ದೇಶದಲ್ಲಿನ ಜನರು ಮನೆಯಲ್ಲೇ ಹೆಚ್ಚಿನ ಸಮಯ ಕಳೆಯುವುದು ಸದ್ಯಕ್ಕೆ ಅನಿವಾರ್ಯ ಅನ್ನುವಂಥ ಪರಿಸ್ಥಿತಿ ಸೃಷ್ಟಿಯಾಗಿದೆ. ಹೀಗಿರುವಾಗ ಮನೆಯಲ್ಲೇ ಕುಳಿತ ಜನರು ತಮ್ಮ ಮನರಂಜನೆಗಾಗಿ ಹಲವಾರು ಮಾಧ್ಯಮಗಳ ಮೊರೆ ಹೋಗುತ್ತಾರೆ. ಇದು, ಎರಡು ರೀತಿಯ ಬೆಳವಣಿಗೆಗಳಿಗೆ ಕಾರಣವಾಗಿದೆ. ಮೊದಲನೆಯದು Digital ದಾರಿಯಲ್ಲಿ ನೇರವಾಗಿ ವೀಕ್ಷಕರನ್ನು ತಲುಪುವ OTT ವೇದಿಕೆಗಳಿಗೆ ಹೆಚ್ಚು ಬೇಡಿಕೆ ವ್ಯಕ್ತವಾಗಿದೆ. ಎರಡನೆಯ ಮತ್ತು ಅನಗತ್ಯವಾಗಿರುವ ಬೆಳವಣಿಗೆ ಏನು ಅಂದ್ರೆ Piracy ಹಾವಳಿ ಹೆಚ್ಚಾಗಿರುವುದು. ಮೊದಲನೆಯದು ಕಾನೂನು ಬದ್ಧ ವೀಕ್ಷಣೆ, ಆದರೆ, Piracy ಎಂದು ಕರೆಯಲ್ಪಡುವ ಎರಡನೆಯದು ಕಾನೂನು ಬಾಹಿರ.

Piracy ಅಂದ್ರೇನು?

Copyright ಅರ್ಥಾತ್ ಕೃತಿ ಸ್ವಾಮ್ಯದ ಹಕ್ಕುಗಳನ್ನು ಹೊಂದಿರುವ ಸಿನೆಮಾಗಳು, ಮತ್ತಿತರೆ ಮನರಂಜನಾ ವಿಡಿಯೋಗಳನ್ನು ಅಕ್ರಮ ಮಾರ್ಗಗಳಲ್ಲಿ ನಕಲು ಮಾಡಿ ನೋಡುವುದು ಮತ್ತು ಇತರರಿಗೆ ಉಚಿತವಾಗಿ ಅಥವ ಕಡಿಮೆ ಹಣಕ್ಕೆ ಮಾರುವುದನ್ನು Piracy ಎಂದು ಕರೆಯಲಾಗುತ್ತದೆ.

ಭಾರತದಲ್ಲಿ 90ರ ದಶಕದಿಂದಲೂ Piracy ಹಾವಳಿ ಸಾಕಷ್ಟು ವ್ಯಾಪಕವಾಗಿದೆ. ಹೊಸ ಸಿನೆಮಾ ಬಿಡುಗಡೆಯಾದ ಮೊದಲ ದಿನ, ಮೊದಲ ಶೋ ನಡೆಯುವ ವೇಳೆಯೇ, ಸಿನೆಮಾ ಹಾಲ್ ಗಳಲ್ಲೇ ಅಕ್ರಮವಾಗಿ ಕ್ಯಾಮರಾ ಇರಿಸಿ ಅದನ್ನು VHS ಕ್ಯಾಸೆಟ್ ಗಳಲ್ಲಿ ರೆಕಾರ್ಡ್ ಮಾಡಿ ಮಾರಾಟ ಮಾಡಲಾಗುತ್ತಿತ್ತು. ಈ ರೀತಿ ಅಕ್ರಮವಾಗಿ ದೊರೆಯುತ್ತಿದ್ದ ಸಿನೆಮಾಗಳನ್ನು Camera Print ಎಂದು ಕರೆಯಲಾಗುತ್ತಿತ್ತು.

