ಏನೋ ತಪ್ಪಾಗುತ್ತಿದೆ, ಹೇಗಾದರೂ ಸರಿಪಡಿಸಿ ಪ್ರಿಯಕರನನ್ನು ಉಳಿಸಿಕೊಳ್ಳಬೇಕು ಎನ್ನುವುದನ್ನು ದೃಢಪಡಿಸಿಕೊಳ್ಳುತ್ತಾಳೆ. ಆಗುತ್ತಿರುವ ತಪ್ಪಿಗೆ ಕಾರಣಗಳೇನು ಎಂಬುದಕ್ಕೆ ತನ್ನನ್ನೇ ತಾನು ಪ್ರಶ್ನೆ ಮಾಡಿಕೊಂಡು ಹತ್ತಾರು ರೀತಿಯಲ್ಲಿ ಆಲೋಚಿಸುತ್ತಾಳೆ. ಬರವಸೆಯೊಂದಿಗೆ ಮತ್ತೆ ತನ್ನ ಓಟ ಆರಂಬಿಸುತ್ತಾಳೆ – ‘ಲೂಪ್‌ ಲಪೇಟಾ’ ಹಿಂದಿ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಸಿನಿಮಾಗಳಲ್ಲಿ ಒಂದುಸಾರಿ ತೆರೆದುಕೊಂಡ ಹಾಸ್ಯ ಸನ್ನಿವೇಶ ಮತ್ತು ಸಂಭಾಷಣೆ ಮತ್ತೆ ಮತ್ತೆ ಕೇಳಿಬಂದರೆ ಪ್ರೇಕ್ಷಕರಿಗೆ ಮಜಾ ಅನಿಸೋಲ್ಲ. ಆದರೆ ಆ ಭಾವನೆ ಈ ಸಿನಿಮಾದಲ್ಲಿ ಬ್ರೇಕ್‌ ಆಗಬಹುದಾದ ಅನುಭವ ನೀಡುತ್ತೆ. ಏಕೆಂದರೆ ಈ ಸಿನಿಮಾದಲ್ಲಿ ಕೆಲ ಸಂಭಾಷಣೆಯಷ್ಟೇ ಅಲ್ಲ, ಕತೆಯೇ ಸುತ್ತಿ ಸುತ್ತಿ ಬಂದು ತಾಜಾತನದೊಂದಿಗೆ ರಂಜಿಸುತ್ತದೆ.

ಈ ಸಿನಿಮಾ ಹೊತ್ತು ತಂದ ವಿಷಯದಿಂದಾಚೆಗೂ ತನ್ನ ಸೃಜನಶೀಲತೆಯಿಂದ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯಬಹುದು. ಯಾವುದೇ ಪರಿಧಿ ಇಲ್ಲದೇ ಎಲ್ಲಾ ದಿಕ್ಕಿನಿಂದಲೂ ಸುತ್ತುವ ಕ್ರಿಯೇಟಿವ್‌ ಕ್ಯಾಮರಾ ವರ್ಕ್‌, ರಿಧಮ್‌ ಬ್ರೇಕಿಂಗ್‌ ಸೌಂಡ್‌ ಡಿಸೈನ್‌ ಉತ್ತಮ ಸಂಗೀತ, ಕಲಾವಿದರ ಅಭಿನಯ ಕೌಶಲ್ಯ, ಕ್ರಿಸ್ಪಿ ಕಟ್‌ ಹಾಗು ಮಲ್ಟಿಪಲ್‌ ಲೇಯರ್ಸ್‌ ಸಂಕಲನ, ಕಲರ್‌ ಟೋನ್ ಟ್ಯೂನಿಂಗ್‌ನಂತಹ ನಾಲ್ಕಾರು ಪ್ರಯೋಗಾತ್ಮಕ ಸೃಜನಶೀಲತೆಯಿಂದಲೇ ಸಿನಿಮಾ ಒಂದು ಹೊಸ ರೀತಿಯ ಅನುಭವ ನೀಡುತ್ತದೆ. ಸಿನಿಮಾದ ವಿಷಯ ಸಾಮಾನ್ಯ ಟೈಮ್‌ಲೂಪ್‌ ಸಿನಿಮಾಗಳಲ್ಲಿ ಇರಬಹುದಾದ ವಿಷಯವೇ. ಒಂದು ಕನಸು ಅಥವ ಕಲ್ಪನೆ ಸೃಷ್ಟಿಯಾಗುತ್ತದೆ. ಅದು ನಿಜವಾಗುತ್ತಾ ಹೋಗುತ್ತದೆ. ಕೊನೆಗೊಂದು ದೊಡ್ಡ ಸಮಸ್ಯೆಯೊಂದಿಗೆ ಕೊನೆಯಾಗುತ್ತದೆ. ಆ ಸಮಸ್ಯೆಯಿಂದ ತಪ್ಪಿಸಿ ಆ ಸಮಯವನ್ನು ಮೀರಿ ಅದನ್ನು ಕೊನೆಯಾಗಿಸುವುದು ಮುಖ್ಯ ಪಾತ್ರದ ಗುರಿಯಾಗಿರುತ್ತದೆ. ಅಂಥದ್ದೇ ವಿಷಯ ಈ ಸಿನಿಮಾದ ಕತೆಯೂ ಕೂಡ. ಈ ಚಿತ್ರ 1998ರ ಜರ್ಮನ್‌ ಸಿನಿಮಾ ‘ರನ್‌ ಲೋಲಾ ರನ್‌’ ಹಿಂದಿ ರೂಪಾಂತರ. ಆ ಸಿನಿಮಾ ಅಕಾಡೆಮಿ ಅವಾರ್ಡ್‌ಗೆ ಪ್ರವೇಶ ಗಿಟ್ಟಿಸಿಕೊಂಡಿತ್ತಂತೆ.

