ಇರಾನ್‌ನಲ್ಲಿ ಮೊಸಾದ್ ನಡೆಸುವ ಗುಪ್ತ ಕಾರ್ಯಾಚರಣೆಯ ‘ತೆಹ್ರಾನ್‌’ ಸೀಸನ್ 2ನಲ್ಲಿ ಕಾಣುವ ಭಾರಿ ದೊಡ್ಡ ಬದಲಾವಣೆ‌ ಪಾತ್ರಗಳ ವಿಚಾರ. ಪಾತ್ರಗಳ ಒಟ್ಟು ಸಂಖ್ಯೆ‌ ಈಗ ಕಡಿಮೆಯಾಗಿದೆ, ಆದರೆ ತೀವ್ರತೆ ಹೆಚ್ಚಿಸಲಾಗಿದೆ. ಕತೆಯನ್ನು ಪಾತ್ರಗಳೇ ಮುಂದೆ ಕೊಂಡೊಯ್ಯುವ ಅನುಭವ ನೀಡುವ ಈ ಸರಣಿ Apple TV+ನಲ್ಲಿ ಸ್ಟ್ರೀಮ್ ಆಗುತ್ತಿದೆ.

ಗೂಢಾಚಾರಿಕೆಯ ಹಲವು ಸಿನಿಮಾಗಳನ್ನು ನೀವೆಲ್ಲಾ ನೋಡಿಯೇ‌ ಇರುತ್ತೀರಿ. ಅತೀವ ಕುತೂಹಲ, ಹೋರಾಟಗಳ ತರುವಾಯ ಕೊನೆಗೆ ಒಳಿತು ಗೆಲ್ಲುತ್ತದೆ, ಕೆಡುಕು ಸೋಲುತ್ತದೆ. ಆದರೆ ವಾಸ್ತವದ ಬೇಹುಗಾರಿಕೆ ಹಾಗಲ್ಲ. ಅಲ್ಲಿ ಒಳಿತು ಕೆಡುಕುಗಳ ನಡುವೆ ಸ್ಪಷ್ಟ ರೇಖೆಯ ಪ್ರತ್ಯೇಕತೆ ಇರುವುದಿಲ್ಲ. ಒಳಿತು-ಕೆಡುಕುಗಳ ಬಗ್ಗೆ ತನ್ನದೇ ಆದ ವ್ಯಾಖ್ಯಾನ ಇರುವ ಪ್ರಪಂಚವದು. ಅಂಥ ಪ್ರಪಂಚದೊಳಗೆ ಕರೆದೊಯ್ಯುವ ‘ತೆಹ್ರಾನ್’ನ ಎರಡನೇ ಆವೃತ್ತಿ ಈಗ ಹೊರಬಿದ್ದಿದೆ.

ಇಸ್ರೇಲಿ‌ ಗೂಢಚಾರ ಸಂಸ್ಥೆ ಮೊಸ್ಸಾದ್‌ನ ಏಜೆಂಟ್ ತಮರ್ ರಬಿನ್ಯಾನ್ ಇರಾನ್ ಪ್ರವೇಶಿಸಿ ಅಲ್ಲಿನ ಅಣು ಸ್ಥಾವರ ನಾಶಪಡಿಸಲು ಪೈಲಟ್‌ಗಳಿಗೆ ಸಹಕರಿಸಬೇಕು. ಅದಕ್ಕಾಗಿ ವಿದ್ಯುತ್ ‌ವ್ಯವಸ್ಥೆಯನ್ನು‌ ಹ್ಯಾಕ್ ಮಾಡಿ ವಿಮಾನ ಪತ್ತೆ ಹಚ್ಚುವ ರಾಡಾರ್‌ಗಳನ್ನು ಸ್ಥಗಿತಗೊಳಿಸುವುದು ಸೀಸನ್‌ನ ಒಂದರ ಮುಖ್ಯ ಭಾಗವಾಗಿತ್ತು. ಆದರೆ ಕೊನೆಯ ಹಂತದಲ್ಲಿ ಗೆಲುವಿನ ಮಜಲು ತಲುಪುವಲ್ಲಿ‌ ಸೋಲುವ ಆಕೆ ಇರಾನ್‌ನೊಳಗೇ ತನ್ನ ಬೇರುಗಳನ್ನು ಕಂಡುಕೊಂಡಿದ್ದಳು. ಅದೀಗ ಅವಳಿಗೆ ಮುಳುವಾಗಿದೆ.

