ಸೋಶಿಯಲ್ ಸೈಕೋಪಾತ್ ಒಬ್ಬನ ಕಥೆಯನ್ನು ಹೇಳುವ ಈ ಎರಡನೆಯ ಸರಣಿ ಮೂರು ಕಂತುಗಳಲ್ಲಿ ರಕ್ತ ಹೆಪ್ಪುಗಟ್ಟುವಂತೆ ಕಥೆ ಕಟ್ಟುತ್ತದೆ. ಇದರಲ್ಲಿ ಕಥೆಯಷ್ಟೇ ಮುಖ್ಯವಾದದ್ದು ಕಥೆ ಹೇಳುವ ರೀತಿ. ‘Indian Predator : The diary of a Serial Killer’ ಸರಣಿ Netflixನಲ್ಲಿ ಸ್ಟ್ರೀಮ್ ಆಗುತ್ತಿದೆ.
ಈ ತಿಂಗಳಿನಲ್ಲಿ Netflix ಎರಡು ಭಾರತೀಯ ವಸ್ತು ವಿಷಯ ಉಳ್ಳ ಸರಣಿಗಳನ್ನು ಬಿಡುಗಡೆ ಮಾಡಿತು. ಮೊದಲನೆಯದು Fabulous Lives of Bollywood Wives ನ ಎರಡನೆಯ ಸೀಸನ್. ಇದು ಅತ್ಯಂತ ಸ್ವಮೋಹಿ ಮತ್ತು ಸ್ವಕೇಂದ್ರಿತ ವ್ಯಕ್ತಿತ್ವದ ಮೂರನೆಯ ದರ್ಜೆಯ ಒಂದು ಸರಣಿ. ಕರಣ್ ಜೋಹರ್ ಮನೆಯ ಪಾರ್ಟಿಗಳಲ್ಲಿ ನೋಡಬಹುದಾದ ಸರಣಿಯನ್ನು ಇಡೀ ಜಗತ್ತಿನ ಮುಂದೆ ಬಿಕರಿಗೆ ಇಟ್ಟಂತಿದೆ. ಆದರೆ ಇದೇ ತಿಂಗಳಿನಲ್ಲಿ ಇನ್ನೊಂದು ಡಾಕ್ಯುಮೆಂಟರಿ ಕೂಡಾ ಬಿಡುಗಡೆಯಾಯಿತು. ಅದು ಧೀರಜ್ ಜಿಂದಾಲ್ ನಿರ್ದೇಶನದ Indian Predator ನ ಎರಡನೆಯ ಸೀಸನ್. ಮೊದಲ ಸೀಸನ್‌ನಲ್ಲಿ ಬಂದ The Butcher of Delhi ಬಂದದ್ದು, ಹೋದದ್ದು ಎರಡೂ ಗೊತ್ತಾಗಲಿಲ್ಲ. ಆದರೆ ಸೋಶಿಯಲ್ ಸೈಕೋಪಾತ್ ಒಬ್ಬನ ಕಥೆಯನ್ನು ಹೇಳುವ ಈ ಎರಡನೆಯ ಸರಣಿ ಮೂರು ಕಂತುಗಳಲ್ಲಿ ರಕ್ತ ಹೆಪ್ಪುಗಟ್ಟುವಂತೆ ಕಥೆ ಕಟ್ಟುತ್ತದೆ. ಇದರಲ್ಲಿ ಕಥೆಯಷ್ಟೇ ಮುಖ್ಯವಾದದ್ದು ಕಥೆ ಹೇಳುವ ರೀತಿ. ಕೇಸ್‌ಗಾಗಿ ಕೆಲಸ ಮಾಡಿದ ಆಫೀಸರ್, ಕೊಲೆಯಾದವರ ಕುಟುಂಬಸ್ಥರು, ಕೊಲೆಗಾರನ ಕುಟುಂಬಸ್ಥರು, ಜೇಲಿನಲ್ಲಿ ಆ ಕೊಲೆಗಾರನ ಸಂಗಡ ಇದ್ದವರು, ಮನೋವೈದ್ಯರು, ಸಮಾಜ ಶಾಸ್ತ್ರಜ್ಞರು, ಪುರಾತನ ಶಾಸ್ತ್ರಜ್ಞರು, ಸಾಮಾಜಿಕ ಕಾರ್ಯಕರ್ತರು, ಕೊಲೆಗಾರನಿದ್ದ ಜೈಲಿನಲ್ಲಿ ಕೆಲಸ ಮಾಡಿದ ಅಧಿಕಾರಿ ಇವರೆಲ್ಲರ ಸಂದರ್ಶನಗಳ ಮೂಲಕ ಆ ಕೊಲೆಗಾರನ ವ್ಯಕ್ತಿತ್ವದ ಹಲವಾರು ಮಗ್ಗುಲುಗಳನ್ನು ನಮ್ಮ ಮುಂದಿಡುತ್ತಾ ಹೋಗುತ್ತಾರೆ. ಅವರ ಸಾಕ್ಷ್ಯಗಳಲ್ಲಿರುವ ಗೊಂದಲ, ಪೂರ್ವಾಗ್ರಹ, ಹಿಪಾಕ್ರಸಿ ಎಲ್ಲವೂ ಅವರು ಬೆಟ್ಟು ಮಾಡಿ ತೋರಿಸದೆಯೇ ನಮಗೆ ಸಾಕ್ಷಾತ್ಕಾರವಾಗುತ್ತಾ ಹೋಗುತ್ತದೆ. ಆದರೆ ಇವೆಲ್ಲಾ ಒಂದು ತೂಕವಾದರೆ ಆ ಸೈಕೋಪಾತ್ ಜೊತೆಗಿನ ಸಂದರ್ಶನವೊಂದೇ ಇನ್ನೊಂದು ತೂಕ. ಅವನ ಮಾತು, ಅವನ ನಡಿಗೆಯ ಗತ್ತು, ಅವನ ಮಾನಸಿಕ ಆಟಗಳು ಎಲ್ಲವೂ ನಮ್ಮನ್ನು ಹಿಡಿದಿಡುತ್ತವೆ. ಇಡೀ ಕಥೆಯನ್ನು ಅವರು ಆ ಕಾಲಘಟ್ಟದ ಸಮಾಜ ಮತ್ತು ರಾಜಕೀಯದ ಸ್ಥಿತ್ಯಂತರದ ನೆಲೆಗಳಲ್ಲಿ ವಿಶ್ಲೇಷಿಸುವ ಬಗೆ ಆಸಕ್ತಿ ಹುಟ್ಟಿಸುತ್ತದೆ. ಆ ಸೈಕೋಪಾಥ್‌ನ ಮನಸ್ಸಿನ ಒಂದೊಂದೇ ಪದರವನ್ನು ಅವರು ಬಿಡಿಸುತ್ತಾ ಹೋದಂತೆ ಅವರು ಕಟ್ಟುವ ಚಿತ್ರದ ಮೂರ್ತರೂಪವಾಗಿ ಆತ ಮಾತನಾಡುತ್ತಾನೆ. ‘ತಡ ಆಯಿತು ಅನ್ನಿಸುತ್ತದೆ, ದಯವಿಟ್ಟು ಕ್ಷಮಿಸಿ’ ಎಂದೆನ್ನುತ್ತಾ ಜೈಲಿನಲ್ಲಿ ಸಂದರ್ಶನಕ್ಕೆ ಬರುವ ಆತನ ನಡೆ, ಅವನ ಮಾತುಗಳಲ್ಲಿ ಸೌಜನ್ಯ ನಿಧಾನವಾಗಿ ಆತನ ಅಹಂ ಮತ್ತು ಅಪಾರ ಬುದ್ಧಿವಂತಿಕೆಯಲ್ಲಿ ಕರಗುತ್ತಾ ಹೋಗುವಾಗ ಆ ಸೈಕೋ ನಮ್ಮ ಮುಂದೆ ತನ್ನ ಅಸಲಿ ಅವತಾರದಲ್ಲಿ ನಿಂತಿರುತ್ತಾನೆ.
2000ನೆಯ ಇಸವಿಯಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಪತ್ರಕರ್ತನ ಕೊಲೆಯೊಂದಿಗೆ ಶುರುವಾಗುವ ಕಥೆ ಅದು ಮುಗಿಯುವಾಗ ಆ ಕೊಲೆಯ ಕಾರಣಕ್ಕೆ ಮತ್ತೆ ಹಿಂದಿರುಗುತ್ತದೆ. ಈ ಕಥೆಯ ನಿರೂಪಣೆಯೇ ಇದರ ತಾಕತ್ತು. ಮೂರು ಸರಣಿಗಳಲ್ಲಿ ಸ್ವಲ್ಪ ಬಲಹೀನವಾಗಿರುವುದು ಮೊದಲ ಸಂಚಿಕೆಯೇ. ಮಿಕ್ಕೆರಡು ಮೊದಲ ಸಂಚಿಕೆಯ ಅನೇಕ ಕುಂದುಗಳನ್ನು ನಿವಾರಿಸಿಕೊಂಡಿವೆ.
