ಸಿದ್ದು ಪೂರ್ಣಚಂದ್ರ ನಿರ್ದೇಶನದ ‘ತಾರಿಣಿ’ ಸಿನಿಮಾ ರಾಜಸ್ಥಾನ್ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಡಾ ಸುರೇಶ್ ಕೋಟ್ಯಾನ್ ನಿರ್ಮಾಣದ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಮಮತಾ ರಾಹುತ್ ನಟಿಸಿದ್ದಾರೆ.
ಮಮತಾ ರಾಹುತ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ತಾರಿಣಿ’ ಸಿನಿಮಾ ರಾಜಸ್ಥಾನ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ಗೆ ಆಯ್ಕೆಯಾಗಿದೆ. ವಿಭಿನ್ನ ಸಿನಿಮಾಗಳ ಮೂಲಕ ಮನ್ನಣೆ ಗಳಿಸಿರುವ ಸಿದ್ದು ಪೂರ್ಣಚಂದ್ರ ನಿರ್ದೇಶನದ ಚಿತ್ರವಿದು. ಕಳೆದ ವರ್ಷ ಸಿದ್ದು ಪೂರ್ಣಚಂದ್ರ ನಿರ್ದೇಶನದ ‘ದಾರಿ ಯಾವುದಯ್ಯ ವೈಕುಂಠಕೆ’ ಸಿನಿಮಾ ಹತ್ತಾರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಹಲವು ಪ್ರಶಸ್ತಿಗಳನ್ನು ಗಳಿಸಿತ್ತು. ಇದೀಗ ಅವರು ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ‘ತಾರಿಣಿ’ ಸಿನಿಮಾ ಜನವರಿಯಲ್ಲಿ ನಡೆಯಲಿರುವ ರಾಜಸ್ಥಾನ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.
‘ಭ್ರೂಣ ಹತ್ಯೆ ಕುರಿತು ಒಂದೊಳ್ಳೆಯ ಸಾಮಾಜಿಕ ಸಂದೇಶ ನಮ್ಮ ಚಿತ್ರದಲ್ಲಿದೆ. ಚಿತ್ರೋತ್ಸವದ ಮೂಲಕ ನಾವು ದೊಡ್ಡ ಪ್ರೇಕ್ಷಕರ ವರ್ಗವನ್ನು ತಲುಪುತ್ತಿದ್ದೇವೆ. ಈ ಮೂಲಕ ಚಿತ್ರದ ಆಶಯ ಜನಸಮುದಾಯಕ್ಕೆ ತಲುಪಲಿದೆ. ದೇಶದ ವಿವಿಧ ಭಾಗಗಳಿಂದ ಬರುವ ಚಿತ್ರಪ್ರೇಮಿಗಳು ನಮ್ಮ ಚಿತ್ರವನ್ನು ಕಣ್ತುಂಬಿಕೊಳ್ಳಲಿದ್ದಾರೆ’ ಎನ್ನುತ್ತಾರೆ ನಿರ್ದೇಶಕ ಸಿದ್ದು ಪೂರ್ಣಚಂದ್ರ. ಶ್ರೀ ಗಜನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಡಾ ಸುರೇಶ್ ಕೋಟ್ಯಾನ್ ಚಿತ್ರ ನಿರ್ಮಿಸಿದ್ದಾರೆ. ನಿರ್ಮಾಣದ ಜೊತೆ ಒಂದು ಮುಖ್ಯಪಾತ್ರದಲ್ಲೂ ಅಭಿನಯಿಸಿದ್ದಾರೆ. ಗರ್ಭಿಣಿ ಮಹಿಳೆ ಕುರಿತಾದ ಕಥಾ ಸಾರಾಂಶ ಚಿತ್ರದ್ದು. ನಾಯಕಿ ಮಮತಾ ರಾಹುತ್ ಗರ್ಭಿಣಿಯಾಗಿದ್ದಾಗಲೇ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು ಎನ್ನುವುದು ವಿಶೇಷ. ಮಮತಾ ರಾಹುತ್ ಅವರ ಹಸುಗೂಸಿನ ದೃಶ್ಯಗಳೂ ಚಿತ್ರದಲ್ಲಿವೆ. ‘ಈಗಾಗಲೇ ಅನೇಕ ಚಿತ್ರೋತ್ಸವಗಳಿಗೂ ಚಿತ್ರವನ್ನು ಕಳುಹಿಸಲಾಗಿದೆ. ನಮ್ಮ ಚಿತ್ರಕ್ಕೆ ಮನ್ನಣೆ ಸಿಗುವ ವಿಶ್ವಾಸವಿದೆ’ ಎನ್ನುತ್ತಾರೆ ನಿರ್ಮಾಪಕ ಡಾ ಸುರೇಶ್ ಕೋಟ್ಯಾನ್.