ಹೆಚ್ಚಿನ ಗಾಂಭಿರ್ಯವಿಲ್ಲದ ಕತೆಯಿದ್ದು ಕೊಂಚ ನಗಿಸುವ ಸಿನಿಮಾವನ್ನು ಈ ವಾರಾಂತ್ಯದಲ್ಲಿ ನೋಡಬೇಕು ಅನಿಸಿದರೆ ’36 ಫಾರ್ಮ್‌ಹೌಸ್’ ನೋಡಬಹುದು. ನೇರವಾಗಿ ಒಟಿಟಿ ಪರದೆಗೆ ಬಂದ ಈ ಹಿಂದಿ ಸಿನಿಮಾ ಶುಕ್ರವಾರದಿಂದ Z EE5ನಲ್ಲಿ ಸ್ಟ್ರೀಂ ಆಗುತ್ತಿದೆ.
ಹೀರೋ, ಖಳ್‌ನಾಯಕ್, ಪರ್‌ದೇಸ್‌ನಂತಹ ಸಿನಿಮಾಗಳನ್ನು ಕೊಟ್ಟ ಸುಭಾಷ್ ಘಾಯ್ ಇದೀಗ ಒಟಿಟಿ ಪ್ರಪಂಚಕ್ಕೆ ಕಾಲಿಟ್ಟಿದ್ದಾರೆ. ‘ಕೆಲವರು ಅಗತ್ಯಕ್ಕಾಗಿ ಕಳ್ಳತನ ಮಾಡುತ್ತಾರೆ, ಇನ್ನು ಕೆಲವರು ದುರಾಸೆಗಾಗಿ’ ಎಂಬ ಒಕ್ಕಣೆಯೊಂದಿಗೆ ಆರಂಭವಾಗುವ ’36 ಫಾರ್ಮ್‌ಹೌಸ್’ 2020ರ ಲಾಕ್‌ಡೌನ್, ಕೌಟುಂಬಿಕ ಆಸ್ತಿ ಕಲಹ ಮತ್ತು ಕೊಲೆಯ ಸುತ್ತ ಹೆಣೆಯಲಾದ ಕಾಮಿಡಿ-ಥ್ರಿಲ್ಲರ್. ರಾಷ್ಟ್ರಾದ್ಯಂತ ಲಾಕ್‌ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರು ಅನುಭವಿಸಿದ ಸಂಕಟಗಳನ್ನು ತೆರೆಯ ಮೇಲೆ ತರುವ ಪ್ರಯತ್ನವನ್ನು ಕತೆಗಾರ ಸುಭಾಷ್ ಘಾಯ್ ಮಾಡಿದ್ದಾರೆ. ನಿರ್ದಾಕ್ಷಿಣ್ಯವಾಗಿ ಹೇಳುವುದಾದರೆ ಉದ್ದೇಶಿತ ಪ್ರಯತ್ನದಲ್ಲಿ ಅವರು ಸೋತಿದ್ದಾರೆ.
ಸಿಕ್ಕಿದ ಬಸ್ಸು ಲಾರಿ ಹಿಡಿದು, ಮತ್ತು ಕೆಲವರು ನಡೆದೇ ಮುಂಬೈ ತ್ಯಜಿಸಿ ತಮ್ತಮ್ಮ ಊರೆಡೆಗೆ ಹೊರಟ ಟಿವಿ ವಾರ್ತೆಯ ದೃಶ್ಯಗಳು ಸಿನಿಮಾದ ಆರಂಭದಲ್ಲಿ ತೋರಿಸಲಾಗಿದೆ. ಹೀಗೆ ಮುಂಬೈನ ಬೇರೆಬೇರೆ ಕಡೆಗಳಿಂದ ತಮ್ಮೂರಿಗೆ ಹೊರಟ ಅಪ್ಪ ಜಯಪ್ರಕಾಶ್ (ಸಂಜಯ್ ಮಿಶ್ರಾ) ಮತ್ತು ಮಗ ಹ್ಯಾರಿ (ಅಮೋಲ್ ಪರಾಶರ್) ಪರಸ್ಪರರಿಗೆ ಗೊತ್ತಿಲ್ಲದೆ ಸೇರಿಕೊಳ್ಳುವುದು ಹೊರವಲಯದಲ್ಲಿರುವ ಮುನ್ನೂರು ಎಕರೆಗಳ ಮಧ್ಯದ ಫಾರ್ಮ್‌ಹೌಸಿಗೆ. ವಲಸೆ ಕಾರ್ಮಿಕರ ಕತೆ ಹಾಗೆ ಶುರುವಾಗಿ ವ್ಯಥೆ ಅಲ್ಲಿಗೇ ಸಮಾಪ್ತಿಯಾಗುತ್ತದೆ. ಮುಂದಿನದ್ದು ಆ ಫಾರ್ಮ್ ಹೌಸ್‌ನಲ್ಲಿರುವ ದೊಡ್ಡ ಮನುಷ್ಯರೊಳಗೆ ಬಗೆದಷ್ಟೂ ಹುದುಗಿರುವ ಗೌಪ್ಯತೆಗಳು. ಅದನ್ನು ಸ್ಪಷ್ಟವಾಗಿ ತೋರಿಸುವಲ್ಲಿ ಚಿತ್ರಕತೆ ಗೆದ್ದಿದೆ.
