ಮಕ್ಕಳು ತಮ್ಮಂತೆ ಆಗಬಾರದು ಎಂದು ಬಯಸುವ ಹೆತ್ತವರು ಅವರ ಮೇಲೆ ಇಡುವ ಅಗಾಧ ನಿರೀಕ್ಷೆಗಳು ಮಕ್ಕಳ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎನ್ನುವುದು ‘ವಾಳಾ’ ಕತೆ. ‘ಜಯಜಯ ಜಯಹೇ’, ‘ಗುರುವಾಯೂರ್ ಅಂಬಲನಡಯಿಲ್’ ಹಿಟ್ ಚಿತ್ರಗಳ ನಿರ್ದೇಶಕ ವಿಪಿನ್ ದಾಸ್ ಚಿತ್ರಕಥೆ ಇರುವ ಈ ಸಿನಿಮಾದ ನಿರ್ದೇಶನ ಆನಂದ್ ಮೆನನ್ ಅವರದು. ‘ವಾಳಾ’ ಮಲಯಾಳಂ ಸಿನಿಮಾ Disneyplus Hotstarನಲ್ಲಿ ಸ್ಟ್ರೀಮ್ ಆಗುತ್ತಿದೆ.
ಮಲಯಾಳಂನಲ್ಲಿ ಬಾಳೆ ಎಂದರೆ ಬಾಳೆ ಗಿಡ. ಬಾಳೆಕಾಯಿ, ನಾರು, ದಿಂಡು ಎಲ್ಲವೂ ಉಪಯುಕ್ತವಾಗಿರು ಸಸ್ಯ ಬಾಳೆ. ಆದರೆ ಮಲಯಾಳಿಗರು useless fellow ಅಥವಾ ಉಂಡಾಡಿ ಗುಂಡ ಎಂದು ಯಾರಿಗಾದರೂ ಹೇಳಬೇಕೆಂದರೆ ‘ವಾಳ’ ಅಂತಾರೆ. ಇದೊಂದು ನ್ಯೂ ಜನರೇಷನ್ ವ್ಯಂಗ್ಯ ಪದ. ಹೊಸಬರಾದ ಆನಂದ್ ಮೆನನ್ ಅವರ ಆ ‘ವಾಳ’, ಗೆಳೆಯರ ಗುಂಪೊಂದರ ಕತೆ ಹೇಳುತ್ತದೆ. ಯುವ ಪೀಳಿಗೆಯೊಂದರ ಸಂಭ್ರಮಾಚರಣೆ ಮತ್ತು ಆತಂಕಗಳನ್ನು ಹೇಳುವ ಈ ಸಿನಿಮಾ ಗೆಳೆಯರ ಸ್ನೇಹ ಸಂಬಂಧಕ್ಕೆ ಹೆಚ್ಚು ಒತ್ತು ಕೊಟ್ಟರೂ ಹೆತ್ತವರ ಆತಂಕ ಮತ್ತು ಒತ್ತಡಗಳನ್ನು ಅದೇ ರೀತಿಯಲ್ಲಿ ಮುಂದಿಡುತ್ತದೆ.
2K ಮಕ್ಕಳ ಬದುಕಿನ ಚಿತ್ರ ಇದಾದರೂ 90ರ ದಶಕದ ಮಕ್ಕಳು ನೆನಪಿಸಿಕೊಳ್ಳುವ ಹಲವಾರು ಭಾವನಾತ್ಮಕ ಕ್ಷಣಗಳು ಇಲ್ಲಿವೆ. ಹೊಸ ಪೀಳಿಗೆಯ ಅನನುಭವಿ ಯುವಕರನ್ನೇ ಕಟ್ಟಿಕೊಂಡು ಮಾಡಿದ ಈ ಚಿತ್ರದಲ್ಲಿ ಅನುಭವಿ ಹಿರಿಯ ತಾರೆಯರನ್ನು ಹೆತ್ತವರ ಪಾತ್ರಕ್ಕೆ ಆಯ್ಕೆ ಮಾಡಿರುವುದು ಎರಡೂ ಜನರೇಷನ್ ಜನರನ್ನು ಆಕರ್ಷಿಸುತ್ತದೆ. ತಮ್ಮ ಇಚ್ಛೆಗೆ ತಕ್ಕಂತೆ ಮಕ್ಕಳನ್ನು ಬೆಳೆಸುವ ಪೋಷಕರು, ಅವರ ನಿರೀಕ್ಷೆಗೆ ತಕ್ಕಂತೆ ಬದುಕಲು ಸಾಧ್ಯವಾಗದ ಮಕ್ಕಳು, ಅವರು ಮಾಡುವ ತುಂಟಾಟ, ಗಲಾಟೆಯಲ್ಲೇ ಸಿನಿಮಾ ಶುರುವಾಗುತ್ತದೆ. ಮಧ್ಯಂತರದವರೆಗೂ ಕಾಮಿಡಿ ಟ್ರ್ಯಾಕ್‌ನೊಂದಿಗೆ ಚಿತ್ರ ಸಾಗುತ್ತದೆ. ದ್ವಿತೀಯಾರ್ಧದ ಆರಂಭದಲ್ಲಿ, ಚಿತ್ರವು ಭಾವನಾತ್ಮಕವಾಗುತ್ತದೆ. ಇದು ನಾಟಕೀಯವಾಗುತ್ತದೆ ಎಂದು ಪ್ರೇಕ್ಷಕರಿಗೆ ಅನಿಸತೊಡಗುವ ಹೊತ್ತಲ್ಲೇ ಸಿನಿಮಾ ಕಾಮಿಡಿಗೆ ಹೊರಳುತ್ತದೆ.
