ಕರ್ನಾಟಕ ರಾಜ್ಯ, ಭಾರತ ದೇಶ ಮತ್ತು ಜಗತ್ತಿನೆಲ್ಲೆಡೆ ವಾಸ ಮಾಡುತ್ತಾ ಕನ್ನಡದ ಕಂಪನ್ನು ಬೀರುತ್ತಿರುವ ಕನ್ನಡದ ಎಲ್ಲ ಬಂಧುಗಳಿಗೆ ಮಾಧ್ಯಮ ಅನೇಕ ಸಂಸ್ಥೆಯ ವತಿಯಿಂದ 65ನೇ ಕನ್ನಡ ರಾಜ್ಯೋತ್ಸವದ ಶುಭ ಹಾರೈಕೆಗಳು. 1956ರ ನವೆಂಬರ್ ತಿಂಗಳ 1 ರಂದು ಬಹುತೇಕ ಎಲ್ಲ ಕನ್ನಡ ಭಾಷಿಕ ಪ್ರದೇಶಗಳು ಮೈಸೂರು ರಾಜ್ಯದಲ್ಲಿ ವಿಲೀನಗೊಂಡ ವಿಶೇಷ ದಿನವನ್ನೇ ನಾವು ಕನ್ನಡ ರಾಜ್ಯೋತ್ಸವವಾಗಿ ಆಚರಿಸುತ್ತಾ ಬಂದಿದ್ದೇವೆ. ಇದಾದ 17 ವರ್ಷಗಳ ಬಳಿಕ, ಅಲ್ಲಿಯವರೆಗೆ ಮೈಸೂರು ಎಂದು ಕರೆಯಲ್ಪಡುತ್ತಿದ್ದ ನಮ್ಮ ರಾಜ್ಯದ ಹೆಸರು 1973ರ ನವೆಂಬರ್ 1 ರಂದು ಕರ್ನಾಟಕ ಎಂದು ಬದಲಾಯಿತು.

ಪ್ರಕೃತಿ ಸೌಂದರ್ಯ, ಕಾಡು-ಮೇಡು, ವನ್ಯಜೀವಿಗಳು, ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿ, ಪರಂಪರೆ, ಆಹಾರ, ಆರೋಗ್ಯ, ರಂಗಭೂಮಿ, ಸಿನೆಮಾ, ವಿಜ್ಞಾನ, ತಂತ್ರಜ್ಞಾನ, ದೇಶದ ರಕ್ಷಣೆ, ಬಾಹ್ಯಾಕಾಶ ಸಂಶೋಧನೆ ಇತ್ಯಾದಿ ಹತ್ತು ಹಲವು ಕ್ಷೇತ್ರಗಳಲ್ಲಿನ ಸಾಧನೆಗಳಿಂದ ಕರ್ನಾಟಕ ರಾಜ್ಯ ಇಡೀ ಜಗತ್ತಿನಲ್ಲಿ ಹೆಸರಾಗಿದೆ. ‘ಒಂದು ರಾಜ್ಯ ಹಲವು ಜಗತ್ತು’ ಅನ್ನುವ ಹೆಗ್ಗಳಿಕೆ ಹೊಂದಿರುವ ಕರ್ನಾಟಕ, ಭಾರತ ದೇಶದ ಅತ್ಯಂತ ಪ್ರಮುಖ ಮತ್ತು ಸಮರ್ಥ ರಾಜ್ಯಗಳಲ್ಲೊಂದಾಗಿ, ಭಾರತ ಜನನಿಯ ‘ತನು ಜಾತೆ’ಯಾಗಿ ರಾರಾಜಿಸುತ್ತಿದೆ.

ಕನ್ನಡ ಭಾಷೆ, ಭಾರತದ ಅಭಿಜಾತ ಭಾಷೆಗಳಲ್ಲಿ ಒಂದಾಗಿದ್ದರೂ ಕೂಡ, ಇನ್ನೂ ತನ್ನ ಅಸ್ತಿತ್ವ ಕಾಪಾಡಿಕೊಳ್ಳಲು, ತನ್ನ ಅಸ್ಮಿತೆ ಉಳಿಸಿಕೊಳ್ಳಲು ಧ್ವನಿ ಎತ್ತಬೇಕಾದ ಸಂದರ್ಭಗಳು ಆಗಾಗ ಉದ್ಭವ ಆಗುತ್ತಿರುವುದು ಎಲ್ಲ ಕನ್ನಡಿಗರಿಗೂ ಬೇಸರದ ಸಂಗತಿ. ಅಂಥ ವಿಚಾರಗಳ ಬಗ್ಗೆ ಸದಾ ಎಚ್ಚರವಹಿಸುತ್ತಾ ಸರಳ, ಸಮೃದ್ಧ ಮತ್ತು ಸುಂದರ ಕನ್ನಡ ನುಡಿಯನ್ನು ನಮ್ಮೆಲ್ಲರ ಉಸಿರಾಗಿಸಿಕೊಳ್ಳೋಣ. ಕನ್ನಡವನ್ನು ನಮ್ಮ ಅರಿವಿನ ಭಾಷೆಯಾಗಿ, ಅಭಿವ್ಯಕ್ತಿಯ ಭಾಷೆಯಾಗಿ, ಅನ್ನದ ಭಾಷೆಯಾಗಿ, ವ್ಯವಹಾರದ ಭಾಷೆಯಾಗಿ ಉಳಿಸಿಕೊಳ್ಳುವ ಹೊಣೆಗಾರಿಕೆಯನ್ನು ನಾವೆಲ್ಲರೂ ವಹಿಸಿಕೊಳ್ಳೋಣ.

ಮತ್ತೊಮ್ಮೆ ಎಲ್ಲ ಕನ್ನಡಿಗರಿಗೆ ಹಾಗೂ ಎಲ್ಲೆಡೆಯಿಂದ ಕನ್ನಡ ನಾಡಿಗೆ ಬಂದು ಇಲ್ಲಿಯ ಗಾಳಿ, ನೀರು ಮತ್ತು ಅನ್ನದ ಜೊತೆಗೆ ಅವಕಾಶವನ್ನೂ ಪಡೆದು ನೆಮ್ಮದಿಯಾಗಿ ಬದುಕುತ್ತಿರುವ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

LEAVE A REPLY

Connect with

Please enter your comment!
Please enter your name here