ಥ್ರಿಲ್ಲರ್ ಜತೆಗೇ ಹಿಮಾಚಲ ಪ್ರದೇಶದ ಜನಪದ ಮಿಳಿತವಾಗಿರುವ ‘ಅರಣ್ಯಕ್’ ವೆಬ್ ಸೀರೀಸ್‌ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಂ ಆಗುತ್ತಿದೆ.

ಭಾರತ ಜಾನಪದದ ಆಗರ. ಜನಜೀವನ, ವಿಸ್ಮಯ, ಕೌತುಕಗಳನ್ನು ನಮ್ಮ ಜಾನಪದ ಹಿಡಿದಿಡುತ್ತದೆ. ಪ್ರದೇಶದಿಂದ ಪ್ರದೇಶಕ್ಕೆ ಇವು ಬದಲಾಗುವುದಿದೆ. ಗಂಗೆ ಬಾರೆ, ಗೌರಿ ಬಾರೆ ಎಂದು ಕರೆಯುವ ಗೊಲ್ಲ ಕನ್ನಡದವ, ಪುಣ್ಯಕೋಟಿ ಕನ್ನಡದಾಕೆ. ಬಂಗಾಳದ ಜಾನಪದದಲ್ಲಿ ಹುಲಿಗೆ ನಾಯಕನ ಸ್ಥಾನ, ಗುಜರಾತ್ ಸಿಂಹಕ್ಕೆ ಮೀಸಲು. ಹೀಗೆ ಜಾನಪದೀಯವಾಗಿ ಹಿಮಾಚಲ ಪ್ರದೇಶದ ಕತೆಯಾಗಬಹುದಾದ ನರಸಿಂಹನ ರೀತಿಯ ಚಿರತೆ ರೂಪಿ ಮಾನವನ ಎಳೆ ಹಿಡಿದು ಸಾಗುವ ಕತೆ ಅರಣ್ಯಕ್.

ಮಹಿಳೆಯರ ಮೇಲೆಯೇ ಎರಗಿ ಬೀಳುವ ಸರಣಿ ಹಂತಕನ ಹುಡುಕಾಟದ ಕತೆಗೆ ಅತ್ಯುತ್ತಮ ರೀತಿಯಲ್ಲಿ ಪ್ರಾದೇಶಿಕತೆಯ ಸ್ಪರ್ಶ ನೀಡಲಾಗಿದೆ. ಕಾಡಿನೊಳಗೊಂದು ವಿಸ್ಮಯಕಾರಿ ಅಣಬೆ ಸಿಗುತ್ತಂತೆ, ಅದನ್ನು ತಿಂದರೆ ಖಾಯಿಲೆಗಳೆಲ್ಲಾ ವಾಸಿಯಾಗುತ್ತಂತೆ ಎಂಬುದು ಗುಡ್ಡಗಾಡು ಪ್ರದೇಶದಲ್ಲಿ ಇರಬಹುದಾದ ಮತ್ತು ಇರಲೇಬೇಕಾದ ಜನಪದ. ಹುಣ್ಣಿಮೆಯ ರಾತ್ರಿಗಳನ್ನೇ ಆರಿಸಿ ಕಾಡಿನಿಂದ ನಾಡಿಗೆ ಬಂದು ಕೊಲೆ ಮಾಡುವ ಚಿರತೆ-ಮಾನವ ಕೊನೆಯವರೆಗೂ ಕುತೂಹಲ ಕಾಯ್ದುಕೊಳ್ಳಲು ವೆಬ್ ಸೀರೀಸ್‌ನಲ್ಲಿ ಇರಬೇಕಾದ ಕತೆ.