ಬೇಹುಗಾರರು ಅಂದಮೇಲೆ ಅವರು ಕೆಲಸಕ್ಕೆ ಬೇಕಾದ ಅಗತ್ಯ ಕೌಶಲ್ಯ ಹೊಂದಿರುತ್ತಾರೆ. ಆದರೆ ಕೌಶಲ್ಯ ಪಡೆದಷ್ಟು ಸುಲಭವಾಗಿ ಭಾವನಾತ್ಮಕ ನಿಗ್ರಹ ಒಲಿಯುವುದಿಲ್ಲ. ಇಸ್ರೇಲ್‌ನಿಂದ ಇರಾನಿಗೆ ಹೋದ ತಮರ್ ರಬಿನ್ಯಾನ್ ಅತಿ ಕೌಶಲ್ಯಮತಿಯಾದರೂ ಭಾವನಾತ್ಮಕ ಹುಡುಗಿ. ಆ ಕಾರಣದಿಂದಲೇ‌ ಇರಾನ್‌ನಲ್ಲಿರುವ‌ ಅವಳ ಚಿಕ್ಕಮ್ಮನ ಮನೆಗೆ ಹೋಗಿದ್ದು ಮೊದಲ ಸೀಸನ್‌ನಲ್ಲಿ ಕಂಡಿದ್ದೇವೆ. ಆಕೆ ಪ್ರೇಮಿಸಿದ್ದು ಇರಾನಿಯೊಬ್ಬನನ್ನ. ಹಾಗಾಗಿ ಯಹೂದಿ ಧರ್ಮ ತ್ಯಜಿಸಿ ಇಸ್ಲಾಂಗೆ ಮತಾಂತರವಾದವಳು. ಗಂಡ ಮೃದು ಸ್ವಭಾವಿಯಾದರೂ ಮಗಳು ಇರಾನ್‌ ಪ್ರಸ್ತುತ ಕಟ್ಟರ್‌ವಾದಿ ಧೋರಣೆಯ ಅಲೆಗೆ ಸಿಕ್ಕವಳು. ಅವಳ ಮೂಲಕ ಹೊರಬಿದ್ದ ಮಾಹಿತಿ ತಮರ್‌ಳ ಅತ್ತೆಗೆ ಮುಳುವಾಗಿತ್ತು. ಬಂಧನಕ್ಕೆ ಒಳಗಾಗಿದ್ದ ಆಕೆ ಎರಡನೇ ಆವೃತ್ತಿಯ‌‌ ಮೊದಲ ಕಂತಿನಲ್ಲೇ ನೇಣುಗಂಬ‌ ಏರುತ್ತಾಳೆ. ಅಲ್ಲಿಗೆ ತಮರ್‌ಳ ಒಂದು ಭಾವನಾತ್ಮಕ ಕೊಂಡಿ ಕಳಚಿ ಬೀಳುತ್ತದೆ. ಆದರೆ ವೈಯಕ್ತಿಕ ಸೇಡು ಇಟ್ಟುಕೊಂಡ‌ ಬೇಹುಗಾರರು ಅವರ ಮಾತೃಸಂಸ್ಥೆಗೆ ಉಪಯುಕ್ತ ಸರಕುಗಳು. ಹಾಗಾಗಿ ಇಸ್ರೇಲ್ ಅವಳ ಸೇವೆ ಪಡೆಯುವುದನ್ನು ಮುಂದುವರಿಸುತ್ತದೆ.

