ಪುನೀತ್ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಒಂದೊಂದು ಪಾತ್ರವೂ ಅವರಿಗೆ ಒಪ್ಪುವಂತಿದ್ದವು. ಅಷ್ಟರ ಮಟ್ಟಿಗೆ ಆ ಪಾತ್ರಗಳನ್ನು ಅವರು ತಮಗೆ ಒಗ್ಗಿಸಿಕೊಂಡಿದ್ದರು ಅಥವಾ ಅವಕ್ಕೆ ತಾವೇ ಒಗ್ಗಿಕೊಂಡಿದ್ದರು – ಚಿತ್ರಸಾಹಿತಿ ಹೃದಯಶಿವ ಅವರ ಬರಹ.

“ನಮ್ಮ ತಂದೆಯವರಿಂದ ನಾನು ಕಲಿತದ್ದು ಹಿರಿಯರಿಗೆ ಗೌರವ ಕೊಡಬೇಕು, ಎಲ್ಲರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಬೇಕು, ಸರಳತೆಯಿಂದ ಬದುಕಬೇಕು” ಅನ್ನುತ್ತಿದ್ದರು ಪುನೀತ್ ರಾಜಕುಮಾರ್. ಹಾಗೆ ಹೇಳುವುದರಲ್ಲಿ ಅವರಿಗಿದ್ದ ಸಂಸ್ಕಾರ ತಿಳಿಯುತ್ತದೆ. ಆ ಗುಣದಿಂದಲೇ ಎಲ್ಲರೂ ಅವರನ್ನು ಇಷ್ಟ ಪಡುತ್ತಿದ್ದದ್ದು. ಪುನೀತ್ ಆರು ತಿಂಗಳ ಮಗುವಾಗಿದ್ದಾಗಲೇ ‘ಪ್ರೇಮದ ಕಾಣಿಕೆ’ ಚಿತ್ರದ ಹಾಡೊಂದರ ಮೂಲಕ ಡಾ.ರಾಜಕುಮಾರ್ ಜೊತೆ ತೆರೆಯ ಮೇಲೆ ಕಾಣಿಸಿಕೊಂಡು ತಮ್ಮ ‘ಜೇಮ್ಸ್’ವರೆಗೂ ಹೆಸರು, ಕೀರ್ತಿ, ಕೋಟ್ಯಂತರ ಅಭಿಮಾನಿಗಳು, ಪ್ರತಿಷ್ಠಿತ ಪ್ರಶಸ್ತಿಗಳು… ಹೀಗೆ ಸಾಧನೆಯ ಶಿಖರವೇರಿದರೂ ಸರಳವಾಗುಳಿಯುವುದು ಸವಾಲಿನ ಕೆಲಸ. ಆ ಸರಳತೆ, ಸಜ್ಜನತೆ ಕಾಪಾಡಿಕೊಳ್ಳಲು ಪ್ರೌಢತೆ, ಪ್ರಬುದ್ಧತೆ ಬೇಕಾಗುತ್ತದೆ. ಪುನೀತ್‌ರಲ್ಲಿ ಅಂತಹ ಗುಣಗಳಿದ್ದವು. ಪುನೀತ್ ಎಂಬ ಹೆಸರು ಕನ್ನಡಿಗರು ಎಂದೂ ಮರೆಯಲಾಗದ ಹೆಸರು. 46ನೇ ವಯಸ್ಸಿನಲ್ಲಿ ನೆನ್ನೆ ತೀರಿಕೊಂಡ ಪುನೀತ್ ಕುಸಿದು ಹೋದ ಮಹಾನ್ ಸೌಧ; ಸಮಕಾಲೀನ ಕನ್ನಡ ನಾಯಕನಟರಲ್ಲಿ ಬಹುಮುಖ್ಯ ಕಲಾವಿದರಾಗಿದ್ದವರು ಪುನೀತ್. ಗುಣಮಟ್ಟದ ಚಿತ್ರಗಳನ್ನು, ವೈವಿಧ್ಯಮಯ ಪಾತ್ರಗಳನ್ನು ಮಾಡಿದಂಥವರು. ಸದಾ ಹುಮ್ಮಸ್ಸಿನಿಂದ, ಹಸನ್ಮುಖತೆಯಿಂದ ಬದುಕಿನ ಜೀವಂತಿಕೆಯನ್ನು ಸಾರುತ್ತಿದ್ದವರು. 

ಇನ್ನು ಪುನೀತ್ ಅವರ ಜೀವನಪರ್ವವನ್ನು ತುಸು ನೆನಪಿಸಿಕೊಳ್ಳುವುದಾದರೆ ತಂದೆ ರಾಜಕುಮಾರ್ ಸದಾ ಚಿತ್ರೀಕರಣದಲ್ಲಿ ಬ್ಯುಸಿ ಇರುತ್ತಿದ್ದರು. ತಾಯಿ ಚಿತ್ರ ನಿರ್ಮಾಣದ ನಡುವೆ ತಮ್ಮನ್ನು ನೋಡಿಕೊಳ್ಳುತ್ತಿದ್ದರೆಂದು ಹೇಳಿಕೊಳ್ಳುತ್ತಿದ್ದ ಪುನೀತ್ ಯಾವತ್ತೂ ತಂದೆಯೆದುರು ನಿಂತು ಮಾತಾಡುವ ಧೈರ್ಯ ತೋರಿದವರಲ್ಲ. “ನಮ್ಮ ತಂದೆಯವರು ಯಾವತ್ತೂ ನಮಗೆ ಕೈಯೆತ್ತಿ ಹೊಡೆಯಲಿಲ್ಲ. ಜೋರುದನಿಯಲ್ಲಿ ಬೈದಿಲ್ಲ. ಅವರು ಸಿಟ್ಟು ಮಾಡಿಕೊಳ್ಳುತ್ತಿದ್ದುದ್ದೇ ಅಪರೂಪ” ಎನ್ನುತ್ತಿದ್ದ ಅವರು ಒಮ್ಮೆ ಮಾತ್ರ ತಮ್ಮ ತಂದೆಯವರ ಹಿಂದೆ ನಿಂತು ಅಳುಕಿನಿಂದಲೇ ತಾವು ಚಿಕ್ಕಮಗಳೂರಿನ ಅಶ್ವಿನಿಯವರನ್ನು ಪ್ರೀತಿಸಿದ್ದರ ಬಗ್ಗೆ ಹೇಳಿಕೊಳ್ಳುವ ಧೈರ್ಯ ತೋರಿದ್ದರು. ತಮ್ಮ ಪ್ರೇಮಕ್ಕೆ ಹೆತ್ತವರ ಸಮ್ಮತಿ ಸಿಕ್ಕಿದ ನಂತರ ಅಶ್ವಿನಿಯವರ ಮನೆಯವರು ಆರು ತಿಂಗಳ ಬಳಿಕ ನೀಡಿದ ಸಮ್ಮತಿಯ ಪರಿಣಾಮ ಪುನೀತ್ – ಅಶ್ವಿನಿ  ದಂಪತಿಗಳಾದದ್ದು ಈಗ ಇತಿಹಾಸ. ಅವರಿಗೆ ವಂದಿತಾ ಮತ್ತು ಧೃತಿ ಇಬ್ಬರು ಮಕ್ಕಳು. ತುಂಬು ಕುಟುಂಬದ ಮಧ್ಯೆ ಬೆಳೆದ ಪುನೀತ್ ರಾಜಕುಮಾರ್ ಸಮಯ ಸಿಕ್ಕಾಗಲೆಲ್ಲ ಅಣ್ಣಂದಿರಾದ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಮನೆಗಳಿಗೆ ಕುಟುಂಬದೊಡನೆ ಹೋಗಿ ಸಮಯ ಕಳೆದು ಬರುತ್ತಿದ್ದರು. ಅಪಾರ ಸ್ನೇಹಬಳಗ ಹೊಂದಿದ್ದ ಅಪ್ಪು ತಮ್ಮ ಬಾಲ್ಯದ ಸ್ನೇಹಿತರ ಒಡನಾಟವನ್ನು ಕೊನೆಯವರೆಗೂ ಉಳಿಸಿಕೊಂಡಿದ್ದು ಅವರಿಗೆ ಯಾವುದೇ ಹಮ್ಮುಬಿಮ್ಮುಗಳಿರಲಿಲ್ಲ ಎಂಬುದಕ್ಕೆ ಸಾಕ್ಷಿ. ತಮ್ಮ ತಂದೆಯವರ ಊರಾದ ಗಾಜನೂರನ್ನು, ಅಲ್ಲಿಯ ಪುರಾತನ ಮನೆಯನ್ನು, ಬೀರೇದೇವರ ಗುಡಿಯನ್ನು ಬಹುವಾಗಿ ಇಷ್ಟಪಡುತ್ತಿದ್ದ ಪುನೀತ್ ತಮ್ಮ ಬಾಲ್ಯಕಾಲದಲ್ಲಿ ಆಡಿದ ಬುಗುರಿ, ಗೋಲಿ, ಲಗೋರಿ, ಜೂಟಾಟ, ಕುಂಟೋಬಿಟ್ಟೆ, ಮರಕೋತಿ ಆಟಗಳನ್ನು ನೆನೆದು ನೆನಪುಗಳಿಗೆ ಜಾರುವಷ್ಟು ಮಗುವಿನಂಥ ಮನಸ್ಸುಳ್ಳವರಾಗಿದ್ದರು. ಇನ್ನು ವಿವಾದಗಳಿಂದ ದೂರವೇ ಇದ್ದವರು.

ಹಾಗೆಯೇ ಅಭಿನಯ, ಚಿತ್ರ ನಿರ್ಮಾಣ, ಸಮಾಜ ಸೇವೆಯ ಜೊತೆಗೆ ಭೋಜನವನ್ನು ಬಹಳ ಇಷ್ಟಪಡುತ್ತಿದ್ದ ಪುನೀತ್ ರಾಜಕುಮಾರ್ ಚಿಕ್ಕವರಿದ್ದಾಗ ತಮ್ಮ ತಂದೆಯವರೊಂದಿಗೆ ಚಿತ್ರಗಳಲ್ಲಿ ನಟಿಸಲು ಶೂಟಿಂಗ್ ಸೆಟ್ಟಿಗೆ ಹೋಗುತ್ತಿದ್ದಾಗ ಅಲ್ಲಿ ಐಸ್ ಕ್ರೀಮ್, ಚಾಕಲೇಟ್ ಗಳನ್ನೂ ಸವಿಯುತ್ತಿದ್ದುದಾಗಿಯೂ, ಶಾಲೆಗಿಂತ ಶೂಟಿಂಗೇ ಚಂದ ಅಂದುಕೊಳ್ಳುತ್ತಿದ್ದುದಾಗಿಯೂ ಅವರೇ ತಮಾಷೆಗೆ ಹೇಳಿಕೊಳ್ಳುತ್ತಾರೆ. ಹಾಗೆಯೇ ತಾವು ಬೆಳೆದು ದೊಡ್ಡವರಾದ ನಂತರ ಚಿತ್ರೀಕರಣ ನಿಮಿತ್ತ ಯಾವುದೇ ಊರಿಗೆ ಹೋದರು ಅಲ್ಲಿಯ ಸ್ಥಳೀಯ ಮಿಲ್ಟ್ರಿ ಹೋಟೆಲ್ ಬಿರಿಯಾನಿ, ಸಣ್ಣಪುಟ್ಟ ಕೈಗಾಡಿಗಳಲ್ಲಿನ ಊಟ ತಿಂಡಿಗಳನ್ನೂ ಹುಡುಕಿಕೊಂಡು ಹೋಗಿ ಸವಿಯುತ್ತಿದ್ದುದಾಗಿ ನೆನಪಿಸಿಕೊಳ್ಳುತ್ತಾರೆ. ತಾವು ನಡೆಸಿಕೊಡುತ್ತಿದ್ದ ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದ ಸಂದರ್ಭದಲ್ಲಿ ತಾವು ಭೋಜನಪ್ರಿಯರೆಂದು ಆಗಾಗ ಹೇಳಿಕೊಳ್ಳುತ್ತಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. 