ಅಲಹಾಬಾದ್‌ನ ಒಬ್ಬ ಪತ್ರಕರ್ತ ಕಾಣೆಯಾಗುತ್ತಾನೆ. ಒಂದು ದಿನ ರಜೆ ತೆಗೆದುಕೊಂಡವನು ಹಲವು ದಿನಗಳಾದರೂ ಹಿಂದಿರುಗುವುದಿಲ್ಲ. ಆಗ ಆತನ ಕುಟುಂಬಸ್ಥರು, ಪತ್ರಕರ್ತ ಮಿತ್ರರು, ಪೋಲೀಸ್ ಅಧಿಕಾರಿಗಳು ಒಂದೊಂದೇ ಎಳೆಯನ್ನು ಹಿಡಿದು ಹುಡುಕುತ್ತಾ ಹೋಗುವಾಗ ಅದು ಅವರನ್ನು ರಾಜಾ ಕೊಲಂದರ್ ಎನ್ನುವ ವ್ಯಕ್ತಿಯ ಬಳಿ ಕರೆದುಕೊಂಡು ಹೋಗಿ ನಿಲ್ಲಿಸುತ್ತದೆ. ಆತ ಹಳ್ಳಿಯ ಸ್ಥಳೀಯ ರಾಜಕಾರಿಣಿಯೊಬ್ಬಳ ಪತಿ. ಪೋಲಿಸರ ತೀವ್ರ ವಿಚಾರಣೆಯ ನಂತರ ಆ ಪತ್ರಕರ್ತನ ರುಂಡದಿಂದ ಪ್ರತ್ಯೇಕಗೊಂಡ ದೇಹ, ಮತ್ತೆಲ್ಲೋ ಕವರಿನಲ್ಲಿ ಸುತ್ತಿ ಎಸೆದ ರುಂಡ, ಆತನ ಬಟ್ಟೆಗಳು ಸಿಗುತ್ತವೆ. ಆತನನ್ನು ಕೊಂದಿರುವುದು ಒಂದು ಕಚ್ಚಾ ಬಂದೂಕಿನಿಂದ. ಕೊಲಂದರ್ ಹೇಳಿಕೆಯ ಪ್ರಕಾರ ಆ ಬಂದೂಕನ್ನು ವಶಪಡಿಸಿಕೊಳ್ಳಲು ಅವನ ತೋಟದ ಮನೆಗೆ ಹೋದ ಪೋಲಿಸರಿಗೆ ಒಂದು ಡೈರಿ ಸಿಗುತ್ತದೆ. ಅದರ ಮೊದಲ ಪುಟದಲ್ಲಿ ‘ರಾಜಾನ ಡೈರಿ’ ಎಂದು ಬರೆದಿರುತ್ತದೆ. ಆ ಡೈರಿಯ ಪುಟಗಳನ್ನು ತಿರುಗಿಸುವ ಅವರಿಗೆ ಒಂದು ಆಘಾತಕಾರಿ ವಿಷಯ ತಿಳಿಯುತ್ತದೆ. ಅಲ್ಲಿ ಹೆಸರುಗಳ ಒಂದು ಉದ್ದದ ಪಟ್ಟಿ ಇರುತ್ತದೆ. ಆ ಪಟ್ಟಿಯಲ್ಲಿ 14ನೆಯ ಹೆಸರು ಪತ್ರಕರ್ತ ಧೀರೇಂದ್ರನದು! ಅಂದರೆ ಉಳಿದ ಇನ್ನೂ 13 ಹೆಸರುಗಳು?