ಆದರೆ ಪ್ರೀತಿ ಎಂಥವರನ್ನೂ ಬಂಧಿಸುತ್ತದೆ. ಹನಿ ಟ್ರ್ಯಾಪ್ ಎಂಬುದು ಗೂಢಾಚಾರಿಕೆಯ ವಲಯದಲ್ಲಿ ಯಶಸ್ವಿ ಆಯುಧ. ಹಾಗೆ ಪ್ರೀತಿಯ ಅಡ್ಡ ಪರಿಣಾಮ ಗೊತ್ತಿದ್ದೂ ಸ್ವತಃ ಪ್ರೇಮಪಾಶಕ್ಕೆ ಸಿಲುಕುವುದು ಮನುಷ್ಯ ಸಹಜ ಗುಣ. ಮಿಲಾದ್ ಕಹಾನಿ‌ ಜತೆ ತಮರ್‌ಳ ಸಂಬಂಧ ಮೊದಲ ಆವೃತ್ತಿಯಲ್ಲೇ ಏರ್ಪಟ್ಟಿತ್ತು. ಆ ಸಂಬಂಧದಲ್ಲಿ ಅವಳದ್ದು‌ ಮೇಲುಗೈ ಆಗಿತ್ತು. ಭಾವನಾತ್ಮಕ ನಿಗ್ರಹದ ಮಿತಿಯಲ್ಲಿ ಅವಳಿದ್ದಳು. ಮಿಲಾದ್‌ನ ಎದೆಬಡಿತಕ್ಕೆ ಯಾವಾಗ ತಮರ್‌ಳ ನರಗಳೂ ಸ್ಪಂದಿಸುತ್ತವೆಯೋ ಅಲ್ಲಿಂದ ಸಂಬಂಧ ಮಾತ್ರವಲ್ಲ, ಯೋಜನೆಯೂ ಅಲ್ಲೋಲ ಕಲ್ಲೋಲ. ಏಕೆಂದರೆ ಮಿಲಾದ್ ಗೂಢಾಚಾರನಲ್ಲ. ಕೈಯಾರೆ ಒಂದು ಕೊಲೆ ಮಾಡಬೇಕಾಗಿ ಬಂದಾಗ ಅದರ ಮಾನಸಿಕ ಬೇಗುದಿಯ ನಿಭಾವಣೆಗೆ ಆತ ತರಬೇತಿ ಪಡೆದವದನಲ್ಲ. ಭಾವನೆಗಳನ್ನು ನಿಗ್ರಹಿಸಲು ಸಾಧ್ಯವಾಗದ ಅವನ ವರ್ತನೆ ಗೂಢಾಚಾರರ ನಿಯಮದ ಪ್ರಕಾರ ಬೇಜವಾಬ್ದಾರಿತನ. ಮಿಲಾದ್‌ನ ಬೇಜವಾಬ್ದಾರಿತನ ತಮರ್‌ಳನ್ನೂ ಇಕ್ಕಟ್ಟಿಗೆ ಸಿಲುಕಿಸುತ್ತದೆ. ಇಂಥ ಘಟನೆಗಳು ಸ್ಪೈ ಥ್ರಿಲ್ಲರ್‌ಗೆ ಪ್ರತಿ ಎಪಿಸೋಡಿನಲ್ಲಿಯೂ ಥ್ರಿಲ್ ತುಂಬುತ್ತದೆ.

ಇವರೆಲ್ಲರ ನಡುವೆ ಇರಾನಿ ಗೂಢಾಚಾರ ಫರಾಜ಼್ ಕಮಾಲಿ ಈ ಬಾರಿ ಇನ್ನಷ್ಟು ಇಷ್ಟವಾಗುತ್ತಾನೆ. ಆ ಪಾತ್ರ ನಿರ್ವಹಿಸಿದ ಇರಾನಿ ಸಂಜಾತ ಅಮೆರಿಕನ್ ನಟ ಶೌನ್ ತೌಬ್‌ಗೆ ಕಣ್ಣಲ್ಲೇ ಅಭಿನಯಿಸುವ ತಾಕತ್ತಿದೆ. ಆತನ ವೈಯಕ್ತಿಕ ಜೀವನವೂ ಅನುಕಂಪ ಪಡುವಂಥದ್ದಾದ ಕಾರಣ ಸಹಜವಾಗಿ ಆ ಪಾತ್ರವನ್ನು ಮನಸು ಬಹುಬೇಗ ಗುರುತಿಸುತ್ತದೆ. ‘ತೆಹ್ರಾನ್’ ಹೇಳಿಕೇಳಿ ಇಸ್ರೇಲಿ‌ ಕೇಂದ್ರಿತ ಗೂಢಾಚಾರಿಕೆಯ ಕಥೆ, ಅಂಥದ್ದರಲ್ಲಿ ನಮಗೆ ಮೊಸ್ಸಾದ್‌ಗೆ‌ ಪ್ರತಿಯಾದ ಮತ್ತೊಂದು ಸಂಸ್ಥೆಯ ಪಾತ್ರ ಇಷ್ಟವಾಗುತ್ತದೆ‌ ಎಂದರೆ ಅದು ಕತೆ‌ ಮಾತ್ರದಿಂದ ಸಾಧ್ಯವಿಲ್ಲ. ಆ ಪಾತ್ರ ನಿರ್ವಹಿಸುವ ನಟ ನಮ್ಮ ಮುಂದೆ ಅಭಿನಯವನ್ನೇ ಮಾಡುತ್ತಿಲ್ಲ, ಅದು ಆತನ ನಿಜ ಜೀವನದ ಪಾತ್ರ ಎಂದು ಅನಿಸುವಂತೆ ನಟಿಸುವುದು ಭಾರಿ ಕಲಾಕಾರರಿಗಷ್ಟೇ ಸಾಧ್ಯ.

