ಈ ಸಿನಿಮಾ ಮೊದಲಿನಿಂದ ಕೊನೆಯವರೆಗೂ ನಮಗೇ ಗೊತ್ತಿಲ್ಲದೇ ನಮ್ಮನ್ನು ಆವರಿಸಿಕೊಳ್ಳುತ್ತಾ ಹೋಗುತ್ತದೆ. ಎರಡು ಗಂಟೆಗಳ ಕಾಲವೂ ಕೆನ್ನೆಗಳನ್ನು ತೋಯಿಸುವ, ತುಟಿಗಳಲ್ಲಿ ಮುಗುಳ್ನಗು ಮೂಡಿಸುವ ಈ ಸಿನಿಮಾ ಎದೆ ಬೆಚ್ಚಗಾಗಿಸುವುದಂತೂ ನಿಜ. ‘ಪರ್ಪಲ್ ಹಾರ್ಟ್ಸ್’ ಇಂಗ್ಲಿಷ್ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಆಕೆ ಇನ್ನೂ ಸಂಗೀತಕ್ಷೇತ್ರದಲ್ಲಿ ಜಾಗ ಕಂಡುಕೊಳ್ಳಲು ಹೆಣಗುತ್ತಿರುವ ಹಾಡುಗಾರ್ತಿ. ಇಪ್ಪತ್ತರ ಪೂರ್ವಾರ್ಧದಲ್ಲಿಯೇ ಸಕ್ಕರೆ ಖಾಯಿಲೆಯೂ ಬಂದಿದೆ. ಮನೆ ಬಾಡಿಗೆ ಕಟ್ಟಲೂ ಒದ್ದಾಡುವ ಆಕೆಯ ಹೆಸರು ಕ್ಯಾಸಿ. ಮೊದಲೇ ಹಣದ ಕೊರತೆ, ಜತೆಗೆ ಸಕ್ಕರೆ ಖಾಯಿಲೆಗೆ ಔಷಧಿ ಖರೀದಿಸಲು ಆರೋಗ್ಯ ವಿಮೆ ಇಲ್ಲ. ತಾಯಿಯ ಹತ್ತಿರ ಸಹಾಯ ಪಡೆಯುವುದೆಂದರೆ ಬದುಕಿನಲ್ಲಿ ಹಿಮ್ಮುಖವಾಗಿ ಚಲಿಸಿದಂತೆ ಎನ್ನುವ ಆಕೆಗೆ ಈಸಬೇಕು ಇದ್ದು ಜೈಸಬೇಕು ಎಂಬ ಛಲ.
ಹೀಗೆಯೇ ಒಮ್ಮೆ ಅವಳು ಹಾಡುವ ಹೋಟೇಲಿಗೆ ಅಮೆರಿಕನ್ ಸೈನಿಕರ ತಂಡ ಬರುತ್ತದೆ. ಅವರಲ್ಲೊಬ್ಬ ಕ್ಯಾಸಿಯ ಬಾಲ್ಯದ ಗೆಳೆಯ. ಆತ ಇಪ್ಪತ್ತರ ಹರೆಯದ ಫ್ರ್ಯಾಂಕಿ. ಇವಳನ್ನು ಅಕ್ಕನಂತೆ ಕಾಣುವವ. ಸೈನಿಕರನ್ನು ಮದುವೆಯಾದರೆ ಆರೋಗ್ಯ ವಿಮೆ ಸಿಗುತ್ತದೆ ಎಂದು ಸಹ ಹಾಡುಗಾರ್ತಿ ಕ್ಯಾಸಿಗೆ ಹೇಳುತ್ತಾಳೆ. ಕ್ಯಾಸಿ ವಿಶಾಲವಾದ ಮನೋಭಾವ ಉಳ್ಳವಳು. ದೇಶಭಕ್ತಿಯ ಹೆಸರಲ್ಲಿರುವ ಮಾನವವಿರೋಧಿ ಚಿಂತನೆಗಳಿಗೆ ಆಕೆಯ ವಿರೋಧವಿದೆ. ಯುದ್ಧಕ್ಕೆ ಹೋಗಿ ಇಡೀ ಜನಾಂಗವನ್ನೇ ಮುಗಿಸಿಬಿಡುತ್ತೇವೆ ಎಂಬ ಸೈನಿಕನೊಬ್ಬನ ಮಾತಿಗೆ ಆಕೆ ತಿರುಗಿ ಬೀಳುವ ದೃಶ್ಯ ಅವಳ ಚಿಂತನೆಯನ್ನು ಹೇಳುತ್ತದೆ. ಇಂತಹ ಕ್ಯಾಸಿ ಹಣಕಾಸಿನ ಅಡಚಣೆ ಸಹಿಸಲಾಗದೇ ಸೀದಾ ಫ್ರ್ಯಾಂಕಿಯ ಹತ್ತಿರ ಹೋಗಿ ವಿಮೆಯ ಕಾರಣಕಾಗಿ ತನ್ನನ್ನು ಮದುವೆಯಾಗುವಂತೆ ಕೇಳುತ್ತಾಳೆ. ಸುಳ್ಳು ವಿವಾಹವೇ ಆದರೂ ತನ್ನ ಗರ್ಲ್ಫ್ರೆಂಡ್ ಅದನ್ನು ಸಹಿಸಲಿಕ್ಕಿಲ್ಲ ಎನ್ನುತ್ತಾನೆ ಆತ.
