2024ರಲ್ಲಿ ಸುಮಾರು 220 ಸಿನಿಮಾಗಳು ತೆರೆಕಂಡವು. ಗೆಲುವಿನ ಪರ್ಸಂಟೇಜ್ 5% ಎಂದು ಹೇಳಬಹುದು. ಸ್ಟಾರ್ ಹೀರೋಗಳ ಸಿನಿಮಾಗಳು ಹಣ ಮಾಡಿದರೆ ಹೊಸಬರ ಪ್ರಯತ್ನಗಳಿಗೆ ಅಷ್ಟೇನೂ ಬೆಂಬಲ ಸಿಗಲಿಲ್ಲ. ನಟ ದರ್ಶನ್ ಅವರು ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದು ಈ ವರ್ಷದಲ್ಲಿ ಕನ್ನಡ ಚಿತ್ರರಂಗದ ದೊಡ್ಡ ವಿದ್ಯಮಾನವಾಯ್ತು.
ಕಳೆದ ವರ್ಷ 2023ರಲ್ಲಿ 241 ಸಿನಿಮಾಗಳು ತೆರೆಕಂಡಿದ್ದವು. ಈ ಬಾರಿ 2024ರಲ್ಲಿ ಬಿಡುಗಡೆಯಾದ ಸಿನಿಮಾಗಳು 220. ಜನವರಿ 5ರಂದು ಮೊದಲ ವಾರದಲ್ಲಿ ಮೂರು ಸಿನಿಮಾಗಳು (ಆದರ್ಶ ರೈತ, ಆನ್‌ಲೈನ್ ಮದುವೆ, ಆಫ್‌ಲೈನ್ ಶೋಭನ, ಒಂಟಿ ಬಂಟಿ ಲವ್‌ಸ್ಟೋರಿ) ಥಿಯೇಟರ್‌ಗೆ ಬಂದಿದ್ದವು. ಅಲ್ಲಿಂದ ಆರಂಭವಾದ ಸಿನಿಮಾ ವರ್ಷ ಮುಗಿದದ್ದು ‘ಔಟ್ ಆಫ್ ಸಿಲಬಸ್’ (ಡಿಸೆಂಬರ್ 27) ಚಿತ್ರದೊಂದಿಗೆ. ಬಿಡುಗಡೆಯಾದ ಒಟ್ಟು 220 ಚಿತ್ರಗಳ ಪೈಕಿ ಹಣ ಗಳಿಸಿದ್ದು ಬೆರಳೆಕೆಯಷ್ಟು ಎನ್ನುವುದೇ ಬೇಸರದ ಸಂಗತಿ. ಹಾಗೆ ನೋಡಿದರೆ ವರ್ಷದ ಮೊದಲ ಆರು ತುಂಗಳಲ್ಲಿ ಸ್ಟಾರ್ ಹೀರೋಗಳ ಸಿನಿಮಾಗಳೇ ಇರಲಿಲ್ಲ. ಮಾರ್ಚ್‌ನಲ್ಲಿ ಬಂದಿದ್ದ ಶಿವರಾಜಕುಮಾರ್ – ಪ್ರಭುದೇವ ನಟನೆಯ ‘ಕರಟಕ ದಮನಕ’ ದೊಡ್ಡ ಚಿತ್ರವಾಗಿ ಸುದ್ದಿಯೇನೋ ಆಯ್ತು. ಆದರೆ ಯೋಗರಾಜ್ ಭಟ್ ನಿರ್ದೇಶನದ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಮಾರ್ಚ್ ಕೊನೆಯಲ್ಲಿ ತೆರಕಂಡ ಯುವರಾಜಕುಮಾರ್ ನಟನೆಯ ‘ಯುವ’ ತಕ್ಕಮಟ್ಟಿಗೆ ಪ್ರೇಕ್ಷಕರನ್ನು ಸೆಳೆಯಿತು.