ಫಾರ್ಮ್‌ಹೌಸ್‌ನ ಒಡತಿ ಪದ್ಮಿನಿ ರಾಜ್ ಸಿಂಗ್‌ಗೆ ಸಂಪತ್ತಿಗೆ ಕೊರತೆಯಿಲ್ಲ. ಆದರೆ ತನ್ನ ನಂತರ ಆಸ್ತಿಯೆಲ್ಲ ಯಾರಿಗೆ ಸೇರಬೇಕು ಎಂಬುದರ ಬಗ್ಗೆ ಮೂವರೂ ಮಕ್ಕಳಲ್ಲಿ ಇರುವುದು ಒಡಕು ಮಾತ್ರ. ಆರಂಭಿಕ ಹಂತದಲ್ಲೇ ಈ ವಿಚಾರಕ್ಕಾಗಿ ಆಕೆಯ ಬಳಿ ಹೊಸದೊಂದು ಉಯಿಲು ಬರೆಸಲು ಬಂದ ವಕೀಲರನ್ನು ಹಿರಿಯ ಮಗ ರೌನಕ್ (ವಿಜಯ್ ರಾಜ಼್) ಹೊಡೆದು ಸಾಯಿಸಿ ಬಾವಿಗೆ ತಳ್ಳುತ್ತಾನೆ. ಚಿತ್ರದ ಮಧ್ಯಕ್ಕೆ ಬರುವ ವೇಳೆಗೆ ಪೊಲೀಸರು ಮನೆಯ ಮೇಲೆ ದಾಳಿ ಮಾಡಿ ಬಾವಿಗಿಳಿದು ಹುಡುಕಿದರೂ ಮೃತದೇಹ ಸಿಗದಿರುವುದು ಒಂದು ಟ್ವಿಸ್ಟ್. ಕೊನೆಗೆ ಕೊಲೆಗಾರ ಪತ್ತೆಯಾಗುವುದು ಮತ್ತೊಂದು ಟ್ವಿಸ್ಟ್. ಈ ಎರಡೂ ಟ್ವಿಸ್ಟ್‌ಗಳು ಸಿನಿಮಾವನ್ನು ನಿರೀಕ್ಷಿತ ದಡಕ್ಕೇ ಕೊಂಡೊಯ್ದು ನಿಲ್ಲಿಸುವ ಕಾರಣ ಕತೆಗೆ ಯಾವುದೇ ತಿರುವು ನೀಡುವುದಿಲ್ಲ. ಅಂಥದ್ದೊಂದು ತಿರುವಿನ ಅಗತ್ಯವೂ ಸಿನಿಮಾಕ್ಕೆ ಇರಬೇಕಿತ್ತೆಂದು ಅನಿಸುವುದಿಲ್ಲ.