ಫ್ರ್ಯಾಂಕಿಯ ಸ್ನೇಹಿತ ಲ್ಯೂಕ್. ಜೇನುಕಂಗಳ ಈ ಸೈನಿಕ ಹಿಂದೆ ಸಮಸ್ಯೆಗಳ ಸುಳಿಯಲ್ಲಿದ್ದವ. ಈಗ ಎಲ್ಲವನ್ನೂ ಬಿಟ್ಟು ಸೈನ್ಯಕ್ಕೆ ಸೇರಿದ್ದಾನೆ. ಸೈನಿಕನಾಗಿದ್ದ ಅಪ್ಪನ ದೃಷ್ಟಿಯಲ್ಲಿ ತನ್ನ ಕಳೆದುಹೋದ ಗೌರವ ಗಳಿಸಿಕೊಳ್ಳುವುದು ಈ ನಿರ್ಧಾರಕ್ಕೆ ಒಂದು ಕಾರಣ. ಹಳೆಯ ಸಾಲದ ಭಾರ ಅವನನ್ನು ಕುಗ್ಗಿಸುತ್ತಿದೆ. ಸಾಲ ಕೊಟ್ಟವ ಬೆದರಿಕೆಯನ್ನೂ ಹಾಕುತ್ತಿದ್ದಾನೆ. ಕ್ಯಾಸಿ, ಫ್ರ್ಯಾಂಕಿಯ ಹತ್ತಿರ ಮಾತಾಡುತ್ತಿದ್ದುದ್ದನ್ನು ಕೇಳಿಸಿಕೊಂಡು ಆ ರೀತಿಯ ಮದುವೆ ಮೋಸ, ಸಿಕ್ಕಿಹಾಕಿಕೊಂಡರೆ ಜೈಲೇ ಗತಿ ಎಂದೆಲ್ಲ ಹೇಳಿದ್ದ ಲ್ಯೂಕ್ ಮದುವೆಯಾದರೆ ಸೈನಿಕರಿಗೆ ಸಿಗುವ ಹಣಕ್ಕೋಸ್ಕರ ಕ್ಯಾಸಿಯನ್ನು ಮದುವೆಯಾಗಲು ಒಪ್ಪುತ್ತಾನೆ.
ಸೈನಿಕರ ತಂಡ ಇರಾಕ್ಗೆ ಹೋಗುವ ಒಂದು ದಿನ ಮೊದಲು ಕ್ಯಾಸಿ ಮತ್ತು ಲ್ಯೂಕ್ ವಿವಾಹವಾಗುತ್ತದೆ. ನಾಟಕದ ಮದುವೆ ಹಗೂರಕ್ಕೆ ಪ್ರೀತಿಯಾಗಿ ಅರಳುವುದು ಹೇಗೆ ಎಂಬ ಅನುಭೂತಿಯನ್ನು ಸಿನಿಮಾ ನೋಡಿಯೇ ಅನುಭವಿಸಬೇಕು. ಇಬ್ಬರು ವಿಭಿನ್ನ ವ್ಯಕ್ತಿತ್ವದ ವ್ಯಕ್ತಿಗಳು ತಮಗೇ ಅರಿವಿಲ್ಲದಂತೆ ಪ್ರೀತಿಯ ಚುಂಬಕಶಕ್ತಿಗೆ ಸೋಲುವ ಕಥೆಯುಳ್ಳ ಈ ಸಿನಿಮಾ ಪ್ರತೀ ಮೊದಲಿನಿಂದ ಕೊನೆಯವರೆಗೂ ನಮಗೇ ಗೊತ್ತಿಲ್ಲದೇ ನಮ್ಮನ್ನು ಆವರಿಸಿಕೊಳ್ಳುತ್ತಾ ಹೋಗುತ್ತದೆ. ಎರಡು ಗಂಟೆಯ ಈ ಸಿನಿಮಾ ನಮ್ಮನ್ನು ಪೂರ್ತಿಯಾಗಿ ತನ್ನೊಳಗೆ ಎಳೆದುಕೊಳ್ಳುವ ಪರಿ ಅದ್ಭುತ. ಕಥೆ ಹೀಗೇ ಆಗುತ್ತದೆ ಎಂದು ತಿಳಿಯುವಂತಿದ್ದರೂ ಮುಂದಿನ ದೃಶ್ಯಕ್ಕಾಗಿ ತವಕದಿಂದ ಕಾಯುತ್ತೇವೆ. ಎರಡು ಗಂಟೆಯ ಕಾಲವೂ ಕೆನ್ನೆಗಳನ್ನು ತೋಯಿಸುವ, ತುಟಿಗಳಲ್ಲಿ ಮುಗುಳ್ನಗು ಮೂಡಿಸುವ ಈ ಸಿನಿಮಾ ಎದೆ ಬೆಚ್ಚಗಾಗಿಸುವುದಂತೂ ನಿಜ.