ಹಲವು ದಿಕ್ಕಿನಿಂದ ಯೋಚಿಸಿ ತೆಗೆದುಕೊಳ್ಳುವ ನಿರ್ಧಾರ ಉತ್ತಮ ನಿರ್ಧಾರವಾಗಿರುತ್ತದೆ, ಉತ್ತಮ ನಿರ್ಧಾರಗಳು ಅನುಭವದಿಂದ ಬರುತ್ತವೆ, ಅನುಭವವು ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಬರುತ್ತದೆ ಎನ್ನುವುದೇ ಈ ಸಿನಿಮಾದಲ್ಲಿ ಬರುವ ಎಲ್ಲ ಕಥೆಗಳ ಭಾವಾರ್ಥವಾದರೆ, ಅವಳು ಹೇಗೆ ಅವನಿರುವಲ್ಲಿಗೆ ತಲುಪುತ್ತಾಳೆ? ರಸ್ತೆಯಲ್ಲಿ ಏನೆಲ್ಲ ನಡೆಯುತ್ತದೆ ಎನ್ನುವುದೇ ಚಿತ್ರಕಥೆಯ ರೋಚಕತೆ.

ಸವಿ ಕ್ರೀಡಾಪಟು, ಓಟಗಾರ್ತಿ. ಆಕೆ ಮೈದಾನದಲ್ಲೊಮ್ಮೆ ಬಿದ್ದು ಆದ ಮೊಣಕಾಲಿನ ಗಾಯದಿಂದ ವೃತ್ತಿಜೀವನಕ್ಕೆ ತೊಡಕಾಗಿದೆ. ಅವಳಿಗೆ ಸತ್ಯಜಿತ್‌ ಎನ್ನುವ ಬಾಯ್‌ಫ್ರೆಂಡ್ ಇದ್ದಾನೆ. ಇವರಿಬ್ಬರ ಭೇಟಿ, ನಂತರ ಪ್ರೀತಿಯಾಗಿದ್ದೇ ಒಂದು ಕತೆ. ಆಕೆ ಮಾದಕ ವ್ಯಸನಿ. ಒಂದು ದಿನ ನಶೆಯ ಹ್ಯಾಂಗೋವರ್ ನಂತರದ ವಿಚಿತ್ರ ಅನುಭವದಿಂದಾಗಿ ಅವಳಿಗೆ ಎರಡು ವಿಷಯ ತಿಳಿಯುತ್ತದೆ. ಒಂದು ಆಕೆ ಗರ್ಭವತಿಯಾಗಿದ್ದಾಳೆ, ಮತ್ತೊಂದು ಆಕೆಯ ಗೆಳೆಯ ಸತ್ಯ ಯಾರದೋ ಗುಂಡಿಗೆ ಬಲಿಯಾಗುತ್ತಾನೆ ಅನ್ನೋದು.

