ಆಟಂ – ಒಂದು ನಾಟಕದ ಕತೆ. ಯಾವ ನಾಟಕ? ಆ ಸಿನಿಮಾದೊಳಗಿನ ಥಿಯೇಟರ್ ಗ್ರೂಪ್‌ನ ಆಡುವ ನಾಟಕ? ಅಥವಾ ಮನುಷ್ಯರೊಳಗಿನ ನಾಟಕ? ಈ ಪ್ರಶ್ನೆ ಹುಟ್ಟಿಸುವುದೇ ‘ಆಟಂ’ ಮಲಯಾಳಂ ಸಿನಿಮಾದ ಆಟ. Amazon Primeನಲ್ಲಿ ಸ್ಟ್ರೀಮ್ ಆಗುತ್ತಿದೆ ಸಿನಿಮಾ.
ಅದೊಂದು ಥಿಯೇಟರ್ ಗ್ರೂಪ್. ಎಷ್ಟೋ ವರ್ಷಗಳಿಂದ ಒಂದು ತಂಡವಾಗಿ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. 12 ಗಂಡಸರಿರುವ ಆ ತಂಡದಲ್ಲಿ ಅಂಜಲಿ ಏಕಮಾತ್ರ ಕಲಾವಿದೆ. ನಾಟಕ ತಂಡ ಅಂದ ಮೇಲೆ ಮುಖ್ಯಪಾತ್ರದ ಬಗ್ಗೆ ಆಸೆ ಇರುವ, ಅದು ಸಿಗದಿದ್ದಾಗ ಸಿಕ್ಕವರ ಬಗ್ಗೆ ಹೊಟ್ಟೆಕಿಚ್ಚು ಪಡುವುದು ಇದ್ದದ್ದೇ. ಆ ಮುಖ್ಯಪಾತ್ರಧಾರಿಗೆ ಸಿನಿಮಾ ಸಂಪರ್ಕ ಸಿಗುತ್ತದೆ. ವಿದೇಶೀ ಸ್ನೇಹಿತರು ನಾಟಕವನ್ನು ತಮ್ಮ ದೇಶಕ್ಕೆ ಒಯ್ಯುವ, ಅದಕ್ಕಾಗಿ ದೊಡ್ಡ ಮೊತ್ತ ಕೊಡುವ ಮಾತಾಡುತ್ತಾರೆ. ತಮ್ಮದೇ ಸಮಸ್ಯೆಗಳಲ್ಲಿದ್ದ ಅವರಿಗೆಲ್ಲ ಇದೊಂದು ದೊಡ್ಡ ಸಿಹಿಸುದ್ದಿ, ಆ ವಿದೇಶೀಯರೇ ಈ ಸಂತಸಕ್ಕೆ ಒಂದು ಪಾರ್ಟಿ ಕೊಡುತ್ತಾರೆ. ಆ ಪಾರ್ಟಿಯಲ್ಲಿ ರಾತ್ರಿ ರೂಮೊಂದರ ಕಿಟಕಿ ಪಕ್ಕ ಮಲಗಿದ್ದ ಅಂಜಲಿಯ ದೇಹವನ್ನು ಯಾರೋ ಸವರಿ ಹೋಗುತ್ತಾರೆ. ಅದು ಯಾರೆಂದು ಅವಳಿಗೆ ಗೊತ್ತಿಲ್ಲ. ಆದರೆ ಅದನ್ನವಳು ಅಲ್ಲಿಗೇ ಬಿಡುವುದಿಲ್ಲ.
ಮರುದಿನವೇ ಎಲ್ಲರನ್ನೂ ಒಂದು ಕಡೆ ಸೇರಿಸಿ ಯಾರೆನ್ನುವ ತಲಾಶ್ ಶುರುವಾಗುತ್ತದೆ. ಇಲ್ಲಿಂದ ಶುರುವಾಗೋದು ಆಸಲಿ ಆಟ. ಇದು ಮನುಷ್ಯರ ಮನಸಿನ ಆಟ. ಸಮಯ ಬಂದಾಗ, ತಮಗೆ ಲಾಭವಾಗುತ್ತದೆ ಅನ್ನುವಾಗ ಬದಲಾಗುವ ಮುಖಗಳು, ವ್ಯಕ್ತಿಗಳ ಚಹರೆ, ಅದು ನಿಜವಿರಬಹುದಾ? ಇದು ನಿಜವಿರಬಹುದಾ ಅನ್ನುವಂತಾ ಘಟನೆಗಳು, ಸಾಕ್ಷ್ಯಗಳು. ನಾನಲ್ಲಿ ಇರಲೇ ಇಲ್ಲ ಎನ್ನುವ ಒಬ್ಬ, ಫೋನಿನ ಸಾಕ್ಷಿ ತೋರಿಸುವ ಮತ್ತೊಬ್ಬ, ಇವನು ಅಂಥವನಲ್ಲ ಅಂದುಕೊಳ್ಳೋ ಹೊತ್ತಿಗೆ ಬಿಚ್ಚಿಕೊಳ್ಳೋ ಮತ್ತೊಂದು ಚಹರೆ. ಅಬ್ಬಾ! ಇದೊಂದು ವೆಲ್ ಕ್ರಾಫ್ಟೆಡ್ ಚಿತ್ರಕಥೆ.
ಈ ಸಿನಿಮಾ ನೋಡಲು ತಾಳ್ಮೆ ಬೇಕು. ಮಾತು, ಮಾತು, ಮಾತು. ಆದರೆ ಒಂದೊಂದು ಮಾತೂ ಮನುಷ್ಯನ ಒಳಗಿನ ಪದರಗಳನ್ನು ತೆರೆಯುತ್ತಾ ಹೋಗುತ್ತದೆ. ಕಡೆಯಲ್ಲಿ ಎಲ್ಲರೂ ಒಂದಾಗಿ ಅವಳಿಗೆ ಹೇಳುವುದೇನು? ತಂಡ ಬಿಟ್ಟು ಹೋಗೋ ಅಂಜಲಿ ಮಾಡುವುದೇನು? ಆ ಕ್ಲೈಮ್ಯಾಕ್ಸ್ ನಮ್ಮೊಳಗೆ ತಲ್ಲಣ ಉಂಟು ಮಾಡುತ್ತದೆ. ಪ್ರತಿ ಮನುಷ್ಯನೊಳಗೂ ಮುಖವಾಡವಿದೆ. ಆದರೊಳಗೆ ಯಾರಿದ್ದಾರೆ? ಏನಿದೆ? ಎಂಬುದರ ಹುಡುಕಾಟ ‘ಆಟಂ’ ಸಿನಿಮಾ. ಸಹಜ ಅಭಿನಯದಿಂದ, ಸಹಜ ದೃಶ್ಯಗಳಿಂದ ನಿಧಾನಕ್ಕೆ ಒಳಗಿಳಿಯುತ್ತದೆ ಸಿನಿಮಾ. ಆನಂದ ಏಕರ್ಶಿ ಬರೆದು ನಿರ್ದೇಶಿಸಿದ ಮಲಯಾಳಂ ಸಿನಿಮಾ ‘ಆಟಂ’ಗೆ ರಾಷ್ಟ್ರೀಯ ಪ್ರಶಸ್ತಿ ಕೂಡ ಬಂದಿದೆ. Amazon Primeನಲ್ಲಿ ಸ್ಟ್ರೀಮ್ ಆಗುತ್ತಿದೆ ಸಿನಿಮಾ.