ಕಲ್ಪಿತ ಊರಾದ ಸಿರೋಣ್ಹಾ ಹಿಮಾಚಲದಲ್ಲಿ ಇರುವ ಊರು. ಮನ್ಹಾಸ್ (ಝಾಕಿರ್ ಹುಸೇನ್) ಎಂಬ ಎಂಪಿ; ಅವನ ರೆಸಾರ್ಟ್ ವಹಿವಾಟು, ಜಗದಾಂಬ (ಮೇಘ್ನಾ ಮಲಿಕ್) ಎಂಬ ಮಂತ್ರಿ; ಆಕೆಗೊಬ್ಬ ಪುಂಡ ಮಗ, ಗಾಂಜಾ ಸೇದುವ ನಿವೃತ್ತ ಹವಾಲ್ದಾರ್ (ಅಶುತೋಷ್ ರಾಣ), ಟೂರಿಸ್ಟ್ ಗೈಡ್ ಬಂಟಿ ಎಲ್ಲರೂ ಸೇರಿದ ಊರು ನಕಾಶೆಯಲ್ಲಿ ಇಲ್ಲದ ಊರೆಂದು ಅನಿಸುವುದಿಲ್ಲ. ಇಂಥ ಊರಲ್ಲಿ ಪ್ರವಾಸಕ್ಕೆಂದು ಬರುವ ಫ್ರೆಂಚ್ ಮಹಿಳೆಯ ಮಗಳು ಕೊಲೆಯಾಗುವುದು ಮುಂದಿನ ಸುದೀರ್ಘ ಪತ್ತೇದಾರಿಕೆಗೆ ಭದ್ರ ಅಡಿಪಾಯ.

ಪಾತ್ರಗಳೆಲ್ಲ ಮೊದಲಿಗೇ ನಮ್ಮ ಕಣ್ಣೆದುರು ಚೆಲ್ಲಿಕೊಳ್ಳುತ್ತವೆ. ನಂತರದ ಹಂತದಲ್ಲಿ ಒಬ್ಬರಾದ ಮೇಲೊಬ್ಬರಂತೆ ಅನುಮಾನಕ್ಕೆ ಎಡೆಯಾಗುವುದು ಪ್ರೇಕ್ಷಕನ ಕುತೂಹಲ ತೀವ್ರಗೊಳಿಸಲು ಹೇಳಿ ಮಾಡಿಸಿದ ರೆಸಿಪಿ. ಪ್ರತಿ ಪಾತ್ರವೂ ತಮ್ಮೊಳಗೊಂದು ಗುಟ್ಟನ್ನು ಇಟ್ಟುಕೊಂಡಿರುವುದು ಅತ್ಯುತ್ತಮ ಮಸಾಲೆ. ಯಾರಿಗೆ ಯಾರ ಮೇಲೆ ಕಹಿ, ಯಾರ ಮೇಲೆ ಒಲವಿನ ಸಿಹಿ ಎಂಬ ಅಂಶವನ್ನು ಪೊಲೀಸ್ ತನಿಖಾಧಿಕಾರಿಗಳಾದ ಕಸ್ತೂರಿ ಡೋಗ್ರಾ ಮತ್ತು ಅಂಗದ್ ಅಷ್ಟು ಬೇಗನೆ ಬಿಟ್ಟುಕೊಡರು.

ಅಂಗದನಾಗಿ ಬಂಗಾಳಿ ನಟ ಪರಾಂಬ್ರತಾ ಛಟ್ಟೋಪಾಧ್ಯಾಯ್ ಉತ್ತಮ ಅಭಿನಯ ನೀಡಿದ್ದಾರೆ.‌ ಆದರೆ ಎಲ್ಲರನ್ನೂ ಮೀರಿಸಿ ನೂರಕ್ಕೆ ನೂರಾಹತ್ತು ಅಂಕ ಪಡೆಯುವುದು ರವೀನಾ ತಂಡನ್. ಪಂಜಾಬಿ ಛಾಪಿನ ಡೋಗ್ರಿ ಭಾಷೆ‌ ಮಾತಾಡುವ ರವೀನಾ ತಂಡನ್ ಅಲ್ಲೇ ಹುಟ್ಟಿ ಬೆಳೆದವರೇನೋ ಎಂಬ ಅನುಮಾನ ಮೂಡಿಸುತ್ತಾರೆ. ಅಕ್ಕರೆಯ ಅಮ್ಮ, ದಿಟ್ಟ ಪೊಲೀಸ್, ಬೇಸತ್ತ ಪತ್ನಿ – ಪಾತ್ರದ ಈ ಮೂರೂ ಆಯಾಮಗಳು‌ ಈ ಸುಂದರಿಗೆ ಲೀಲಾಜಾಲ. ಆಕೆಯ ಅಭಿನಯ ನೋಡುತ್ತಿದ್ದರೆ ಇಂಥ ಅದ್ಭುತ ನಟಿಯನ್ನು ಸೊಂಟ ಕುಣಿಸಲು ಮಾತ್ರ ಬಳಸಿದ 90ರ ದಶಕದ ನಿರ್ದೇಶಕರ ಬಗ್ಗೆ ಬೇಸರ ಮೂಡುತ್ತದೆ.