ಇನ್ನು, ಈ ಸತ್ಯ ಮೋಜಿನ ಮನುಷ್ಯ. ತನಗೂ ಒಳ್ಳೇ ಟೈಂ ಬರುತ್ತೆ ಅನ್ನೋ ಭರವಸೆಯಲ್ಲಿ ಜೂಜಿನ ಮೇಲೆ ನಂಬಿಕೆ ಇಟ್ಟುಕೊಂಡಿರುವಂಥವನು. ತನ್ನ ಬಾಸ್ ಬಳಿ ಗೆಳತಿಯ ಬರ್ತ್‌ಡೇ ಇದೆ, ಖರ್ಚಿಗೆ ದುಡ್ಡು ಬೇಕಾಗಿದೆ ಎಂದು ಅಡ್ವಾನ್ಸ್ ಕೇಳುತ್ತಾನೆ. ಆದರೆ ಬಾಸ್, ಕಾಸು ಸಂಪಾದಿಸಲು ಮಾರ್ಗ ಸೂಚಿಸುತ್ತಾ ರಹಸ್ಯ ಮಾಫಿಯಾದಲ್ಲಿ ಒಂದು ಟಾಸ್ಕ್ ಕೊಡುತ್ತಾನೆ. ಒಂದು ಬ್ಯಾಗ್ ಕೊಟ್ಟು, ಕೈಲೊಂದು ಗನ್ ಇಟ್ಟು, ಅಲ್ಲೆಲ್ಲೋ ಬ್ಯಾಗ್ ತಲುಪಿಸಿ ಅವರಲ್ಲಿಂದ 50 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬರುವಂತೆ ಹೇಳಿ ಕಳುಹಿಸುತ್ತಾನೆ. ಕೆಲಸ ಮುಗಿಸಿ ಕೈಗೆ ಬಂದ ಹಣ ನೋಡುವ ಸತ್ಯ ಆ ಹಣವನ್ನು ತನ್ನ ಜೂಜಿಗೆ ಒಯ್ದು ದ್ವಿಗುಣಗೊಳಿಸಿಕೊಳ್ಳುವ ಆಲೋಚನೆ ಮಾಡುತ್ತಾನೆ.

ಆದರೆ ಅಂತಿಮವಾಗಿ ಜೂಜಿನ ಅಡ್ಡಕ್ಕೆ ಹೋಗುವ ಮೊದಲೇ ಹಣ ಕಳೆದುಕೊಳ್ಳುತ್ತಾನೆ. ಆ ವಿಷಯ ಸವಿಗೆ ಫೋನ್ ಮಾಡಿ ತಿಳಿಸುತ್ತಾನೆ.ಈಗ ಹೇಗಾದರೂ ಮಾಡಿ ಹಣ ಹೊಂದಿಸಿ ವಾಪಸ್ ಕೊಡದಿದ್ದರೆ ಅವನ ಬಾಸ್ ಕೊಲ್ಲುತ್ತಾನೆ ಎಂದು ಅರಿತವರು ಅಭರಣದ ಅಂಗಡಿಯೊಂದನ್ನು ದೋಚುವ ಆಲೋಚನೆ ಮಾಡುತ್ತಾರೆ. ಸವಿ ತಾನಿದ್ದಲ್ಲಿಂದ ಅವನಿರುವಲ್ಲಿಗೆ ಓಡಿ ಹೋಗಿ ತಲುಪಿ ಏನೇನೋ ಮಾಡಿ ಹಣ ಹೊಂದಿಸಿದರೂ, ಕೊನೆಗೆ ಅವನು ಗುಂಡಿಗೆ ಬಲಿಯಾಗುತ್ತಾನೆ. ಅಷ್ಟೆಲ್ಲಾ ಪ್ರಯತ್ನಿಸಿದರೂ ಕೊನೆಗೆ ಉಳಿಸಿಕೊಳ್ಳಲು ಆಗದೇ ಗೆಳೆಯನನ್ನು ಕಳೆದುಕೊಂಡು ರೋಧಿಸುತ್ತಾಳೆ.

