‘ಸ್ಟಾರ್ ಸಿಂಗರ್’ ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದ ಆದರ್ಶ್ ಅಯ್ಯಂಗಾರ್ ‘ಜಯ ಹೇ’ ಆಲ್ಬಂ ಸಾಂಗ್ ರೂಪಿಸಿದ್ದಾರೆ. ಭಾರತೀಯ ಸೈನ್ಯ, ಸೈನಿಕರ ಕುರಿತ ರಾಕ್ – ಪಾಪ್ ಶೈಲಿಯ ಹಾಡಿಗೆ ಪ್ರಮೋದ್ ಮರವಂತೆ ಗೀತಸಾಹಿತ್ಯ, ಹೇಮಂತ್ ಜೋಯೀಸ್ ಸಂಗೀತ ಸಂಯೋಜನೆಯಿದೆ.
ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಆದರ್ಶ್ ಅಯ್ಯಂಗಾರ್ ಅವರಿಗೆ ಸಂಗೀತ, ಗಾಯನ ನೆಚ್ಚಿನ ಹವ್ಯಾಸ. ಶಿವಮೊಗ್ಗದ ಯುವಕ ಅಮೇರಿಕಾದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯ ‘ಸ್ಟಾರ್ ಸಿಂಗರ್’ನಲ್ಲಿ ಸ್ಪರ್ಧಿಯಾಗಿ ಆಯ್ಕೆಯಾಗಿದ್ದು ಅವರ ಸಂಗೀತ ಬದುಕಿಗೆ ತಿರುವು. ಉದ್ಯೋಗ ಅರಸಿ ದೂರದ ಅಮೇರಿಕಾಗೆ ಹೋದರೂ ಸಂಗೀತದ ಮೇಲಿನ ಅವರ ಆಸಕ್ತಿ ಏನನ್ನಾದರೂ ಮಾಡುವಂತೆ ಪ್ರೇರೇಪಿಸುತ್ತಿತ್ತು. ಅಮೇರಿಕಾದಲ್ಲೇ ತಮ್ಮದೊಂದು ಚಿಕ್ಕ ಸ್ಟುಡಿಯೋ ಮಾಡಿ ಬಿಡುವಿನ ಸಮಯದಲ್ಲಿ ಕೆಲವು ಪ್ರಯೋಗಗಳನ್ನು ಮಾಡುತ್ತಾ ಬಂದರು. ಈ ಹಿಂದೆ ‘My Friend’ ವಿಡಿಯೋ ಹಾಡನ್ನು ರೂಪಿಸಿದ್ದರು. ಇದು ಭಾರತ ಮತ್ತು ಅಮೆರಿಕ ಎರಡೂ ಕಡೆ ಚಿತ್ರೀಕರಣಗೊಂಡಿತ್ತು. ಈಗ ‘ಜಯ ಹೇ’ ಆಲ್ಬಂ ಮಾಡಿ ಈ ಹಾಡನ್ನು ಭಾರತದ ಸೈನಿಕರಿಗೆ ಅರ್ಪಿಸಿದ್ದಾರೆ.
‘ಜಯ ಹೇ’ ಹಾಡನ್ನು ತೀರ್ಥಹಳ್ಳಿಯ ಸುತ್ತಮುತ್ತ ಚಿತ್ರಿಸಲಾಗಿದೆ. ರಾಕ್-ಪಾಪ್ ಜಾನರ್ನಲ್ಲಿ ಮೂಡಿಬಂದಿರುವ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದು, ಹೇಮಂತ್ ಜೋಯೀಸ್ ಸಂಗೀತ ಸಂಯೋಜಿಸಿದ್ದಾರೆ. ಆದರ್ಶ್ ಅಯ್ಯಂಗಾರ್ ಹಾಡಿಗೆ ಧ್ವನಿಯಾಗುವುದರ ಜೊತೆಗೆ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಹೇಮಂತ್ ಜೋಯಿಸ್, ಗುರುಪ್ರಸಾದ್ ಬಡಿಗೇರ್, ದರ್ಶನ್ ಕುಮಾರ್, ಶ್ರೀ ಹರ್ಷ ರಾಮ್ ಕುಮಾರ್ ನಟಿಸಿದ್ದಾರೆ. ರಕ್ಷಿತ್ ತೀರ್ಥಹಳ್ಳಿ ನಿರ್ದೇಶನ, ಗುರುಪ್ರಸಾದ್ ನರ್ನಾಡ್ ಕ್ಯಾಮೆರಾ, ಸುಧೀರ್ ಎಸ್.ಜೆ.ಸಂಕಲನವಿರುವ ‘ಜಯ ಹೇ’ ಆದರ್ಶ್ ಅಯ್ಯಂಗಾರ್ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದೆ.