ಸಫಲವಾಗುವ ಕೆಲವೇ ಪ್ರೇಮ ಕತೆಗಳ ಹಾಗೆ ಕೆಲವು ಸಿನಿಮಾ ಗೆದ್ದರೆ, ವಿಫಲವಾಗುವ ಹೆಚ್ಚಿನ ಪ್ರೇಮಕತೆಗಳಂತೆ ಹೆಚ್ಚಿನವು ಮಕಾಡೆ ಮಲಗಿವೆ. ಆದರೆ ‘ಮುದಲ್ ನೀ ಮುಡಿವುಂ ನೀ’ ತಾನು ಹೇಳುವ ಕಾಲಘಟ್ಟವನ್ನು ಸಮರ್ಥವಾಗಿ ತೋರಿಸಿದ ಕಾರಣ ಮನಮುಟ್ಟುವಲ್ಲಿ ಗೆದ್ದಿದೆ. ನೇರ OTTಯಲ್ಲಿ ಬಿಡುಗಡೆಯಾಗಿರುವ ತಮಿಳು ಸಿನಿಮಾ ZEE5ನಲ್ಲಿ ಬಿತ್ತರವಾಗುತ್ತಿದೆ.
‘ನಾವು ಶಾಲೆಗೆ ಹೋಗುವ ಕಾಲದಲ್ಲಿ ಹೀಗಿರಲಿಲ್ಲ. ಈಗಿನ ಮಕ್ಕಳಿಗೆ ಆ ದಿನಗಳ ಮಜವೇ ಇಲ್ಲ. ಇಂದಿನ ಶಾಲೆಗಳೂ ಬೇರೆ, ಇಂದಿನ ಮಕ್ಕಳೂ ಬೇರೆ. ಕಾಲ ಬದಲಾಗಿದೆ.’ ಇಂಥದ್ದೊಂದು ಮಾತನ್ನು ಬಹುಶಃ ಪ್ರತಿಯೊಂದು ತಲೆಮಾರು ಆಡುತ್ತಾ ಬಂದಿದೆ. ನಾನು ಶಾಲೆಗೆ ಹೋಗುವ ದಿನಗಳಲ್ಲಿ ನನಗಿಂತ ಹಿರಿಯರು ಹೇಳುತ್ತಿದ್ದ ಈ ಮಾತುಗಳನ್ನು ಕೇಳಿದ್ದೆ. ಈಗ ನನ್ನ ಮಕ್ಕಳ ಕಾಲಕ್ಕೆ ನಾನೂ ಈ ಮಾತನಾಡುವಷ್ಟು ದೊಡ್ಡವನಾಗಿದ್ದೇನೆ. ನನ್ನ ಮಕ್ಕಳು ದೊಡ್ಡವರಾಗುವ ಕಾಲಕ್ಕೆ ಅವರೂ ಇದೇ ಧಾಟಿ ಮಾತನಾಡಬಹುದು. ‘ಆಹಾ, ಆಗಿನ ಕಾಲವೇ ಬೇರೆ. ಆನ್ಲೈನ್ ಕ್ಲಾಸಿನ ಮಜವೇ ಬೇರೆ’ ಅನ್ನಬಹುದೇನೋ. ಒಟ್ಟಿನಲ್ಲಿ ನಮ್ಮ ಕಾಲವೇ ಚೆನ್ನಾಗಿತ್ತು ಎಂದನಿಸುವುದು ಪ್ರತಿ ತಲೆಮಾರಿನ ಸತ್ಯ. ‘ಆ ಕಾಲವೊಂದಿತ್ತು, ದಿವ್ಯ ತಾನಾಗಿತ್ತು, ಅದು ಬಾಲ್ಯವಾಗಿತ್ತು!’ ಎಂಬ ಕುವೆಂಪು ಸಾಲು ಎಲ್ಲಾ ಕಾಲಕ್ಕೂ ಸತ್ಯ. ಸ್ವರೂಪ ಮಾತ್ರ ಬೇರೆ.
