ವಿವಿಧ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಈಗ ಮನರಂಜನೆಗಾಗಿ ತರಹೇವಾರಿ ಕಂಟೆಂಟ್‌ ಇದೆ. ನೀವು ಈ ವೀಕೆಂಡ್‌ನಲ್ಲಿ ನೋಡಬಹುದಾದ ಐದು ಅಪರೂಪದ ಸರಣಿ, ಸಿನಿಮಾಗಳು ಇಲ್ಲಿವೆ, ಗಮನಿಸಿ.

ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ಗಳನ್ನು ಫಾಲೋ ಮಾಡುವವರಿಗೆ ಭರಪೂರ ಕಂಟೆಂಟ್‌ ಸಿಗುತ್ತಿದೆ. ಯಾವುದನ್ನು ನೋಡಬೇಕು? ಯಾವ ಜಾನರ್‌? ಹೀಗೆ ಕೆದಕುತ್ತಾ ಹೋದಂತೆ ವಿವಿಧ ಭಾಷೆಗಳ ಸಾಕಷ್ಟು ವೆಬ್‌ ಸರಣಿಗಳು, ನೇರವಾಗಿ ಓಟಿಟಿಯಲ್ಲಿ ಸ್ಟ್ರೀಮ್‌ ಆಗುತ್ತಿರುವ ಸಿನಿಮಾಗಳು ಸಿಗುತ್ತವೆ. ಸೈಕಲಾಜಿಕಲ್‌ ಮತ್ತು ಪ್ಯಾರಾನಾರ್ಮಲ್‌ ಕತೆಯನ್ನು ಇಷ್ಟಪಡುವವರು ‘ಭೂತಕಾಲಂ’ ಮಲಯಾಳಂ ಸಿನಿಮಾ (SonyLIV) ನೋಡಬಹುದು. ನೆಟ್‌ಫ್ಲಿಕ್ಸ್‌ನ ಡಾರ್ಕ್‌ ಕಾಮಿಡಿ ಸರಣಿ ‘ಎ ಸಿಂಫಲ್‌ ಫೇವರ್‌’ ಒಂದೊಳ್ಳೆಯ ಆಯ್ಕೆ. ಐದು ಪುಟ್ಟ ಕತೆಗಳ ‘Unpaused’ ಎರಡನೇ ಸೀಸನ್‌ ಲಾಕ್‌ಡೌನ್‌, ಕೋವಡಿ ದಿನಗಳ ಸುತ್ತ ನಿರೂಪಿಸಿರುವ ಸರಣಿ. ಇನ್ನು ZEE5ನಲ್ಲಿ ಸ್ಟ್ರೀಮ್‌ ಆಗುತ್ತಿರುವ ‘ಕೌನ್‌ ಬನೇಗಿ ಶಿಖರ್‌ವತಿ’ ತಿಳಿಹಾಸ್ಯದ ನಿರೂಪಣೆಯ ಅಪರೂಪದ ಸರಣಿ.

Unpaused: Naya Safar (Amazon prime video)