ಆ ಬಳಿಕ, ತಂತ್ರಜ್ಞಾನ ಕ್ಷೇತ್ರದಲ್ಲಿನ ಪ್ರಗತಿಯ ಕಾರಣದಿಂದ Digital ಕ್ಯಾಮರಾಗಳು, ಮೊಬೈಲ್ ಫೋನ್ ಕ್ಯಾಮರಾಗಳು ಬಂದವು.  ಅವನ್ನು ಬಳಸಿ ಹೊಸ ಸಿನೆಮಾದ ಮೊದಲ ಶೋ ಮುಗಿದು, ಪ್ರೇಕ್ಷಕರು ಹೊರ ಬರುವಷ್ಟರಲ್ಲೇ ನಕಲಿ ಸಿಡಿಗಳು ತಯಾರಾಗಿಬಿಡುತ್ತಿದ್ದವು.  ವೆಬ್ ಸೈಟ್ ಮತ್ತಿತರ ಮಾರ್ಗಗಳ ಮೂಲಕವೂ ಆ ಸಿನೆಮಾ ಪುಕ್ಕಟ್ಟೆಯಾಗಿ ಎಲ್ಲಾ ಕಡೆ ಸಂಚಾರ ಮಾಡುತ್ತಿತ್ತು.

Piracy ತಡೆಯಲು ಯಾವ ಪ್ರಯತ್ನ ಮಾಡಿದ್ದಾರೆ?

Piracy ಹಾವಳಿ ತಡೆಯಲು ಸಿನೆಮಾ ಮತ್ತು ಮನರಂಜನಾ ಉದ್ಯಮದವರು, ಸರ್ಕಾರಗಳ ಮೇಲೆ ಒತ್ತಡ ಹೇರಿದರು. ಸರ್ಕಾರದವರು ಹಲವಾರು ಕಾನೂನುಗಳನ್ನು ಜಾರಿಗೆ ತಂದು ಸುಮ್ಮನಾದರು. ಆದರೆ, ಇಂಥದ್ದಕ್ಕೆಲ್ಲ ಕಠಿಣ ಶಿಕ್ಷೆಗಳೇನೂ ಇಲ್ಲದ ಕಾರಣ ಮತ್ತು ಸರ್ಕಾರಗಳು ಗಮನ ಕೊಡಬೇಕಾದ ಇತರೆ ವಿಚಾರಗಳು ಸಾಕಷ್ಟಿರುವ ಕಾರಣದಿಂದ Piracyಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಹೀಗಿದ್ದರೂ ಸಿನೆಮಾ ಮತ್ತು ಮ್ಯೂಸಿಕ್ ಇಂಡಸ್ಟ್ರಿಯವರು ತಮ್ಮ ಗಮನಕ್ಕೆ ಬರುವ ಪ್ರಕರಣಗಳನ್ನು ಪೊಲೀಸರಿಗೆ ತಿಳಿಸಿ, ಅಂಥವರ ವಿರುದ್ಧ ದಾಳಿಗಳನ್ನು ನಡೆಸುತ್ತಿರುತ್ತಾರೆ.

ನಕಲಿ ಕ್ಯಾಸೆಟ್ ಗಳ ಮೂಲಕ ಮಾತ್ರವಲ್ಲದೆ, ಇನ್ನೂ ಹಲವಾರು ಮಾರ್ಗಗಳಲ್ಲಿ  Piracy ಮಾಡಲಾಗುತ್ತದೆ. ಮನೆಗಳಲ್ಲಷ್ಟೇ ನೋಡಲು ಅನುಮತಿ ಇರುವ ಸಿನೆಮಾದ ವಿಡಿಯೋ ಕ್ಯಾಸೆಟ್ ಗಳನ್ನು, Cable Network ಮೂಲಕ ಪ್ರಸಾರ ಮಾಡುವುದೂ ಕೂಡ ಪೈರೆಸಿ ಮತ್ತು ಅಪರಾಧ.