ಪೋಲಿಸರು ಹುಡುಕಾಟ ಪ್ರಾರಂಭಿಸುತ್ತಾರೆ. ಒಂದೊಂದಾಗಿ ಕೊಲೆಯಾದವರ ವಿವರಗಳು ಹೊರಬರುತ್ತವೆ. ಅವನ ತೋಟದ ಮನೆಯಲ್ಲಿ ಒಂದೊಂದೇ ತಲೆಬುರುಡೆಗಳು ಪತ್ತೆಯಾಗುತ್ತವೆ. ಅಷ್ಟರಲ್ಲಿ ಕೊಲೆಯಾದ ನಂತರ ಅವನು ಆ ತಲೆಗಳನ್ನು ಒಡೆದು, ಮಿದುಳನ್ನು ಹೊರತೆಗೆದು, ನೀರಿನಲ್ಲಿ ಹಾಕಿ ಕುದಿಸಿ, ಕುದಿಸಿ, ಆ ಸೂಪ್ ಕುಡಿಯುತ್ತಿದ್ದ ಎನ್ನುವ ಸುದ್ದಿ ಹೊರಬಂದಾಗ ಅದು ಮತ್ತೂ ದೊಡ್ಡ ಆಘಾತ.
ಅವನು ಈ ಕೊಲೆಗಳನ್ನು ಮಾಡಲು ಇದ್ದ ಕಾರಣವಾದರೂ ಏನು? ಯಾವುದೇ ಒಂದು ಅಪರಾಧ ಘಟಿಸಿದರೆ, ಅರಿವಿದ್ದೋ, ಇಲ್ಲದೆಯೋ ಇಡೀ ಸಮಾಜ ಒಂದಲ್ಲ ಒಂದು ರೀತಿಯಲ್ಲಿ ಅದಕ್ಕೆ ಕಾರಣಗಳನ್ನು ಒದಗಿಸಿರುತ್ತದೆ ಎಂದು ಹೇಳುತ್ತಾರೆ. ಇಲ್ಲಿ ಅವರು ರಾಜಾ ಕೊಲಂದರ್‌ನ ಮನಸ್ಥಿತಿಯನ್ನು ವಿಶ್ಲೇಷಣೆ ಮಾಡುವಾಗ ಒಬ್ಬ ಸಾಮಾಜಿಕ ಕಾರ್ಯಕರ್ತ ಮತ್ತು ಸಮಾಜ ವಿಜ್ಞಾನಿಯ ವಿಶ್ಲೇಷಣೆಯನ್ನು ಬಳಸಿಕೊಳ್ಳುತ್ತಾರೆ. ಆರೋಪಿ ಅಥವಾ ಅಪರಾಧಿ ಕೋಲಿ ಜನಾಂಗಕ್ಕೆ ಸೇರಿದವನು. ಅವರು ಬುಡಕಟ್ಟು ಜನಾಂಗಕ್ಕೆ ಸೇರಿದವರು. ಅವನನ್ನು ಆತ ಎರಡೆರಡು ಸಲ ಅಂಚಿಗೆ ತಳ್ಳಲ್ಪಟ್ಟವನು ಎಂದು ಕರೆಯುತ್ತಾರೆ. ನಮ್ಮನ್ನು ಎಸ್‌ಟಿ ಎನ್ನುವ ಗುಂಪಿನಲ್ಲಿ ಸೇರಿಸಿ ಎನ್ನುವ ಅವರ ಮನವಿಯನ್ನು ತಿರಸ್ಕರಿಸುವ ಸರ್ಕಾರ ಅವರನ್ನು ಎಸ್‌ಸಿ ಎಂದು ಕರೆಯುತ್ತದೆ. ಆ ಕಾರಣದಿಂದ ಎಸ್‌ಸಿ ಗಳ ನಡುವೆ ಅವರನ್ನು ಮತ್ತೂ ಹೊರಗಿಟ್ಟು ನೋಡಲಾಗುತ್ತದೆ. ಅದರ ಜೊತೆಗೆ ಅವರು ಆ ಕಾಲಾದ ಸಾಮಾಜಿಕ ಸ್ಥಿತ್ಯಂತರಗಳ ಬಗ್ಗೆ ಮಾತನಾಡುತ್ತಾರೆ. ಅದು