ಪತ್ರಕರ್ತೆ ಸುನಯನಾ ಸುರೇಶ್ ‘ಮೌನರಾಗ’ ಕಿರುಚಿತ್ರ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಬಹುಭಾಷಾ ನಟಿ ಶ್ರುತಿ ಹರಿಹರನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಕಿರುಚಿತ್ರಕ್ಕೆ ಪ್ರೀತಾ ಜಯರಾಮನ್ ಛಾಯಾಗ್ರಹಣ, All OK ಸಂಗೀತ, ಬಾದಲ್ ನಂಜುಂಡಸ್ವಾಮಿ ಕಲಾ ನಿರ್ದೇಶನ ಇರಲಿದೆ.
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿರುವ ಸುನಯನಾ ಸುರೇಶ್ ಇದೀಗ ನಿರ್ದೇಶಕಿಯಾಗಿದ್ದಾರೆ. ಅವರಿಗೆ ಸಿನಿಮಾ ಬಹುದೊಡ್ಡ ಪ್ಯಾಷನ್. ಸಿನಿಮಾ ಕುರಿತು ಬರೆಯುತ್ತಲೇ ಇತ್ತೀಚೆಗೆ ಅವರು ಉದ್ಯಮದ ಜೊತೆಗೂ ನಿಕಟ ಸಂಪರ್ಕ ಹೊಂದಿದ್ದರು. ಕಳೆದ ವರ್ಷ ತೆರೆಕಂಡ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕಿಯಾಗಿದ್ದರು ಮತ್ತು ಕೆಲವು ಚಿತ್ರಗಳಿಗೆ ಸ್ಕ್ರಿಪ್ಟ್ ಕೆಲಸದಲ್ಲಿ, ಮೀಡಿಯಾ ಸ್ಟ್ರಾಟೆಜಿಸ್ಟ್ ಮತ್ತು ಕಾಸ್ಟಿಂಗ್ ಡೈರೆಕ್ಟರ್ ಆಗಿಯೂ ಕೆಲಸ ಮಾಡಿದ್ದಾರೆ. ಈಗ ಅವರು ‘ಮೌನ ರಾಗ’ ರಚಿಸಿ, ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಬಹುಭಾಷಾ ನಟಿ ಶ್ರುತಿ ಹರಿಹರನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಕಿರುಚಿತ್ರಕ್ಕೆ ಪ್ರೀತಾ ಜಯರಾಮನ್ ಛಾಯಾಗ್ರಹಣ, All OK ಸಂಗೀತ, ಬಾದಲ್ ನಂಜುಂಡಸ್ವಾಮಿ ಕಲಾ ನಿರ್ದೇಶನ ಇರಲಿದೆ. ಸಂಯುಕ್ತಾ ಹೊರ್ನಾಡ್, ಸೂರಜ್ ಗೌಡ, ರಾಜಶ್ರೀ ಪೊನ್ನಪ್ಪ, ಅನಿರುದ್ಧ್ ಆಚಾರ್ಯ, ಹರ್ಷಿಲ್ ಕೌಶಿಕ್ ಮತ್ತು All OK ಕಿರುಚಿತ್ರದಲ್ಲಿ ನಟಿಸಲಿದ್ದಾರೆ.
ಸಿನಿಮಾ ಕುರಿತಾದ ತಮ್ಮ ಆಸಕ್ತಿ ಹಾಗೂ ಕಿರುಚಿತ್ರದ ಬಗ್ಗೆ ಮಾತನಾಡುವ ಸುನಯನಾ, ‘2000ರ ದಶಕದ ಆರಂಭದಲ್ಲಿ ಇಂಡೀ ಫಿಲ್ಮ್ ಮೇಕಿಂಗ್ ಅಲೆಯು ಸಿನಿಮಾ ಮತ್ತು ಸಿನಿಮಾ ನಿರ್ಮಾಣದ ಮೇಲಿನ ನನ್ನ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸಿತು. ನಾಗೇಶ್ ಕುಕುನೂರ್ ಅವರಂತಹ ಹೆಸರುಗಳಿಂದ ಸಿನಿಮಾ ನನ್ನನ್ನು ಸೆಳೆಯಿತು. ಮಾಧ್ಯಮ ಪ್ರತಿನಿಧಿಯಾಗಿ ಮತ್ತು ಸಿನಿಮಾ ವಿಮರ್ಶಕಿಯಾಗಿ ಎರಡು ದಶಕಗಳ ಕಾಲ ಸಿನಿಮಾ ಮತ್ತು ಸಿನಿಮಾ ನಿರ್ಮಾಣವನ್ನು ಸೂಕ್ಷ್ಮವಾಗಿ ಗಮನಿಸಿದೆ. ಕಳೆದೆರಡು ವರ್ಷಗಳಿಂದ ಸಿನಿಮಾ ನಿರ್ಮಾಣ, ಕಾಸ್ಟಿಂಗ್, ಸ್ಕ್ರಿಪ್ಟ್ ಡಾಕ್ಟರಿಂಗ್ ಮತ್ತು ಪಬ್ಲಿಸಿಟಿಯ ವಿವಿಧ ಆಯಾಮಗಳನ್ನು ಅವಲೋಕಿಸಿದೆ. ಅದರಂತೆ ಈಗ ಮೌನ ರಾಗದ ಮೂಲಕ ನಿರ್ಮಾಪಕಿಯಾಗಿದ್ದೇನೆ, ಇದು ನಾನು ಪ್ರೀತಿಯಿಂದ ಬರೆದು ನಿರ್ದೇಶಿಸಿರುವ ಕಿರುಚಿತ್ರ’ ಎನ್ನುತ್ತಾರೆ.