ಕೋವಿಡ್‌ನಿಂದಾಗಿ ಉತ್ತರ ಭಾರತದ ಥಿಯೇಟರ್‌ಗಳಿಗೀಗ ಸಿನಿಮಾಗಳಿಲ್ಲ. ‘ಪುಷ್ಪ’ ಹಿಂದಿ ಅವತರಣಿಕೆ ಯಶಸ್ಸು ಕಂಡ ಹಿನ್ನೆಲೆಯಲ್ಲಿ ದಕ್ಷಿಣದ ಇತರೆ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಡಬ್ ಮಾಡಿ ಅಲ್ಲಿ ಬಿಡುಗಡೆ ಮಾಡಲು ವಿತರಕರು ತಯಾರಾಗುತ್ತಿದ್ದಾರೆ.
ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಹಿಂದಿ ಅವತರಣಿಕೆ ಹಿಂದಿ ಬೆಲ್ಟ್‌ನಲ್ಲಿ ಉತ್ತಮ ವಹಿವಾಟು ನಡೆಸಿತು. ಕೋವಿಡ್‌ನಿಂದಾಗಿ ತೆರೆಕಾಣಬೇಕಿದ್ದ ಹಿಂದಿ ಚಿತ್ರಗಳು ಮುಂದಕ್ಕೆ ಹೋಗಿವೆ. ಹಾಗಾಗಿ ಅಲ್ಲಿನ ಥಿಯೇಟರ್‌ಗಳಿಗೆ ಈಗ ಕಂಟೆಂಟ್ ಇಲ್ಲ. ಹಾಗಾಗಿಯೇ ‘ಪುಷ್ಪ’ ಚಿತ್ರ ಹಿಂದಿ ಬೆಲ್ಟ್‌ನಲ್ಲಿ 80 ಕೋಟಿ ರೂಪಾಯಿ ಗಳಿಸಿದ್ದು. ಈ ಚಿತ್ರವನ್ನು ಅಲ್ಲಿ ವಿತರಿಸಿದ ‘ಗೋಲ್ಡ್‌ಮೈನ್ಸ್ ಟೆಲಿಫಿಲ್ಮ್ಸ್’ ಸಂಸ್ಥೆಯೇ ಈಗ ಅಲ್ಲಿ ಅಲ್ಲು ಅರ್ಜುನ್‌ರ ‘ಅಲಾ ವೈಕುಂಠಪುರಮುಲು’ ತೆಲುಗು ಚಿತ್ರದ ಹಿಂದಿ ಅವತರಣಿಕೆಯನ್ನು ರಿಲೀಸ್ ಮಾಡುತ್ತಿದೆ. 2020ರ ಈ ತೆಲುಗು ಹಿಟ್ ಸಿನಿಮಾ ಹಿಂದಿಗೂ ರೀಮೇಕಾಗುತ್ತಿದೆ! ಕಾರ್ತಿಕ್ ಆರ್ಯನ್ ನಟಿಸುತ್ತಿರುವ ಈ ಸಿನಿಮಾ ಸದ್ಯ ಚಿತ್ರೀಕರಣದಲ್ಲಿದೆ. ಆದಾಗ್ಯೂ ಮೂಲ ತೆಲುಗು ಸಿನಿಮಾದ ಹಿಂದಿ ಅವತರಣಿಕೆಯನ್ನು ಬಿಡುಗಡೆ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಅಲ್ಲಿನ ಸದ್ಯದ ಪರಿಸ್ಥಿತಿಯಿಂದ ಲಾಭ ಮಾಡಿಕೊಳ್ಳುವುದು ಉದ್ದೇಶ.