ಜೂನ್ ತಿಂಗಳ ನಂತರ ಧನಂಜಯ ನಟನೆಯ ‘ಕೋಟಿ’ ಥಿಯೇಟರ್‌ಗಳಿಗೆ ಒಂಚೂರು ಆಹಾರ ಒದಗಿಸಿತು. ಆಗಸ್ಟ್‌ನಲ್ಲಿ ದುನಿಯಾ ವಿಜಯ್ ನಟನೆ, ನಿರ್ದೇಶನದ ‘ಭೀಮ’ ಉದ್ಯಮಕ್ಕೆ ಬಲ ತುಂಬಿತು. ಅಲ್ಲಿಂದ ಚೇತರಿಕೆ ಕಂಡ ಥಿಯೇಟರ್ ಕಲೆಕ್ಷನ್‌ಗೆ ಮತ್ತಷ್ಟು ನೆರವಾಗಿದ್ದು ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’. ಮುಂದೆ ಶ್ರೀಮುರಳಿ ಅವರ ‘ಬಘೀರ’, ಶಿವರಾಜಕುಮಾರ್ ನಟನೆಯ ‘ಭೈರತಿ ರಣಗಲ್’, ಉಪೇಂದ್ರರ ‘ಯುಐ’, ಸುದೀಪ್ ಅಭಿನಯದ ‘ಮ್ಯಾಕ್ಸ್’ ಥಿಯೇಟರ್ ಮಾಲೀಕರ ನೆರವಿಗೆ ಬಂದರು. ಸಿನಿ ಪ್ರಿಯರು ಈ ಚಿತ್ರಗಳನ್ನು ನೋಡಿ ಖುಷಿಪಟ್ಟರು. ಶಿವರಾಜಕುಮಾರ್ ನಟನೆಯ ‘ಭೈರತಿ ರಣಗಲ್’ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ದೊಡ್ಡ ಸದ್ದು ಮಾಡಿದರೆ ಮೊನ್ನೆಯಷ್ಟೇ ತೆರೆಕಂಡ ‘ಮ್ಯಾಕ್ಸ್’ ಕೂಡ ಭರ್ಜರಿ ಗಳಿಕೆ ನಡೆಸುವ ಸೂಚನೆ ನೀಡಿದೆ. ಉಪೇಂದ್ರರ ‘ಯುಐ’ ಬಗ್ಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ ಕಲೆಕ್ಷನ್ ಚೆನ್ನಾಗಿಯೇ ಇದೆ. ಸುದೀಪ್‌ರ ‘ಮ್ಯಾಕ್ಸ್’ ತೆಲುಗು, ತಮಿಳು ಮತ್ತು ಹಿಂದಿ ಡಬ್ಬಿಂಗ್ ಅವತರಣಿಕೆಯಲ್ಲಿ ಉತ್ತಮ ಗಳಿಕೆ ನಡೆಸುವ ಸಾಧ್ಯತೆಗಳಿವೆ. ಈ ವರ್ಷದ ಹೂಡಿಕೆ ಅಂದಾಜು 600 ಕೋಟಿ ರೂಪಾಯಿ. ಹಾಕಿದ ಬಂಡವಾಳವೂ ಸಿಗದೆ ಪರಿತಪಿಸಿದ ನಿರ್ಮಾಪಕರ ಸಂಖ್ಯೆ ದೊಡ್ಡದಿದೆ.
ದರ್ಶನ್ ಪ್ರಕರಣ | ಈ ವರ್ಷ ಕನ್ನಡ ಚಿತ್ರರಂಗ ನಟ ದರ್ಶನ್ ಕಾರಣಕ್ಕೆ ದೊಡ್ಡ ಸುದ್ದಿಯಾಯ್ತು. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಅವರ ಸಹಚರರ ಬಂಧನವಾಯ್ತು. ಜೂನ್ 11ರಂದು ಮೈಸೂರಿನಲ್ಲಿ ದರ್ಶನ್‌ರನ್ನು ಬಂಧಿಸಲಾಯ್ತು. ಮಿಲನ ಪ್ರಕಾಶ್ ನಿರ್ಮಾಣ – ನಿರ್ದೇಶನದ ‘ಡೆವಿಲ್’ ಸಿನಿಮಾದಲ್ಲಿ ದರ್ಶನ್ ತೊಡಗಿಸಿಕೊಂಡಿದ್ದರು. ‘ಕಾಟೇರ’ ಸಿನಿಮಾದ ದೊಡ್ಡ ಯಶಸ್ಸಿನ ನಂತರ ಸೆಟ್ಟೇರಿದ್ದ ದರ್ಶನ್‌ರ ಈ ಸಿನಿಮಾ ಕೊಲೆ ಪ್ರಕರಣದಿಂದಾಗಿ ನನೆಗುದಿಗೆ ಬಿದ್ದಿದೆ. ಬೆಂಗಳೂರು ಜೈಲಿನಲ್ಲಿದ್ದ ಅವರನ್ನು ನಂತರ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಯ್ತು. ತಿಂಗಳುಗಳ ನಂತರ ಕೊನೆಗೂ ದರ್ಶನ್‌ರಿಗೆ ಜಾಮೀನು ಸಿಕ್ಕಿದ್ದು, ಸದ್ಯ ಅವರು ಬೆನ್ನು ಹುರಿ ನೋವಿನ ಚಿಕಿತ್ಸೆಯಲ್ಲಿದ್ದಾರೆ. ಅವರು ಚೇತರಿಸಿಕೊಂಡ ನಂತರ ‘ಡೆವಿಲ್’ ಆರಂಭವಾಗಬಹುದು. ಬೆಳ್ಳಿತೆರೆಯಲ್ಲಿ ದರ್ಶನ್ ಅನುಪಸ್ಥಿತಿ ದೊಡ್ಡ ರೀತಿಯಲ್ಲಿ ಚಿತ್ರರಂಗವನ್ನು ಕಾಡಿದ್ದು ಹೌದು.
