ಭಾರತ ಸಿನೆಮಾ ರಂಗದ ಹಿನ್ನೆಲೆ ಗಾಯನ ಕ್ಷೇತ್ರದ ಮಹಾನ್ ಸಾಧಕಿಯಾಗಿರುವ ಇವರು ಗಾನ ಕೋಗಿಲೆ ಎಂದೇ ಹೆಸರಾಗಿದ್ದಾರೆ. ಮಾಧುರ್ಯಪೂರ್ಣ ಗಾಯನಕ್ಕೆ ಮತ್ತೊಂದು ಹೆಸರಾಗಿರುವ ಇವರನ್ನು, ಇಡೀ ದೇಶ ಪ್ರೀತಿಯಿಂದ ಲತಾ ದೀದಿ ಎಂದು ಕರೆದು ಗೌರವಿಸುತ್ತದೆ. ವಿಶಿಷ್ಟ ಮತ್ತು ಗೌರವ ಪೂರ್ಣ ವ್ಯಕ್ತಿತ್ವದ ಲತಾ ಮಂಗೇಶ್ಕರ್ ತಮ್ಮ ಜೀವಿತ ಕಾಲದಲ್ಲೇ ದಂತ ಕತೆಯಾದವರು. ಲತಾ ಮಂಗೇಶ್ಕರ್ ಅವರ 91ನೇ ಜನ್ಮದಿನದಂದು ಅವರ ಜೀವನ ಮತ್ತು ಸಾಧನೆಗಳ ಬಗ್ಗೆ ಮಾಧ್ಯಮ ಅನೇಕ ಸಂಸ್ಥೆಯಿಂದ ಒಂದು ಸಂಕ್ಷಿಪ್ತ ಚಿತ್ರಣ.

ಲತಾ ಮಂಗೇಶ್ಕರ್ ಅವರು 1929ನೇ ಇಸವಿ ಸೆಪ್ಟಂಬರ್ 28 ರಂದು ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಜನಿಸಿದರು. ಹೇಮಾ ಅನ್ನುವುದು ಲತಾ ಅವರ ಮೂಲ ಹೆಸರು. ‘ಭವ ಬಂಧನ್’ ಎಂಬ ನಾಟಕದಲ್ಲಿ ಅಭಿನಯಿಸಿದ ಬಳಿಕ ಹೇಮಾ ಅನ್ನುವ ಹೆಸರು ಲತಾ ಎಂದು ಬದಲಾಯಿತು. ಲತಾ ಅವರ ತಂದೆ ದೀನಾನಾಥ್ ಮಂಗೇಶ್ಕರ್ ಅವರು ಶಾಸ್ತ್ರೀಯ ಸಂಗೀತದ ಹಾಡುಗಾರರಾಗಿದ್ದರು ಮತ್ತು ಸಂಚಾರಿ ನಾಟಕ ತಂಡದ ಮಾಲೀಕರಾಗಿದ್ದರು. ದೀನಾನಾಥ್ ಅವರಿಗೆ ಲತಾ ಅವರ ಜೊತೆಗೆ ಆಶಾ, ಮೀನಾ, ಉಷಾ ಎಂಬ ಹೆಣ್ಣುಮಕ್ಕಳು ಮತ್ತು ಹೃದಯನಾಥ್ ಎಂಬ ಮಗನೂ ಇದ್ದರು.