ಆದರೆ ನಂತರ ಇವಳು ಈಗಷ್ಟೇ ನಶೆಯಿಂದ ಹೊರಬಂದದ್ದು ಎನ್ನುವುದು ಈಗ ನಡೆದದ್ದೆಲ್ಲ ಅವಳ ಕಲ್ಪನೆಗೆ ಬಂದದ್ದು, ಇದು ಹೇಗೋ ಅವಳಿಗೆ ಮೊದಲೇ ಗೊತ್ತಾಯ್ತು ಎನ್ನುವುದು ಪ್ರೇಕ್ಷಕರಿಗೆ ಮತ್ತು ಪಾತ್ರಕ್ಕೆ ಅರಿವಾಗುತ್ತದೆ. ಎರಡನೆಯ ಸುತ್ತಿನಲ್ಲಿ ಎಲ್ಲವೂ ಅವಳ ಕಲ್ಪನೆಯಂತೆಯೇ ನಡೆಯುತ್ತಿರುವುದನ್ನು ಗಮನಿಸಿ ಅವಳು ಅವನೇಳುವ ಮುಂಚೆಯೇ ಸತ್ಯಜಿತ್‌ ಹೇಳಬಯಸುವ ಸಂಭಾಷಣೆಯನ್ನು ಇವಳೇ ಹೇಳುತ್ತಿದ್ದಾಳೆ. ಆದರೆ ಅವಳಿಗಾದ ಅನುಭವವವನ್ನು ಅವನಿಗೂ ಬಿಡಿಸಿ ಹೇಳಿ ಅರ್ಥಮಾಡಿಸಲು ಸಮಯವಿಲ್ಲ. ಕಾರಣ ಸಮಯ ಮೀರಿದರೆ ಇವನು ಸಾಯುತ್ತಾನೆ. ಅದನ್ನು ಹೇಗಾದರೂ ಮಾಡಿ ತಪ್ಪಿಸಬೇಕು ಎಂದು ಪ್ರಯತ್ನಿಸುತ್ತಾಳೆ, ಅದು ಸಾಧ್ಯವಾಗುವುದಿಲ್ಲ. ಎರಡನೆಯ ಸುತ್ತಿಗೆ ಚಿತ್ರಕಥೆ ತುಸು ಬದಲಾದರೂ ಮತ್ತದೇ ರೀತಿಯ ಫಲಿತಾಂಶ. ಮೂರನೆಯ ಸುತ್ತಿಗೆ ಶುರುವಾದಾಗ ಇದು ಅವಳಿಗೆ ಕೊನೆಯ ಅವಕಾಶ ಎನ್ನುವುದು ಅರಿವಾಗುತ್ತದೆ.