ಅಂಥ ನಟಿಯ ಸಾಮಾರ್ಥ್ಯ ಹೊರತಂದ ನಿರ್ದೇಶಕ ವಿನಯ್ ವೈಕುಲ್‌ಗೊಂದು ಧನ್ಯವಾದ. ವೆಬ್ ಸೀರೀಸ್‌ಗೆ ಬೇಕಾಗುವ ಗುಣಗಳನ್ನು ಅಚ್ಚುಕಟ್ಟಾಗಿ ತುಂಬಿರುವವರು ಇಬ್ಬರು ಬರಹಗಾರರು. ಇಪ್ಪತ್ತೈದಕ್ಕೂ ಹೆಚ್ಚು ಹಿಂದಿ ಧಾರಾವಾಹಿಗಳಿಗೆ ಚಿತ್ರಕತೆ ಬರೆದಿರುವ ಚಾರುದತ್ ಆಚಾರ್ಯ‌ ಹಾಗೂ ಶೋಲೆ ನಿರ್ದೇಶಕ ರಮೇಶ್ ಸಿಪ್ಪಿಯ ಮಗ ರೋಹನ್ ಸಿಪ್ಪಿ ಜಂಟಿಯಾಗಿ ಮಾಡಿದ ಚಿತ್ರಕತೆಗೆ ನೋಡಿಸಿಕೊಂಡು ಹೋಗುವ ಪಕ್ವತೆಯಿದೆ. ಪ್ರತಿ ಅಧ್ಯಾಯದ ಶುರುವಿನ ದೃಶ್ಯ ಮುಂದಿನ ನಲುವತ್ತು ನಿಮಿಷ ನೋಡಲು ಆಸಕ್ತಿ ಹುಟ್ಟಿಸಿದರೆ ಕೊನೆಯ ದೃಶ್ಯ ನಂತರ ಎಪಿಸೋಡಿನ ಕುತೂಹಲ ಹೆಚ್ಚಿಸುತ್ತದೆ.

ಕಸ್ತೂರಿ ಡೋಗ್ರಾಳ ಪತಿ (ವಿವೇಕ್ ಮದಾನ್) ಪೊಲೀಸ್ ಹೆಂಡತಿಯ ಸಾಮಾನ್ಯ ಗಂಡನ ತಳಮಳಗಳನ್ನು ಸೂಕ್ಷ್ಮವಾಗಿ ಮುಖದ ಮೇಲೆ ತಂದಿದ್ದಾರೆ. ಮಗಳು ನೂತನ್ (ತನೀಷಾ ಜೋಶಿ) ಚೊಕ್ಕ ಅಭಿನಯ ಮನಸಿಗೆ ಹಿಡಿಸುವಂತಿದೆ. ಒಬ್ಬ ತಂದೆಯೋ ತಾಯಿಯೋ ಆಗಿ ನೋಡುವಾಗ ಆ ಪಾತ್ರ ನಮ್ಮ ಹೊಟ್ಟೆಯೊಳಗೆ ಚಿಟ್ಟೆ ಹಾರಿಸುತ್ತದೆ.