ಐದು ವರ್ಷದ ಬಾಲಕಿಯಾಗಿದ್ದಾಗಿನಿಂದಲೇ ತಮ್ಮ ತಂದೆಯ ನಾಟಕಗಳಲ್ಲಿ ಹಾಡತೊಡಗಿದ್ದ ಲತಾ, ಶಾಲೆಗೆ ಹೋಗಿ ಸಾಂಪ್ರದಾಯಕ ಶಿಕ್ಷಣ ಪಡೆಯಲು ಆಗಲೇ ಇಲ್ಲ. ಹೇಗೋ ಒಂದುರೀತಿಯಲ್ಲಿ ಸಾಗುತ್ತಿದ್ದ ಸಂಸಾರಕ್ಕೆ 1942ರಲ್ಲಿ ಬರಸಿಡಿಲು ಬಡಿದಂತಾಯಿತು. ದೀನಾನಾಥ್ ಮಂಗೇಶ್ಕರ್ ಅವರು ತಮ್ಮ 41ನೇ ವಯಸ್ಸಿನಲ್ಲಿ ಶ್ವಾಸಕೋಶದ ಸಮಸ್ಯೆಯಿಂದ ಸಾವಿಗೀಡಾದರು. ತಂದೆಯ ಸಾವಿನ ಬಳಿಕ ಇಡೀ ಕುಟುಂಬದ ನಿರ್ವಹಣೆ ಜವಾಬ್ದಾರಿ 13 ವರ್ಷದ ಬಾಲಕಿ ಲತಾ ಅವರ ಮೇಲೆ ಬಿದ್ದಿತು. ಹಾಡುವುದು ಮಾತ್ರ ಗೊತ್ತಿದ್ದ ಪುಟ್ಟ ಬಾಲಕಿ ಅದನ್ನೇ ಬಳಸಿಕೊಂಡು ತನ್ನ ಕುಟುಂಬ ನಿರ್ವಹಣೆ ಮಾಡಬೇಕಾದಂಥ ಅನಿವಾರ್ಯತೆ ಸೃಷ್ಟಿಯಾಯಿತು.

ತಂದೆ ತೀರಿಕೊಂಡ ವರ್ಷದಲ್ಲೇ ವಸಂತ್ ಜೋಗಳೇಕರ್ ಅವರ ಮರಾಠಿ ಸಿನೆಮಾ ‘Kiti Hasal’ ಸಿನೆಮಾಗಾಗಿ ‘Naachu Yaa Gade Khelu Saari’  ಎಂಬ ಹಾಡನ್ನು ಲತಾ ಅವರು ಹಾಡಿದರಾದರೂ ಕೂಡ, ಅದಕ್ಕೆ ಎಡಿಟಿಂಗ್ ವೇಳೆ ಕತ್ತರಿ ಪ್ರಯೋಗವಾಯಿತು. ಇದಾದ ಬಳಿಕ ಮಾಸ್ಟರ್ ವಿನಾಯಕ್ ದಾಮೋದರ್ ಕರ್ನಾಟಕಿ ಅವರ ಮರಾಠಿ ಸಿನೆಮಾ ‘Pahili Manglagaur’ದಲ್ಲಿ ನಾಯಕಿಯ ತಂಗಿಯ ಪಾತ್ರದಲ್ಲಿ ನಟಿಸಿದ್ದ ಲತಾ, ಆ ಚಿತ್ರದಲ್ಲಿ ಮೂರು ಹಾಡುಗಳನ್ನೂ ಹಾಡಿದ್ದರು. ಆ ಬಳಿಕ ವಿನಾಯಕ್ ಅವರು, ತಿಂಗಳಿಗೆ 60 ರೂಪಾಯಿ ಸಂಬಳ ನೀಡಿ ಲತಾರನ್ನು ತಮ್ಮ ಕಂಪನಿಯ ಕಲಾವಿದರಾಗಿ ನೇಮಕ ಮಾಡಿಕೊಳ್ಳುತ್ತಾರೆ. ತಂದೆಯ ಸಾವಿನ ಬಳಿಕ,  ಕೆಲಕಾಲ ಪುಣೆ ಮತ್ತು ಕೊಲ್ಹಾಪುರದಲ್ಲಿ ವಾಸವಿದ್ದ ಲತಾ ಕುಟುಂಬ, 1947ರಲ್ಲಿ ಮುಂಬೈ ನಗರಕ್ಕೆ ಬಂದು ನೆಲೆಸಿತು.

ಲತಾ ಅವರು ಶಾಸ್ತ್ರೀಯ ಸಂಗೀತ ಕಲಿಯುವ ಸಲುವಾಗಿ ಅಮನ್ ಅಲಿ ಖಾನ್ ಭಿಂಡೀ ಬಜಾರ್ ವಾಲ ಅವರಲ್ಲಿ ಸೇರಿಕೊಳ್ಳುತ್ತಾರೆ. ಆದರೆ ಅಮನ್ ಅಲಿ ಅವರು ದೇಶ ವಿಭಜನೆ ಬಳಿಕ ಪಾಕಿಸ್ತಾನಕ್ಕೆ ಹೊರಟುಹೋದ ಮೇಲೆ ಅಮಾನತ್ ಅಲಿ ಅವರಲ್ಲಿ ಸಂಗೀತಾಭ್ಯಾಸ ಮುಂದುವರೆಸುತ್ತಾರೆ. ಒಮ್ಮೆ ಸಂಗೀತಗಾರ ಮಾಸ್ಟರ್ ಗುಲಾಮ್ ಹೈದರ್ ಅವರು, ಲತಾರನ್ನು Filmistan ಕಂಪನಿಯ ಶುಭೋದ್ ಮುಖರ್ಜಿ ಅವರ ಬಳಿಗೆ ಕರೆದೊಯ್ದು ಅವರೆದುರು ಹಾಡಿಸುತ್ತಾರೆ. ಅವರು, ಈ ಚಿಕ್ಕ ಹುಡುಗಿಯ ಧ್ವನಿ ಕೀರಲು ಎಂದು ಹೇಳಿ ತಿರಸ್ಕರಿಸಿದಾಗ, ಇವತ್ತು ನೀವು ತಿರಸ್ಕರಿಸುವ ಹುಡುಗಿ ಮನೆ ಮುಂದೆ ಸಿನಿಮಾ ನಿರ್ಮಾಪಕರು ಕ್ಯೂ ನಲ್ಲಿ ನಿಲ್ಲುವ ದಿನಗಳು ದೂರವಿಲ್ಲ… ನೋಡುತ್ತಿರಿ ಎಂದು ಹೇಳಿ ಅಲ್ಲಿಂದ ಹೊರಡುತ್ತಾರೆ.

1948ರಲ್ಲಿ ಗುಲಾಮ್ ಹೈದರ್ ಅವರು ತಮ್ಮ ಸಂಗೀತ ನಿರ್ದೇಶನದ ‘Majboor’ ಸಿನೆಮಾದಲ್ಲಿ ಹಾಡುವ ಅವಕಾಶ ನೀಡುತ್ತಾರೆ. ಇದಾದ ಕೆಲ ದಿನಗಳ ಬಳಿಕ ನೌಷದ್ ಅವರ ಸಂಗೀತ ನಿರ್ದೇಶನದ  Andaz (1949) ಸಿನೆಮಾದ  Uthaye ja unke sitam ಹಾಡನ್ನು ಹಾಡಲು ಲತಾ ಅವರಿಗೆ ಅವಕಾಶ ಸಿಗುತ್ತದೆ. ಈ ಹಾಡು ಸಾಕಷ್ಟು ಜನಪ್ರಿಯವಾಗುತ್ತದೆ. ಆ ಬಳಿಕ Barsaat  ಸಿನೆಮಾದ Jiya Bekaraar Hai ಹಾಡು ಲತಾ ಅವರನ್ನು ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಳ್ಳಲು ನೆರವಾಗುತ್ತದೆ.

ಆ ನಂತರ ಕಮಾಲ್ ಅಮ್ರೋಹಿ ನಿರ್ದೇಶನದ ಮಧುಭಾಲ ನಟನೆಯ Mahal ಸಿನೆಮಾದ Aayega Aane Wala ಹಾಡು ಲತಾ ಮಂಗೇಶ್ಕರ್ ಅವರ ಬದುಕಿನ ದಿಕ್ಕು ದೆಸೆಗಳನ್ನೇ ಬದಲಿಸಿಬಿಡುತ್ತದೆ. ಲತಾ ಅವರು ಬಹುಬೇಡಿಕೆಯ ಹಿನ್ನೆಲೆ ಗಾಯಕಿಯಾಗಿ ಹೊರಹೊಮ್ಮುತ್ತಾರೆ.

ಅಲ್ಲಿಂದಾಚೆಗೆ ನರ್ಗಿಸ್ ರಿಂದ ವಹಿದಾ ರಹಮಾನ್ ವರೆಗೆ, ಮಾಧುರಿ ದೀಕ್ಷಿತ್ ರಿಂದ ಪ್ರೀತಿ ಝಿಂಟಾವರೆಗೆ ಹಲವು ಪೀಳಿಗೆಯ ನಾಯಕಿಯರಿಗಾಗಿ ಸುಮಾರು 5 ದಶಕಗಳ ಕಾಲ ‘ದಣಿವರಿಯದ ದೇವತೆಯಂತೆ’ ಲತಾ ಹಾಡುತ್ತಲೇ ಹೋಗುತ್ತಾರೆ. ಅನಿಲ್ ಬಿಸ್ವಾಸ್, ನೌಷಾದ್, ಶಂಕರ್-ಜೈಕಿಷನ್, ಸಿ.ರಾಮಚಂದ್ರ, ಎಸ್.ಡಿ.ಬರ್ಮನ್, ಮದನ್ ಮೋಹನ್, ರೋಷನ್, ಸಲಿಲ್ ಚೌಧರಿ, ಹೇಮಂತ್ ಕುಮಾರ್, ವಸಂತ್ ದೇಸಾಯಿ ಮತ್ತಿತರ ಸಂಗೀತ ನಿರ್ದೇಶಕರ ಮಾರ್ಗದರ್ಶನದಲ್ಲಿ ಸಾವಿರಾರು ಹಾಡುಗಳನ್ನು ಹಾಡುತ್ತಲೇ ಗಾಯನ ಕ್ಷೇತ್ರದ ದಂತಕತೆಯ ಸ್ವರೂಪ ಪಡೆಯುತ್ತಾರೆ. ತಮ್ಮ ಮೃದು ಮಧುರ ಮತ್ತು ಭಾವ ಪೂರ್ಣ ಕಂಠದಿಂದಾಗಿ ಮಾಧುರ್ಯ ಸಾಮ್ರಾಜ್ಞಿ ಎಂದು ಹೆಸರಾಗುತ್ತಾರೆ.

Pakeeza, Aandhi, Kinara, Razia Sultan, Lekin, Rudaali ಇತ್ಯಾದಿ ಸಿನೆಮಾಗಳಲ್ಲಿ ಮತ್ತೆ ಮತ್ತೆ ಲತಾ ಅವರ ಅದ್ಭುತ ಕಂಠ ಸಿರಿಯ ಹಿರಿಮೆ ಪ್ರದರ್ಶನವಾಗುತ್ತದೆ. Do Raste, Love Story, Chandani, Maine Pyar Kiya, Dilwale Dulhaniya Le Jayenge, Dil To Pagal Hai ಸಿನೆಮಾಗಳಲ್ಲಿ ಲತಾ ಅವರು ಹಾಡಿದ ಹಾಡುಗಳು ಸೂಪರ್ ಹಿಟ್ ಅನ್ನಿಸಿಕೊಳ್ಳುತ್ತವೆ. ಹಿರಿಯ ನಟಿ ಜಯಾ ಬಚ್ಚನ್ ಹೇಳುವಂತೆ, ಒಂದು ಕಾಲದಲ್ಲಿ ಬಹುತೇಕ ನಟಿಯರಿಗೆ ತಮ್ಮ ನಟನೆಯ ಸಿನೆಮಾಗಾಗಿ ಲತಾ ಅವರು ಹಾಡುವವರೆಗೂ ತಾವು ಇಲ್ಲಿ ಯಶಸ್ವಿಯಾಗಿದ್ದೇವೆ ಎಂಬ ಭಾವನೆಯೇ ಬರುತ್ತಿರಲಿಲ್ಲವಂತೆ.

ಲತಾ ಮಂಗೇಶ್ಕರ್ ಅವರು ಸುಮಾರು ಒಂದು ಸಾವಿರಕ್ಕೂ ಹೆಚ್ಚು ಹಿಂದಿ ಸಿನೆಮಾಗಳಲ್ಲಿ ಹಾಡಿದ್ದಾರೆ. ಅವರು ಹಾಡಿರುವ ಸಾರ್ವಕಾಲಿಕ ಶ್ರೇಷ್ಠ ಹಾಡುಗಳಲ್ಲಿ ಕೆಲವೇ ಕೆಲವನ್ನು ಇಲ್ಲಿ ಹೆಸರಿಸಬಹುದು. ‘Yeh Zindagi Usi Ki Hai.. (ಅನಾರ್ ಕಲಿ); ‘Pyar Kiya To Darna Kya.. (ಮೊಘಲ ಇ-ಅಝಮ್); ‘Kahin Deep Jale Kahi Dil…(ಬೀಸ್ ಸಾಲ್ ಬಾದ್); ‘O Sajna Barkha Bahar.. (ಪರಖ್); ‘Naina Barse Rimjhim..’ (ವೋಹ್ ಕೌನ್ ಥಿ); ‘Chalte Chalte.. (ಪಕೀಝ); ‘Ek Pyaar Ka Nagma Hai.. (ಶೋರ್); ‘Didi Tera Devar Deewana.. (ಹಮ್ ಆಪ್ ಕಿ ಹೈ ಕೌನ್; and ‘Tere Liye Hum Hain Jiye.. (ವೀರ್ ಝರಾ).

ಲತಾ ಅವರು ಸಿನೆಮಾ ಹಾಡುಗಳಲ್ಲದೆ ಗಜಲ್ ಗಳು, ಮೀರಾ ಭಜನ್, ಜನಪದ ಗೀತೆಗಳು, ಮಿರ್ಜಾ ಗಾಲಿಬ್ ಅವರ ಪದ್ಯಗಳನ್ನೂ ಹಾಡಿದ್ದಾರೆ. ಹಲವಾರು ಮರಾಠಿ ಸಿನೆಮಾಗಳಲ್ಲಿ ನಟಿಸಿದ್ದಾರೆ ಮತ್ತು ಸಂಗೀತ ಸಂಯೋಜನೆ ಮಾಡಿದ್ದಾರೆ. ಲೇಕಿನ್ (1990) ಸೇರಿದಂತೆ ನಾಲ್ಕು ಸಿನೆಮಾಗಳನ್ನೂ ನಿರ್ಮಾಣ ಮಾಡಿದ್ದಾರೆ. ಸುಗಂಧ ದ್ರವ್ಯಗಳನ್ನು ತುಂಬಾ ಇಷ್ಟಪಡುವ ಲತಾ ಅವರಿಗೆ ಫೋಟೊಗ್ರಫಿ ಅತ್ಯಂತ ಅಚ್ಚುಮೆಚ್ಚಿನ ಹವ್ಯಾಸ.

ಭಾರತ ಮತ್ತು ಇತರೆ ದೇಶಗಳ ಸುಮಾರು 36 ಭಾಷೆಗಳಲ್ಲಿ ಹಾಡಿರುವ ಅಪ್ರತಿಮ ಸಾಧನೆ ಲತಾ ಮಂಗೇಶ್ಕರ್ ಅವರದ್ದು. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹತ್ತಾರು ಪ್ರಶಸ್ತಿಗಳು ಲತಾ ಅವರಿಗೆ ಸಂದಿವೆ. ಸಿನೆಮಾ ರಂಗದಲ್ಲಿನ ಸಾಧನೆಗಾಗಿ ನೀಡಲಾಗುವ ಭಾರತದ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯೂ 1989ರಲ್ಲಿ ಲತಾ ಅವರ ಮುಡಿಯನ್ನು ಅಲಂಕರಿಸಿದೆ.

ಫ್ರಾನ್ಸ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ “Officer of the Legion of Honour” ಮತ್ತು 6 ವಿಶ್ವ ವಿದ್ಯಾನಿಲಯಗಳ ಗೌರವ ಡಾಕ್ಟರೇಟ್ ಕೂಡ ಅವರಿಗೆ ಸಂದಿವೆ. 1999ರಲ್ಲಿ ಲತಾ ಅವರನ್ನು ರಾಜ್ಯಸಭೆಯ ನಾಮಕರಣ ಸದಸ್ಯರನ್ನಾಗಿ ಮಾಡಲಾಗಿತ್ತು. 2001ರಲ್ಲಿ ಲತಾ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನವನ್ನಿತ್ತು ಗೌರವಿಸಲಾಗಿದೆ.

ಲತಾ ಮಂಗೇಶ್ಕರ್ ಅವರು ಗಣರಾಜ್ಯೋತ್ಸವದ ನಂತರ 1963ರ ಜನವರಿ 27ರಂದು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕವಿ ಪ್ರದೀಪ್ ಅವರು ರಚಿಸಿದ್ದ “Ae mere watan ke logo” ಗೀತೆ ಹಾಡಿದ್ದರು. ಆ ವೇದಿಕೆಯಲ್ಲಿ ಅಂದಿನ ರಾಷ್ಟ್ರಪತಿ ಡಾ.ಎಸ್.ರಾಧಾಕೃಷ್ಣನ್, ಪ್ರಧಾನಿ ಜವಾಹರ್ ಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಮತ್ತಿತರರು ಉಪಸ್ಥಿತರಿದ್ದರು. ಚೀನಾ ದೇಶದ ಜೊತೆಗಿನ ಯುದ್ಧದ ಕಹಿ ಅನುಭವದ ಕೆಲವೇ ದಿನಗಳ ಬಳಿಕ, ದೇಶ ಪ್ರೇಮದ ಭಾವ ತುಂಬಿದ್ದ ಈ ಹಾಡನ್ನು ಲತಾ ಅವರ ಧ್ವನಿಯಲ್ಲಿ ಕೇಳಿದ ನೆಹರು ಅವರ ಕಣ್ಣುಗಳು ಹನಿಗೂಡಿದ್ದವಂತೆ. ಆ ಹಾಡು ಇವತ್ತಿನವರೆಗೂ ಅತ್ಯಂತ ಜನಪ್ರಿಯ ದೇಶ ಪ್ರೇಮದ ಗೀತೆಗಳಲ್ಲಿ ಒಂದಾಗಿ ಉಳಿದಿದೆ.

ಲತಾ ಅವರು ಕನ್ನಡದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಸಿನೆಮಾದ ಬೆಳ್ಳನೆ ಬೆಳಗಾಯಿತು ಹಾಡಿನ ಮೂಲಕ ಕನ್ನಡವನ್ನೂ ತಮ್ಮ ಹಾಡುಗಳ ಭಾಷೆಯಾಗಿ ಸೇರಿಸಿಕೊಂಡಿದ್ದಾರೆ.

ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಉಸಿರಾಟದ ತೊಂದರೆಗೊಳಗಾಗಿ ಮುಂಬೈನ Breach Candy ಆಸ್ಪತ್ರೆಗೆ ದಾಖಲಾಗಿದ್ದ ಲತಾ ಅವರು, ಸಾಕಷ್ಟು ದಿನಗಳ ಆಸ್ಪತ್ರೆ ವಾಸದ ಬಳಿಕ ಚೇತರಿಸಿಕೊಂಡು ಮನೆ ಸೇರಿದ್ದರು. ಮೋದಿ ಸರ್ಕಾರ, ಕಳೆದ ವರ್ಷ ಲತಾ ಅವರ 90ನೇ ಜನ್ಮ ದಿನದಂದು ಅವರಿಗೆ  ‘Daughter of the Nation’ ಬಿರುದು ನೀಡಿ ಗೌರವಿಸಲು ಉದ್ದೇಶಿಸಿತ್ತು. ಆದರೆ ಆ ಕಾರ್ಯ ನೆರವೇರಿತೇ ಇಲ್ಲವೇ ಗೊತ್ತಾಗಿಲ್ಲ.