ಪುನೀತ್ ರಾಜಕುಮಾರ್ ತಮ್ಮ ಪಿ.ಆರ್.ಕೆ ಆಡಿಯೋ ಮೂಲಕ ಒಂದಿಷ್ಟು ಚಿತ್ರಗಳ ಹಾಡುಗಳನ್ನು ಹೊರತಂದು ಹೊಸ ಅಭಿಯಾನ ಆರಂಭಿಸಿದ್ದರು. ಜೊತೆಗೆ ತಮ್ಮ ಮಹತ್ವಾಕಾಂಕ್ಷೆಯ ಪಿ.ಆರ್.ಕೆ. ಪ್ರೊಡಕ್ಷನ್ಸ್ (ಪಾರ್ವತಮ್ಮ ರಾಜಕುಮಾರ್ ಪ್ರೊಡಕ್ಷನ್ಸ್) ಅಡಿಯಲ್ಲಿ ‘ಕಾವಲುದಾರಿ’, ‘ಮಾಯಾಬಜಾರ್’, ‘ಲಾ’, ‘ಫ್ರೆಂಚ್ ಬಿರಿಯಾನಿ’ ಚಿತ್ರಗಳನ್ನು ನಿರ್ಮಿಸಿದ್ದರು. ಮತ್ತಷ್ಟು ವಿನೂತನ ಕಥಾಹಂದರವುಳ್ಳ ಚಿತ್ರಗಳನ್ನು ನಿರ್ಮಾಣ ಮಾಡುವ ಕನಸನ್ನು ಹೊತ್ತಿದ್ದ ಪುನೀತ್ “ಮೊದಲಿನಿಂದಲೂ ನನಗೆ ಒಳ್ಳೆಯ ಸಿನಿಮಾಗಳನ್ನು ಮಾಡಬೇಕೆಂಬ ಆಸೆ ಇದ್ದೇ ಇತ್ತು. ನನ್ನ ಅಮ್ಮ ‘ವಜ್ರೇಶ್ವರಿ ಕಂಬೈನ್ಸ್’ ಅಡಿಯಲ್ಲಿ 82 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಆ ಸಂಖ್ಯೆಯನ್ನು ನೂರರ ಗಡಿ ದಾಟಿಸಬೇಕು ಅನ್ನುವುದು ನನ್ನ ಆಸೆ. ಪಿ.ಆರ್.ಕೆ. ಪ್ರೊಡಕ್ಷನ್ ಅನ್ನು ವಜ್ರೇಶ್ವರಿ ಕಂಬೈನ್ಸ್‌ನಿಂದ ಬೇರ್ಪಡಿಸಿ ನೋಡಬೇಕಿಲ್ಲ. ನನಗೆ ಅಮ್ಮ ಎಲ್ಲ ರೀತಿಯಿಂದಲೂ ಪ್ರೇರಣೆ ನೀಡಿದ್ದಾರೆ. ಯಾವಾಗಲೂ ಯಾವುದಾದರೂ ಕೆಲಸದಲ್ಲಿ ಬ್ಯುಸಿಯಾಗಿರಬೇಕು. ನಾವು ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು ಎಂಬುದನ್ನು ನಂಬಿದವನು ನಂಬಿದವನು ನಾನು. ಇದನ್ನು ನಾನು ಕಲಿತದ್ದು ನನ್ನ ತಾಯಿಯಿಂದ. ಅವರು ಬಿಡುವಾಗಿದ್ದುದ್ದನ್ನು ನಾನು ನೋಡಿರಲೇ ಇಲ್ಲ. ಅದನ್ನು ನೋಡಿಯೇ ನಾನು ಒಳ್ಳೆಯ ಸಿನಿಮಾಗಳನ್ನು ಮಾಡಬೇಕು ಅನಿಸಿದ್ದು” ಅಂತ ಪುನೀತ್ ಪತ್ರಿಕಾ ಸಂದರ್ಶನವೊಂದರಲ್ಲಿ ಹೇಳಿಕೊಳ್ಳುತ್ತಾರೆ. 

