ಹೇಮಂತ್ ಎಂ ರಾವ್ ನಿರ್ದೇಶನದಲ್ಲಿ ಶಿವ ರಾಜಕುಮಾರ್ ನಟಿಸಲಿರುವ ನೂತನ ಸಿನಿಮಾಗೆ ‘ಭೈರವನ ಕೊನೆ ಪಾಠ’ ಎಂದು ಹೆಸರಿಡಲಾಗಿದೆ. ವೈಶಾಖ್ ಜೆ ಗೌಡ ನಿರ್ಮಾಣದ ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ. ಶಿವ ರಾಜಕುಮಾರ್ ಬರ್ತ್‌ಡೇಗೆ ಚಿತ್ರದ ಫಸ್ಟ್‌ಲುಕ್ ಬಿಡುಗಡೆ ಮಾಡುವುದು ನಿರ್ದೇಶಕರ ಯೋಜನೆ.
‘ಸಪ್ತ ಸಾಗರದಾಚೆ ಎಲ್ಲೋ’ ಯಶಸ್ವೀ ಸರಣಿ ಸಿನಿಮಾಗಳ ನಂತರ ಹೇಮಂತರಾವ್ ನಿರ್ದೇಶನದ ನೂತನ ಸಿನಿಮಾ ಸುದ್ದಿ ಬಂದಿದೆ. ನಟ ಶಿವರಾಜಕುಮಾರ್ ಅವರಿಗೆ ಹೇಮಂತರಾವ್ ಆಕ್ಷನ್ – ಕಟ್ ಹೇಳವುದು ಖಚಿತವಾಗಿತ್ತು. ಇದೀಗ ಸಿನಿಮಾದ ಶೀರ್ಷಿಕೆ ಹೊರಬಿದ್ದಿದೆ. ಸಿನಿಮಾಗೆ ‘ಭೈರವನ ಕೊನೆ ಪಾಠ’ ಎನ್ನುವ ವಿಶಿಷ್ಟ ಶೀರ್ಷಿಕೆಯನ್ನಿಡಲಾಗಿದೆ. VJF ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಡಾ ವೈಶಾಕ್ ಗೌಡ ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರದ ವಿಶಿಷ್ಟ ಶೀರ್ಷಿಕೆ ಬಗ್ಗೆ ಹೇಮಂತರಾವ್, ‘ನಮ್ಮ ಆಡುಭಾಷೆಗೆ ಹತ್ತಿರವಾದ ಶೀರ್ಷಿಕೆಗಳು ನನಗೆ ಇಷ್ಟವಾಗುತ್ತವೆ. ಈ ಹಿಂದೆ ಕನ್ನಡ ಸಿನೆಮಾ ಶೀರ್ಷಿಕೆಗಳು ಕೇಳಲಿಕ್ಕೂ ಮಧುರವಾಗಿದ್ದು ಕುತೂಹಲ ಕೆರಳಿಸುವಂತೆ ಇರುತ್ತಿದ್ದವು. ನನ್ನ ನಿರ್ದೇಶನದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕವಲುದಾರಿ’, ‘ಸಪ್ತ ಸಾಗರದಾಚೆ ಎಲ್ಲೋ’ ಶೀರ್ಷಿಕೆಗಳು ಸಾಕಷ್ಟು ಜನಮೆಚ್ಚುಗೆಗೆ ಪಾತ್ರವಾದವು. ‘ಭೈರವನ ಕೊನೆ ಪಾಠ’ ಕೂಡಾ ಆ ಸಾಲಿಗೆ ಸೇರಲಿದೆ’ ಎನ್ನುತ್ತಾರೆ.
ಚಿತ್ರದ ಕುರಿತಾಗಿ ಹೇಮಂತಕುಮಾರ್ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ‘ಈ ಚಿತ್ರದಲ್ಲಿ ಭೈರವನೇ ಕೇಂದ್ರ ಪಾತ್ರವಾಗಿದ್ದು, ನಮ್ಮ ಶೀರ್ಷಿಕೆ ಅಚ್ಚುಕಟ್ಟಾಗಿ ಹೊಂದುತ್ತದೆ. ಅವನು ಮಾಡುವ ಪಾಠ ಯಾವುದು? ಅದನ್ನು ಕೊನೆ ಪಾಠ ಅಂದಿರೋದು ಯಾಕೆ ಅನ್ನುವುದೇ ಇದರ ಮುಖ್ಯ ತಿರುಳು. ನಮ್ಮ ಶೀರ್ಷಿಕೆ ವೀಕ್ಷಕರಲ್ಲಿ ಈ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಅನ್ನುವುದು ನಮ್ಮ ನಂಬಿಕೆ’ ಎಂದು ಕತೆಯ ಬಗ್ಗೆ ಗೋಪ್ಯತೆ ಕಾಪಾಡುತ್ತಾರೆ. ನಿರ್ಮಾಪಕ ವೈಶಾಖ್ ಜೆ ಗೌಡ, ‘ಶೀರ್ಷಿಕೆಯನ್ನು ಮೊದಲ ಬಾರಿ ಕೇಳಿದಾಗ ನಾನೆಷ್ಟು ಉತ್ಸಾಹಗೊಂಡಿದ್ದೆನೋ ಅದೇ ಉತ್ಸಾಹ ಜನರಲ್ಲೂ ಕಂಡುಬರುತ್ತಿರುವುದು ನನಗೆ ಖುಷಿ ಕೊಟ್ಟಿದೆ. ಇದೊಂದು ವಿಭಿನ್ನ ಹಾಗೂ ವಿಶಿಷ್ಟ ಚಿತ್ರವಾಗಿ ಮೂಡಿಬರಲಿದ್ದು, ಮುಂದಿನ ತಲೆಮಾರುಗಳವರೆಗೆ ತನ್ನ ಜನಪ್ರಿಯತೆ ಉಳಿಸಿಕೊಳ್ಳಲಿದೆ’ ಎಂದಿದ್ದಾರೆ. ಈ ವರ್ಷ ಶಿವ ರಾಜಕುಮಾರ್ ಅವರ ಹುಟ್ಟುಹಬ್ಬಕ್ಕೆ ಮೊದಲು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಲಿದೆ.