ಪ್ರತಿಷ್ಠಿತ ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವದ ಭಾರತೀಯ ಪನೋರಮಾ ವಿಭಾಗಕ್ಕೆ ನಾಲ್ಕು ಕನ್ನಡ ಚಿತ್ರಗಳು ಆಯ್ಕೆಯಾಗಿವೆ. ನವೆಂಬರ್ 21ರಿಂದ 28ರವರೆಗೆ ಚಿತ್ರೋತ್ಸವ ನಡೆಯಲಿದ್ದು, ‘ಆಕ್ಟ್ 1978’, ‘ಡೊಳ್ಳು’, ‘ತಲೆದಂಡ’ ಮತ್ತು ‘ನೀಲಿ ಹಕ್ಕಿ’ ಕನ್ನಡ ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಭಾರತ ಸರ್ಕಾರ ಆಯೋಜಿಸುವ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಬಾರಿ ನಾಲ್ಕು ಕನ್ನಡ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಗೋವಾದಲ್ಲಿ ನಡೆಯುವ ಸಿನಿಮೋತ್ಸವದ ಭಾರತೀಯ ಪನೋರಮಾ ವಿಭಾಗಕ್ಕೆ ‘ಆಕ್ಟ್ 1978’, ‘ಡೊಳ್ಳು’, ‘ತಲೆದಂಡ’ ಮತ್ತು ‘ನೀಲಿ ಹಕ್ಕಿ’ ಕನ್ನಡ ಚಿತ್ರಗಳು ಆಯ್ಕೆಯಾಗಿವೆ. ನವೆಂಬರ್ 21ರಿಂದ 28ರವರೆಗೆ ಚಿತ್ರೋತ್ಸವ ನಡೆಯಲಿದೆ. ಈ ಬಗ್ಗೆ ಮಾತನಾಡಿದ ನಿರ್ದೇಶಕ ಮಂಸೋರೆ, “ನಮ್ಮ ಸಿನಿಮಾ ಪನೋರಮಾಗೆ ಆಯ್ಕೆಯಾಗಿರುವುದು ಹೆಮ್ಮೆ ಮತ್ತು ಖುಷಿಯ ವಿಚಾರ. ಕೊರೋನಾದಂತಹ ದುರಿತ ಕಾಲದಲ್ಲಿ ಸಿನಿಮಾ ಬಿಡುಗಡೆ ಮಾಡಿದಾಗ ಪ್ರೇಕ್ಷಕರು ಚಿತ್ರ ಮೆಚ್ಚಿ ತಲೆದೂಗಿದ್ದರು. ವೈಯಕ್ತಿಕವಾಗಿ ನಿರ್ದೇಶಕನಾಗಿ ನನಗೆ ಇದು ವಿಶ್ವಾಸ ತುಂಬಿದೆ. ಈ ಹಿಂದಿನ ನನ್ನ ನಿರ್ದೇಶನದ ‘ಹರಿವು’, ‘ನಾತಿಚರಾಮಿ’ ಚಿತ್ರಗಳ ವಿಷಯದಲ್ಲೂ ನಾನು ಪನೋರಮಾ ಕನಸು ಕಂಡಿದ್ದೆ, ಸಾಧ್ಯವಾಗಿರಲಿಲ್ಲ. ಈ ಬಾರಿ ‘ಆಕ್ಟ್ 1978’ನಿಂದ ಕನಸು ಕೈಗೂಡಿದಂತಾಗಿದೆ. ಈ ಸಂದರ್ಭದಲ್ಲಿ ಚಿತ್ರತಂಡದ ಎಲ್ಲರನ್ನೂ ನಾನು ಸ್ಮರಿಸುತ್ತೇನೆ” ಎಂದಿದ್ದಾರೆ. ಅಕಾಲಿಕವಾಗಿ ಅಗಲಿದ ನಟ ಸಂಚಾರಿ ವಿಜಯ್ ಅಭಿನಯದ ಎರಡು ಸಿನಿಮಾಗಳು (‘ಆಕ್ಟ್ 1978’ ಮತ್ತು ‘ತಲೆದಂಡ’) ಪನೋರಮಾದಲ್ಲಿವೆ ಎನ್ನುವುದು ವಿಶೇಷ.