ಎರಡನೇ ಸೀಸನ್‌ನಲ್ಲಿ ಕಥೆಯ ಮುಖ್ಯ ಗುರಿ ಇರಾನಿ ಸೇನಾ ಮುಖ್ಯಸ್ಥ ಮೊಹಮ್ಮದಿಯನ್ನು ಕೊಲ್ಲುವುದು. ಕತೆಗೆ ಇರುವ ಪ್ರಾಧಾನ್ಯ ನಿಧಾನವಾಗಿ ಪಾತ್ರಗಳ ಕಡೆಗೆ ತಿರುಗಿಸಿದ್ದು ‘ತೆಹ್ರಾನ್‌ನ’ ತಂತ್ರ. ಪ್ರೇಕ್ಷಕರಾದ ನಮ್ಮನ್ನು ಕ್ರಮೇಣ ಪಾತ್ರಗಳ ಜತೆ ಕನೆಕ್ಟ್ ಆಗಲು ಚಿತ್ರಕತೆ ಪ್ರೇರೇಪಿಸುತ್ತದೆ. ಏಕೆಂದರೆ ಒಂದು ಹಂತದ ನಂತರ ಕತೆಯನ್ನು ಕೊಂಡೊಯ್ಯುವುದೇ ಪಾತ್ರಗಳು. ಆಯಾ ಪಾತ್ರಗಳ ಗುಣ-ನಡತೆ ಸ್ವಲ್ಪವೇ ಬೇರೆ ರೀತಿ ಇದ್ದಿದ್ದರೆ ಕತೆ ಬದಲಾಗುತ್ತಿತ್ತು ಎಂಬ ಭ್ರಮೆ ನಮ್ಮನ್ನು ಆವರಿಸುತ್ತದೆ. ಪ್ರತಿ ಪಾತ್ರಕ್ಕೂ ಒಂದು ತನ್ನತನ ಅನ್ನುವುದು ಕಾಣುತ್ತದೆ, ಒಂದು ವ್ಯಕ್ತಿತ್ವದ ಚೌಕಟ್ಟಿದೆ. ತೆರೆಯ ಮೇಲೆ ಮೂಡುವ ಯಾವುದೇ ಪಾತ್ರ ಆ ಚೌಕಟ್ಟು ಮೀರಿ ವರ್ತಿಸುವುದಿಲ್ಲ. ಹಾಗಾಗಿ ಪಾತ್ರಗಳೇ ಕತೆಯನ್ನು ಮುಂದೆ ಕೊಂಡೊಯ್ದ ಭಾವನೆ ಮೂಡುತ್ತದೆ.

ಹೆಚ್ಚಿನ ಸ್ಪೈ ಸೀರೀಸ್‌‌ಗಳು ಆದಷ್ಟು ಬೇಗ ಅದರ ಕೊನೆಯ ಎಪಿಸೋಡ್ ನೋಡಬೇಕು ಎಂಬ ಹಂಬಲ ಮೂಡಿಸುವುದು ಸಹಜ. ಇಲ್ಲಿಯೂ ಹಾಗೆಯೇ ಅನಿಸುತ್ತದೆ, ಆದರೆ ಒಟ್ಟು ಎಂಟು ಎಪಿಸೋಡ್‌ಗಳ ಸರಣಿಯಲ್ಲಿ ಆಯ್ದ ಆರು ಮಾತ್ರ ಸ್ಟ್ರೀಮ್ ಆಗುತ್ತಿವೆ. ಇನ್ನುಳಿದ ಎರಡು ಕಂತುಗಳು ಪ್ರತಿ ಶುಕ್ರವಾರ ಆ್ಯಪಲ್ ಟಿವಿ ಪ್ಲಸ್‌ನಲ್ಲಿ ಬಿಡುಗಡೆಯಾಗುತ್ತವೆ.

LEAVE A REPLY

Connect with

Please enter your comment!
Please enter your name here