ತಮಿಳುನಾಡು ಮೂಲದ ಶಾರದಾ 60, 70ರ ದಶಕಗಳ ಜನಪ್ರಿಯ ಬಾಲಿವುಡ್‌ ಗಾಯಕಿ. ‘ಸೂರಜ್‌’ ಹಿಂದಿ ಚಿತ್ರದ ಮೂಲಕ ಹಿನ್ನೆಲೆ ಗಾಯನ ಆರಂಭಿಸಿದ ಅವರು ಹಲವು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಖ್ಯಾತ ಹಿಂದಿ ನಾಯಕನಟಿಯರಿಗೆ ಡಬ್ಬಿಂಗ್‌ ಕಲಾವಿದೆಯಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.

ಬಾಲಿವುಡ್‌ ಹಿರಿಯ ಗಾಯಕಿ ಮತ್ತು ಸಂಗೀತ ಸಂಯೋಜಕಿ ಶಾರದಾ (ಶಾರದಾ ರಾಜನ್‌ ಅಯ್ಯಂಗಾರ್, 85 ವರ್ಷ) ನಿನ್ನೆ ನಿಧನರಾಗಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಕಳೆದ ಆರು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರು. 1937 ಅಕ್ಟೋಬರ್‌ 25ರಂದು ತಮಿಳುನಾಡಿನಲ್ಲಿ ಜನಿಸಿದ ಶಾರದಾ ಅವರು 1960 -1970ರ ದಶಕಗಳಲ್ಲಿ ಹೆಚ್ಚು ಸಕ್ರಿಯವಾಗಿದ್ದ ಹಿನ್ನೆಲೆ ಗಾಯಕಿ. ‘ಸೂರಜ್’ (1966) ಹಿಂದಿ ಚಿತ್ರದ ‘ತಿತ್ಲಿ ಉಡಿ’ ಪೌರಾಣಿಕ ಗೀತೆಯ ಮೂಲಕ ಹಿನ್ನಲೆ ಗಾಯಕಿಯಾಗಿ ವೃತ್ತಿಜೀವನಕ್ಕೆ ಪಾದಾರ್ಪಣೆ ಮಾಡಿದರು.

ಗುಮ್ನಾಮ್ (1965), ಸಪ್ನೋ ಕಾ ಸೌಧಾಗರ್ (1968) ಮತ್ತು ಇತರ ಚಿತ್ರಗಳಿಗೆ ತಮ್ಮ ಧ್ವನಿ ನೀಡಿದ್ದಾರೆ. ಇದಲ್ಲದೆ ಗರೀಬಿ ಹಠಾವೋ (1973), ಮಂದಿರ್ ಮಸೀದಿ(1977) ಮತ್ತು ಮಾ‌ ಬೆಹೆನ್ ಔರ್ ಬೀವಿ, ತು ಮೇರಿ ಮೈನ್‌ ತೇರಾ, ಕ್ಷಿತಿಜ್‌, ಮೈಲಾ ಆಂಚಲ್ (1981) ಮುಂತಾದ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಜಹಾನ್ ಪ್ಯಾರ್ ಮಿಲೇ (1969) ಚಿತ್ರದ ಅವರ ‘ಬಾತ್ ಜರಾ ಹೈ ಆಪಾಸ್’ ಅತ್ಯುತ್ತಮ ಹಿನ್ನೆಲೆ ಗಾಯನಕ್ಕೆ ಫಿಲ್ಮ್‌ಫೇರ್ ಪ್ರಶಸ್ತಿಯ ಗೌರವ ಲಭಿಸಿದೆ. 70ರ ದಶಕದ ಸಮಯದಲ್ಲಿ ಲತಾ ಮಂಗೇಶ್ಕರ್ ಮತ್ತು ಆಶಾ ಭೋಂಸ್ಲೆ ಅವರು ಹೆಚ್ಚಾಗಿ ಹಾಡುತ್ತಿದ್ದ ಕಾಲದಲ್ಲಿ ಶಾರದಾ ಅವರ ವಿಭಿನ್ನ ಧ್ವನಿ ಕೇಳುಗರ ಮನಗೆದ್ದಿತ್ತು. ಆನ್ ಈವ್ನಿಂಗ್ ಇನ್ ಪ್ಯಾರಿಸ್, ಅರೌಂಡ್ ದಿ ವರ್ಲ್ಡ್, ಗುಮ್ನಾಮ್, ಸಪ್ನೋ ಕಾ ಸೌದಾಗರ್ ಮತ್ತು ಕಲ್ ಆಜ್ ಔರ್ ಕಲ್ ಮುಂತಾದ ಚಿತ್ರಗಳ ಅವರ ಹಾಡುಗಳು ಇಂದಿಗೂ ಗುನುಗುವಂತಿವೆ.

ಹಿನ್ನೆಲೆ ಗಾಯನದ ಜೊತೆ ಶಾರದಾ ಅವರು ವೈಜಯಂತಿ ಮಾಲಾ, ಮುಮ್ತಾಜ್, ರೇಖಾ, ಶರ್ಮಿಳಾ ಟ್ಯಾಗೋರ್ ಮತ್ತು ಹೇಮಾ ಮಾಲಿನಿ ಮುಂತಾದ ನಟಿಯರಿಗೆ ಡಬ್ಬಿಂಗ್‌ ಕಲಾವಿದೆಯಾಗಿಯೂ ಕೆಲಸ ಮಾಡಿದ್ದಾರೆ. ಶಾರದಾ ಅವರು ಹಿಂದಿ, ತೆಲುಗು, ಮರಾಠಿ ಮತ್ತು ಗುಜರಾತಿ ಭಾಷೆಗಳಲ್ಲಿ ಹಾಡಿದ್ದಾರೆ. ತಮ್ಮದೇ ಪಾಪ್ ಆಲ್ಬಂವೊಂದನ್ನು ಹೊರತಂದ ಮೊಟ್ಟ ಮೊದಲ ಭಾರತೀಯ ಗಾಯಕಿ ಎನ್ನುವ ಹೆಗ್ಗಳಿಕೆ ಅವರದು. ಮೊಹಮ್ಮದ್ ರಫಿ, ಆಶಾ ಭೋಂಸ್ಲೆ, ಕಿಶೋರ್ ಕುಮಾರ್ ಮತ್ತು ಮುಖೇಶ್ ಅವರಂತಹ ಖ್ಯಾತ ಗಾಯಕರೊಂದಿಗೆ ಕೆಲಸ ಮಾಡಿದ್ದಾರೆ. ಜುಲೈ 2007ರಲ್ಲಿ ತಮ್ಮ ಗಜಲ್‌ ಆಲ್ಬಂ ‘ಅಂದಾಜ್-ಎ-ಬಯಾನ್ ಔರ್‌’ ಬಿಡುಗಡೆ ಮಾಡಿದ್ದರು. ಇದು ಮಿರ್ಜಾ ಗಾಲಿಬ್‌ ಅವರ ಗಜಲ್‌ಗಳ ಸಂಕಲನ. ಶಾರದಾ ಅವರ ನಿಧನಕ್ಕೆ ಬಾಲಿವುಡ್‌ನ ಹಲವರು ಕಂಬನಿ ಮಿಡಿದಿದ್ದಾರೆ.

LEAVE A REPLY

Connect with

Please enter your comment!
Please enter your name here