ಸರಿಪಡಿಸುವ ಪ್ರಯತ್ನದಲ್ಲಿ ಏನೋ ತಪ್ಪಾಗುತ್ತಿದೆ, ಹೇಗಾದರೂ ಸರಿಪಡಿಸಿ ಗೆಳೆಯನನ್ನು ಉಳಿಸಿಕೊಳ್ಳಬೇಕು ಎನ್ನುವುದನ್ನು ದೃಢಪಡಿಸಿಕೊಳ್ಳುತ್ತಾಳೆ. ಆಗುತ್ತಿರುವ ತಪ್ಪಿಗೆ ಕಾರಣಗಳೇನು ಎಂಬುದಕ್ಕೆ ತನ್ನನ್ನೇ ತಾನು ಪ್ರಶ್ನೆ ಮಾಡಿಕೊಂಡು ಹತ್ತಾರು ರೀತಿಯಲ್ಲಿ ಆಲೋಚಿಸುತ್ತಾಳೆ. ಬರವಸೆಯೊಂದಿಗೆ ಮತ್ತೆ ತನ್ನ ಓಟ ಆರಂಬಿಸುತ್ತಾಳೆ. ಈ ಕತೆಯೊಂದಿಗೆ ಉಪಕಥೆಗಳನ್ನು ಹೆಣೆದು ತಿರುಗಿ ಮತ್ತೆ ಸುತ್ತಿ ಬರುವ ದೃಶ್ಯಗಳಿಂದ ಪ್ರೇಕ್ಷಕನಿಗೆ ಬೇಸರ ಮೂಡದಂತೆ ಚಿತ್ರಕಥೆಯನ್ನು ಸರಿದೂಗಿಸಿದ್ದಾರೆ. ಸಾಲದು ಎಂಬಂದೆ ಸತ್ಯವಾನ್ ಸಾವಿತ್ರಿಯ ಕತೆ ಸಂಭಾಷಣೆಯಲ್ಲಿ ಪ್ರಸ್ತಾಪವಾಗುತ್ತದೆ. ಒಟ್ಟಾರೆಯಾಗಿ ಸಾವಿತ್ರಿಯಂತೆ ಈ ಸವಿ ಸತ್ಯನನ್ನು ಹೇಗೆ ಉಳಿಸಿಕೊಳ್ಳುತ್ತಾಳೆ ಎನ್ನುವುದು ಕತೆಯ ರೋಚಕತೆ. ಒಂದು ವರ್ಗದ ಪ್ರೇಕ್ಷಕರಿಗೆ ಸಿನಿಮಾ ನೋಡುವಾಗ ಧೀರ್ಘ ಅನಿಸದಿದ್ದರೂ, ನಂತರದಲ್ಲಿ ‘ಎಂಥ ಸಿನಿಮಾ ಇದು!’ ಎಂದು ಅವರು ಉದ್ಘರಿಸಬಹುದು. ಅಷ್ಟೂ ಕಥೆಗಳ ಜೋಡಣೆಯೇ ಒಂದು ಸೋಜಿಗ ಎನಿಸುತ್ತದೆ.

ಸಿನಿಮಾದಲ್ಲಿ ಲಾಜಿಕ್ ಮಿಸ್ಸಾಗಿದೆ ಅನ್ನೋದು ಗೊತ್ತಾದರೂ ಅದರ ಕುರಿತು ಚಿಂತಿಸಲು ಪ್ರೇಕ್ಷಕನಿಗೆ ಸಮಯ ಕೊಡದಂತೆ ವೇಗವಾಗಿಯೇ ದೃಶ್ಯಗಳು ಬದಲಾಗುತ್ತಾ ಚಿತ್ರಕಥೆ ಸಾಗುತ್ತದೆ. ಶೀರ್ಷಿಕೆ ಗೀತೆ, ಭಾಗ್‌ಲೇ ಭಾಗ್‌ಲೇ ಬೇಟಾ ಸೇರಿದಂತೆ ಎಲ್ಲಾ ಹಾಡುಗಳೂ ಇಷ್ಟವಾಗಬಹುದು. ಕಥೆ ಎಲ್ಲೂ ಬೇಸರ ಮೂಡಿಸುವುದಿಲ್ಲ. ಸಿನಿಮಾದುದ್ದಕ್ಕೂ ಹತ್ತಾರೂ ಪಾತ್ರಗಳಿದ್ದು ಎಲ್ಲವೂ ಇಷ್ಟವಾಗಬಹುದು. ಹೀಗೆ ಒಂದು ದೃಶ್ಯದಲ್ಲಿ ಸವಿ, ಜೂಲಿಯಾಳ ದುಃಖದ ಸ್ಥಿತಿಯನ್ನು ನೋಡಿ ‘Are You Ok’ ಎಂದು ಕೇಳುವ ಪ್ರಶ್ನೆಗೆ, ಜೂಲಿಯಾ ತನ್ನೊಳಿಗಿನ ಗೊಂದಲಗಳನ್ನು ಹಲವು ಭಾವಗಳ ಮುಖೇನ ಏಕಪಾತ್ರ ಅಭಿನಯದ ಮಾದರಿಯಲ್ಲಿ ವ್ಯಕ್ತಪಡಿಸುವ ಸಿಂಗಲ್ ಶಾಟ್ ನಿರೂಪಣೆ ಮತ್ತು Shreya Dhanwanthary ನಟನೆ ಅವಿಸ್ಮರಣೀಯವಾಗಿ ಉಳಿಯಬಹುದು.