ಕಾನ್ಶಿರಾಮ್ ಮತ್ತು ಮಾಯಾವತಿ ಅವರು ದನಿ ಪಡೆದುಕೊಂಡು ಜನರನ್ನು ಸಂಘಟಿಸಿದ ಕಾಲ. ಸಾಮಾಜಿಕವಾಗಿ ಮನ್ನಣೆ ಪಡೆದವರಿಂದ ಅತ್ಯಾಚಾರಕ್ಕೊಳಗಾಗಿ, ಬಂದೂಕು ಕೈಗೆತ್ತಿಕೊಂಡಿದ್ದ ಫೂಲನ್ ಅದನ್ನು ತ್ಯಜಿಸಿ, ರಾಜಕೀಯ ಮನ್ನಣೆ ಗಳಿಸಿದ ಕಾಲ. ರಾಮ್ ನಿರಂಜನ್ ಎನ್ನುವ ಹೆಸರಿನ ಈತ ತನ್ನನ್ನು ತಾನು ಹೇಗೆ ನೋಡುತ್ತಿದ್ದ? ಅವನು ಮೆಟಾಫರ್‌ಗಳಲ್ಲಿ ಬದುಕುತ್ತಿದ್ದ ಎಂದು ವಿಶ್ಲೇಷಕರು ಹೇಳುತ್ತಾರೆ. ಅವನು ತನ್ನನ್ನು ತಾನು ರಾಜ ಕೊಲಂದರ್ ಅಂದರೆ ಕೋಲಿಗಳ ರಾಜ ಎಂದು ನೋಡುತ್ತಿದ್ದ. ಅವನ ಹೆಂಡತಿಯ ಹೆಸರನ್ನು ಫೂಲನ್ ದೇವಿ ಎಂದು ಬದಲಾಯಿಸಿದ್ದ! ಅವನ ಮೂರು ಮಕ್ಕಳ ಹೆಸರು ಅದಾಲತ್, ಜಮಾನತ್ ಮತ್ತು ಆಂದೋಲನ್. ಅವನ ಮನಸ್ಸಿನಲ್ಲಿ ಅವನೊಬ್ಬ ರಾಜ, ಹಾಗಾಗಿ ಅವನು ಯಾವುದೇ ಕಾನೂನಿಗ ತಲೆ ಬಾಗಿಸಬೇಕಿಲ್ಲ. ಆದರೆ ಇವುಗಳಲ್ಲಿ ಯಾವುದೂ ಅವನ ಸಮುದಾಯದ ಗುಣವಲ್ಲ ಎನ್ನುವುದನ್ನು ಆ ಸಮಾಜ ಶಾಸ್ತ್ರಜ್ಞ ಮತ್ತು ಸಾಮಾಜಿಕ ಕಾರ್ಯಕರ್ತ ಇಬ್ಬರೂ ಗಟ್ಟಿಯಾಗಿ ಹೇಳುತ್ತಾರೆ. ಈ ಗುಣಗಳನ್ನು ಹೊಂದಿರುವ ಆತ ಈ ಸಮುದಾಯಕ್ಕೆ ಸೇರಿದ್ದಾನೆ ಅಷ್ಟೇ. ಅವರು ಆ ಮಾತುಗಳನ್ನು ಹೇಳಿದ ನಂತರದ ಒಂದು ದೃಶ್ಯದಲ್ಲಿ ಆ ತನಿಖಾಧಿಕಾರಿ ಈ ಸಮುದಾಯಕ್ಕೆ ಸೇರಿದವರು ಹೀಗೇ ಇರುತ್ತಾರಲ್ಲ ಎನ್ನುವ ಮಾತನ್ನು ಆರಾಮಾಗಿ ಕ್ಯಾಮೆರಾ ಮುಂದೆಯೇ ಹೇಳುತ್ತಾನೆ. ‘ಈ ಪೋಲಿಸರು ಪರಿಹಾರವಾಗದೆ ಉಳಿದ ಎಲ್ಲಾ ಕೊಲೆಗಳನ್ನೂ ನನ್ನ ಲೆಕ್ಕಕ್ಕೇ ಸೇರಿಸಿದ್ದಾರೆ’ ಎಂದು ಕೊಲಂದರ್ ಅವಹೇಳನದ ನಗು ನಗುತ್ತಾನೆ.