‘ನೈಂಟೀಸ್ ಕಿಡ್ಸ್ ಆರ್ ದ ಲಕ್ಕಿಯೆಸ್ಟ್’ ಎಂಬ ಸಾಲುಗಳನ್ನು ಇವತ್ತು ಫೇಸ್ಬುಕ್-ಟ್ವಿಟ್ಟರ್ಗಳಲ್ಲಿ, ಮೀಮ್ಸ್-ಪೋಸ್ಟರ್ಗಳಲ್ಲಿ ಕಾಣಬಹುದು. ಅಂಥ ತೊಂಭತ್ತರ ದಶಕದ ಕಾಲವನ್ನು ಈ ಕಾಲದಲ್ಲಿ ಹಿಡಿದಿಟ್ಟ ತಮಿಳು ಸಿನಿಮಾ ‘ಮುದಲ್ ನೀ ಮುಡಿವುಂ ನೀ’. ಹಾಗೆ ನೋಡಿದರೆ ಕ್ಯಾಂಪಸ್ ಲವ್ ಸ್ಟೋರಿ ಸಿನಿಮಾಗಳು ಎಲ್ಲಾ ಭಾಷೆಗಳಲ್ಲೂ ಬಂದಿವೆ. ಸಫಲವಾಗುವ ಕೆಲವೇ ಪ್ರೇಮ ಕತೆಗಳ ಹಾಗೆ ಕೆಲವು ಸಿನಿಮಾ ಗೆದ್ದರೆ ವಿಫಲವಾಗುವ ಹೆಚ್ಚಿನ ಪ್ರೇಮಕತೆಗಳಂತೆ ಹೆಚ್ಚಿನವು ಮಕಾಡೆ ಮಲಗಿವೆ. ಆದರೆ ಈ ಸಿನಿಮಾ ತಾನು ಹೇಳುವ ಕಾಲಘಟ್ಟವನ್ನು ಸಮರ್ಥವಾಗಿ ತೋರಿಸಿದ ಕಾರಣ ಮನಮುಟ್ಟುವಲ್ಲಿ ಗೆದ್ದಿದೆ.
ಮೇಲ್ನೋಟಕ್ಕೆ ಇದು ವಿನೋದ್ ಮತ್ತು ರೇಖಾ ಎಂಬ ಇಬ್ಬರು ಕ್ಲಾಸ್ಮೇಟ್ಗಳ ಪ್ರೇಮಕಾವ್ಯ. ಕಾನ್ವೆಂಟೊಂದರ ಹಿನ್ನೆಲೆಯಲ್ಲಿ ಆ ಕತೆ ನಡೆಯುತ್ತದೆ. ಆದರೆ ಮೊದಲ ಎಪ್ಪತ್ತು ನಿಮಿಷ ನೀವು ಹೈಸ್ಕೂಲು – ಕಾಲೇಜು ದಿನಗಳಲ್ಲಿ ಕಂಡ ಎಳೆಯ ಪ್ರೇಮ ಪ್ರಕರಣ ನೆನಪಿಸಬಹುದು. ಅಲ್ಲಿ ನಿಮ್ಮ ಪ್ರೇಮ ಕತೆಯೂ ಇರಬಹುದು. ಹುಡುಗ ಹುಡುಗಿಯ ಪ್ರೇಮವನ್ನಷ್ಟೇ ನೆನಪಿಸಿದ್ದರೆ ಈ ಚಿತ್ರ ಸೋಲುತ್ತಿತ್ತು. ಆದರೆ ಈ ಚಿತ್ರ ಒಂದು ಕಾಲಘಟ್ಟದ ಪ್ರೇಮವನ್ನು ಹಿಡಿದಿಟ್ಟು ಗೆದ್ದಿದೆ. ಆಗ ಹಾಡು ಕೇಳಲು ಕ್ಯಾಸೆಟ್ ಇತ್ತು. ಹಾಡಿಗಿಷ್ಟು ಎಂದು ಕಾಸುಕೊಟ್ಟು ರೆಕಾರ್ಡ್ ಮಾಡಲಾಗುತ್ತಿತ್ತು. ಟೇಪ್ ರೆಕಾರ್ಡರಿಗೆ ಆಗಾಗ ಟೇಪು ಸುತ್ತಿಕೊಳ್ಳುತ್ತಿತ್ತು. ವಾಕ್ ಮ್ಯಾನ್ ಎಂಬ ಮಾಯಾವಿಯಿತ್ತು. ಅದು ಸಿಕ್ಕಾಪಟ್ಟೆ ಬ್ಯಾಟರಿ ತಿನ್ನುತ್ತಿತ್ತು ಎಂಬುದನ್ನೆಲ್ಲ ನೆನಪಿಸಲು ಗಟ್ಟಿಯಾಗಿ ಕಟ್ಟಿದ ದೃಶ್ಯಗಳಿವೆ.