ಇದಲ್ಲದೆ ಭಾರತದ ಜನಪ್ರಿಯ ಸಿನೆಮಾಗಳ ಪ್ರದರ್ಶನಕ್ಕಾಗಿ ವಿದೇಶಗಳಿಗೆ ಕಳಿಸಿದಾಗ, ಅಲ್ಲೂ ಕೂಡ ಅನಧಿಕೃತವಾಗಿ ಅವುಗಳ DVD/VCD ಗಳನ್ನು ತಯಾರಿಸಿ, ಅವನ್ನು ತೀರಾ ಕಡಿಮೆ ಬೆಲೆಗೆ ಪಾಕಿಸ್ತಾನ ಮತ್ತು ನೇಪಾಳ ದೇಶಗಳಲ್ಲಿ ಮಾರಲಾಗುತ್ತದೆ. ಹಣ ಖರ್ಚು ಮಾಡಿ ಸಿನೆಮಾ ತಯಾರಿಸಿದವನು ನಷ್ಟ ಅನುಭವಿಸಿದರೂ ಕೂಡ, ಕಳ್ಳ ಮಾರ್ಗದಲ್ಲಿ ನಕಲಿ ಕ್ಯಾಸೆಟ್ ಮಾರಿದವರು ಹಣ ಮಾಡಿಕೊಳ್ಳುತ್ತಾರೆ.

OTT ಮೂಲಕ Streaming ಆಗುವ Content ಕೂಡ Piracy ಆಗುತ್ತಾ?

ಇತ್ತೀಚಿನ ವರ್ಷಗಳಲ್ಲಿ Digital ಮಾರ್ಗದಲ್ಲಿ ನೇರವಾಗಿ ವೀಕ್ಷಕರನ್ನು ತಲುಪುವ OTT ವೇದಿಕೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅವು ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗುತ್ತಿವೆ ಮತ್ತು ಲಕ್ಷಾಂತರ ಚಂದಾದಾರರನ್ನೂ ಪಡೆದುಕೊಳ್ಳುತ್ತಿವೆ.

ಆದರೆ, ಇದೇ ಸಮಯದಲ್ಲಿ Piracyಯ ಪ್ರಮಾಣವೂ ಹೆಚ್ಚಾಗುತ್ತಿದೆ. ಒಂದು ವರದಿ ಪ್ರಕಾರ ಇದೇ ವರ್ಷ ಫೆಬ್ರವರಿ ತಿಂಗಳ ಕಡೆಯ ವಾರಕ್ಕೆ ಹೋಲಿಸಿದಲ್ಲಿ, ಮಾರ್ಚ್ ತಿಂಗಳ ಕಡೆಯ ವಾರದಲ್ಲಿ, Online Cinema Piracy ಶೇ 62ರಷ್ಟು ಹೆಚ್ಚಳವಾಗಿದೆ. ಇತ್ತೀಚಿನ ದಿನಗಳಲ್ಲಿ Telegram ಮತ್ತು Heloನಂಥ ಸಂದೇಶ ತಾಣಗಳ ಮೂಲಕವೇ ಕಳ್ಳ ರೀತಿಯಲ್ಲಿ ನಕಲು ಮಾಡಿದ ಅಥವ ಪೈರೇಟೆಡ್ ಸಿನೆಮಾಗಳನ್ನು ಹಂಚಿಕೊಳ್ಳಲಾಗುತ್ತಿದೆ. Netflix ನವರು ಪ್ರಸಾರ ಮಾಡುವ Money Heist, Breathe, Bulbbul ನಂಥ ಕಾರ್ಯಕ್ರಮಗಳೂ ಕೂಡ ಅಕ್ರಮವಾಗಿ Telegram app ನಲ್ಲಿ ಉಚಿತವಾಗಿ ಸಿಗುತ್ತವಂತೆ. ಇದಲ್ಲದೆ, OTT ವೇದಿಕೆಗಳಲ್ಲಿರುವ ಸಿನೆಮಾಗಳನ್ನು ಕಂಪ್ಯೂಟರ್ ಮೂಲಕ ವೀಕ್ಷಿಸುವಾಗ Webrip ಮಾಡುವಂಥ software ಬಳಸಿಯೂ ನಕಲು ಮಾಡಲಾಗುತ್ತದೆ. ಒಂದು ಮಾಹಿತಿಯ ಅನುಸಾರ, ಇವತ್ತು ಭಾರತದಲ್ಲಿ ವೀಕ್ಷಿಸಲ್ಪಡುವ ಸಿನೆಮಾ ಮತ್ತಿತರ ವಿಡಿಯೋಗಳಲ್ಲಿ ಶೇ40 ರಷ್ಟು ಭಾಗ ಪೈರೇಟೆಡ್ ಅಥವ ಅಕ್ರಮವಾಗಿದೆಯಂತೆ.

