ಹೊಂಬಾಳೆ ಫಿಲ್ಮ್ಸ್‌ನ ಬಹುನಿರೀಕ್ಷಿತ ಚಿತ್ರ ‘ಕೆಜಿಎಫ್ 2’ ಬಿಡುಗಡೆ ಮುಂದಿನ ವರ್ಷದ ಏಪ್ರಿಲ್‌ಗೆ ಅಂದಾಗಲೇ ಹಲವರು ಸಿನಿಮಾ ಚಿತ್ರೀಕರಣ ಇನ್ನೂ ಮುಗಿದಿಲ್ವಾ ಎಂದು ಹುಬ್ಬೇರಿಸಿದ್ದರು. ಅದಕ್ಕೆ ತಕ್ಕಂತೆ ಈಗ ಕೆಜಿಎಫ್ ಚಿತ್ರತಂಡ ಇನ್ನೂ ಚಿತ್ರೀಕರಣ ಮಾಡುತ್ತಿರುವ ವರದಿ ಬಂದಿದೆ.
ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಚಿತ್ರ ಮುಂದಿನ ವರ್ಷ ಬಿಡುಗಡೆ ಆಗಲಿರುವ ಅತಿ ದೊಡ್ಡ ಬಿಗ್ ಸ್ಟಾರ್ ಮತ್ತು ಬಿಗ್ ಬಜೆಟ್ ಸಿನಿಮಾ ಅನ್ನೋದು ಎಲ್ಲರಿಗೂ ಗೊತ್ತು. ಪ್ರಶಾಂತ್ ನೀಲ್ ‘ಕೆಜಿಎಫ್’ ಮುಗಿಸಿ ತೆಲುಗಿನ ‘ಸಲಾರ್’ ಚಿತ್ರವನ್ನು ಪ್ರಭಾಸ್ ಅವರ ನಾಯಕತ್ವದಲ್ಲಿ ಚಿತ್ರೀಕರಿಸುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ‘ಕೆಜಿಎಫ್’ ಹೀರೋ ಯಶ್ ಕೂಡ ಚಿತ್ರದ ಚಿತ್ರೀಕರಣ ಸಂಪೂರ್ಣ ಮುಗಿದಿದೆ ಎಂದೇ ಹೇಳಿದ್ದರು. ಹಾಗಾದರೆ ಈಗ ಬೆಂಗಳೂರಿನ ನೈಸ್ ರಸ್ತೆಯಲ್ಲಿ ಚಿತ್ರದ ಚಿತ್ರೀಕರಣ ಏಕೆ ನಡೆಯುತ್ತಿದೆ ಅಂದ್ರೆ ಅದಕ್ಕೆ ಉತ್ತರ ಇಲ್ಲಿದೆ.
ಇತ್ತೀಚೆಗೆ ನೈಸ್ ರಸ್ತೆಯ ಚಿತ್ರೀಕರಣದ ಫೋಟೋಗಳನ್ನು ಚಿತ್ರದ ಛಾಯಾಗ್ರಾಹಕ ಭುವನ್ ಗೌಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಸಲಿಗೆ ವಿಷಯ ಏನೆಂದರೆ, ಚಿತ್ರದ ಎಲ್ಲಾ ಕಲಾವಿದರ ಭಾಗದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಈಗ ನೈಸ್ ರಸ್ತೆಯಲ್ಲಿ ನಡೆಯುತ್ತಿರೋದು ಚಿತ್ರದ ಪ್ಯಾಚ್ ವರ್ಕ್ ಗೆ ಬೇಕಾದ ಪುಡಿ ಚಿತ್ರೀಕರಣ ಅಷ್ಟೇ. ಅಂದ ಹಾಗೆ, ಕೆಜಿಎಫ್ ಚಿತ್ರಕ್ಕೆ ಓಟಿಟಿಗಳಿಂದ ಭಾರೀ ಬೇಡಿಕೆ ಬಂದರೂ ಚಿತ್ರದ ನಿರ್ಮಾಪಕರು ‘ಕೆಜಿಎಫ್’ ವೈಭವವನ್ನು ದೊಡ್ಡ ಪರದೆಯ ಮೇಲೆಯೇ ತೋರಿಸುತ್ತೇವೆ ಎಂದು ತೀರ್ಮಾನ ಮಾಡಿದ್ದಾರೆ. ಹಾಗಾಗಿ, ಮುಂದಿನ ವರ್ಷ ತೆರೆಕಾಣಲಿರುವ ‘ಕೆಜಿಎಫ್’ ಚಿತ್ರದ 5 ಭಾಷೆಯ ವಿತರಣಾ ಹಕ್ಕುಗಳು ಈಗಾಗಲೇ ಮಾರಾಟವಾಗಿವೆ. ಆಡಿಯೋ ಹಕ್ಕುಗಳನ್ನು ಲಹರಿ ಆಡಿಯೋ ತೆಗೆದುಕೊಂಡಿದ್ದರೆ, ಸ್ಯಾಟಲೈಟ್ ರೈಟ್ಸ್ ಝೀ ಟೀವಿ ಪಾಲಾಗಿದೆ.