ಈ ಚಿತ್ರದಲ್ಲಿ ಸವಿ (ತಾಪ್ಸಿ ಪನ್ನು) ಅಷ್ಟೊಂದು ಓಡೋದ್ಯಾಕೆ? ಮೂಲ ‘ರನ್ ಲೋಲಾ ರನ್’ ಚಿತ್ರದಲ್ಲಿ ಲೋಲಾ ಓಡ್ತಾಳೆ ಅಂತಲೋ? ತಾಪ್ಸಿ ಪನ್ನು ಈ ಹಿಂದೆ ‘ರಶ್ಮಿ ರಾಕೇಟ್’ ಚಿತ್ರದಲ್ಲಿ ಓಟಗಾರ್ತಿ ಆಗಿದ್ಲು ಅಂತಲೋ? ಅಥವಾ ಸವಿ ಮಂಡಿಗೆ ಪೆಟ್ಟಾಗಿದ್ರೂ ಅದನ್ನು ಮೆಟ್ಟಿನಿಂತು ಓಡಬಲ್ಲಳು ಅನ್ನೋದನ್ನು ಸೂಚಿಸಲು ಓಡ್ತಾಳೋ ಎನ್ನುವ ತರ್ಕ ಅರ್ಥವಾಗೋಲ್ಲ. ಚಿತ್ರದ ಸಂಪೂರ್ಣ ಚಿತ್ರೀಕರಣ ಗೋವಾದಲ್ಲಿ ನಡೆದಿದೆ.

ಟೈಮ್ ಲೂಪ್ ಸಿನಿಮಾ ನೋಡುವ ಆಸಕ್ತಿ ಇರುವವರಿಗೆ ಈ ಲೂಪ್ ಲಪೇಟಾ ರಂಜಿಸಬಹುದು. ಬರೀ ಟೈಮ್ ಲೂಪ್ ಅಲ್ಲದೆ ಕೆಲ ದೃಶ್ಯಗಳಲ್ಲಿ ಹಸಿರು ಚಿಟ್ಟೆಯೊಂದನ್ನು ಹಾರಿ ಬಿಟ್ಟು ಅಲ್ಲಲ್ಲಿ ಬಟರ್ ಫ್ಲೈ ಎಫೆಕ್ಟ್ ಅನ್ನು ಕೂಡ ಕತೆಯಲ್ಲಿ ಹೇಳಲು ಹೊರಟಿರುವುದನ್ನು ಸಿಂಬಾಲಿಕ್‌ ಆಗಿ ಕೋಟ್ ಮಾಡಿ ಪ್ರೇಕ್ಷಕರಿಗೆ ಸುಳಿವು ನೀಡುತ್ತಾರಾದರೂ ತರ್ಕ ಹುಡುಕುವುದು, ಬಿಡುವುದು ಪ್ರೇಕ್ಷಕರ ಬುದ್ಧಿವಂತಿಕೆಗೆ ಬಿಟ್ಟದ್ದು. ಇಲ್ಲ ಬರೀ ಮನರಂಜನೆಯ ಸಿನಿಮಾ ಎಂದುಕೊಂಡರೂ ಮೋಸವಿಲ್ಲ. ತಿಳಿಹಾಸ್ಯ, ರೊಮ್ಯಾಂಟಿಕ್ ದೃಶ್ಯ, ಸಸ್ಪೆನ್ಸ್‌ನೊಂದಿಗೆ ಪೂರ್ತಿ ಸಿನಿಮಾ ನೋಡಿಸಿಕೊಳ್ಳುತ್ತದೆ. ತಂತ್ರಗಾರಿಕೆ ಮತ್ತು ಸೃಜನಶೀಲತೆಯಿಂದ ಸ್ಫೂರ್ತಿದಾಯಕ ಎನಿಸಬಹುದು.

LEAVE A REPLY

Connect with

Please enter your comment!
Please enter your name here