ಲೀಲಮ್ಮ ತಪ್ಪು ಮಾಡಿದ್ದು ಹೌದಾದರೂ ಅವಳು ಸೊಸೆಯನ್ನು ಪ್ರೀತಿಸಿದ್ದು ನಾಟಕವಲ್ಲ. ಅಂಜುವೂ ಅಷ್ಟೆ. ಹಾಗಾಗಿಯೇ ಆ ಮಗುವಿಗೆ ಪುಟ್ಟ ಉಡುಗೊರೆ ಕೊಡುತ್ತಾಳೆ ಲೀಲಮ್ಮ. ಕಡೆಯ ದಿನ ಸಂಸ್ಕಾರದ ನಂತರ ಮತ್ತೆ ಮರಳದಂತೆ ಲಗೇಜು ತುಂಬಿ ಹೊರಡುತ್ತಾಳೆ ಅಂಜು. Amazon Primeನಲ್ಲಿ ಸ್ಟ್ರೀಮ್ ಆಗುತ್ತಿದೆ ಮಲಯಾಳಂ ಸಿನಿಮಾ ‘ಉಲ್ಲೋಝುಕ್ಕು’.
ಮನೆಯಲ್ಲಿ ವಯಸ್ಸಾದ, ಸೊಸೆಯನ್ನು ಮಗಳಿಗಿಂತ ಹೆಚ್ಚಾಗಿ ಪ್ರೀತಿಸೋ ಅತ್ತೆ. ಅವಳು ಟೀ ಸಹ ಮಾಡಬೇಕಿಲ್ಲ. ಕೆಲಸಕ್ಕೆ ಹೋಗಲು ತಡವಾಯ್ತೆಂದು ಅವಳು ತಿಂಡಿ ತಿನ್ನದೇ ಹೊರಟರೆ, ಒಂದೇ ಒಂದು ದೋಸೆ ತಿಂದು ಹೋಗು ಮಗು ಅಂತ ಒತ್ತಾಯಿಸುವ ಅತ್ತೆ. ಗಂಡನೂ ಒಳ್ಳೆಯವನು, ಹಸುವಿನಂತವನು. ಆದರೆ ಅವನಿಗೆ ಈಗ ಏನೋ ಖಾಯಿಲೆ. ಅತ್ತೆಯ ಆಸ್ತಿಪಾಸ್ತಿ ಎಲ್ಲಾ ಇವಳದೇ. ಇಂತಹ ಸ್ಥಿತಿಯಲ್ಲಿ ಅವಳು ಕೆಲಸಕ್ಕೆಂದು ಸಿಟಿಗೆ ಹೋದವಳು ತನ್ನ ಹಿಂದಿನ ಪ್ರೇಮಿಯನ್ನು ಭೇಟಿ ಮಾಡುತ್ತಾಳೆ. ಬಸುರಿ ಬೇರೆ ಆಗಿಬಿಡುತ್ತಾಳೆ. ಮನೆ ಬಿಟ್ಟು ಓಡಿಹೋಗುವ ಪ್ಲಾನ್ ಅವಳದು. ಪಾಪ ಆದರೆ… ಅಷ್ಟರಲ್ಲಿ ಗಂಡ ತೀರಿಹೋಗುತ್ತಾನೆ. ಮಳೆಯೋ ಮಳೆ. ಮನೆಯೇ ಅರ್ಧ ಮುಳುಗಿದೆ. ಅಮ್ಮನಿಗೆ ಮಗನ ಶವವನ್ನು ತನ್ನ ಜಾಗದಲ್ಲೆ ಹೂಳಬೇಕೆಂಬ ಆಸೆ. ಅದಕ್ಕಾಗಿ ಶವವನ್ನು ಶವಾಗಾರದಲ್ಲಿಟ್ಟು ಕಾಯುತ್ತಾರೆ. ಅಂಜುವಿಗೆ ಬೇಗ ಬೇಗ ಇದೆಲ್ಲ ಮುಗಿದರೆ ತಾನು ಹೊರಡಬಹುದು ಎಂಬ ಆತುರ. ಆದರೆ ಮಳೆ ನಿಲ್ಲಲೊಲ್ಲದು. ಮಳೆ ನಿಲ್ಲುವುದಕ್ಕಾಗಿ ಆ ಕಾಯುವ ಬೆರಳೆಣಿಕೆಯ ದಿನಗಳಲ್ಲೇ ಪಾತ್ರಗಳು ಅದಲುಬದಲಾಗತೊಡಗುತ್ತವೆ.
