ನಾಲ್ಕು ದಿಕ್ಕಿಗೆ ಸಾಗುವ ನಾಲ್ಕು ಕತೆಗಳಿಗೆ ಇರುವುದು ಒಂದೇ ಆಕಾಶ. ಆ ಆಕಾಶದಡಿ ಹುಳಗಳು ಚಿಟ್ಟೆಯಾಗಿ ರೂಪಾಂತರವಾಗುವ, ಚಿಟ್ಟೆಗಳು ರೆಕ್ಕೆ ಕಳಚಿಕೊಳ್ಳುವ ಪ್ರಕ್ರಿಯೆಗೆ ನಾವು ಸಾಕ್ಷಿಯಾಗುತ್ತೇವೆ. ಇದೆಲ್ಲದರ ಜೊತೆಗೆ ನಾವು ಹುಳವೋ, ಚಿಟ್ಟೆಯೋ, ರೆಕ್ಕೆ ಕಳಚಿಕೊಳ್ಳಲು ನಿಂತವರೋ ಎನ್ನುವುದು ಸಿನಿಮಾದ ಐದನೇ ಕತೆ. Dystopian ಸಮಾಜದ ಪ್ರತಿನಿಧಿಗಳ ಅಥವಾ ಸ್ವಸ್ಥ ಸಮಸಮಾಜದ ಭಾಗವಾದವರ ಕತೆ.

ಕಾಯಬೇಕಾದ ಪ್ರಭುತ್ವ, ಸರ್ವಾಧಿಕಾರದ ದರ್ಪ ತೋರಿಸುತ್ತ ಜನರನ್ನು ದೋಚುತ್ತ ಕೊಲ್ಲಲು ನಿಲ್ಲುವುದು ಹಾಗೂ ಅದನ್ನು ತಡೆದು ಪ್ರಜೆಗಳಿಗೆ ರಕ್ಷಣೆ ಕೊಡಬಲ್ಲ ಪರ್ಯಾಯ ದಾರಿಗಳು, ಯೋಚನೆಗಳು ಇಲ್ಲದೆ ಇರುವುದು Dystopian ಸಮಾಜದ ಮೂಲಗುಣ. ಉಸಿರಾಡಲು ಬೇಕಾಗುವ ಗಾಳಿಗೂ ಕೂಡ ಅಲ್ಲಿ ರಕ್ತ ಹರಿಯುತ್ತದೆ. ದೇಶ-ರಾಜ್ಯಗಳನ್ನು ದಾಟಿ ಅಲ್ಲಿ ಗಡಿಗಳು ಎದ್ದಿವೆ. ಇಂತಹ ಕಾಲ್ಪನಿಕ ಅಥವಾ ನಮ್ಮ ಪ್ರಜ್ಞೆಯನ್ನು ತಾಕದ ಸಮಾಜದ ಒಳಗಡೆ ನಿಂತು ಒಬ್ಬ ಹಿರಿಯರು ಹೇಳುವ ಕತೆಗಳ ಮೂಲಕ ಸಿನಿಮಾ ತೆರೆದುಕೊಳ್ಳುತ್ತದೆ.

ನಾಲ್ಕು ಕತೆಗಳಿವೆ. ಹಾಗಂತ ಒಂದರ ನಂತರ ಒಂದು ಸರದಿಯಲ್ಲಿ ನಿಂತು ಅವುಗಳು ನಮಗೆ ವರದಿ ಒಪ್ಪಿಸುವುದಿಲ್ಲ. ತನ್ನದನ್ನು ಮೊದಲು ಹೇಳಿಕೊಳ್ಳಬೇಕು ಎನ್ನುವ ಹಠಕ್ಕೆ ಬೀಳುತ್ತವೆ, ಆಗಾಗ ಪದಗಳಿಗೆ ತಿಣುಕಾಡುತ್ತವೆ, ಕೆಲವೊಮ್ಮೆ ಹೇಳಲು ಇನ್ನೇನೋ ಉಳಿಸಿಕೊಂಡು ಮಾಯವಾಗುತ್ತವೆ, ಇದ್ಯಾಕೆ ಹೀಗೆ ಎನ್ನುವ ಪ್ರಶ್ನೆಗಳನ್ನು ಹುಟ್ಟಿಸುತ್ತವೆ. ನಾಲ್ಕು ಕತೆಗಳದ್ದು ನಾಲ್ಕು ದಿಕ್ಕು, ಒಂದೇ ಆಕಾಶ!