ಕೋವಿಡ್‌ ದಿನಗಳಲ್ಲಿನ ಜನರ ಸಂಕಷ್ಟಗಳು, ಇವುಗಳಿಂದ ಹೊರಬರಲು ಅವರು ಪಟ್ಟ ಪಡಿಪಾಟಲು, ಲಾಕ್‌ಡೌನ್‌ನಿಂದ ದುರ್ಬಲಗೊಂಡ ಇಲ್ಲವೇ ಬೆಸೆದ ಸಂಬಂಧಗಳು ‘Unpaused: Naya Safar’ ಆಂಥಾಲಜಿಯಲ್ಲಿ ಕಿರುಚಿತ್ರಗಳಾಗಿವೆ. ಖ್ಯಾತ ಚಿತ್ರನಿರ್ದೇಶಕ ನಾಗರಾಜ್‌ ಮಂಜುಲೆ, ‘ಬೇವಕೂಫಿಯಾ’ ಖ್ಯಾತಿಯ ನೂಪುರ್‌ ಆಸ್ತಾನಾ, ‘ಜಸ್ಸಿ ಜೈಸಿ ಕೋಯಿ ನಹೀ’ ಕಿರುತೆರೆ ಶೋಗೆ ಸಂಭಾಷಣೆ ಬರೆದಿದ್ದ ಶಿಖಾ ಮಕಾನ್‌, ‘ಲಿಟ್ಲ್‌ ಥಿಂಗ್ಸ್’‌ ನಿರ್ದೇಶಕ ರುಚಿರ್‌ ಅರುಣ್‌ ಮತ್ತು ‘ದಿ ಗೆಸ್ಟ್‌’ ಕಿರುಚಿತ್ರ ನಿರ್ದೇಶಿಸಿದ್ದ ಅಯ್ಯಪ್ಪ ಕೆ.ಎಂ. ಆಂಥಾಲಜಿಯ ಐವರು ನಿರ್ದೇಶಕರು.
ನಾಗರಾಜ್‌ ಮಂಜುಲೆ ನಿರ್ದೇಶನ ‘ವೈಕುಂಠ್‌’ ಕಿರುಚಿತ್ರದಲ್ಲಿ ಅರ್ಜುನ್‌ ಕರ್ಚೆ ಮತ್ತು ಹನುಮಂತ್‌ ಭಂಡಾರಿ ನಟಿಸಿದ್ದಾರೆ. ಆಸ್ತಾನಾ ನಿರ್ದೇಶಿಸಿರುವ ‘ದಿ ಕಪಲ್‌’ ಕಿರುಚಿತ್ರದಲ್ಲಿ ಶ್ರೇಯಾ ಧನ್ವಂತರಿ ಮತ್ತು ಪ್ರಿಯಾಂನ್ಶು ಪೈನುಲಿ ನಟಿಸಿದ್ದಾರೆ. ಅಯ್ಯಪ್ಪ ಕೆ.ಎಂ. ನಿರ್ದೇಶನದ ‘ವಾರ್‌ ರೂಂ’ನಲ್ಲಿ ಗೀತಾಂಜಲಿ ಕುಲಕರ್ಣಿ, ರಸಿಕಾ ಅಗಾಸೆ, ಪೂರ್ಣಾನಂದ್‌ ಪಾಂಡೇಖರ್‌, ಶಾರ್ವರಿ ದೇಶಪಾಂಡೆ ನಟಿಸಿದ್ದಾರೆ. ರುಚಿರ್‌ ಅರುಣ್‌ ನಿರ್ದೇಶನದ ‘ತೀನ್‌ ತಿಗಡ’ದಲ್ಲಿ ಸಕೀಬ್‌ ಸಲೀಂ, ಆಶಿಷ್‌ ವರ್ಮಾ, ಸ್ಯಾಮ್‌ ಮೋಹನ್‌ ಇದ್ದಾರೆ. ಶಿಖಾ ಮಕಾನ್‌ ನಿರ್ದೇಶನದ ‘ಗೋಂಡ್‌ ಕೆ ಲಡ್ಡು’ ಕಿರುಚಿತ್ರದಲ್ಲಿ ನೀನಾ ಕುಲಕರ್ಣಿ, ದರ್ಶನಾ ರಾಜೇಂದ್ರನ್‌, ಲಕ್ಷವೀರ್‌ ಸಿಂಗ್‌ ಶರಣ್‌ ನಟಿಸಿದ್ದಾರೆ.