ರಾಷ್ಟ್ರಪ್ರಶಸ್ತಿ | ಬಹಳ ವರ್ಷಗಳ ನಂತರ ಕನ್ನಡಕ್ಕೆ ನಟ ರಿಷಬ್ ಶೆಟ್ಟಿ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ತಂದರು. 2022ರ ಸೆಪ್ಟೆಂಬರ್‌ನಲ್ಲಿ ತೆರೆಗೆ ಬಂದಿದ್ದ ‘ಕಾಂತಾರ’ ಕನ್ನಡದಿಂದ ಒಂದೊಳ್ಳೆಯ PAN ಇಂಡಿಯಾ ಚಿತ್ರವಾಗಿತ್ತು. ಈ ಸಿನಿಮಾದ ಉತ್ತಮ ನಟನೆಗೆ ರಿಷಬ್ ಶೆಟ್ಟಿ ರಾಷ್ಟ್ರಪ್ರಶಸ್ತಿ ಪಡೆದರು. ಈ ಸಿನಿಮಾ ಅತ್ಯುತ್ತಮ ಮನರಂಜನಾ ಸಿನಿಮಾ ವಿಭಾಗದಲ್ಲೂ ರಾಷ್ಟ್ರಪ್ರಶಸ್ತಿ ಪಡೆಯಿತು. ಅತ್ಯುತ್ತಮ ಪ್ರಾದೇಶಿಕ ಸಿನಿಮಾ ವಿಭಾಗದಲ್ಲಿ ‘KGF2’ ಸಿನಿಮಾಗೆ ಗೌರವ ಲಭಿಸಿತು. ಇದೇ ಸಿನಿಮಾದ ಅತ್ಯುತ್ತಮ ಸಾಹಸ ಸಂಯೋಜನೆಗಾಗಿ ಅನ್ವರಿವ್ ರಾಷ್ಟ್ರಪ್ರಶಸ್ತಿಗೆ ಭಾಜನರಾದರು. ಅತ್ಯುತ್ತಮ ಕಲೆ, ಸಂಸ್ಕೃತಿ ವಿಭಾಗದಲ್ಲಿ ಸಾಗರ್ ಪುರಾಣಿಕ್ ನಿರ್ದೇಶನದ ‘ರಂಗವೈಭವ’ಕ್ಕೆ ರಾಷ್ಟ್ರಪ್ರಶಸ್ತಿ ಮತ್ತು ನಾನ್ ಫೀಚರ್ ವಿಭಾಗದಲ್ಲಿ ದಿನೇಶ್ ಶೆಣೈ ನಿರ್ದೇಶನದ ‘ಮಧ್ಯಂತರ’ಕ್ಕೆ (ಅತ್ಯುತ್ತಮ ಚೊಚ್ಚಲ ನಿರ್ದೇಶನ ಮತ್ತು ಸಂಕಲನ ವಿಭಾಗದಲ್ಲಿ) ಎರಡು ರಾಷ್ಟ್ರಪ್ರಶಸ್ತಿ ಲಭಿಸಿದವು.