ಬಹುತೇಕ ಭಾರತೀಯರು ಪುಕ್ಕಟೆ ಸಿನೆಮಾ ನೋಡುವುದಕ್ಕೆ ಹೆಚ್ಚು ಉತ್ಸಾಹ ತೋರಿಸುತ್ತಾರೆ. ಅವರಿಗೆ ಸಿನೆಮಾ ಫ್ರೀ ಆಗಿ ಸಿಕ್ಕರೆ ಸಾಕು, ತಮ್ಮ ಕಂಪ್ಯೂಟರ್ ಅಥವ ಮೊಬೈಲ್ ಫೋನ್ ನೊಳಕ್ಕೆ malware ನುಸುಳಿಕೊಂಡು, ಎಲ್ಲ ಮಾಹಿತಿಯನ್ನೂ ಹಾಳುಮಾಡಬಹುದು ಎಂಬ ಭಯವೇ ಇಲ್ಲ.

ಹೀಗಾಗಿ, torrent websites ಎಂದು ಕರೆಯಲ್ಪಡುವ Stremio, Popcorn Time, 123Movies ಮತ್ತು Tamil Rockers ರೀತಿಯ Websiteಗಳ ಮೂಲಕವೂ ಸಿನೆಮಾಗಳನ್ನು Free ಆಗಿ Download ಮಾಡಿಕೊಂಡು ನೋಡುವವರ ಸಂಖ್ಯೆಯೂ ಸಾಕಷ್ಟಿದೆ.

ತಮ್ಮ ಸಿನೆಮಾವನ್ನು ಜನರಿಗೆ ತಲುಪಿಸಲು ಹೆಚ್ಚು ಹೆಚ್ಚು ನಿರ್ಮಾಪಕರು OTTಗಳ ಕಡೆ ಮುಖಮಾಡುತ್ತಿರುವ ಇಂದಿನ ದಿನಗಳಲ್ಲಿ, ಕಳ್ಳತನದ ಮೂಲಕ ಸಿನೆಮಾಗಳನ್ನು ನಕಲು ಮಾಡಿ, ನೋಡುವ ಹಾಗೂ ಹಂಚಿಕೆ ಮಾಡುವ ವ್ಯವಹಾರಗಳು ಹೆಚ್ಚಾಗುತ್ತಿವೆ. ಇದರಿಂದ, ಒಂದು ಸಿನೆಮಾ ನಿಜವಾಗಿಯೂ ಎಷ್ಟರ ಮಟ್ಟಿಗೆ ಜನಪ್ರಿಯವಾಯಿತು ಅನ್ನುವುದೇ ತಿಳಿಯದ ಕಾರಣ, ಸಿನೆಮಾ ತಯಾರಕರು ಮತ್ತಷ್ಟು ನಷ್ಟ ಅನುಭವಿಸಬೇಕಾಗಿ ಬರುತ್ತದೆ. ಏಕೆಂದರೆ, ಜನಪ್ರಿಯ ಅನ್ನಿಸಿಕೊಂಡ ಸಿನೆಮಾಗಳ ಟಿವಿ ಪ್ರಸಾರ ಹಕ್ಕುಗಳು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತವೆ. ಕೆಲವೊಮ್ಮೆ ಅನಧಿಕೃತ ಮಾರ್ಗದಲ್ಲಿ ಹೆಚ್ಚು ಜನರು ನೋಡಿದ್ದರೂ ಕೂಡ, ಆ ಸಿನೆಮಾದ ನಿರ್ಮಾಪಕನಿಗೆ ಯಾವುದೇ ಲಾಭ ಆಗುವುದಿಲ್ಲ.