ಭೂತಕಾಲಂ (ಮಲಯಾಳಂ ಸಿನಿಮಾ, SonyLIV)

ರಾಹುಲ್‌ ಸದಾಶಿವನ್‌ ನಿರ್ದೇಶನದ ಹಾರರ್‌ – ಥ್ರಿಲ್ಲರ್‌ ‘ಭೂತಕಾಲಂ’ ಮಲಯಾಳಂ ಸಿನಿಮಾದ ಮುಖ್ಯ ಪಾತ್ರಗಳಲ್ಲಿ ರೇವತಿ ಮತ್ತು ಶೈನ್‌ ನಿಗಮ್‌ ನಟಿಸಿದ್ದಾರೆ. ಪ್ರೇತಾತ್ಮದ ಕತೆಯಿದು. ಪದವೀಧರ ಯುವಕ ವಿನು (ಶೈನ್‌ ನಿಗಮ್‌), ಅವನ ತಾಯಿ (ರೇವತಿ) ಮತ್ತು ಆತನ ಅಜ್ಜಿ ಮೂವರೂ ಹಾಂಟೆಂಡ್‌ ಮನೆಯೊಂದರಲ್ಲಿ ಜೀವಿಸುತ್ತಿದ್ದಾರೆ. ನಿದ್ರೆಯಲ್ಲಿದ್ದ ಅಜ್ಜಿ ಇಹಲೋಕ ತ್ಯಜಿಸುತ್ತಿದ್ದಂತೆ ಡಾರ್ಕ್‌ ಸೀಕ್ರೇಟ್‌ಗಳು ಒಂದೊಂದಾಗಿ ತೆರೆದುಕೊಳ್ಳುತ್ತವೆ. ಮನೆಯಲ್ಲಿ ನಡೆಯುವ ಅನೂಹ್ಯ ಘಟನಾವಳಿಗಳನ್ನು ವ್ಯಕ್ತಿಯ ಮಾನಸಿಕ ತೊಳಲಾಟಗಳಿಗೆ ಹೋಲಿಕೆ ಮಾಡುವ ಪ್ರಯೋಗವಿದು.

Yellowjackets (Voot)

ನಾಲ್ವರು ಟೀನೇಜರ್‌ಗಳ ಸುತ್ತ ನಡೆಯುವ ಸೈಕಾಲಾಜಿಕಲ್‌ ಡ್ರಾಮಾ ಸರಣಿ. ಸೋಫಿಯಾ ನೆಲಿಸ್‌, ಜಾಸ್ಮಿನ್‌ ಸ್ಯಾವೋ ಬ್ರೌನ್‌, ಸೋಫಿ ಥ್ಯಾಚರ್‌, ಸ್ಯಾಮಿ ಹ್ಯಾನ್‌ರಟಿ ವಿಮಾನ ದುರಂತದಲ್ಲಿ ಬದುಕುಳಿದವರು. 25 ವರ್ಷಗಳ ನಂತರ ಅವರು ತಾವು ಈ ಆಕಸ್ಮಿಕದಲ್ಲಿ ಪಾರಾಗಿದ್ದು ಹೇಗೆಂದು ರಿವೀಲ್‌ ಮಾಡುತ್ತಾ ಹೋಗುತ್ತಾರೆ. ಹತ್ತು ಎಪಿಸೋಡ್‌ಗಳ ಸರಣಿ ಭಿನ್ನ ಕಥಾವಸ್ತುವಿನ ಕಾರಣಕ್ಕೆ ವಿಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

https://youtu.be/mX22D65TqAs

ಕೌನ್‌ ಬನೇಗಿ ಶಿಖರ್‌ವತಿ (ZEE5)