ಮೂರು ದಿನಗಳ ಹಿಂದೆ ನಮ್ಮನ್ನು ಅಗಲಿದ ಗಾಯನ ಗಾರುಡಿಗ ಡಾ. ಎಸ್.ಪಿ.ಬಾಲ ಸುಬ್ರಹ್ಮಣ್ಯಮ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಲತಾ ಮಂಗೇಶ್ಕರ್ ಅವರು, ‘ಇದು ಸತ್ಯವೆಂದು ನಂಬಲು ಕಷ್ಟವಾಗುವ ಸುದ್ದಿ’ ಎಂದು ಹೇಳಿದ್ದಾರೆ. 1981ರಲ್ಲಿ ಲತಾ ಮತ್ತು ಎಸ್ಪಿಬಿ ಅವರು ಜೊತೆಯಾಗಿ ಕಮಲ್ ಹಾಸನ್ ಅಭಿನಯದ Ek Duuje Ke Liye ಸಿನೆಮಾಗೆ ಹಾಡಿದ್ದ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಇದರ ಜೊತೆಗೆ, Maine Pyar Kiya ಮತ್ತು Hum Aapke Hain Koun ಸಿನೆಮಾಗಳಿಗೂ ಇವರಿಬ್ಬರೂ ಹಾಡಿದ್ದ ಹಾಡುಗಳು ಅಪಾರ ಜನಪ್ರಿಯತೆ ಗಳಿಸಿದ್ದವು. ತಾವು ಹಾಡುವ ಪ್ರತಿಯೊಂದು ಹಾಡಿನ ಪದಗಳಲ್ಲಿ ಅಡಗಿರುವ ಭಾವನೆಗಳು ಕೇಳುಗರ ಮನ ಮುಟ್ಟುವಂತೆ ಹಾಡುತ್ತಿದ್ದ ಲತಾ ಅವರದ್ದು ಸ್ಪಷ್ಟ ಉಚ್ಚಾರಣೆ ಮತ್ತು ಮಾಧುರ್ಯಪೂರ್ಣ ಕಂಠ. ಒಂದು ಕಾಲದಲ್ಲಿ, ಸಿನೆಮಾದ ಕೇವಲ ಒಂದು ‘ಪೂರಕ ಕ್ರಿಯೆ’ಯಂತೆ ಪರಿಗಣಿಸಲ್ಪಡುತ್ತಿದ್ದ ಹಿನ್ನೆಲೆ ಗಾಯನ ಕ್ಷೇತ್ರಕ್ಕೆ, ಮನರಂಜನಾ ಉದ್ಯಮದಲ್ಲಿ ಮೌಲ್ಯಯುತ ಸ್ಥಾನಮಾನ ತಂದುಕೊಟ್ಟ ಶ್ರೇಯ ಲತಾ ಮಂಗೇಶ್ಕರ್ ಅವರಿಗೆ ಸಲ್ಲುತ್ತದೆ. ಭಾರತ ಸಿನೆಮಾ ರಂಗದ ಚರಿತ್ರೆಯ ಅತ್ಯಂತ ಪ್ರಮುಖ ಭಾಗವಾಗಿ ಲತಾ ಮಂಗೇಶ್ಕರ್ ಅವರ ಹೆಸರು ಎಂದಿಗೂ ಚಿರಸ್ಥಾಯಿ. ಗಾಯನ ಲೋಕದ ಹಿರಿಯಕ್ಕ ಡಾ.ಲತಾ ಮಂಗೇಶ್ಕರ್ ಅವರಿಗೆ ಜನ್ಮದಿನ ಶುಭಾಶಯಗಳನ್ನು ಹೇಳಲು ಮಾಧ್ಯಮ ಅನೇಕ ಸಂಸ್ಥೆ ಸಂತಸ ಪಡುತ್ತದೆ.

LEAVE A REPLY

Connect with

Please enter your comment!
Please enter your name here