Piracyಯಿಂದ ದೇಶದ ಆರ್ಥಿಕತೆಗೂ ಪೆಟ್ಟು.

ಸಿನೆಮಾ ಮತ್ತು ಮನರಂಜನಾ ವಲಯದ ಡಿಜಿಟಲ್ ವೇದಿಕೆಗಳಿಗೆ ಸುರಕ್ಷತೆ ಒದಗಿಸುವ Irdeto (Global solutions provider in digital platform security and media and entertainment)ಎನ್ನುವ ಸಂಸ್ಥೆಯ ಪ್ರಕಾರ, ಪ್ರತಿವರ್ಷ ಭಾರತದ ಸಿನೆಮಾ ಮತ್ತು ಮನರಂಜನಾ ವಲಯ ತನ್ನ ವಾರ್ಷಿಕ ಆದಾಯದ ಭಾಗವಾಗಬೇಕಿದ್ದ ಸುಮಾರು 280 ಕೋಟಿ ಡಾಲರ್ ($2.8 billion) ಹಣವನ್ನು Piracy ಕಾರಣದಿಂದಾಗಿ ಕಳೆದುಕೊಳ್ಳುತ್ತಿದೆಯಂತೆ. ಇಷ್ಟೊಂದು ದೊಡ್ಡ ಮಟ್ಟದ ಹಣ ನಷ್ಟವಾಗುವುದು ನಿಜವಾಗಿಯೂ ಸಿನೆಮಾ ಉದ್ಯಮಕ್ಕೆ ಮಾತ್ರವಲ್ಲದೆ ಭಾರತದ ಆರ್ಥಿಕತೆಗೂ ಆಘಾತಕಾರಿ ಅನ್ನಿಸುವ ವಿಚಾರ.

OTT ವೀಕ್ಷಕರು ಹೆಚ್ಚುತ್ತಿರುವ ಸನ್ನಿವೇಶದಲ್ಲಿ Piracyಗೆ ಕಡಿವಾಣ ಸಾಧ್ಯವೇ?

ಸದ್ಯಕ್ಕೆ ಭಾರತದಲ್ಲಿ 30ಕ್ಕೂ ಹೆಚ್ಚು Video streaming ವೇದಿಕೆಗಳಿದ್ದು, ಒಬ್ಬನೇ ವ್ಯಕ್ತಿ ಅವೆಲ್ಲವಕ್ಕೂ  Subscription ಪಡೆಯುವುದು ಕಷ್ಟ. ಯಾವಾಗ ತಮಗೆ ಬೇಕಾಗಿರುವುದೆಲ್ಲವೂ ಒಂದೇ ವೇದಿಕೆಯಲ್ಲಿ ಸಿಗುವುದಿಲ್ಲವೋ ಅಂಥ ಸಂದರ್ಭದಲ್ಲೂ ಕೂಡ ಜನರು, ಅದು ಕದ್ದ ಮಾಲಾಗಿದ್ದರೂ ಪರವಾಗಿಲ್ಲ ಉಚಿತವಾಗಿ ಸಿಕ್ಕರೆ ನೋಡುತ್ತೇವೆ ಅನ್ನುವಂಥ ಧೋರಣೆ ಅನುಸರಿಸುತ್ತಾರೆ.