ಅಂಥ ಅತ್ತೆ, ಅಂಥ ಗಂಡನಿಗೆ ಮೋಸ ಮಾಡುತ್ತಿರುವ ಅಂಜು ಎಂತಹ ಮೋಸಗಾತಿ ಅನಿಸುತ್ತದೆ ನೋಡುವಾಗ. ಆದರೆ ಅತ್ತೆ ಲೀಲಮ್ಮ ಅಂದುಕೊಂಡಷ್ಟು ಮುಗ್ದೆಯಲ್ಲ. ಅಂಜು, ರಾಜೀವರನ್ನು ಅವರಪ್ಪ ಬಲವಂತವಾಗಿ, ಜಾತಿಕಾರಣಕ್ಕೆ ಬೇರೆ ಮಾಡಿದ್ದಾನೆ. ಅದು ಅಂಜುವಿಗೆ ಅಪ್ಪ ಮಾಡಿದ ಮೋಸವಾದರೆ, ಮಗನಿಗೆ ರೋಗವೆಂದು ಗೊತ್ತಿದ್ದೂ ಅಂಜುವನ್ನು ಅವನಿಗೆ ಮದುವೆ ಮಾಡಿಕೊಳ್ಳೋದು ಲೀಲಮ್ಮನ ಸ್ವಾರ್ಥ. ಅಕಸ್ಮಾತ್ ನೋಡಿದ ರಿಪೋರ್ಟ್‌ಗಳಿಂದಾಗಿ ಅಂಜುವಿಗೆ ಇದು ಗೊತ್ತಾಗುತ್ತದೆ. ಮನೆ ತುಂಬಾ ಜನರಿದ್ದರೂ, ಅತ್ತೆ ಸೊಸೆ ನಡುವೆ ಏನೋ ಒಳಕುಸಿತ. ಕಡೆಗೂ ಲೀಲಮ್ಮ ಸೊಸೆಯನ್ನು ಕರೆದು ಮಾತಾಡುತ್ತಾಳೆ. ಅದಾಗಲೇ ಅವಳು ಗರ್ಭಿಣಿ ಅಂತ ಗೊತ್ತಾಗಿ ಮಗು ತನ್ನ ಮಗನದೆಂದು ಕುಣಿದಾಡಿದ್ದ ಲೀಲಮ್ಮ, ಈಗ ಅದು ಯಾರದೆಂದು ಕೇಳುತ್ತಾಳೆ. ಅಂಜು ಸತ್ಯ ಒಪ್ಪಿ ಮೊದಲಿಗೆ ತಪ್ಪಿತಸ್ಥೆಯಾಗಿ ನರಳುತ್ತಾಳೆ. ಆದರೆ ಯಾವಾಗ ಲೀಲಮ್ಮನ ಮೋಸ ಗೊತ್ತಾಯ್ತೋ ಅವಳೂ ತಿರುಗಿ ಬೀಳ್ತಾಳೆ. ಕಡೆಗೆ ಅಪ್ಪ, ಅಮ್ಮ, ಅತ್ತೆ ಎಲ್ಲರಿಗೂ ಛೀಮಾರಿ ಹಾಕಿ, ಈ ಕಾರ್ಯ ಮುಗಿದ ಮೇಲೆ ತನ್ನ ದಾರಿ ತನ್ನದು ಅನ್ನುತ್ತಾಳೆ.
ಲೀಲಮ್ಮ ತಪ್ಪು ಮಾಡಿದ್ದು ಹೌದಾದರೂ ಅವಳು ಸೊಸೆಯನ್ನು ಪ್ರೀತಿಸಿದ್ದು ನಾಟಕವಲ್ಲ. ಅಂಜುವೂ ಅಷ್ಟೆ. ಹಾಗಾಗಿಯೇ ಆ ಮಗುವಿಗೆ ಪುಟ್ಟ ಉಡುಗೊರೆ ಕೊಡುತ್ತಾಳೆ ಲೀಲಮ್ಮ. ಕಡೆಯ ದಿನ ಸಂಸ್ಕಾರದ ನಂತರ ಮತ್ತೆ ಮರಳದಂತೆ ಲಗೇಜು ತುಂಬಿ ಹೊರಡುತ್ತಾಳೆ ಅಂಜು. ಎಲ್ಲ ಮುಗಿಯುತ್ತದೆ. ಅಲ್ಲಿ ಕಾದಿದ್ದ ಪ್ರೇಮಿಯ ಬಳಿ ಹೋದಾಗ ಯಾವುದೋ ಚಿಕ್ಕ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಳ್ಳಲು ಬೇರೇನಾದರೂ ಮಾಡೋ, ಅದಕ್ಕಾಗಿ ಲೀಲಮ್ಮನ ಆಸ್ತಿ ಅಂಜುವಿಗೆ ಬಂದರೆ ಸಹಾಯವಾಗುತ್ತದೆಂದು ಯೋಚಿಸ್ತಿರೋ ಅವನು, ಅವಳು ಬೈಕಿನ ಹತ್ತಿರ ಬಂದ ಕೂಡಲೇ ಅವನು ಮೊದಲು ಕೇಳೋ ಪ್ರಶ್ನೆ ಆಸ್ತಿಯ ವಿಚಾರ. ಆಗ ಅಂಜು ತೆಗೆದುಕೊಳ್ಳೋ ನಿರ್ಧಾರವಿದೆಯಲ್ಲ ಅದು ಸಿನಿಮಾದ ಸೊಗಸು. ಈ ಸಿನಿಮಾದ ಹೆಸರು ಉಲ್ಲೋಝುಕ್ಕು. ಪ್ರೈಂನಲ್ಲಿದೆ. ಅತ್ತೆ ಸೊಸೆಯಾಗಿ ಅಭಿನಯಿಸಿರೋ ಊರ್ವಶಿ ಮತ್ತು ಪಾರ್ವತಿ ತಿರುವೊತ್ತು ರೋಲ್ ರಿವರ್ಸಿನ ತಳಮಳಗಳನ್ನು ಸೊಗಸಾಗಿ ದಾಟಿಸಿದ್ದಾರೆ.