ದ್ವಾಪರ ಹಾಡು ಈ ವರ್ಷದ ಸೂಪರ್ ಹಿಟ್ ಹಾಡುಗಳಲ್ಲಿ ಅಗ್ರಸ್ಥಾನ ಪಡೆದಿದೆ. ಅರ್ಜುನ್ ಜನ್ಯ ಸಂಗೀತ, ವಿ.ನಾಗೇಂದ್ರ ಪ್ರಸಾದ್ ರಚನೆಯ ಈ ಹಾಡು ಹಾಡಿದ್ದು ಜಸ್‌ಕರನ್‌ ಸಿಂಗ್. ಈ ಹಾಡು ಮತ್ತು ಗಣೇಶ್ ಡ್ಯಾನ್ಸ್ ಸ್ಟೆಪ್ಸ್ ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಟ್ರೆಂಡ್ ಆಗಿತ್ತು.

ನನಗೆ ನೀನು (ಉಪಾಧ್ಯಕ್ಷ) | ಎಲ್ಲ ಜನರೇಷನ್‌ ಜನರನ್ನು ತನ್ನೆಡೆಗೆ ಸೆಳೆಯುವ ಮಾಂತ್ರಿಕತೆ ಇರುವ ಹಾಡು ಉಪಾಧ್ಯಕ್ಷ ಸಿನಿಮಾದ ‘ನನಗೆ ನೀನು ನಿನಗೆ ನಾನು, ನನಗೆ ಸಿಕ್ಕ ಒಲವು ನೀನು ಕೈಯ ಬಿಡದೆ ಇರು ಕೊನೆವರೆಗೆ…’ ವಿಜಯ ಪ್ರಕಾಶ್ ಮತ್ತು ರಕ್ಷಿತಾ ಸುರೇಶ್ ಹಾಡಿರುವ ಈ ಹಾಡಿನ ಸಾಹಿತ್ಯ ಎ ಪಿ ಅರ್ಜುನ್, ಸಂಗೀತ ಅರ್ಜುನ್ ಜನ್ಯರದ್ದು.

ಮಾಯಾವಿ (ಆಲ್ಬಂ) | ಸಂಜಿತ್ ಹೆಗಡೆ ಹಾಗೂ ಸೋನು ನಿಗಮ್ ಜುಗಲ್ಬಂದಿ ಮೋಡಿ ಮಾಡಿದ ಹಾಡು ‘ಮಾಯಾವಿ’. ನಾಗಾರ್ಜುನ ಶರ್ಮಾ ಸಾಹಿತ್ಯ, ಸಂಚಿತ್ ಹೆಗಡೆ ಸಂಗೀತದ ಈ ಹಾಡು ಸಲೀಂ-ಸುಲೈಮಾನ್ ಅವರ ‘ಭೂಮಿ 2024’ ಆಲ್ಬಂನ ಭಾಗವಾಗಿದೆ.

ಒಬ್ಬನೇ ಶಿವ (ಯುವ) | ಹೊಂಬಾಳೆ ಫಿಲಂಸ್‌ ಬ್ಯಾನರ್ ಅಡಿಯಲ್ಲಿ ತೆರೆಕಂಡ ಯುವರಾಜ್ ಕುಮಾರ್ ಮತ್ತು ಸಪ್ತಮಿ ಗೌಡ ನಟನೆಯ ‘ಯುವ’ ಚಿತ್ರದ ಹಾಡು ‘ಒಬ್ಬನೇ ಶಿವ ಒಬ್ಬನೇ ಯುವ’. ಸಂತೋಷ್‌ ಆನಂದರಾಮ್ ಸಾಹಿತ್ಯ, ಅಜನೀಶ್ ಲೋಕನಾಥ್ ಸಂಗೀತದ ಈ ಹಾಡನ್ನು ಹಾಡಿದ್ದು ನಕಾಶ್ ಅಜೀಜ್ ಮತ್ತು ಸಂತೋಷ್ ಆನಂದರಾಮ್.