ಸರಿ, ಹೀಗಿದ್ದರೆ, ಇಷ್ಟೊಂದು ವ್ಯಾಪಕವಾಗಿರುವ Piracy ತಡೆಯಲು ಹೊಸದಾಗಿ ಸಿನೆಮಾ ಮತ್ತು ಮನರಂಜನಾ ವಲಯ ಪ್ರವೇಶಿಸಿರುವ OTT ವೇದಿಕೆಗಳು ಏನು ಮಾಡುತ್ತಿವೆ? ಪೈರೆಸಿ ತಡೆಯಲು ಬೇರೆ ಯಾವುದೇ ಮಾರ್ಗವೂ ಇಲ್ಲವೇ? ಎಂದು ಕೇಳಿದರೆ ಹೌದು, ಇದೆ ಎಂದೇ ಹೇಳಬೇಕು.

OTT ವೇದಿಕೆಗಳು DRM (Digital Rights Management) ಅನ್ನುವ software ಬಳಸಿ, ತಮ್ಮಲ್ಲಿರುವ ಸಿನೆಮಾಗಳು ನಕಲು ಮಾಡಲ್ಪಡುವುದನ್ನು, ಕದಿಯುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿವೆ. ಆದರೆ, ಈ ರೀತಿಯ software ಭಾರಿ ವೆಚ್ಚದ್ದಾಗಿರುತ್ತದೆ. ಇದರಲ್ಲಿ, ವಿಡಿಯೋಗಳನ್ನು encrypt ಮಾಡಿ ಅಂದರೆ ಸಂಕೇತಗಳಾಗಿ ಪರಿವರ್ತಿಸಿ ಸಂಗ್ರಹಿಸಲಾಗುತ್ತದೆ ಮತ್ತು ಪ್ರಸಾರ ಮಾಡಲಾಗುತ್ತದೆ. Premium ಅನ್ನಿಸುವ ಮಟ್ಟದ Contentಅನ್ನು ಕಾಪಾಡಿಕೊಳ್ಳಲು ಮಾತ್ರ DRM ವ್ಯವಸ್ಥೆ ಬಳಸಲಾಗುತ್ತದೆ.  ಆದರೆ, DRM ಕೂಡ Foolproof ಅನ್ನುವಂಥದ್ದೇನೂ ಅಲ್ಲ. ಅದನ್ನೂ ಯಾಮಾರಿಸುವ ಕಿಲಾಡಿಗಳು ನಮ್ಮ ಜಗತ್ತಿನಲ್ಲಿದ್ದಾರೆ. ಹೀಗಾಗಿ, ನೂರಕ್ಕೆ ನೂರಷ್ಟು ಭಾಗ Piracyಯನ್ನು ತಪ್ಪಿಸಿಯೇ ಬಿಡುತ್ತೇವೆ ಎಂದು ಹೇಳಲು ಯಾರಿಂದಲೂ ಸಾಧ್ಯವಿಲ್ಲ.

