ತಮ್ಮ ಸುತ್ತಮುತ್ತಲಿನ ಸಂಪನ್ಮೂಲಗಳನ್ನು ಬಳಸಿಕೊಂಡೇ ಕತೆ ಹೆಣೆಯುವುದರಲ್ಲಿ ಮಲಯಾಳಂ ಸಿನಿಮಾ ಮಂದಿ ನಿಸ್ಸೀಮರು. ಈ ವರ್ಷ ಮಲಯಾಳಂನಲ್ಲಿ ತೆರೆಕಂಡ ಸಿನಿಮಾಗಳಲ್ಲಿ ಹೆಚ್ಚಿನವು ಥ್ರಿಲ್ಲರ್ ಆಗಿದ್ದವು. ಈ ಪೈಕಿ ಟಾಪ್ 10 ಥ್ರಿಲ್ಲರ್ ಸಿನಿಮಾಗಳ ಪಟ್ಟಿ ಇಲ್ಲಿದೆ
2024ರಲ್ಲಿ ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆಯುವಲ್ಲಿ ಮಲಯಾಳಂ ಸಿನಿಮಾಗಳು ಯಶಸ್ವಿಯಾಗಿವೆ ಎಂದೇ ಹೇಳಬಹುದು. ಪ್ರಕೃತಿ ಸೌಂದರ್ಯವನ್ನು ಅದ್ಬುತವಾಗಿ ತೋರಿಸುವ ಕ್ಯಾಮೆರಾ ವರ್ಕ್, ಉತ್ತಮ ನಿರೂಪಣೆ ಹಾಗೂ ನೆಲದ ಕತೆಗಳನ್ನು ಹೇಳುವಲ್ಲಿ ಮಲಯಾಳಂ ಸಿನಿಮಾದ್ದು ಎತ್ತಿದ ಕೈ. ತಮ್ಮ ಸುತ್ತಮುತ್ತಲಿನ ಸಂಪನ್ಮೂಲಗಳನ್ನು ಬಳಸಿಕೊಂಡೇ ಕತೆ ಹೆಣೆಯುವುದರಲ್ಲಿ ಇವರು ನಿಸ್ಸೀಮರು. ಈ ವರ್ಷ ಮಲಯಾಳಂನಲ್ಲಿ ತೆರೆಕಂಡ ಸಿನಿಮಾಗಳಲ್ಲಿ ಹೆಚ್ಚಿನವು ಥ್ರಿಲ್ಲರ್ ಆಗಿದ್ದವು. ಈ ಪೈಕಿ ಟಾಪ್ 10 ಥ್ರಿಲ್ಲರ್ ಸಿನಿಮಾಗಳು ಇವು
ಸೂಕ್ಷ್ಮದರ್ಶಿನಿ ಉತ್ತಮ ಚಿತ್ರಕಥೆ ಮತ್ತು ಆಕರ್ಷಕ ನಿರೂಪಣೆಯಿಂದ ಪ್ರೇಕ್ಷಕರನ್ನು ಆಕರ್ಷಿಸಿದ ಅದ್ಭುತ ಥ್ರಿಲ್ಲರ್ ಸೂಕ್ಷ್ಮದರ್ಶಿನಿ, ಸಸ್ಪೆನ್ಸ್ ಮತ್ತು ಕುತೂಹಲದಿಂದ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿದ ಸಿನಿಮಾ ಇದು. ಸಂದೇಹದ ಕಣ್ಣುಗಳಿಗೆ ಎಲ್ಲವೂ ಅನುಮಾನಾಸ್ಪದವಾಗಿಯೇ ಕಾಣಿಸುತ್ತದೆ. ಅಂಥದ್ದೇ ಗುಣ ಇರುವ ಹೆಣ್ಣು ಪ್ರಿಯದರ್ಶಿನಿ. ಈಕೆ ಮೈಕ್ರೋಬಯಾಲಜಿ ಪದವೀಧರೆ. ಅಂದ ಮೇಲೆ ಮೈಕ್ರೋಸ್ಕೋಪ್ ಆಕೆಯ ಬದುಕಿನ ಭಾಗವೇ ಆಗಿರುತ್ತದೆ. ಸೂಕ್ಷ್ಮ ಜೀವಿಗಳ ಮೇಲೆ ಕಣ್ಣಿಡುವ ಬದಲು ಈಕೆ ನೆರೆಹೊರೆಯವರ ಮೇಲೆಯೇ ಜಾಸ್ತಿ ಕುತೂಹಲ ಹೊಂದಿರುತ್ತಾಳೆ. ಈಕೆಯ ನಡವಳಿಕೆ, ಈಕೆಯ ಹುಡುಕಾಟಗಳ ಸುತ್ತಲೂ ಸುತ್ತುವ ಕತೆಯೇ ಸೂಕ್ಷ್ಮದರ್ಶಿನಿ. ಎಂ.