ತೆರೆಯ ಮೇಲೆ ಆ ದೃಶ್ಯ ಕಾಣುತ್ತಿದ್ದರೆ ಅದಕ್ಕೆ ಸರಿಸಮಾನ ದೃಶ್ಯವೊಂದು ನಮ್ಮ ಮನಸ್ಸಿನ ಪರದೆ ಮೇಲೆಯೂ ತೆರೆದುಕೊಳ್ಳುತ್ತದೆ. ಕ್ಯಾಸೆಟ್ ರಿವೈಂಡ್ ಮಾಡಿದರೆ ವಾಕ್ ಮ್ಯಾನ್ನ ಬ್ಯಾಟರಿ ವಿನಾಕಾರಣ ಖಾಲಿಯಾಗುತ್ತದೆ ಎಂದು ಕ್ಯಾಸೆಟ್ಟಿಗೆ ಪೆನ್ನು ಸಿಕ್ಕಿಸಿ ಗಿರಗಿರನೆ ತಿರುಗಿಸುವ ಸನ್ನಿವೇಶದ ಹಿಂದೆ ಮುಂದೆಯೂ ಕತೆ ನಡೆಯುವ ಕಾರಣ ಉದ್ದೇಶಪೂರ್ವಕವಾಗಿ ತುರುಕಿದ ದೃಶ್ಯಗಳಂತಿಲ್ಲ. ಶಾಲೆಗೆ ತಡವಾದಾಗಲೇ ಚೈನು ಕಳಚಿಕೊಂಡು ನಿಸ್ತೇಜವಾಗುವ ಸೈಕಲ್ ಕಂಡಾಗ ಕೈ ಬೆರಳುಗಳ ನಡುವೆ ಅಂಟಿದ ಗ್ರೀಸು ಕಣ್ಮುಂದೆ ಬರುತ್ತದೆ.