ಇವುಗಳ ನಡುವೆ ಮಿಂಚುವುದು ಸಂಜಯ್ ಮಿಶ್ರಾ ಅಭಿನಯ. ಒಂದು ಮುಕ್ಕಾಲು ಗಂಟೆಯ ಕತೆಯಲ್ಲಿ ಮೊದಲ ಅರ್ಧಗಂಟೆಯ ಬಹುಭಾಗ ಸಂಜಯ್ ಮಿಶ್ರಾ ಪಾತ್ರವೇ ಎಳೆದೊಯ್ಯುತ್ತದೆ. ನಂತರ ಮತ್ತೂ ಮಜಬೂತಾಗಿ ಎಳೆದೊಯ್ಯಲು ಮಗ ಹ್ಯಾರಿ ಪಾತ್ರವನ್ನು ಯಕಶ್ಚಿತ್ ಎಳೆದೇ ತರಲಾಗಿದೆ. ಆದರೆ ಅಮೋಲ್ ಪರಾಶರ್ ಉತ್ತಮ ಅಭಿನಯದ ತರುವಾಯವೂ ಆತ ಬಂದ ಮೇಲೆ ಸಿನಿಮಾವನ್ನು ಎಳೆದೊಯ್ಯುವ ಬದಲು ಎಳೆದಾಡಿದಂತೆ ಅನಿಸುವುದು ಕತೆಗಾರನ ಸೋಲು. ಸುಭಾಷ್ ಘಾಯ್ ಆಯ್ಕೆ ಮಾಡಿದ ಹಾಸ್ಯದ ವಸ್ತುಗಳನ್ನು ಮೇಲ್ಪದರದಲ್ಲೇ ನೋಡಿ ನಕ್ಕುಬಿಡಬೇಕು. ಸ್ವಲ್ಪ ಆಳಕ್ಕೆ ಹೋದರೆ ಅವು ಹಾಸ್ಯ ಮಾಡಲು ಬಳಸಬಾರದ ವಿಚಾರಗಳೆಂದು ಮನಸ್ಸಿಗೆ ಕಾಣುತ್ತದೆ. ಕಾಮಿಡಿ, ರೊಮ್ಯಾನ್ಸ್, ಕೌಟುಂಬಿಕ ಕಲಹದ ನಡುವೆ ಕೊಲೆ ಆರೋಪಿಯ ಹುಡುಕಾಟ – ಈ ಎಲ್ಲವನ್ನೂ ಒಂದೇ ಏಟಿಗೆ ಹೇಳಹೊರಟದ್ದರಿಂದ ಒಟಿಟಿಗೆ ಬಂದರೂ ಸುಭಾಷ್ ಘಾಯ್ 90ರ ದಶಕದಿಂದ ಆಚೆಗೆ ಬಂದಿಲ್ಲವೆಂದು ಅನಿಸುವುದಂತೂ ಖರೆ.
ಅದಕ್ಕೆ ಮತ್ತಷ್ಟು ಪುಷ್ಟಿ ನೀಡುವುದು ಸ್ವತಃ ಅವರೇ ಬರೆದು ಸಂಗೀತ ನಿರ್ದೇಶನ ಮಾಡಿರುವ ಹಾಡುಗಳು. ಸಂಜಯ್ ಮಿಶ್ರಾ ಅಭಿನಯಿಸಿದ ‘ಬಡೇ ಲೋಗೋಂಕಿ ಬಡೀ ಫಿಕರ್’ ಗೋವಿಂದಾ ಕಾಲವನ್ನು ನೆನಪಿಸಿದರೆ ‘ಮೌಸಮ್ ಭೀ ಏಸಾ ಹೈ, ಮನ್ಝಿಲ್ ಭೀ ಏಸಾ ಹೈ’ ಹಾಡು ಅನಿಲ್ ಕಪೂರ್ ನೆನಪು ತರಿಸುತ್ತದೆ. ಈ ಮೂಲಕ ಬೇರೊಬ್ಬ ಸಂಗೀತ ನಿರ್ದೇಶನಿಗೆ ದುಡ್ಡು ಕೊಡುವುದನ್ನು ನಿರ್ಮಾಪಕರೂ ಆದ ಸುಭಾಷ್ ಘಾಯ್ ಉಳಿಸಿದ್ದಾರೆ. ರಾಮ್ ರಮೇಶ್ ಶರ್ಮಾ ನಿರ್ದೇಶನದಲ್ಲಿ ಮೋಸ ಮಾಡಿಲ್ಲ. ನೋಡಿದ ಮೇಲೆ ಕತೆಯಲ್ಲಿ ಒಂದಷ್ಟು ಕೊರತೆ ಕಾಣುತ್ತದಾದರೂ ಸಂಜಯ್ ಮಿಶ್ರಾ ನಟನೆ ಸಿನಿಮಾವನ್ನು ಅರ್ಧಕ್ಕೇ ನಿಲ್ಲಿಸಲು ಬಿಡುವುದಿಲ್ಲ. ಬೋರು ಹೊಡೆಸುವ ಸನ್ನಿವೇಶಗಳು ಎಲ್ಲಿಯೂ ಇಲ್ಲದ ಕಾರಣ ವಾರಾಂತ್ಯದ ಬಿಡುವಿನಲ್ಲಿ ಟೈಂಪಾಸ್‌ಗೆ ನೋಡಬಹುದಾದ ಸಿನಿಮಾ ’36 ಫಾರ್ಮ್‌ಹೌಸ್’.