ಹುಳ ಚಿಟ್ಟೆಯಾಗಿ ರೂಪಾಂತರವಾಗುವ ಪ್ರಕ್ರಿಯೆಯೇ ಈ ಸಿನಿಮಾದ ಮೂಲವಸ್ತು. ಕತ್ತಲು ಕಳೆದು ಬೆಳಕಾಗುವುದು, ಬರಡು ಭೂಮಿ ಹಸಿರಾಗುವುದು, ಪ್ರವಾಹಕ್ಕೆ ಸ್ಮಶಾನವಾದ ನದಿ ಮತ್ತೆ ಧ್ಯಾನಕ್ಕೆ ಕೂರುವುದು ಇದೆಲ್ಲವನ್ನೂ ನಾವು ಕಂಡಿದ್ದೇವೆ. ಆದರೆ ನಾವು ಇನ್ನೊಬ್ಬರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತ ಅದನ್ನೇ ಬದುಕಿನ ದೊಡ್ಡ ಸಾಧನೆ ಎಂದುಕೊಳ್ಳುತ್ತೇವೆ. ಸಿದ್ಧಾಂತದ ಜಿದ್ದಿಗೆ ಬಿದ್ದು ಮನುಷ್ಯತ್ವ ಮರೆತು ಬಿಡುತ್ತೇವೆ. ನಿರ್ದಿಷ್ಟ ದೇಶ, ಭಾಷೆ, ವ್ಯಕ್ತಿ, ಧರ್ಮ, ಜಾತಿ, ಸಾಮಾಜಿಕ ಶ್ರೇಣಿ ಹಾಗು ಪ್ರಾದೇಶಿಕತೆಯ ಕುರಿತು ನಮಗೆ ನಮ್ಮದೇ ಆದ ಪೂರ್ವಾಗ್ರಹವಿದೆ. ನಾವು ಇದನ್ನು ಸಾಮಾಜಿಕ ರೂಢಿ ಎಂದು ಕೂಡ ಅಂದವಾಗಿ ಕರೆಯಬಹುದು. ‘ರೂಪಾಂತರ’ ಈ ಸಾಮಾಜಿಕ ರೂಢಿಗಳ ಬಗ್ಗೆ ಮಾತನಾಡುತ್ತದೆ.

ಬೆದರಿಕೆಯನ್ನೇ ಬದುಕಾಗಿಸಿಕೊಂಡಿರುವ ವ್ಯಕ್ತಿಯೊಬ್ಬ ಅನಗತ್ಯವಾಗಿ ಮೈಮೇಲೆ ಎಳೆದುಕೊಳ್ಳುವ ಪಾಪವಿದೆ. ಪ್ರಾಯಶ್ಚಿತಕ್ಕೆ ಪುಣ್ಯ ಸಿಗುತ್ತದಾ? ಪಾಪ ಕರಗುತ್ತದಾ? ಗೊತ್ತಿಲ್ಲ. ಒಂದು ಹಿಡಿ ತಾಳ್ಮೆ, ಹೆಗಲು ಸವರುವಷ್ಟು ಕ್ಷಮೆ ನಮ್ಮಲ್ಲಿ ಇದ್ದರೆ ಈ ಲೋಕವನ್ನು ಹೊರತಾದ ಬೇರೆ ನಾಕ ಬೇಡ ಎನ್ನುವುದು ಈ ಕತೆಯ ಆಶಯ. ರಾಜ್ ಬಿ ಶೆಟ್ಟಿ ಅಭಿನಯ ಕತೆಯ ತೂಕವನ್ನು ಹೆಚ್ಚಿಸಿದೆ. ಅವರ ಪಾತ್ರಕ್ಕೆ ಮಾತು ಕಡಿಮೆಯೇ ಇದ್ದರೂ ಕೋಪ ಹಾಗು ಚಡಪಡಿಕೆಯ ಅಭಿವ್ಯಕ್ತಿ ಆ ಪಾತ್ರವನ್ನು ವಿಶೇಷವಾಗಿಸಿದೆ.