ಇನ್ನು ಈ ಚಿತ್ರದ ಸಂಗೀತಕ್ಕೆ ಫೈವ್ ಸ್ಟಾರ್ ಕೊಡುವುದೇ! ಕ್ಯಾಸಿಗೇ ಗೊತ್ತಿಲ್ಲದಂತೆ ಲ್ಯೂಕ್ ಅವಳ ಹಾಡುಗಳನ್ನು ಪ್ರಭಾವಿಸುತ್ತ ಹೋಗುವುದು ಚಿತ್ರ ನೋಡುತ್ತಿರುವಂತೆ ನಮ್ಮೊಳಗನ್ನು ಆರ್ದ್ರಗೊಳಿಸುತ್ತದೆ. ಭಾವತೀವ್ರತೆಯಿಂದ ಕೂಡಿದ ಅವಳ ಪ್ರತೀ ಹಾಡೂ ಸಿನಿಮಾದಲ್ಲಿ ಜನರನ್ನೂ, ಸಿನಿಮಾ ನೋಡುತ್ತಿರುವ ನಮ್ಮನ್ನೂ ಸಮ್ಮೋಹನಗೊಳಿಸುತ್ತದೆ. ಆರಂಭದಿಂದ ಹಿಡಿದು ಕೊನೆಗೆ ಟೈಟಲ್ ಕಾರ್ಡ್ ತೋರಿಸುವವರೆಗೂ ಆ ಹಾಡುಗಳು, ಹಿನ್ನೆಲೆ ಸಂಗೀತ ಅಕ್ಷರಶಃ ನಮ್ಮನ್ನು ಕಟ್ಟಿಹಾಕುತ್ತದೆ. ಇನ್ನೂ ಹಲವಾರು ಪಾತ್ರಗಳ ಚಿತ್ರಣ ನೋಡುಗರನ್ನು ಚಿತ್ರದ ಜತೆ ಕನೆಕ್ಟ್ ಮಾಡುತ್ತದೆ. ಸ್ನೇಹ, ತಂದೆ – ಮಗನ ಸಂಬಂಧದ ಸಂಕೀರ್ಣತೆ, ಸೈನಿಕರ ಬಲಿದಾನ, ಆಪ್ತರ ಸಾವು ತರುವ ಸಂಕಟದಂತಹ ಹತ್ತು ಹಲವು ಸಂಗತಿಗಳು ಮನಕಲಕುತ್ತವೆ.
ಹಾ, ಪರ್ಪಲ್ ಹಾರ್ಟ್ ಎಂದರೆ ಅಮೇರಿಕೆಯ ಸರ್ಕಾರ ಯುದ್ಧದಲ್ಲಿ ಮೃತಪಟ್ಟ ಅಥವಾ ಗಾಯಗೊಂಡ ಯೋಧರಿಗೆ ನೀಡುವ ಒಂದು ಪ್ರಶಸ್ತಿಯ ಹೆಸರು.
ಸಣ್ಣಪುಟ್ಟ ಕೊರತೆಗಳ ಹೊರತಾಗಿಯೂ ನೋಡಬಹುದಾದ ಚಿತ್ರ ‘ಪರ್ಪಲ್ ಹಾರ್ಟ್ಸ್’. ಮೊನ್ನೆ ಜುಲೈ 29ರಿಂದ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮ್ ಆಗುತ್ತಿರುವ ಸಿನಿಮಾ ಎರಡೇ ದಿನಗಳಲ್ಲಿ ಜನಪ್ರಿಯ ಸಿನಿಮಾಗಳಲ್ಲಿ ಒಂದಾಗಿದೆ.