ಹಾಗೆಯೇ ಫುಟ್ಬಾಲು, ವಾಲಿಬಾಲು, ಶಾಟ್ ಪುಟ್, ಲಾಂಗ್ ಜಂಪು, ರನ್ನಿಂಗ್ ರೇಸಿನ ಟ್ರ್ಯಾಕಿಗೆಲ್ಲ ನಿಮ್ಮನ್ನು ಕರೆದೊಯ್ಯುವ ಚಿತ್ರದ ಮೊದಲಾರ್ಧವನ್ನು ‘ಸವಿನೆಪುಗಳು ಬೇಕು ಸವಿಯಲೀ ಬದುಕು’ ಎನ್ನುತ್ತಲೇ ನೋಡುತ್ತೀರಿ. ಫೇರ್ವೆಲ್ ಪಾರ್ಟಿಗೆ ಒಬ್ಬರಿಗೆ ಒಂದೇ ಸಮೋಸ ಎಂಬಲ್ಲಿಗೆ ಬರುವ ಹೊತ್ತಿಗೆ ವಿನೋದ್ಗೂ ರೇಖಾಗೂ ನಡುವಿನ ಎಳೆಯ ಪ್ರೇಮಕತೆಯ ಪರಿಪೂರ್ಣ ಪರಿಚಯವಾಗಿರುತ್ತದೆ. ಅವರಿಬ್ಬರ ಫ್ರೆಂಡು ಚೈನೀಸ್ ಬಗ್ಗೆ ತಿಳಿದಿರುತ್ತದೆ. ರಿಚರ್ಡ್ ಎಂಬಾತ ಸ್ವಲ್ಪ ಒರಟ, ಫ್ರಾನ್ಸಿಸ್ ತನ್ನ ಬಗ್ಗೆಯೇ ಏನೋ ಮುಚ್ಚಿಟ್ಟುಕೊಂಡವ ಎಂಬುದೂ ಅರಿವಿಗೆ ಬರುತ್ತದೆ.
ಇದೆಲ್ಲ ಕಳೆದು ಸಿನಿಮಾ ಮಗ್ಗುಲು ಬದಲಿಸಿ ಕೆಲವು ವರ್ಷ ಮುಂದಕ್ಕೆ ಬಂದಾಗ ವಿನೋದ್ ಬಿಡುವಿಲ್ಲದ ಸಂಗೀತ ನಿರ್ದೇಶಕ. ರಿಚರ್ಡ್ ಸಂಸಾರಸ್ಥ. ಚೈನೀಸ್ ಈಗಲೂ ವಿನೋದನ ಆಪ್ತ ಗೆಳೆಯ. ಮೊದಲಾರ್ಧದಲ್ಲಿ ನಮಗೆ ಅಷ್ಟೂ ಪಾತ್ರಗಳು ಹತ್ತಿರವಾಗುವ ಕಾರಣ ಉಳಿದವರೆಲ್ಲ ಈಗ ಏನಾಗಿದ್ದಾರೆ ಎಂಬ ಕುತೂಹಲ ನಮ್ಮಲ್ಲೂ ಇರುತ್ತದೆ. ಹಾಗಾಗಿ ರೀ ಯೂನಿಯನ್ಗೆ ಒಬ್ಬೊಬ್ಬರಾಗಿ ಬರುವಾಗ ಬರಲು ಬಾಕಿಯಿರುವ ಮತ್ತೊಬ್ಬರಿಗೆ ನಾವು ಕಾಯುತ್ತೇವೆ. ಆದರೆ ಸರಿಸುಮಾರು ಮುಕ್ಕಾಲು ಗಂಟೆ ಸಾಗುವ ರೀ ಯೂನಿಯನ್ ಪಾರ್ಟಿ ನಡುನಡುವೆ ಸ್ವಲ್ಪ ಹೊತ್ತು ಬೋರು ಹೊಡೆಸುತ್ತದೆ ಎಂಬುದೊಂದು ಕೊರತೆ. ಮತ್ತೊಮ್ಮೆ ಮಗ್ಗುಲು ಬದಲಿಸುವ ಕತೆ ಕೊಂಚ ಬೇಗ ಅತ್ತ ಹೊರಳಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಆದರೂ, ಬರುವ ತಿರುವು ಹೊಸ ಆಯಾಮ ನೀಡುವುದು ಸುಳ್ಳಲ್ಲ.