ಪರಿಚಯವಾದೆ (ಬಘೀರ) | ಶ್ರೀಮುರಳಿ, ರುಕ್ಷ್ಮಿಣಿ ವಸಂತ್ ಅಭಿನಯದ ‘ಬಘೀರ’ ಸಿನಿಮಾದ ‘ಪರಿಚಯವಾದೆ’ ಹಾಡು ಈ ವರ್ಷದ ಮೆಲೊಡಿ ಹಾಡುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಪ್ರಮೋದ್ ಮರವಂತೆ ಸಾಹಿತ್ಯ, ಬಿ ಅಜನೀಶ್ ಲೋಕನಾಥ್ ಸಂಗೀತದ ಈ ಹಾಡನ್ನು ಹಾಡಿದವರು ರಿತೇಶ್ ಜಿ ರಾವ್.

ಟ್ರೋಲಾಗುತ್ತೆ (UI) | ಇದು ಉಪೇಂದ್ರರ ‘ಯುಐ’ ಸಿನಿಮಾದ ಹಾಡು. ಸಿನಿಮಾ ರಿಲೀಸ್ ಆಗುವುದಕ್ಕಿಂತ ಮುಂಚೆ ಸದ್ದು ಮಾಡಿದ ಹಾಡು ಇದು. ಟ್ರೋಲ್‌ಗಳನ್ನು ಸೇರಿಸಿ ಮಾಡಿದ ಈ ಸಾಂಗ್, ಯುವಜನರನ್ನು ಆಕರ್ಷಿಸಿತ್ತು. ಅಜನೀಶ್ ಲೋಕನಾಥ್ ಸಂಗೀತದ ಈ ಹಾಡನ್ನು ಐಶ್ವರ್ಯಾ ರಂಗರಾಜನ್, ಹರ್ಷಿಕಾ ದೇವಂತ್, ಅನೂಪ್ ಭಂಡಾರಿ ಮತ್ತು ಅಜನೀಶ್ ಲೋಕನಾಥ್ ಹಾಡಿದ್ದಾರೆ.

ಡೋಂಟ್ ವರಿ ಬೇಬಿ ಚಿನ್ನಮ್ಮಾ (ಭೀಮ) | ನಟ ದುನಿಯಾ ವಿಜಯ್ ಅಭಿನಯದ ‘ಭೀಮ’ ಸಿನಿಮಾದ ‘ಡೋಂಟ್ ವರಿ ಬೇಬಿ ಚಿನ್ನಮ್ಮ’ ಬೆಂಗಳೂರಿನ ಗಲ್ಲಿಗಳಲ್ಲಿ ಶೂಟ್ ಮಾಡಿದ ಹಾಡು. ಚರಣ್ ರಾಜ್ ಸಂಗೀತದ ಈ ಹಾಡಿಗೆ ನಾಗಾರ್ಜುನ ಶರ್ಮಾ ಅವರ ಸಾಹಿತ್ಯವಿದೆ. ಗಣ ಮುತ್ತು ಅವರ ದನಿಯಿಂದ ಈ ಹಾಡು ಗಮನ ಸೆಳೆದಿದೆ.

ಜೀವ ನೀನೆ (ಮಾರ್ಟಿನ್) | ಮೆಲೊಡಿಗಳ ಪಟ್ಟಿಯಲ್ಲಿ ಸ್ಥಾನಪಡೆದ ಇನ್ನೊಂದು ಹಾಡು ಧ್ರುವ್ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾದ ‘ಜೀವ ನೀನೆ’. ಸೋನು ನಿಗಮ್ ಮತ್ತು ಶ್ರುತಿಕಾ ಸಮುದ್ರಲಾ ಹಾಡಿರುವ ಈ ಹಾಡಿನ ಸಾಹಿತ್ಯ ಎ ಪಿ ಅರ್ಜುನ್, ಸಂಗೀತ ಮಣಿ ಶರ್ಮಾ ಅವರದ್ದು.

ಕಾವಲಿಗ (ಭೈರತಿ ರಣಗಲ್) | ಬಾಕ್ಸ್ ಆಫೀಸಿನಲ್ಲಿ ಭಾರೀ ಸದ್ದು ಮಾಡಿದ ಸಿನಿಮಾ ಡಾ ಶಿವರಾಜ್ ಕುಮಾರ್ ನಟನೆಯ ‘ಭೈರತಿ ರಣಗಲ್’. ಈ ಸಿನಿಮಾದಲ್ಲಿ ಹಿತವಾಗಿ ಕೇಳಿಸುವ ಹಾಡೇ ‘ಕಾವಲಿಗ’. ಸಾಯಿ ಸರ್ವೇಶ್ ಸಾಹಿತ್ಯ, ರವಿ ಬಸ್ರೂರ್ ಸಂಗೀತದ ಈ ಹಾಡು ವಿಜಯ್ ಪ್ರಕಾಶ್ ದನಿಯಲ್ಲಿ ಮೂಡಿಬಂದಿದೆ.