ಗಮನ ಸೆಳೆದವರು | ಕತೆ, ನಿರೂಪಣೆ ಮತ್ತು ಹೊಸತನದಿಂದಾಗಿ ಬಹಳಷ್ಟು ಸಿನಿಮಾಗಳು ಈ ಬಾರಿ ಸದ್ದು ಮಾಡಿದವು. ಈ ಸಿನಿಮಾಗಳ ಪೈಕಿ ಕೆಲವು ಚಿತ್ರಗಳು ಹಣ ಗಳಿಕೆಯಲ್ಲೂ ಮುಂದಿದ್ದವು ಎನ್ನುವುದು ಸಮಾಧಾನಕರ ಸಂಗತಿ. ಶಾಖಾಹಾರಿ (ಸಂದೀಪ್ ಸುಂಕದ್ ನಿರ್ದೇಶನ), ಕೆರೆಬೇಟೆ (ರಾಜಗುರು), ಮರ್ಯಾದೆ ಪ್ರಶ್ನೆ (ನಾಗರಾಜ್ ಸೋಮಯಾಜಿ), ಬ್ಯಾಚುಲರ್ಸ್ ಪಾರ್ಟಿ (ಅಭಿಜಿತ್ ಮಹೇಶ್), ಬ್ಲಿಂಕ್ (ಶ್ರೀನಿಧಿ ಬೆಂಗಳೂರು), ಉಪಾಧ್ಯಕ್ಷ (ಅನಿಲ್ ಕುಮಾರ್) ಒಂದು ಸರಳ ಪ್ರೇಮಕಥೆ (ಸಿಂಪಲ್ ಸುನಿ), ಮರ್ಫಿ (ಬಿ ಎಸ್ ಪ್ರದೀಪ್ ವರ್ಮ), ಮೂರನೇ ಕೃಷ್ಣಪ್ಪ (ನವೀನ್ ನಾರಾಯಣಘಟ್ಟ), ಇಬ್ಬನಿ ತಬ್ಬಿದ ಇಳೆಯಲಿ (ಚಂದ್ರಜಿತ್ ಬೆಳ್ಳಿಯಪ್ಪ), ಲಾಫಿಂಗ್ ಬುದ್ಧ (ಎಂ ಭರತ್ ರಾಜ್) ಸಿನಿಮಾಗಳನ್ನು ಪ್ರೇಕ್ಷಕರು ಇಷ್ಟಪಟ್ಟರು. ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ ಫೋಟೊ (ಉತ್ಸವ ಗೋನವಾರ), ಶಿವಮ್ಮ (ಜಯಶಂಕರ್ ಆರ್ಯರ್) ಮತ್ತು ಹದಿನೇಳೆಂಟು (ಪೃಥ್ವಿ ಕೊಣನೂರು) ಚಿತ್ರಗಳು ಥಿಯೇಟರ್‌ನಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರ ಪ್ರೀತಿಗೆ ಪಾತ್ರವಾದವು.
ಅಗಲಿಕೆ | ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ 2024ರಲ್ಲಿ ನಮ್ಮನ್ನು ಅಗಲಿದರು. ‘ಮಠ’, ‘ಎದ್ದೇಳು ಮಂಜುನಾಥ’ ಖ್ಯಾತಿಯ ಪ್ರತಿಭಾವಂತ ಚಿತ್ರನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದು ಸ್ಯಾಂಡಲ್‌ವುಡ್‌ಗೆ ತುಂಬಲಾರದ ನಷ್ಟ. ನಿರ್ಮಾಪಕ ಸೌಂದರ್ಯ ಜಗದೀಶ್ ಕೂಡ ಆತ್ಮಹತ್ಯೆಯಿಂದ ಕಾಲವಾದರು. ‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ಖ್ಯಾತಿಯ ನಟ – ನಿರ್ಮಾಪಕ ಕೆ ಶಿವರಾಂ, ನಟಿ ಅಮೂಲ್ಯ ಸಹೋದರ – ಚಿತ್ರನಿರ್ದೇಶಕ ದೀಪಕ್ ಅರಸ್, ಕಿರುತೆರೆ ನಟಿಯರಾದ ಪವಿತ್ರಾ ಜಯರಾಂ, ಶೋಭಿತಾ, ಖ್ಯಾತ ನಿರೂಪಕಿ – ನಟಿ ಅಪರ್ಣಾ ವಸ್ತಾರೆ ಈ ವರ್ಷ ನಮ್ಮನ್ನು ಅಗಲಿದ ಚಿತ್ರರಂಗದ ಇತರೆ ಪ್ರಮುಖರು.