ಚೊಚ್ಚಲ ನಿರ್ದೇಶಕ ದರ್ಬೂಕ್ ಶಿವ 40ನೇ ವಯಸ್ಸಿಗೆ ರಚಿಸಿ ನಿರ್ದೇಶಿದ ‘ಮುದಲ್ ನೀ ಮುಡಿವುಂ ನೀ’ ತಾಂತ್ರಿಕತೆಯಲ್ಲಿ ಎಲ್ಲೂ ಎಡವಿಲ್ಲ. ಈ ಹಿಂದೆ ರೇಡಿಯೋ ಜಾಕಿಯಾಗಿದ್ದ ದಿನಗಳಿಂದಲೂ ಸಂಗೀತ ಕ್ಷೇತ್ರದಲ್ಲೂ ಗುರುತಿಸಿಕೊಂಡ ನಿರ್ದೇಶಕ ಹಿನ್ನೆಲೆ ಸಂಗೀತವನ್ನೂ ನೀಡಿದ್ದಾರೆ. ರೊಮ್ಯಾಂಟಿಕ್ ಚಿತ್ರಕ್ಕಿರಬೇಕಾದ ಹಾಡುಗಳು ರೊಮ್ಯಾಂಟಿಕ್ ಮಂದಿಗೆ ಇಷ್ಟವಾಗುವಂತಿದೆ. 36ರ ಹೊಸ್ತಿಲಲ್ಲಿರುವ ಸುಜಿತ್ ಸಾರಂಗ್ ಕ್ಯಾಮರಾ ಹಿಂದೆ ಹನ್ನೊಂದು ಸಿನಿಮಾಗಳ ಅನುಭವವಿದೆ, ತೊಂಭತ್ತರ ದಶಕವನ್ನು ಸಮರ್ಥವಾಗಿ ತೆರೆಗೆ ತಂದಿದ್ದಾರೆ. ಗೆಳೆಯರಿಬ್ಬರು ರೀ ಯೂನಿಯನ್ ಪಾರ್ಟಿಗೆ ಹೋಗುವಾಗ ಕಾರಿನ ಕನ್ನಡಿಯ ಮೇಲೆ ಸಾಗುವ ಸಾಲು ಮರದ ಪ್ರತಿಬಿಂಬ ಕಳೆದ ಕಾಲವನ್ನು ಕಾವ್ಯಾತ್ಮಕವಾಗಿ ಸೆರೆ ಹಿಡಿದಿದೆ.
ಎರಡೂ ಕಾಲು ಗಂಟೆ ಒಂದು ಕತೆ ಹೇಳಿದ ನಿರ್ದೇಶಕರಿಗೆ ಮೊದಲ ಚಿತ್ರದಲ್ಲಿ ನೆಗೆಟಿವ್ ಕ್ಲೈಮ್ಯಾಕ್ಸ್ ತೋರಿಸುವುದು ಇಷ್ಟವಿರಲಿಲ್ಲ. ಹಾಗಾಗಿ ಕೊನೆಗೆ ಕತೆ ಬದಲಿಸಿ ಆರೇಳು ನಿಮಿಷಗಳಲ್ಲಿ ಮತ್ತೊಂದು ಥರದಲ್ಲಿ ನಿರೂಪಿಸುತ್ತಾರೆ. ಇದರಿಂದಾಗಿ ಎರಡು ಕ್ಲೈಮ್ಯಾಕ್ಸ್ ಇರುವ ಈ ಸಿನಿಮಾದಲ್ಲಿ ನಿಮಗೆ ಯಾವುದಿಷ್ಟವೋ ಅದನ್ನೇ ಕೊನೆ ಎಂದು ಆಯ್ದುಕೊಳ್ಳಬೇಕು. ಈ ವರ್ಷ ನೇರ OTTಯಲ್ಲಿ ಬಿಡುಗಡೆಯಾದ ‘ಮುದಲ್ ನೀ ಮುಡಿವುಂ ನೀ’ ZEE5ನಲ್ಲಿ ಬಿತ್ತರವಾಗುತ್ತಿದೆ.
ಸರಳ ಸುಂದರ ಬರಹ..
ಸಿನೆಮಾ ನೊಡಿದಕಿಂತ ಹೆಚ್ಚು ಬರಹ ಖುಷಿ ಕೊಟ್ಟಿದೆ.