ನಮ್ಮ ನಂಬಿಕೆಗಳ ಗೋಪುರ ದಾಟಿ ಅಲ್ಲಿರುವ ಸತ್ಯದ ಇನ್ನೊಂದು ಮುಖವನ್ನು ನೋಡುವ ಪ್ರಯತ್ನವನ್ನು ನಾವು ಮಾಡುವುದಿಲ್ಲ. ಒಬ್ಬರು ಕೆಟ್ಟವರು ಎನ್ನುವ ಮುದ್ರೆ ಒತ್ತಿದ ಮೇಲೆ ಮುಗಿಯಿತು. ವ್ಯವಸ್ಥೆಯ ಒಳಗಡೆ ಗಣ್ಯರು ಎನಿಸಿಕೊಂಡವರು ಹರಿಯಬಿಡುವ ತೀರ್ಮಾನಗಳು ನಮಗೆ ಬಹಳ ಬೇಗ ಒಪ್ಪಿತವಾಗುತ್ತದೆ. ಭಿಕ್ಷುಕಿಯೊಬ್ಬಳ ಕುರಿತಾದ ಈ ಕತೆಯಲ್ಲಿ ಒಂದು ಸಂಭಾಷಣೆ ಈ ರೀತಿಯಿದೆ ‘ವಾರಕ್ಕೊಮ್ಮೆ ರೇಪ್ ಆಗುವವಳನ್ನು ವ್ಯವಸ್ಥೆ ಮತ್ತೊಮ್ಮೆ ರೇಪ್ ಮಾಡುತ್ತದೆ’. ನಾವು ಈ ವ್ಯವಸ್ಥೆಯ ಭಾಗ ಎನ್ನುವುದು ನಾಚಿಕೆಗೇಡಿನ ಸಂಗತಿ. ಹಿರಿಯ ಪೋಲಿಸ್ ಅಧಿಕಾರಿ ಹಾಗು ಹೊಸದಾಗಿ ಕೆಲಸಕ್ಕೆ ಸೇರಿದ ವ್ಯಕ್ತಿಯ ನಡುವಿನ ಸಂಭಾಷಣೆ ನಮ್ಮ ಸಮಾಜದ ಹುಳುಕುಗಳಿಗೆ ಕನ್ನಡಿ ಹಿಡಿಯುತ್ತದೆ.

ಕೆಟ್ಟ ಬಾಲ್ಯದ ಹಿನ್ನೆಲೆ ಇರುವ ಹುಡುಗನೊಬ್ಬನ ಕತೆಯಲ್ಲಿ ಡಿಜಿಟಲ್ ಬದುಕು ಹೇಗೆಲ್ಲ ಅವನ ಮಾನಸಿಕ ದೌರ್ಬಲ್ಯವನ್ನು ದುರ್ಬಳಕೆ ಮಾಡಿಕೊಳ್ಳುತ್ತದೆ ಎನ್ನುವುದರ ಕುರಿತಾಗಿದೆ. ಜೊತೆಗೆ ನಮ್ಮ ಕೆಟ್ಟ ಕಾಲದ ಸಂದರ್ಭದಲ್ಲಿ ಸಿಕ್ಕ ಪ್ರೀತಿ, ಸಾಂತ್ವಾನವನ್ನು ಮರೆತು, ಅನುಭವಿಸಿದ ಯಾತನೆಗಳನ್ನಷ್ಟೇ ನೆನಪು ಮಾಡಿಕೊಂಡು ಬದುಕನ್ನು ಹಾಳು ಮಾಡಿಕೊಳ್ಳುವುದು ತಪ್ಪು ಎನ್ನುವುದು ಈ ಕತೆಯ ಸಂದೇಶ.

ಉತ್ತರ ಕರ್ನಾಟಕದ ಹಿರಿಯ ದಂಪತಿಗಳ ಕತೆ ‘ರೂಪಾಂತರ’ ಸಿನಿಮಾದ ಜೀವಾಳ. ಜೀವನ ಪ್ರೀತಿಯ ಉತ್ತುಂಗವನ್ನು ತೋರಿಸುತ್ತಲೇ ಕತೆ ತೆಗೆದುಕೊಳ್ಳುವ ಗಡಿಬಿಡಿಯ ತಿರುವುಗಳು ನಿರೀಕ್ಷಿತ ಅನಿಸುವ ಹೊತ್ತಿಗೆ ಅದು ಇನ್ನೇನೋ ಆಗಿ ನಮ್ಮನ್ನು ಬೆಚ್ಚಿ ಬೀಳಿಸುತ್ತದೆ. ದಂಪತಿಗಳ ನಡುವಿನ ನವಿರಾದ ಸಂಭಾಷಣೆ ಈ ಕತೆಯ ಹೆಚ್ಚುಗಾರಿಕೆ.