ಸರಣಿ ಹಂತಕನೊಬ್ಬನ ಕತೆ ಹೇಳುವಾಗ ಪ್ರತಿಯೊಂದು ಪಾತ್ರಕ್ಕೂ ಒಂದೊಂದು ಹಿನ್ನೆಲೆ ಇರುವುದು ಚಿತ್ರಕತೆಯನ್ನು ಅನಗತ್ಯ ಎಳೆಯುತ್ತದೆ ಎಂದು ಕೆಲವರಿಗೆ ಅನಿಸಬಹುದು. ಆದರೆ ಕತೆಗೆ ಒಂದೇ ಎಳೆಯಿದ್ದರೆ ಅದಕ್ಕೆ ಸಿರಿವಂತಿಕೆಯಿಲ್ಲ. ಸರಳ ರೇಖೆಗೆ ಕತೆಯಾಗುವ ಶಕ್ತಿಯಿಲ್ಲ, ಎಲ್ಲೆಲ್ಲಿಯೂ ಓಡಾಡಬಹುದಾದ ವಕ್ರ ರೇಖೆಗಳಲ್ಲೇ ಬಗೆಯಲು ಕತೆಗಳು ಸಿಗುವುದು. ಜತೆಗೆ ವೆಬ್ ಸರಣಿ ಎನ್ನುವಾಗ ಪಾತ್ರಗಳನ್ನು ಗಟ್ಟಿಗೊಳಿಸಲು ಸಮಯಾವಕಾಶವೂ ಇರುತ್ತದೆ. ಹಾಗಾಗಿ ಅಂಥ ರೀತಿಯ ಪಾತ್ರ ಪೋಷಣೆ ಇಲ್ಲಿ ನ್ಯಾಯಯುತ. ಹಾಗೆಂದು ಅಷ್ಟೂ ಹೊತ್ತು ನೈಜ ಅನಿಸುವ ‘ಅರಣ್ಯಕ್’ ಸರಣಿ ಕೊನೆಯ ಹಂತದಲ್ಲಿ ಒಂಚೂರು ಸಿನಿಮೀಯವಾಗಿದೆ ಎಂಬುದು ನಿಜ. ಆದರೆ ಮುಂದಿನ ಸೀಸನ್‌ಗೆ ಆಗುವ ಒಂದಷ್ಟು ಕುತೂಹಲಕರ ಅಂಶವನ್ನು ತೆರೆದಿಡುತ್ತದೆ.

ಅರಣ್ಯಕ್ ಹೆಸರಿಗೆ ಒಪ್ಪುವಂತೆ ಗುಡ್ಡಾಗಾಡು, ದಟ್ಟ ಕಾಡುಗಳನ್ನು ಸೆರೆಹಿಡಿಯುವಲ್ಲಿ ಸೌರಬ್ ಗೋಸ್ವಾಮಿ ಛಾಯಾಗ್ರಹಣ ಯಶಸ್ವಿಯಾಗಿದೆ. ಎಲ್ಲ ಹೇಳಿದ ಮೇಲೆ ಕೊನೆಗೆ ನಿಮಗೊಂದು ಕಿವಿಮಾತು. ಈ ವೆಬ್ ಸೀರೀಸನ್ನು ನೋಡಲು ಹೊರಡಬೇಡಿ. ಒಂದೇ ಒಂದು ಎಪಿಸೋಡು ನೋಡುತ್ತೇನೆಂದು ಹೊರಟರೆ ಒಂದಾದ ಮೇಲೆ ಮತ್ತೊಂದು, ಅದಾದ ಮೇಲೆ ಮಗದೊಂದು ನೋಡುತ್ತ ಎಂಟು ಎಪಿಸೋಡುಗಳ ಅಷ್ಟದಿಗ್ಬಂಧನದ ಒಳಗೆ ಬಂಧಿಯಾಗುವಿರಿ. ಆದರೆ ಬಂಧನಕ್ಕೆ ಜತೆಯಾಗಿ ರವೀನಾ ತಂಡನ್ ಇರುವ ಕಾರಣ ಏಕಾಂತ ಕಾಡದು ಎಂಬ ಖಾತರಿ ಕೊಡಬಹುದು.

LEAVE A REPLY

Connect with

Please enter your comment!
Please enter your name here