2022ರ ಜೂನ್ 10ರಂದು ಥಿಯೇಟರ್‌ನಲ್ಲಿ ತೆರೆಕಂಡ ‘777 ಚಾರ್ಲಿ’ ಸಿನಿಮಾಗೆ ಪ್ರೇಕ್ಷಕರಿಂದ ದೊಡ್ಡ ಮೆಚ್ಚುಗೆ ಸಿಕ್ಕಿತ್ತು. ಕಿರಣ್ ರಾಜ್ ನಿರ್ದೇಶನದಲ್ಲಿ ರಕ್ಷಿತ್ ಶೆಟ್ಟಿ ನಟಿಸಿದ್ದ ಶ್ವಾನಪ್ರೇಮದ ಚಿತ್ರವಿದು. ಇದೀಗ ಸಿನಿಮಾ ಜಪಾನ್ ಭಾಷೆಗೆ ಡಬ್ ಆಗಿದ್ದು ಇದೇ ಜೂನ್ 28ರಿಂದ ಜಪಾನ್ ದೇಶದಲ್ಲಿ ತೆರೆಕಾಣಲಿದೆ.
ರಕ್ಷಿತ್ ಶೆಟ್ಟಿ ನಿರ್ಮಿಸಿ, ನಟಿಸಿದ್ದ ‘777 ಚಾರ್ಲಿ’ ಸಿನಿಮಾ 2022ರ ಜೂನ್ 10ರಂದು ತೆರೆಕಂಡಿತ್ತು. ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಥಿಯೇಟರ್‌ಗೆ ಬಂದಿದ್ದ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಶ್ವಾನಪ್ರೇಮಗ ಕತೆಯನ್ನು ನಿರ್ದೇಶಕ ಕಿರಣ್ ರಾಜ್ ಆಪ್ತವಾಗಿ ತೆರೆಗೆ ತಂದಿದ್ದರು. ಎಲ್ಲಾ ವರ್ಗದ ಪ್ರೇಕ್ಷಕರು ಚಿತ್ರವನ್ನು ಮೆಚ್ಚಿದ್ದರು. ‘ಚಾರ್ಲಿ’ಗೆ ಅತ್ಯುತ್ತಮ ಪ್ರಾದೇಷಿಕ ಸಿನಿಮಾ ರಾಷ್ಟ್ರಪ್ರಶಸ್ತಿಯೂ ಸಂದಿದೆ. ಇದೀಗ ಸರಿಸುಮಾರು ಎರಡು ವರ್ಷಗಳ ನಂತರ ಚಿತ್ರ ಜಪಾನ್‌ನಲ್ಲಿ ತೆರೆಕಾಣಲಿದೆ. ಜಪಾನ್ ಭಾಷೆಗೆ ಚಿತ್ರವನ್ನು ಡಬ್ ಮಾಡಲಾಗಿದ್ದು, ಇದೇ ಜೂನ್ 28ರಿಂದ ಜಪಾನ್ ದೇಶದ ಪ್ರಮುಖ ನಗರಗಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.
ಜಪಾನಿನ ಅತೀ ದೊಡ್ಡ ಹಾಗೂ ಜಪಾನ್ ಚಿತ್ರರಂಗದಲ್ಲಿ ನೂರು ವರ್ಷದಿಂದ ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿರುವ ‘ಶೋಚಿಕೋ ಮೂವೀ’ ಸಂಸ್ಥೆ ಚಿತ್ರವನ್ನು ಜಪಾನಿನಲ್ಲಿ ವಿತರಣೆ ಮಾಡಲಿದೆ. ವಿಶೇಷವೆಂದರೆ, ಇದೇ ಸಂಸ್ಥೆ ಈ ಹಿಂದೆ ‘Hachi: A Dog’s Tale’ ಚಿತ್ರವನ್ನು ಜಪಾನಿನಲ್ಲಿ ವಿತರಣೆ ಮಾಡಿತ್ತು. ಕಳೆದ ವರ್ಷ ಥೈಲ್ಯಾಂಡ್‌ನಲ್ಲಿ ಡಬ್ ಆಗಿ ಬಿಡುಗಡೆಗೊಂಡ ಈ ಚಿತ್ರ, ಮುಂದಿನ ದಿನಗಳಲ್ಲಿ ಜಪಾನ್ ಸೇರಿದಂತೆ ರಷ್ಯಾ, ಲ್ಯಾಟಿನ್ ಅಮೆರಿಕ, ತೈವಾನ್, ಜರ್ಮನಿ ಹಾಗೂ ಇನ್ನಿತರ ದೇಶಗಳಲ್ಲಿ ಬಿಡುಗಡೆಯಾಗಲಿದೆ.