ಹಾಗೆ ಮೆಟಾಫರ್‌ಗಳಲ್ಲಿ ಬದುಕುವ ಈತ ಸಾಮಾಜಿಕ ವ್ಯವಸ್ಥೆ ತನಗೆ ಕೊಡದೆ ಇರುವುದನ್ನೆಲ್ಲಾ ಅದರಿಂದ ಕಸಿದುಕೊಳ್ಳುವು ತನ್ನ ಹಕ್ಕು ಎಂದು ಭಾವಿಸುತ್ತಾನೆ. ‘ಕೊಡುವವ’ನ ಸ್ಥಾನದ ಅನುಭವಕ್ಕಾಗಿ ಆತ ಬಡ್ಡಿ ಇಲ್ಲದೆ ಹಣ ಸಾಲ ಕೊಡುತ್ತಾನೆ. ವಾಪಸ್ ಕೊಡದೆ ಸತಾಯಿಸುವವರಲ್ಲಿ ಒಬ್ಬ ‘ನನ್ನಿಂದ ವಸೂಲು ಮಾಡಬಲ್ಲೆಯಾ? ನಾನ್ಯಾರು ಗೊತ್ತಲ್ಲಾ?’ ಎಂದು ಮೀಸೆ ತೀಡಿದಾಗ ಅವನನ್ನು ಕೊಲೆ ಮಾಡುತ್ತಾನೆ ಮತ್ತು ಹಾಗೆ ಮೀಸೆ ತೀಡಿದವನ ಹಮ್ಮು ಅವನ ಮಿದುಳಿನ ಮೂಲಕ ತನಗೆ ಬರಲಿ ಎಂದು ಅವನ ಮಿದುಳನ್ನು ಬಗೆದು ತೆಗೆದು, ಕುದಿಸಿ, ಅದರ ಸೂಪ್ ಕುಡಿಯುತ್ತಾನೆ. ಸಾಮಾಜಿಕ ಸ್ಥಾನಮಾನದ ಪ್ರತೀಕವಾದ ಒಂದು ಭರ್ಜರಿ ವಾಹನ ತನಗೆ ಬೇಕು. ಅದಕ್ಕೇನು ಮಾಡುವುದು? ಟಾಟಾಸುಮೋ ಒಂದನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಾನೆ. ನಡುರಾತ್ರಿಯಲ್ಲಿ ಅದರ ಚಾಲಕ ಮತ್ತು ಕ್ಲೀನರ್‌ನನ್ನು ಕೊಂದು, ಗಾಡಿಯ ಬಣ್ಣ ಬದಲಾಯಿಸಿ, ಬೈಕ್ ಒಂದರ ನಂಬರ್ ಪ್ಲೇಟ್ ಅದಕ್ಕೆ ಹಾಕಿ ಅದನ್ನು ಜರ್ಬಿನಿಂದ ಮನೆ ಮುಂದೆ ತಂದು ನಿಲ್ಲಿಸುತ್ತಾನೆ. ತನ್ನ ಜನಾಂಗದವರೇ ಬಹುಮಟ್ಟಿಗೆ ಇರುವ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಲು ಸಿದ್ಧತೆ ಮಾಡಿಕೊಳ್ಳುತ್ತಿರುತ್ತಾನೆ. ‘ಬಗುಲಾಮುಖಿ’ ಎನ್ನುವ ದೇವತೆಯ ಆರಾಧನೆ ಮಾಡುತ್ತಿರುತ್ತಾನೆ. ಈ ಎಲ್ಲಾ ವಿವರಗಳನ್ನು ಹೇಳುವ ಎಲ್ಲಾ ಕ್ಷಣಗಳಲ್ಲಿ ಕಥೆ ಆ ಕೊಲೆಗಾರನನ್ನು ಎಲ್ಲೂ ಮಾನವೀಯಗೊಳಿಸಲು ಪ್ರಯತ್ನಿಸುವುದಿಲ್ಲ. ಆತನ ಕ್ರಿಯೆಗಳಿಗೆ ಯಾವುದೇ ರೀತಿಯ ಸಮರ್ಥನೆ ಒದಗಿಸುವುದಿಲ್ಲ.
ಮನೋವಿಶ್ಲೇಷಕರು ಇಂತಹ ಸೀರಿಯಲ್ ಕಿಲ್ಲರ್‌ಗಳ ಬಗ್ಗೆ, ಸೈಕೋಪಾತ್‌ಗಳ ಒಂದು ಮಾತು ಹೇಳುತ್ತಾರೆ, ‘ಅವರ ಮಟ್ಟಿಗೆ ಕೊಲೆ ಎನ್ನುವುದು ಒಂದು ಅಪರಾಧವಲ್ಲ.ಅದು ಕೊಲೆಯಾದವರಿಗೆ ಸಲ್ಲಬೇಕಾದ ಶಿಕ್ಷೆ!’ ಅವರು ತಮ್ಮನ್ನು ತಾವು ನ್ಯಾಯಾಧೀಶರು ಎಂದೇ ಭಾವಿಸುತ್ತಾರೆ. ಅವರು ಇನ್ನೂ ಒಂದು ಮಾತು ಹೇಳುತ್ತಾರೆ ಬಹುತೇಕ ಎಲ್ಲಾ ಸೀರಿಯಲ್ ಹಂತಕರೂ ಸಹ ಒಂದು ಡೈರಿಯನ್ನು ಮೇಂಟೇನ್ ಮಾಡುತ್ತಾರೆ. ಅವರಿಗೆ ಅದೊಂದು ಸಿಹಿ ನೆನಪಿನ ದಾಖಲೆ ಇದ್ದಂತೆ.