ಸಿ. ಜಿತಿನ್ ನಿರ್ದೇಶಿಸಿದ ಈ ಸಿನಿಮಾದಲ್ಲಿ ನಸ್ರಿಯಾ ನಜೀಮ್ ಮತ್ತು ಬೇಸಿಲ್ ಜೋಸೆಫ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಅಜಯನ್‍ಡೆ ರಂಡಾಂ ಮೋಷಣಂ (ARM) ಸುಜಿತ್ ನಂಬಿಯಾರ್ ಕತೆ, ದೀಪು ಪ್ರದೀಪ್ ಚಿತ್ರಕತೆ, ಜಿತಿನ್ ಲಾಲ್ ನಿರ್ದೇಶನದ ಅಜಯನ್‍ಡೆ ರಂಡಾಂ ಮೋಷಣಂ (ARM), ಮೂರು ಪೀಳಿಗೆಗಳ ಕತೆಯನ್ನು ಹೇಳುತ್ತದೆ. ನಟ ಟೊವಿನೊ ಥಾಮಸ್ ಅಜ್ಜ, ಅಪ್ಪ ಹಾಗೂ ಮಗನಾಗಿ ತ್ರಿವಳಿ ಪಾತ್ರದಲ್ಲಿ ಪ್ರೇಕ್ಷಕರನ್ನು ಬೆರಗುಗೊಳಿಸುತ್ತಾರೆ. ಸೆಪ್ಟೆಂಬರ್ 12 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ARM ಉತ್ತಮ ಪ್ರದರ್ಶನ ಕಂಡಿದ್ದು ಗಳಿಕೆಯಲ್ಲಿ100 ಕೋಟಿ ಬಾಚಿದೆ.
ಕಿಷ್ಕಿಂಧಾ ಕಾಂಡಂ ದಿನ್ಜಿತ್ ಅಯ್ಯತ್ತನ್ ನಿರ್ದೇಶಿಸಿದ ಸೈಕಲಾಜಿಕಲ್ ಥ್ರಿಲ್ಲರ್ ಕಿಷ್ಕಿಂದಾ ಕಾಂಡಂ. 7 ಕೋಟಿ ಬಜೆಟ್‌ನಲ್ಲಿ ನಿರ್ಮಿಸಿದ ಈ ಸಿನಿಮಾ ಎರಡು ತಿಂಗಳ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ 70 ಕೋಟಿ ಗಳಿಸಿದೆ. ಆಸಿಫ್ ಅಲಿ, ಅಪರ್ಣಾ ಬಾಲಮುರಳಿ, ವಿಜಯರಾಘವನ್ ಮತ್ತು ಜಗದೀಶ್ ತಾರಾಗಣದಲ್ಲಿರುವ ಈ ಸಿನಿಮಾ ಈ ವರ್ಷ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳಲ್ಲೊಂದಾಗಿದೆ.
ಬೋಗನ್‌ವಿಲ್ಲಾ ಅಮಲ್ ನೀರದ್ ನಿರ್ದೇಶನದ ಬೋಗನ್ ವಿಲ್ಲಾ ಸೈಕಾಲಾಜಿಕಲ್ ಥ್ರಿಲ್ಲರ್ ಸಿನಿಮಾ. ಕೇರಳದಲ್ಲಿ ಪ್ರವಾಸಿಗರ ನಿಗೂಢ ಕಣ್ಮರೆಗೆ ಸಂಬಂಧಿಸಿದ ಪೊಲೀಸ್ ತನಿಖೆಯಲ್ಲಿ ಸಿಲುಕಿರುವ ಕುಟುಂಬದ ಕಥೆಯನ್ನು ಸಿನಿಮಾ ಬಿಚ್ಚಿಡುತ್ತದೆ. ಲಾಜೋ ಜೋಸ್ ಅವರ ಕಾದಂಬರಿ ‘ರುತ್ತಿಂಡೆ ಲೋಕಂ’ ಆಧರಿಸಿ ಈ ಚಿತ್ರದ ಚಿತ್ರಕಥೆಯನ್ನು ಲಾಜೋ ಜೋಸ್ ಮತ್ತು ಅಮಲ್ ನೀರದ್ ಜತೆಯಾಗಿ ಬರೆದಿದ್ದಾರೆ. ಸಸ್ಪೆನ್ಸ್ ಮತ್ತು ಕುತೂಹಲದಿಂದ ಕೂಡಿದ ಈ ಸಿನಿಮಾ ಉತ್ತಮ ನಿರೂಪಣೆಯನ್ನು ಹೊಂದಿದೆ.