ಹಿತ್ತಲಕ ಕರಿಬ್ಯಾಡ (ಕರಟಕ ದಮನಕ) | ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಅಭಿನಯದ ‘ಕರಟಕ ದಮನಕ’ ಸಿನಿಮಾದ ‘ಹಿತ್ತಲಕ ಕರಿಬ್ಯಾಡ ಮಾವ’ ಹಾಡಿನ ಸಾಹಿತ್ಯ ಯೋಗರಾಜ್ ಭಟ್ ಅವರದ್ದು. ಪ್ರಭುದೇವ ಮತ್ತು ನಿಶ್ವಿಕಾ ನಾಯ್ಡು ಅವರ ಮೇಲೆ ಪಿಕ್ಚರೈಸ್‌ ಹಾಡಿರುವ ಉತ್ತರ ಕರ್ನಾಟಕ slangನ ಹಾಡಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಶೃತಿ ಪ್ರಹ್ಲಾದ ಮತ್ತು ಮಾಳು ನಿಪನಾಳ ಈ ಹಾಡಿಗೆ ದನಿಯಾಗಿದ್ದಾರೆ.

ಸೌಗಂಧಿಕ (ಶಾಖಾಹಾರಿ) | ಈ ವರ್ಷದ ಹಿಟ್ ಹಾಡುಗಳಲ್ಲಿ ಶಾಖಾಹಾರಿ ಸಿನಿಮಾದ ಸೌಗಂಧಿಕ ಹಾಡು ಸ್ಥಾನ ಪಡೆದುಕೊಂಡಿದೆ. ಸಂದೀಪ್ ಸುಂಕದ್ ಸಾಹಿತ್ಯ, ಮಯೂರ್ ಅಂಬೆಕಲ್ಲು ಸಂಗೀತ ನಿರ್ದೇಶಿಸಿದ ಈ ಹಾಡನ್ನು ಸಿದ್ದಾರ್ಥ್ ಬೆಳ್ಮಣ್ಣು ಮತ್ತು ಐಶ್ವರ್ಯಾ ರಂಗರಾಜನ್ ಹಾಡಿದ್ದಾರೆ.

ಎಲ್ಲಾ ಮಾತನ್ನು (ಒಂದು ಸರಳ ಪ್ರೇಮ ಕಥೆ) | ‘ಒಂದು ಸರಳ ಪ್ರೇಮ ಕಥೆ’ ಸಿನಿಮಾದ ‘ಎಲ್ಲಾ ಮಾತನ್ನು’ ಗಮನ ಸೆಳೆದ ಹಾಡು. ಜಯಂತ್ ಕಾಯ್ಕಿಣಿ ಸಾಹಿತ್ಯ, ವೀರ್ ಸಮರ್ಥ್ ಸಂಗೀತದಲ್ಲಿ ಮೂಡಿ ಬಂದ ಈ ಮುದ್ದಾದ ಗೀತೆಯನ್ನು ಶಿವಾನಿ ಸ್ವಾಮಿ ಮತ್ತು ವೀರ್ ಸಮರ್ಥ್ ಹಾಡಿದ್ದಾರೆ.

ಮ್ಯಾಕ್ಸಿಮಮ್ ಮಾಸ್ (ಮ್ಯಾಕ್ಸ್) | ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾದ ‘ಮ್ಯಾಕ್ಸಿಮಮ್ ಮಾಸ್’ ಈ ವರ್ಷದ ಹಿಟ್ ಹಾಡುಗಳ ಪಟ್ಟಿಯಲ್ಲಿ ಅಬ್ಬರಿಸಿದೆ ಎಂದರೆ ತಪ್ಪಾಗಲಾರದು. ಅಜನೀಶ್ ಲೋಕನಾಥ್ ಸಂಗೀತದ ಈ ಹಾಡನ್ನು ಚೇತನ್ ಗಂಧರ್ವ ಹಾಡಿದ್ದು ಎಂ ಸಿ ಬಿಜು ಅವರ ರ್‍ಯಾಪ್ ಇದರಲ್ಲಿದೆ.

LEAVE A REPLY

Connect with

Please enter your comment!
Please enter your name here