ಹಾಗೆ ನೋಡಿದರೆ ‘ಪುಷ್ಪ’ ಚಿತ್ರಕ್ಕೆ ಉತ್ತರ ಭಾರತದಲ್ಲಿ ಪ್ರೊಮೋಷನ್ ಮಾಡಿರಲಿಲ್ಲ. ಹಾಗಿದ್ದೂ ಅಲ್ಲು ಅರ್ಜುನ್ ಸಿನಿಮಾ ಅಲ್ಲಿನ ಟೈರ್ 1, ಟೈರ್ 2 ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯಿತು. ಸಹಜವಾಗಿಯೇ ಇದು ಇಲ್ಲಿನ ಬ್ಲಾಕ್ ಬಸ್ಟರ್ ಸಿನಿಮಾಗಳ ನಿರ್ಮಾಪಕರ ನಿದ್ದೆಗೆಡಿಸಿದೆ. ಅದಕ್ಕೆ ಸರಿಯಾಗಿ ಅಲ್ಲಿನ ವಿತರಕರು ಮತ್ತು ಪ್ರದರ್ಶಕರು ದಕ್ಷಿಣದ ಯಶಸ್ವೀ ಸಿನಿಮಾಗಳನ್ನು ಹಿಂದಿಯಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಹಾಗಾಗಿ ಸುಕುಮಾರ್ ನಿರ್ದೇಶನದಲ್ಲಿ ರಾಮ್ ಚರಣ್ ತೇಜಾ ನಟಿಸಿರುವ ‘ರಂಗಸ್ಥಳಂ’, ವಿಜಯ್ ಅಭಿನಯದ ‘ಮೆರ್ಸಲ್’, ಅಜಿತ್‌ರ ‘ವಿಶ್ವಾಸಂ’ ಹಿಂದಿ ಡಬ್ಬಿಂಗ್ ಅವತರಣಿಕೆಗಳು ಸಿದ್ಧವಾಗುತ್ತಿವೆ. ಕೋವಿಡ್ ಅನಿಶ್ಚಿತತೆಯಿಂದ ಬಳಲಿರುವ ಉತ್ತರ ಭಾರತದ ಥಿಯೇಟರ್‌ಗಳಲ್ಲಿ ಈ ಚಿತ್ರಗಳು ಬಿಡುಗಡೆಯಾಗಲಿವೆ.
ಹಾಗೆಂದು ಈ ಸಿನಿಮಾಗಳು ಒಮ್ಮೆಗೇ ಅಲ್ಲಿ ತೆರೆಕಾಣುತ್ತಿಲ್ಲ. ಜನವರಿ 26ರಂದು ತೆರೆಕಾಣಲಿರುವ ‘ಅಲಾ ವೈಕುಂಠಪುರಮುಲು’ ಚಿತ್ರಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಯಾವ ರೀತಿ ಪ್ರತಿಕ್ರಿಯೆ ಸಿಗುತ್ತದೆ ಎನ್ನುವುದನ್ನು ಆಧರಿಸಿ ಇತರೆ ನಿರ್ಮಾಪಕರು ತಮ್ಮ ಯೋಜನೆ ರೂಪಿಸಲಿದ್ಧಾರೆ. ಆ ಸಿನಿಮಾ ಗೆದ್ದರೆ ಇತರೆ ಸಿನಿಮಾಗಳಿಗೆ ಹಾದಿ ಸುಗಮವಾಗಲಿದೆ. ಈ ಹಿಂದೆ ಯಶ್ ಅಭಿನಯದ ‘ಕೆಜಿಎಫ್’ ಹಿಂದಿ ಅವತರಣಿಕೆ ಅಲ್ಲಿ ಯಶಸ್ಸು ಕಂಡಿತ್ತು. ಈ ಚಿತ್ರದ ನಂತರ ಯಶ್ ಅಭಿನಯದ ಮಾಸ್ಟರ್‌ಪೀಸ್, ಸಂತು ಸ್ಟ್ರೈಟ್ ಫಾರ್ವಾರ್ಡ್ ಚಿತ್ರಗಳು ಹಿಂದಿಗೆ ಡಬ್ ಆಗಿ ಬಿಡುಗಡೆಯಾಗಿದ್ದವು.