ಸಿಜು ಸನ್ನಿ, ಅಮಿತ್ ಮೋಹನ್ ರಾಜೇಶ್ವರಿ, ಜೋಮೋನ್ ಜ್ಯೋತಿರ್, ಹಶೀರ್ ಅನುರಾಜ್, ಶ್ರುತಿ ಮಣಿಕಂಠನ್, ಝಿಯಾ ವಿನ್ಸೆಂಟ್, ಮೀನಾಕ್ಷಿ ಉನ್ನಿಕೃಷ್ಣನ್, ಪ್ರಿಯಾ ಶ್ರೀಜಿತ್ ಮತ್ತು ಸಾಫ್ ಬ್ರೋಸ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಯುವ ನಟರು ಹಾಸ್ಯ ದೃಶ್ಯಗಳಲ್ಲಿ ಅಬ್ಬರಿಸಿದರೆ, ಹಿರಿಯ ನಟರಾದ ಜಗದೀಶ್, ಕೋಟ್ಟಯಂ ನಸೀರ್, ಅಜೀಜ್ ನೆಡುಮಂಙಾಡ್, ನೋಬಿ ಮಾರ್ಕೋಸ್, ಜಿಬಿನ್ ಗೋಪಿನಾಥ್ ಭಾವುಕ ದೃಶ್ಯಗಳಲ್ಲಿ ತಮ್ಮ ಅಮೋಘ ಅಭಿನಯದಿಂದ ಪ್ರೇಕ್ಷಕರ ಕಣ್ಣು ಒದ್ದೆ ಮಾಡುತ್ತಾರೆ. ಚಿತ್ರದಲ್ಲಿ ಹಿರಿಯ ನಟರು ಇದ್ದರೂ ಇನ್‌ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್‌ಗಳು ತಾವೂ ನಟನೆಯಲ್ಲಿ ಹಿಂದುಳಿದಿಲ್ಲ ಎಂದು ತೋರಿಸಿದ್ದಾರೆ.
‘ಬಯೋಪಿಕ್ ಆಫ್ ಎ ಬಿಲಿಯನ್ ಬಾಯ್ಸ್’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಬಿಡುಗಡೆಯಾದ ಈ ಚಿತ್ರವು ಅಕ್ಷರಶಃ ಉಂಡಾಡಿಗುಂಡರ ವೈಭವೀಕರಣವಾಗಿದೆ. ಸ್ಥಳೀಯರಿಗೆ ಮತ್ತು ಕುಟುಂಬಕ್ಕೆ ನಿರಂತರ ತಲೆನೋವಾಗಿರುವ ಈ ಹುಡುಗರ ಗುಂಪಿನ ಕಿತಾಪತಿಯ ಕತೆಯನ್ನು ಹಾಸ್ಯದ ಜೊತೆಯಲ್ಲಿ ಪ್ರಸ್ತುತಪಡಿಸಲಾಗಿದೆ. ಅವರ ಗ್ಯಾಂಗ್ ಮಾಡುವ ಎಲ್ಲಾ ಕಿಡಿಗೇಡಿತನಗಳನ್ನು ಸಮರ್ಥಿಸುವ ಹಾಸ್ಯವು ಕೆಲವೊಮ್ಮೆ ಕಿರಿಕಿರಿ ಉಂಟುಮಾಡುತ್ತದೆಯಾದರೂ ಚಿತ್ರದಲ್ಲಿ ಸಾಕಷ್ಟು ನಗುವ ಕ್ಷಣಗಳಿವೆ. ‘ಜಯಜಯ ಜಯಹೇ’ ಮತ್ತು ‘ಗುರುವಾಯೂರ್ ಅಂಬಲನಡಯಿಲ್’ ಹಿಟ್ ಚಿತ್ರಗಳ ನಿರ್ದೇಶಕ ವಿಪಿನ್ ದಾಸ್ ಅವರೇ ಇದರ ಚಿತ್ರಕಥೆ ಬರೆದಿರುವುದು. ಆನಂದ್ ಮೆನನ್ ನಿರ್ದೇಶನದ ಈ ಚಿತ್ರದಲ್ಲಿ ಅರವಿಂದ್ ಪುದುಶ್ಶೇರಿ ಸಿನಿಮಾಟೊಗ್ರಫಿ ಇದೆ.