ಮೊದಲೇ ಹೇಳಿದಂತೆ ನಾಲ್ಕು ದಿಕ್ಕಿಗೆ ಸಾಗುವ ನಾಲ್ಕು ಕತೆಗಳಿಗೆ ಇರುವುದು ಒಂದೇ ಆಕಾಶ. ಆ ಆಕಾಶದಡಿ ಹುಳಗಳು ಚಿಟ್ಟೆಯಾಗಿ ರೂಪಾಂತರವಾಗುವ, ಚಿಟ್ಟೆಗಳು ರೆಕ್ಕೆ ಕಳಚಿಕೊಳ್ಳುವ ಪ್ರಕ್ರಿಯೆಗೆ ನಾವು ಸಾಕ್ಷಿಯಾಗುತ್ತೇವೆ. ಇದೆಲ್ಲದರ ಜೊತೆಗೆ ನಾವು ಹುಳವೋ, ಚಿಟ್ಟೆಯೋ, ರೆಕ್ಕೆ ಕಳಚಿಕೊಳ್ಳಲು ನಿಂತವರೋ ಎನ್ನುವುದು ಸಿನಿಮಾದ ಐದನೇ ಕತೆ. Dystopian ಸಮಾಜದ ಪ್ರತಿನಿಧಿಗಳ ಅಥವಾ ಸ್ವಸ್ಥ ಸಮಸಮಾಜದ ಭಾಗವಾದವರ ಕತೆ.

ನಿರ್ದೇಶಕ ಮಿಥಿಲೇಶ್ ಎಡವಲತ್ ಹಾಗು ನಿರ್ಮಾಪಕ ಸುಹಾನ್ ಪ್ರಸಾದ್ ಇಂಥದ್ದೊಂದು ಸಿನಿಮಾ ಮಾಡಲು ಧೈರ್ಯ ಮಾಡಿದ್ದಕ್ಕೆ ಹಾಗು ಅವರ ಪ್ರಯತ್ನಕ್ಕೆ ಜೊತೆ ನೀಡಿದ ರಾಜ್ ಬಿ ಶೆಟ್ಟಿ ಅಭಿನಂದನಾರ್ಹರು. ಮಿಥಿಲೇಶ್ ಮುಂದಿನ ದಿನಗಳಲ್ಲಿ ಇಂತಹ ಮತ್ತಷ್ಟು ಪ್ರಯೋಗಗಳನ್ನು ಕನ್ನಡ ಚಿತ್ರರಂಗದಲ್ಲಿ ಮಾಡಬೇಕು. ಮಿಧುನ್ ಮುಕುಂದನ್ ಸಂಗೀತ ಹಾಗು ಪ್ರವೀಣ್ ಶ್ರೀಯಾನ್ ಕ್ಯಾಮೆರಾ ಕೆಲಸ ಸಿನಿಮಾವನ್ನು ತಾಂತ್ರಿಕವಾಗಿ ಮತ್ತಷ್ಟು ಗಟ್ಟಿಯಾಗಿಸಿವೆ.

ಈ ಸಿನಿಮಾ ಪರಿಪೂರ್ಣ ಅಂತೇನೂ ಅಲ್ಲ. ಅನಗತ್ಯ ಎನಿಸುವ ದೃಶ್ಯಗಳಿವೆ. ಸಿನಿಮಾದ ಪ್ರಾರಂಭದಲ್ಲಿ ಚಿತ್ರಕತೆ ಸ್ವಲ್ಪ ನಿಧಾನವಾಯ್ತೇನೋ ಅನಿಸುತ್ತದೆ. ಪಾತ್ರಗಳು ಕತೆಯಿಂದ ನಿರ್ಗಮಿಸುವಾಗ ಕೆಲವೊಮ್ಮೆ ಆ ಪಾತ್ರದ ಜೊತೆ ಪ್ರೇಕ್ಷಕರಾಗಿ ನಮ್ಮ ಮಾತುಕತೆ ಮುಗಿದಿರುವುದಿಲ್ಲ. ಈ ಎಲ್ಲ ಇಲ್ಲಗಳ ಜೊತೆ ಈ ವರ್ಷ ಭಾರತೀಯ ಚಿತ್ರರಂಗದಲ್ಲಿ ಬಂದಿರುವ ಉತ್ತಮ ಚಿತ್ರಗಳಲ್ಲಿ ‘ರೂಪಾಂತರ’ ಕೂಡ ಒಂದು.

LEAVE A REPLY

Connect with

Please enter your comment!
Please enter your name here