ನಾಸಿರುದ್ದೀನ್‌ ಷಾ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಕೌನ್‌ ಬನೇಗಿ ಶಿಖರ್‌ವತಿ’ ಕಾಮ, ಕ್ರೌರ್ಯ ಎಳ್ಳಷ್ಟೂ ಇಲ್ಲದಂತಹ ಸದಭಿರುಚಿಯ ವೆಬ್‌ ಸರಣಿ. ತಿಳಿಹಾಸ್ಯದ ನಿರೂಪಣೆಯ ಸರಣಿಯ ವಿವಿಧ ಪಾತ್ರಗಳಲ್ಲಿ ವೀಕ್ಷಕರು ತಮ್ಮನ್ನು ತಾವು ಕಂಡುಕೊಳ್ಳಬಹುದು. ಕಾಮ, ಕ್ರೌರ್ಯ ಹೊರತಾಗಿಯೂ ಮನುಷ್ಯನ ಮನಃಶಾಂತಿಯನ್ನು ಕದಡುವಂತಹ ಭೀತಿ, ಮೋಹ, ಕ್ರೋಧ, ಮದ, ಮಾತ್ಸರ್ಯಗಳಂತಹ ಗುಣ ವಿಶೇಷಣಗಳನ್ನಿಲ್ಲಿ ಗುರುತಿಸಬಹುದು. ರಾಜ, ರಾಣಿ, ಅರಮನೆ ಎಂದ ಮಾತ್ರಕ್ಕೆ ಇದು ಒಂದು ರಾಜ್ಯದ ಅಥವಾ ಪ್ರಾಂತ್ಯದ ಕಾಲಮಾನದ ಕಥೆಯಲ್ಲ. ಸಮಕಾಲೀನ ಜಗತ್ತನ್ನೂ ಒಳಗೊಳ್ಳುವ ಯೂನಿವರ್ಸಲ್‌ ವೆಬ್‌ ಸರಣಿ ಎನ್ನಬಹುದು. ಮನಸ್ಸಿಗೆ ಸಂಬಂಧಿಸಿದ ಹತ್ತಾರು ವಿಷಯಗಳು ವಿವಿಧ ರೀತಿಯಲ್ಲಿ ಪ್ರಸ್ತಾಪವಾಗುತ್ತವೆ. ರಘುವೀರ್‌ ಯಾದವ್‌, ಲಾರಾ ದತ್ತಾ, ಚಾರು ಶಂಕರ್‌, ಅನನ್ಯಾ ಸಿಂಗ್, ಕೃತಿಕ ಕಮ್ರಾ, ಸೋಹಾ ಅಲಿ ಖಾನ್, ಅನುರಾಗ್‌ ಸಿನ್ಹಾ ಮುಂತಾದವರಿದ್ದಾರೆ. ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡಬಹುದಾದ ವೆಬ್‌ ಸರಣಿಯಿದು.

A Simple Favor (Netflix)

ಅನ್ನಾ ಕೆಂಡ್ರಿಕ್‌ ಮತ್ತು ಬ್ಲೇಕ್‌ ಲಿವ್ಲೀ ಅಭಿನಯದ ಡಾರ್ಕ್‌ ಕಾಮಿಡಿ ಥ್ರಿಲ್ಲರ್‌ ಇದು. ಡಾರ್ಸಿ ಬೆಲ್‌ ಅವರ ಅದೇ ಶೀರ್ಷಿಕೆಯ ಕೃತಿಯನ್ನು ಆಧರಿಸಿ ತಯಾರಾದ ಸಿನಿಮಾ. ನಾಪತ್ತೆಯಾದ ವಿಚಿತ್ರ ವ್ಯಕ್ತಿತ್ವದ ತನ್ನ ಗೆಳೆತಿಯ ಹುಡುಕುತ್ತಾ ಹೊರಡುವ ಯುವತಿಯ ಕಥಾನಕ. ಥಿಯೇಟರ್‌ನಲ್ಲಿ ತೆರೆಕಂಡ ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿರುವ ಅಮೇರಿಕನ್‌ ಸಿನಿಮಾ ವೀಕೆಂಡ್‌ ಮನರಂಜನೆಗೆ ಒಂದೊಳ್ಳೆಯ ಆಯ್ಕೆ.

LEAVE A REPLY

Connect with

Please enter your comment!
Please enter your name here