ಮಕ್ಕಳು ತಮ್ಮಂತೆ ಆಗಬಾರದು ಎಂದು ಬಯಸುವ ಹೆತ್ತವರು ಅವರ ಮೇಲೆ ಇಡುವ ಅಗಾಧ ನಿರೀಕ್ಷೆಗಳು ಮಕ್ಕಳ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದನ್ನು ತೋರಿಸುವ ಕತೆಯನ್ನು ಇದು ಹೊಂದಿದ್ದರೂ, ಇದ್ಯಾವುದನ್ನೂ ತಲೆಗೆ ಹಾಕಿಕೊಳ್ಳದೆ ಬಿಂದಾಸ್ ಆಗಿರುವ ಹುಡುಗರ ಬದುಕೇ ಇಲ್ಲಿನ ಹೈಲೈಟ್. ಇತ್ತ ಕಲಿಯುವ ಹುಡುಗ ತನ್ನ ಅಪ್ಪ ಹೇಳಿದಂತೆ ಎಲ್ಲವನ್ನೂ ಪಾಲಿಸಿ ಕಾಲೇಜಿನಲ್ಲಿ ಉತ್ತಮ ಅಂಕ ಗಳಿಸಿ ವಿದೇಶದಲ್ಲಿ ಕೆಲಸ ಗಿಟ್ಟಿಸಿ, ತಾನು ಪ್ರೀತಿಸಿದ ಹುಡುಗಿಯನ್ನೇ ಮದುವೆಯೂ ಆಗುತ್ತಾನೆ. ಒಂದು ಮಗುವಾದ ಮೇಲೆ ಇಬ್ಬರ ನಡುವೆ ಹೊಂದಾಣಿಕೆ ಇಲ್ಲ ಎಂದು ಅವರ ದಾಂಪತ್ಯ ಮುರಿದು ಬೀಳುತ್ತದೆ. ಎಲ್ಲವೂ ಇದ್ದರೂ ಸಂಬಂಧಗಳನ್ನು ಉಳಿಸಿಕೊಂಡು ಹೋಗಲು ಸಾಧ್ಯವಾಗದ ಯುವಕನ ಕತೆ ಒಂದೆಡೆಯಾದರೆ, ಯಾವ ಹುಡುಗಿಯೂ ತಮ್ಮತ್ತ ನೋಡುವುದಿಲ್ಲ ಎಂದು ರೋಧಿಸುವ ಹುಡುಗರನ್ನೂ ಇಲ್ಲಿ ಕಾಣಬಹುದು.
ಒಟ್ಟಿನಲ್ಲಿ ಯಾವುದೇ ತಲೆಬಿಸಿಯಿಲ್ಲದೆ, ಸರಿಯಾಗಿ ಕಲಿಯದೇ ಮಜಾ ಮಾಡುವ ಗೆಳೆಯರ ಗುಂಪೊಂದು ಇಂಜಿನಿಯರಿಂಗ್ ಸೇರಿ ಅಲ್ಲೂ ಒಂದಷ್ಟು ಕಿತಾಪತಿಗಳನ್ನು ಮಾಡುತ್ತದೆ. ಶಿಕ್ಷಕರಿಂದಲೂ, ಹೆತ್ತವರಿಂದಲೂ ಬೈಯಿಸಿಕೊಂಡು ಕೊನೆಗೆ ಅತ್ತ ಡಿಗ್ರಿಯೂ ಪಡೆಯದೆ, ಕೆಲಸವಿಲ್ಲದೆ ಪರದಾಡುತ್ತಾರೆ. ಕೊನೆಗೆ ಈ ಹುಡುಗರ ಅಪ್ಪನೇ ಮಕ್ಕಳಿಗೆ ಒಂದು ಜೀವನ ಮಾರ್ಗ ಆಗಲಿ ಎಂದು ಬಾಳೆ ಕೃಷಿ ಮಾಡಲು ಅವರಿಗೆ ಜಮೀನು ನೀಡಿ, ಅಲ್ಲಿ ಅವರು ಬಾಳೆ ಕೃಷಿ ಮಾಡುವಲ್ಲಿಗೆ ಸಿನಿಮಾ ಮುಗಿಯುತ್ತದೆ. ಅನನುಭವಿ ನಟರ ಕೆಲವೊಂದು ದೃಶ್ಯಗಳು ಅತಿ ಎಂದು ಅನಿಸಿದರೂ, ಸಿನಿಮಾ ನೋಡಲು ಅಡ್ಡಿಯಿಲ್ಲ. ಈ ಸಿನಿಮಾ Disneyplus Hotstarನಲ್ಲಿ ಸ್ಟ್ರೀಮ್ ಆಗುತ್ತಿದೆ.