ನಟಿ ರುಕ್ಮಿಣಿ ವಸಂತ್ ಟಾಲಿವುಡ್ ಪ್ರವೇಶಕ್ಕೆ ವೇದಿಕೆ ಸಜ್ಜಾಗಿದೆ. ರಾಮ್ ಪೋತಿನೇನಿ ಹೀರೋ ಆಗಿ ನಟಿಸಲಿರುವ ನೂತನ ತೆಲುಗು ಚಿತ್ರದ ನಾಯಕಿಯಾಗಿ ರುಕ್ಮಿಣಿ ಆಯ್ಕೆಯಾಗುವ ಸಾಧ್ಯತೆಗಳಿವೆ. ಸದ್ಯದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ ಎನ್ನುವ ಮಾಹಿತಿಯಿದೆ.
‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಉತ್ತಮ ನಟನೆ ಮೂಲಕ ರುಕ್ಮಿಣಿ ವಸಂತ್ ಕನ್ನಡಿಗರಿಗೆ ಚಿರಪರಿಚಿತರಾಗಿದ್ದಾರೆ. ಹೇಮಂತ್ ರಾವ್ ನಿರ್ದೇಶನದ ಈ ಚಿತ್ರದ ಹೀರೋ ರಕ್ಷಿತ್ ಶೆಟ್ಟಿ. ಸಿನಿಮಾ ತೆಲುಗಿಗೂ ಡಬ್ ಆಗಿ ತೆರೆಕಂಡಿತ್ತು. ತೆಲುಗು ಸಿನಿಪ್ರಿಯರಿಗೂ ಪರಿಚಿತರಾಗಿರುವ ರುಕ್ಮಿಣಿ ಇದೀಗ ಟಾಲಿವುಡ್ ಪ್ರವೇಶಿಸಲು ಸಜ್ಜಾಗಿದ್ದಾರೆ. ರಾಮ್ ಪೋತಿನೇನಿ ಹೀರೋ ಆಗಿ ನಟಿಸಲಿರುವ ನೂತನ ತೆಲುಗು ಚಿತ್ರದ ನಾಯಕಿಯಾಗಿ ರುಕ್ಮಿಣಿ ನಟಿಸುವ ಸಾಧ್ಯತೆಗಳಿವೆ. ಮಾತುಕತೆ ನಡೆದಿದ್ದು, ಸುದ್ದಿಯಿನ್ನೂ ಅಧಿಕೃತವಾಗಬೇಕಿದೆ. ‘ಬೀರ್‌ಬಲ್’ ಕನ್ನಡ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ರುಕ್ಮಿಣಿ ಅವರಿಗೆ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಹೆಸರು ತಂದುಕೊಟ್ಟಿತು. ಗಣೇಶ್ ಜೋಡಿಯಾಗಿ ಅವರು ನಟಿಸಿದ್ದ ‘ಬಾನದಾರಿಯಲ್ಲಿ’ ಸಿನಿಮಾ ಇತ್ತೀಚೆಗೆ ತೆರೆಕಂಡಿತ್ತು. ಈ ಚಿತ್ರಕ್ಕೆ ಪ್ರೇಕ್ಷಕರಿಂದ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ.
ಇದೇ ತಿಂಗಳ ನವೆಂಬರ್ 17ರಂದು ‘ಸಪ್ತ ಸಾಗರದಾಚೆ ಎಲ್ಲೋ’ Side B ತೆರೆಕಾಣುತ್ತಿದೆ. ಈ ಸಿನಿಮಾದ ತೆಲುಗು ಅವತರಣಿಕೆಯೂ ಬರಲಿದ್ದು, ಚಿತ್ರತಂಡ ಗೆಲ್ಲುವ ವಿಶ್ವಾಸದಲ್ಲಿದೆ. ಇನ್ನು ನಟ ರಾಮ್ ಪೋತಿನೇನಿ ನಟನೆಯ ‘ಸ್ಕಂದ’ ತೆಲುಗು ಸಿನಿಮಾ ಇತ್ತೀಚೆಗೆ ತೆರೆಕಂಡಿತ್ತು. 90 ಕೋಟಿ ಬಜೆಟ್‌ನಲ್ಲಿ ತಯಾರಾಗಿದ್ದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಗಳಿಸಿದ್ದು 60 ಕೋಟಿ ರೂಪಾಯಿ. ಸದ್ಯ ರಾಮ್ ‘ಡಬಲ್ ಇಸ್ಮಾರ್ಟ್’ ತೆಲುಗು ಸಿನಿಮಾ ಚಿತ್ರೀಕರಣದಲ್ಲಿದ್ದಾರೆ. ಈ ಸಿನಿಮಾ 2024ರ ಮಾರ್ಚ್ 8ಕ್ಕೆ ತೆರೆಕಾಣಲಿದೆ. ಇದಾದ ನಂತರ ರಾಮ್ – ರುಕ್ಮಿಣಿ ವಸಂತ್ ಜೋಡಿಯ ತೆಲುಗು ಸಿನಿಮಾ ತೆರೆಗೆ ಬರಲಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಈ ಸಿನಿಮಾ ನಿರ್ಮಿಸುತ್ತಿದೆ.