ನಕಲಿ ಮಾಲು ಗುಣಮಟ್ಟ ಡಲ್ಲು

ಇಷ್ಟಾದರೂ ಕೂಡ, ಒಂದು ಸಮಾಧಾನದ ವಿಚಾರವೇನೆಂದರೆ, webrip  ಅಥವ ಇತರೆ Pirated ಮಾರ್ಗಗಳಲ್ಲಿ ದೊರೆಯುವ ಸಿನೆಮಾದಲ್ಲಿನ ಧ್ವನಿ ಮತ್ತು ಚಿತ್ರಗಳ ಗುಣಮಟ್ಟ ಕಳಪೆ ಆಗಿರುತ್ತದೆ. ಅವುಗಳು, HD ವಿಡಿಯೋವನ್ನಾಗಲಿ ಅಥವ Dolby ಗುಣಮಟ್ಟದ ಆಡಿಯೋವನ್ನಾಗಲಿ ಹೊಂದಿರುವುದಿಲ್ಲ. ಅಲ್ಲಿ ಸಿಗುವ Video Resolution  720p ಗಿಂತ ತುಂಬಾ ಕಡಿಮೆ ಇರುತ್ತದೆ ಮತ್ತು 5.1ch ಅಂದ್ರೆ six-channel Surround Sound ಆಡಿಯೋ ಕೂಡ ಇರುವುದಿಲ್ಲ. ಕೇವಲ ಚಂದಾದಾರರಿಗೆ ಮಾತ್ರ ಇಂಥ ವಿಶೇಷತೆಗಳಿರುವ ಉತ್ತಮ ಗುಣಮಟ್ಟದ ತಾಂತ್ರಿಕತೆ  ಮತ್ತು ಸುಖಾನುಭವ ಸಿಗುತ್ತದೆ.

ಈ ಮೇಲಿನ ಅಂಶಗಳು piracy ಮತ್ತು ಕಳ್ಳತನದ ವಿರುದ್ಧವಾಗಿ ಮತ್ತು OTTಗಳ

ಪರವಾಗಿ ಕೆಲಸ ಮಾಡುತ್ತವೆ.

ಹೀಗಾಗಿ, ಕಳಪೆ ಗುಣಮಟ್ಟದ ವಿಡಿಯೋಗಳನ್ನು ನೋಡಿ ಬೇಸರ ಅನುಭವಿಸುವ ಜನರಾದರೂ ಕೂಡ, ಸಾಕಷ್ಟು ಕಡಿಮೆ ಹಣಕ್ಕೆ ಸಿಗುವ OTT ವೇದಿಕೆಗಳ ಚಂದಾದಾರರಾಗುವ ಸಾಧ್ಯತೆ ಇದೆ. ಇದರ ಜೊತೆಗೆ, ಭಾರತದಲ್ಲಿ ಸೇವೆ ಒದಗಿಸುತ್ತಿರುವ ಬಹುತೇಕ OTT ವೇದಿಕೆಗಳ ಚಂದಾ ದರವೂ ಅತ್ಯಂತ ಆಕರ್ಷಣೀಯವಾಗಿದೆ.  ಪ್ರತಿ ತಿಂಗಳಿಗೆ, ಕೇವಲ 36 ರೂ.ಗಳಿಂದ 99 ರೂಪಾಯಿಗಳ ಹಣ ನೀಡುವ ಮೂಲಕ ವೀಕ್ಷಕರು ಗುಣಮಟ್ಟದ ಮನರಂಜನೆ ಪಡೆಯಲು ಸಾಧ್ಯ. ದೇಶದಲ್ಲಿ ಇಂಟರ್ ನೆಟ್ ದರವೂ ಕೂಡ ಕೈಗೆಟುಕುವ ಮಟ್ಟದಲ್ಲೇ ಇದೆ. ಹೀಗಾಗಿ, ಕಳ್ಳತನದ ಮಾರ್ಗದಲ್ಲಿ ಸಿಕ್ಕರೂ ಕೂಡ, ಹಿತ ಅನ್ನಿಸದೇ ಇರುವುದಕ್ಕಿಂತ ನೇರ ಮಾರ್ಗವೇ ಹೆಚ್ಚು ಸೂಕ್ತ ಅನ್ನುವ ವೀಕ್ಷಕರ ಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಾಗಬಹುದು.

LEAVE A REPLY

Connect with

Please enter your comment!
Please enter your name here