ಲೆವೆಲ್ ಕ್ರಾಸ್ ವಿವಾಹಿತ ಮಹಿಳೆ ಮತ್ತು ಬಂಡಾಯಗಾರನೊಬ್ಬ ಭೇಟಿಯಾಗುವ ಕತೆಯನ್ನು ಹೊಂದಿರುವ ಕುತೂಹಲಕಾರಿ ಥ್ರಿಲ್ಲರ್ ಇದು. ಇವರಿಬ್ಬರ ಪ್ರಯಾಣವು ತೆರೆದುಕೊಳ್ಳುತ್ತಿದ್ದಂತೆ, ಅವರು ಜೀವನದ ದೃಷ್ಟಿಕೋನವನ್ನು ಪರಿವರ್ತಿಸುವ ಅನಿರೀಕ್ಷಿತ ಹೋಲಿಕೆಗಳು ಇವರಲ್ಲಿ ಕಂಡು ಬರುತ್ತದೆ. ಅಮಲಾ ಪಾಲ್ ಮತ್ತು ಶರಫ್ ಉ ಧೀನ್ ಅವರನ್ನು ಪ್ರಮುಖ ಪಾತ್ರಗಳಲ್ಲಿರುವ ಈ ಸಿನಿಮಾವನ್ನು ಅರ್ಫಾಜ್ ಅಯೂಬ್ ನಿರ್ದೇಶಿಸಿದ್ದಾರೆ.
ಭ್ರಮಯುಗಂ ರಾಹುಲ್ ಸದಾಶಿವನ್ ರಚನೆ, ನಿರ್ದೇಶಿಸಿದ ಹಾರರ್ ಫ್ಯಾಂಟಸಿ ಡ್ರಾಮಾ ಭ್ರಮಯುಗಂ. ಮಮ್ಮುಟ್ಟಿಯನ್ನು ನಕಾರಾತ್ಮಕ ಪಾತ್ರದಲ್ಲಿ ತೋರಿಸಿದ ಸಿನಿಮಾ ಇದು. ಕುತೂಹಲಕಾರಿ ನಿರೂಪಣೆಯೊಂದಿಗೆ ಅಲೌಕಿಕ ಅಂಶಗಳನ್ನು ಸಂಯೋಜಿಸುವ ಈ ಚಿತ್ರವು ವೀಕ್ಷಕರನ್ನು ಉಸಿರುಬಿಗಿಹಿಡಿದು ನೋಡುವಂತೆ ಮಾಡುತ್ತದೆ.
ತಲವನ್ ಜಿಸ್ ಜಾಯ್ ನಿರ್ದೇಶಿಸಿದ ತಲವನ್ ಉತ್ತಮ ನಿರೂಪಣೆಯಿಂದ ಗಮನ ಸೆಳೆದಿತ್ತು. ಇಬ್ಬರು ಪೊಲೀಸ್ ಅಧಿಕಾರಿಗಳ ಸುತ್ತ ಸುತ್ತುವ ಈ ಕತೆಯಲ್ಲಿ ಒಬ್ಬ ಕೊಲೆ ತನಿಖೆಯಲ್ಲಿ ಪ್ರಮುಖ ಶಂಕಿತನಾಗಿ ಭಾಗಿಯಾಗಿದ್ದಾನೆ. ಬಿಜು ಮೆನನ್ ಮತ್ತು ಆಸಿಫ್ ಅಲಿ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದು ಇವರಿಬ್ಬರು ಸಿನಿಮಾವನ್ನು ಮುನ್ನಡೆಸುತ್ತಾರೆ. ರಮ್ಯಾ ಪಾತ್ರದಲ್ಲಿ ಅನುಶ್ರೀ ಮತ್ತು ಜಯಶಂಕರ್ ಅವರ ಪತ್ನಿಯಾಗಿ ಮಿಯಾ ಜಾರ್ಜ್ ಅವರ ಅಭಿನಯ ಮೆಚ್ಚುವಂಥದ್ದು .