ಪುನೀತ್ ಅವರಿಗಿದ್ದ ಮಾನವೀಯ ಮಿಡಿತ, ಸೂಕ್ಷ್ಮ ಸಂವೇದನೆಯನ್ನು ಅರಿಯಲು ಒಂದಿಷ್ಟು ಚರ್ಚಿಸುವುದು ಸೂಕ್ತ. ಪಾತ್ರಗಳಿಗೆ ಒಗ್ಗಿಕೊಳ್ಳುವ ಕಲಾನೈಪುಣ್ಯತೆ ಪ್ರತಿಯೊಬ್ಬ ಕಲಾವಿದನಿಗೂ ಮುಖ್ಯ. ಒಂದೊಂದು ಚಿತ್ರದಲ್ಲೂ ಒಂದೊಂದು ಪಾತ್ರವೂ ತಾನಾಗುತ್ತಾ ಆ ಪಾತ್ರದಲ್ಲಿ ಜೀವಿಸುತ್ತಾ, ಆ ಪಾತ್ರದ ಮಿಡಿತಗಳನ್ನು, ತಲ್ಲಣಗಳನ್ನು ಅನುಭವಿಸುತ್ತ ಪಾತ್ರ ಜೀವ ತುಂಬುವುದು ಸಾಮಾನ್ಯವಾದ ಕೆಲಸವಲ್ಲ. ಅದಕ್ಕೆ ಬೇಕಾದ ಶ್ರದ್ದೆ, ನಿಷ್ಠೆ, ತಲ್ಲೀನತೆ, ತಯಾರಿ, ಪರವಶತೆ ಬೇಕಾಗುತ್ತದೆ. ಆಗ ಮಾತ್ರ ಒಬ್ಬ ಕಲಾವಿದ ತಾನೇ ಆ ಪಾತ್ರವಾಗಿ ತೆರೆಯ ಮೇಲೆ ಮೂಡಿ ಬರಲು ಸಾಧ್ಯ. ಆ ಮಟ್ಟಿಗೆ ಪುನೀತ್ ನಿರ್ವಹಿಸಿದ್ದು ವೈವಿಧ್ಯಮಯ ಪಾತ್ರಗಳೇ ಆಗಿದ್ದವು. ಒಂದೊಂದು ಪಾತ್ರವೂ ಅವರಿಗೆ ಒಪ್ಪುವಂತಿದ್ದವು. ಅಷ್ಟರ ಮಟ್ಟಿಗೆ ಆ ಪಾತ್ರಗಳನ್ನು ಅವರು ತಮಗೆ ಒಗ್ಗಿಸಿಕೊಂಡಿದ್ದರು ಅಥವಾ ಅವಕ್ಕೆ ತಾವೇ ಒಗ್ಗಿಕೊಂಡಿದ್ದರು. ಹೀಗೆ ನಿತ್ಯಜೀವನದಲ್ಲಿ ಕಾಣುವ ಬೇರೆ ಬೇರೆ ಬಗೆಯ ಪಾತ್ರಗಳಲ್ಲಿ ಕಲಾವಿದನಾಗಿ ಜೀವಿಸುತ್ತಾ ಹೋದ ಪುನೀತ್ ಸದಾ ಸಮಾಜಮುಖಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಿದ್ದರು. ಅನೇಕರಿಗೆ ಸಹಾಯ ಹಸ್ತ ಚಾಚಿದ್ದರು. ಸಾವಿರಾರು ಬಡವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವೃದ್ಧರು ಮತ್ತು ಅನಾಥರಿಗೆ ನೆರವು, ವೃದ್ಧಾಶ್ರಮಗಳನ್ನು ದತ್ತು ಪಡೆದು ನಡೆಸುತ್ತಿದ್ದದ್ದು, ಮೈಸೂರಿನ ಶಕ್ತಿಧಾಮ ಆಶ್ರಮಕ್ಕೆ ಚಾಚುತ್ತಿದ್ದ ಸಹಾಯಹಸ್ತ, ಗೋಶಾಲೆಗಳಿಗೆ ನೀಡುತ್ತಿದ್ದ ಸಹಾಯಧನ… ಇವೆಲ್ಲವನ್ನೂ ತಮ್ಮ ಮನಃಸಂತೋಷಕ್ಕಾಗಿ ಮಾಡುತ್ತಿದ್ದರೇ ಹೊರತು ಎಂದೂ ಪ್ರಚಾರ ಬಯಸಿದವರಲ್ಲ. 

ಕೊನೆಯದಾಗಿ ಹೇಳುವುದಾದರೆ ಕರ್ನಾಟಕದ ಪಾಲಿಗೆ ಇದು ಬೇಸರದ ಸಂದರ್ಭ. ನೋವಿನ ದಿನ. ಸತ್ತು ಮಲಗಿರುವ ಪುನೀತ್ ಅವರ ಗಂಭೀರ ವದನವನ್ನು ನೋಡುತ್ತಿದ್ದರೆ ಕರುಳು ಹಿಂಡಿದಂತಾಗುತ್ತದೆ. ಅರಿವಿಗೇ ಬಾರದೆ ಕಂಠ ಬಿಗಿದು, ರೆಪ್ಪೆ ತೇವಗೊಳ್ಳುತ್ತದೆ. ಒಡಲು ತಳಮಳಿಸುತ್ತದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇನ್ನು ನೆನಪು ಮಾತ್ರ.

LEAVE A REPLY

Connect with

Please enter your comment!
Please enter your name here