ಗೋವಾ ಗಲಾಟೆ | ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಗೋವಾ ಪ್ರವಾಸದಲ್ಲಿದ್ದಾಗ ಗಲಾಟೆ ಮಾಡಿಕೊಂಡು ಸುದ್ದಿಯಾಗಿದ್ದರು. ಗೋವಾಗೆ ತೆರಳಿದ್ದ ಇವರು ಕನ್ನಡ ಚಿತ್ರರಂಗದ ಸಮಸ್ಯೆಗಳು ಹಾಗೂ ಚಿತ್ರರಂಗದ 90ನೇ ವರ್ಷಾಚರಣೆಯ ಬಗ್ಗೆ ಮೀಟಿಂಗ್ ನಡೆಸಿದ್ದರು. ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್ ಅವರ ನೇತೃತ್ವದಲ್ಲಿ ಸಭೆ ನಡೆದಿದ್ದಾಗ ಮಾತಿಗೆ ಮಾತು ಬೆಳೆದ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ನಿರ್ಮಾಪಕರಾದ ರಥಾವರ ಮಂಜುನಾಥ್, ಎ ಗಣೇಶ್ ಅವರು ಕೈ ಕೈ ಮಿಲಾಯಿಸಿದ್ದರು. ಈ ಬಗ್ಗೆ ಗೋವಾ ಪೊಲೀಸ್ ಠಾಣೆಯಲ್ಲಿ ದೂರುಗಳೂ ದಾಖಲಾಗಿದ್ದವು. ನಂತರ ಬೆಂಗಳೂರಿಗೆ ಬಂದಿಳಿದ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಗಲಾಟೆ ಬಗ್ಗೆ ವಿವರಣೆ ನೀಡಿ ಸಮಸ್ಯೆ ತಿಳಿಯಾಗಿಸಿದರು. ಎನ್ ಎಂ ಸುರೇಶ್ ಅವರ ನಂತರ ಇದೀಗ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಪ್ರದರ್ಶಕರ ವಿಭಾಗದ ಎಂ ನರಸಿಂಹಲು ಡಿಸೆಂಬರ್ 19ರಂದು ಅಧಿಕಾರ ಸ್ವೀಕರಿಸಿದ್ದಾರೆ. ಉಪಾಧ್ಯಕ್ಷರಾಗಿ ಕೆ ವಿ ವೆಂಕಟೇಶ್, ಶಿಲ್ಪಾ ಶ್ರೀನಿವಾಸ್, ರಂಗಪ್ಪ ಕೆ ಓ ಆಯ್ಕೆಯಾಗಿದ್ದಾರೆ.
ಮದುವೆ ಸಡಗರ | ಚಿತ್ರನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮಾಂತೆರೋ ದಾಂಪತ್ಯಕ್ಕೆ ಕಾಲಿರಿಸಿದರು. ವಿವಾಹ ಬಂಧನಕ್ಕೊಳಗಾದ ಇತರೆ ತಾರೆಯರೆಂದರೆ – ದೀಪಿಕಾ ದಾಸ್ – ದೀಪಕ್, ಮಾನ್ವಿತಾ ಕಾಮತ್ – ಅರುಣ್, ಸಿರಿ ಪ್ರಹ್ಲಾದ್ – ಮಧುಸೂದನ್, ಮಂಜು ಪಾವಗಡ – ನಂದಿನಿ, ಚಂದನಾ ಅನಂತಕೃಷ್ಣ – ಪ್ರತ್ಯಕ್ಷ್, ಅಭಿಷೇಕ್ ಶೆಟ್ಟಿ – ಸಾಕ್ಷಾ ಶೆಟ್ಟಿ, ನಾಗಭೂಷಣ್ – ಪೂಜಾ ಪ್ರಕಾಶ್.
ಇನ್ನು ಈ ಬಾರಿ ಸ್ಯಾಂಡಲ್‌ವುಡ್‌ನ ಇಬ್ಬರು ತಾರೆಯರು ವಿಚ್ಛೇದನದಿಂದ ಸುದ್ದಿಯಾಗಿದರು. ಗಾಯಕ – ನಟ ಚಂದನ್ ಶೆಟ್ಟಿ ಮತ್ತು ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ ಜೂನ್ 8ರಂದು ವಿಚ್ಛೇದನ ಘೋಷಿಸಿದರು. ಮತ್ತೊಂದೆಡೆ ಯುವನಟ ಯುವ ರಾಜಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಅವರ ದಾಂಪತ್ಯ ಸುದ್ದಿಯಾಯ್ತು. ಎರಡೂ ಕಡೆಯಿಂದ ಪರಸ್ಪರ ದೋಷಾರೋಪ ಕೇಳಿಬಂದವು. ಯುವ ವಿಚ್ಛೇದನಕ್ಕೆ ನಟಿ ಸಪ್ತಮಿ ಗೌಡ ಕಾರಣ ಎನ್ನುವ ವದಂತಿಯೂ ಹರಿದಾಡಿತು. ಯುವ ಮತ್ತು ಶ್ರೀದೇವಿ ಅವರು ವಿಚ್ಛೇದನಕ್ಕೆ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.