ಮಂಞುಮ್ಮಲ್ ಬಾಯ್ಸ್ ಚಿದಂಬರಂ ನಿರ್ದೇಶನದ ಮಂಞುಮ್ಮಲ್ ಬಾಯ್ಸ್, ಅದ್ಭುತ ತಾರಾಗಣವನ್ನು ಹೊಂದಿದ್ದು, ಈ ವರ್ಷದ ಮೂರನೇ ಬ್ಲಾಕ್‌ಬಸ್ಟರ್ ಆಗಿತ್ತು. 2006ರಲ್ಲಿ ನಡೆದ ನೈಜ ಕತೆಯನ್ನು ಆಧರಿಸಿದ ಸಿನಿಮಾ ಇದು. ಕೊಚ್ಚಿಯಲ್ಲಿ ವಾಸಿಸುತ್ತಿದ್ದ ಗೆಳೆಯರ ಗುಂಪೊಂದು ಕೊಡೈಕನಾಲ್‌ಗೆ ಪ್ರವಾಸ ಹೋಗಿ, ಅಲ್ಲಿನ ಗುಣಾ ಕೇವ್ (ಗುಹೆ)ಯೊಳಗೆ ಅವರ ಗುಂಪಲ್ಲಿದ್ದ ಯುವಕ ಬಿದ್ದು, ಆತನನ್ನು ಅತಿ ಸಾಹಸವಾಗಿ ರಕ್ಷಿಸುವ ಕತೆಯನ್ನು ಹೊಂದಿರುವ ಸಿನಿಮಾ ಇದು. ಗೆಳೆಯರ ಬೇಜವಾಬ್ದಾರಿ ಜತೆಗೆ ಸ್ನೇಹದ ಕತೆ ಹೇಳುವ ಈ ಸಿನಿಮಾದ ಕ್ಲೈಮಾಕ್ಸ್ ಪ್ರೇಕ್ಷಕರನ್ನು ತುದಿಗಾಲಿನಲ್ಲಿ. ನಿಲ್ಲಿಸಿ ಆಮೇಲೆ ನಿಟ್ಟುಸಿರುಬಿಡುವಂತೆ ಮಾಡಿತ್ತು.
ಗೋಲಂ ಕಾರ್ಪೊರೇಟ್ ಸಂಸ್ಥೆಯ ಕಚೇರಿಯೊಳಗೆ ನಡೆಯುವ ಕೊಲೆಯನ್ನು ತನಿಖೆ ಮಾಡುವ ಪೊಲೀಸ್ ಅಧಿಕಾರಿಯ ಕತೆ ಹೇಳುವ ಸಿನಿಮಾ ಗೋಲಂ. ಅಧಿಕಾರಿಗೆ ಹಲವಾರು ಸಂಬಂಧವಿಲ್ಲದ ಸುಳಿವುಗಳನ್ನು ನೀಡಿದಾಗ, ಅವನು ತನ್ನ ತನಿಖೆಯ ಉದ್ದಕ್ಕೂ ಅವುಗಳನ್ನು ಒಂದು ಒಗಟಿನಂತೆ ಒಟ್ಟಿಗೆ ಸೇರಿಸಲು ಪ್ರಾರಂಭಿಸುತ್ತಾನೆ. ಪ್ರವೀಣ್ ವಿಶ್ವನಾಥ್ ಅವರೊಂದಿಗೆ ಚಿತ್ರಕಥೆ ಬರೆದಿರುವ ಸಮ್ಜಾದ್ ಪಿಎಸ್ ನಿರ್ದೇಶನದ ಈ ಚಿತ್ರದಲ್ಲಿ ರಂಜಿತ್ ಸಜೀವ್, ದಿಲೀಶ್ ಪೋಥನ್, ಸಿದ್ದಿಕ್, ಸನ್ನಿ ವೇಯ್ನ್, ಚಿನ್ನು ಚಾಂದಿನಿ ಮತ್ತು ಅಲೆನ್ಸಿಯರ್ ಲೇ ಲೋಪೆಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಅನ್ವೇಷಿಪ್ಪಿನ್ ಕಂಡೆತ್ತುಂ ಡಾರ್ವಿನ್ ಕುರಿಯಾಕೋಸ್ ಅವರ ನಿರ್ದೇಶನದ ಚೊಚ್ಚಲ ಚಿತ್ರ ಅನ್ವೇಷಿಪ್ಪಿನ್ ಕಂಡೆತ್ತುಂ ಒಂದು ಕ್ರೈಂ ಥ್ರಿಲ್ಲರ್ ಆಗಿದ್ದು, ಟೋವಿನೋ ಥಾಮಸ್, ಆಧ್ಯ ಪ್ರಸಾದ್, ವಿಜಯಕುಮಾರ್, ಸಿದ್ದಿಕ್, ಇಂದ್ರನ್ಸ್ ತಾರಾಗಣದಲ್ಲಿದ್ದಾರೆ. ಕೇರಳದಲ್ಲಿನ ನೈಜ ಘಟನೆಗಳಿಂದ ಪ್ರೇರಿತವಾದ ಈ ಚಿತ್ರವು ತನ್ನ ಹಿಡಿತದ ಕಥಾಹಂದರದಲ್ಲಿ ಕಾಲ್ಪನಿಕ ಅಂಶಗಳನ್ನು ಹೆಣೆಯುತ್ತಾ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸುವ ನಿರೂಪಣೆಯನ್ನು ಹೊಂದಿದೆ.