ನಿರೂಪಣೆ, ಎಡಿಟಿಂಗ್, ಛಾಯಾಗ್ರಹಣ, ಸಂಗೀತ ಈ ಎಲ್ಲಾ ವಿಭಾಗಗಳಲ್ಲಿ ಸರಣಿ ಪರಿಣಾಮಕಾರಿಯಾಗಿ ಬಂದಿದೆ. ಆದರೆ ಕೆಲವು ವಿಷಯಗಳನ್ನು ಅದು ಕಡೆಗಣಿಸಿಬಿಡುತ್ತದೆ. ರಾಜಾ ಕೊಲಂದರ್ ಆ ಪಟ್ಟಿಯಲ್ಲಿರುವ ಹೆಸರುಗಳಲ್ಲಿ ಕೆಲವರು ಇನ್ನೂ ಬದುಕಿದ್ದಾರೆ, ಅದರ ಬಗ್ಗೆ ಪೋಲಿಸರು ಏನು ಹೇಳುತ್ತಾರೆ ಎಂದು ಕೇಳುತ್ತಾನೆ. ಸರಣಿಯ ಯಾವುದೇ ಭಾಗದಲ್ಲಿ ಅದಕ್ಕೆ ಉತ್ತರ ಇಲ್ಲ. ಈ ಪತ್ರಕರ್ತನ ಕೊಲೆ ಆಗುವವರೆಗೂ ಪೋಲೀಸರ ಪ್ರಕಾರ ನಡೆದ ಇನ್ನು 13 ಕೊಲೆಗಳ ವಿಚಾರಣೆ ಅದು ಹೇಗೆ ಅವನ ಬಳಿ ಹೋಗುವುದೇ ಇಲ್ಲ ಎನ್ನುವುದಕ್ಕೆ ಸಹ ಸರಣಿ ಉತ್ತರಿಸುವುದಿಲ್ಲ.
ಆದರೆ ಈ ಎರಡು ಇಲ್ಲಗಳ ತರ್ಕವನ್ನೇ ನಮಗೆ ಮರೆಸಿಬಿಡುವುದು ಆತನೊಂದಿಗಿನ ಸಂದರ್ಶನ. ಜೈಲಿನಲ್ಲಿರುವ ಆತ ಕಾನೂನು ಪುಸ್ತಕಗಳನ್ನು ಓದಿ, ಅರ್ಥೈಸಿಕೊಂಡು, ಕಾನೂನಿನ ಸಂದುಗೊಂದುಗಳನ್ನು ಸಮರ್ಥವಾಗಿ ಅರ್ಥೈಸಿಕೊಂಡವನಾಗಿ ಈಗ ಖೈದಿಗಳಿಗೆ ಕಾನೂನು ಸಹಾಯ ಒದಗಿಸುತ್ತಿದ್ದಾನೆ. ‘ಧರ್ಮ’ ಎನ್ನುವುದನ್ನು ತನಗೆ ಅನುಕೂಲವಾಗಿ ಬಳಸಿಕೊಳ್ಳಲೆಂದು ತನ್ನ ಕೊಠಡಿಯಲ್ಲಿ ಕುಳಿತು ಪೂಜೆ ಮಾಡುತ್ತಾನೆ, ‘ತಪಸ್ಸು’ ಮಾಡುತ್ತಾನೆ. ಈಗಲೂ ಅವನು ಮೆಟಾಫರ್‌ಗಳಲ್ಲೇ ಬದುಕುತ್ತಿದ್ದಾನೆ ಮತ್ತು ಅವನ ಕಥೆಯಲ್ಲಿ ಈಗಲೂ ಅವನು ಸಾಕ್ಷಾತ್ ರಾಜಾ ಕೊಲಂದರ್, ಸಧ್ಯಕ್ಕೆ ಆತ ರಾಜ್ಯಭ್ರಷ್ಟ ಅಷ್ಟೆ!